ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 24 ಮೇ 2024, 22:30 IST
Last Updated 24 ಮೇ 2024, 22:30 IST
ಅಕ್ಷರ ಗಾತ್ರ

ಶೇಷನ್‌ ನೆನಪಾಗುತ್ತಿದ್ದಾರೆ...

ವಿಭಜನಕಾರಿ ಮಾತುಗಳನ್ನು ಆಡದಿರುವಂತೆ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಕೊನೆಗೂ ತಾಕೀತು ಮಾಡಿರುವುದು ಸ್ವಾಗತಾರ್ಹ. ಆದರೆ ಈ ಕ್ರಮಕ್ಕೆ ಮುಂದಾಗಲು ಅದು ಇಷ್ಟೊಂದು ಸಮಯ ತೆಗೆದುಕೊಂಡಿದ್ದು ಮಾತ್ರ ಸಮಂಜಸವಲ್ಲ. ಲೋಕಸಭಾ ಚುನಾವಣೆಯ ಕೊನೆಯ ಘಟ್ಟದಲ್ಲಿ ಆಯೋಗ ನೀಡಿರುವ ಈ ಎಚ್ಚರಿಕೆಯ ಮಾತುಗಳು ರಾಜಕೀಯ ನಾಯಕರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆ ಎನ್ನುವುದು ಪ್ರಶ್ನಾರ್ಹ.

ಈ ಸಂದರ್ಭದಲ್ಲಿ ನಮ್ಮ ನೆನಪಿಗೆ ಬರುವುದು, ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರ ದಿಟ್ಟ ಕಾರ್ಯನಿರ್ವಹಣಾ ಶೈಲಿ. ತಮ್ಮ ಖಡಕ್ ನಿಲುವಿನಿಂದ ಅವರು ಚುನಾವಣೆಗಳನ್ನು ನಿರ್ವಹಿಸಿದ ರೀತಿ ಅನುಕರಣೀಯ. ಚುನಾವಣಾ ಆಯೋಗಕ್ಕೆ ಇರುವ ಅಧಿಕಾರ ಹಾಗೂ ಅದರ ಇತಿಮಿತಿಯ ಅರಿವು
ಜನಸಾಮಾನ್ಯರಿಗೆ ಆಗಿದ್ದೇ ಶೇಷನ್ ಅವರ ಅಧಿಕಾರಾವಧಿಯಲ್ಲಿ ಎಂದರೆ ಅತಿಶಯೋಕ್ತಿಯಲ್ಲ.

-ಶಾಂತಕುಮಾರ್, ಸರ್ಜಾಪುರ 

ದಿನದಿನವೂ ‘ನೀರು ತುಂಬುವ’ ಹಬ್ಬ!

ದೀಪಾವಳಿಯ ಸಂದರ್ಭದಲ್ಲಿ ‘ನೀರು ತುಂಬುವ’ ಹಬ್ಬವನ್ನು ಆಚರಿಸುವುದು ವಾಡಿಕೆ. ಆದರೆ, ಬಿಸಿಲೂರಿನ ನಾವು, ಏಪ್ರಿಲ್ ತಿಂಗಳಿನಿಂದ ನಿತ್ಯವೂ ‘ನೀರು ತುಂಬುವ’ ಹಬ್ಬ ಆಚರಿಸುತ್ತಿದ್ದೇವೆ! ಹೋದ ವರ್ಷ ಸರಿಯಾಗಿ ಮಳೆಯಾಗದೆ, ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು ಇದಕ್ಕೆ ಕಾರಣ. ಟ್ಯಾಂಕರ್‌ನಿಂದ ನೀರು ತರಿಸಿ, ಅದನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ಇಟ್ಟುಕೊಂಡು, ಪಂಪಿನ ಮುಖಾಂತರ ನಿತ್ಯವೂ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ತುಂಬಿಸಿಕೊಳ್ಳುವ ‘ಹಬ್ಬದ ಸಂಭ್ರಮ’ ನಮ್ಮದಾಗಿದೆ. ನೀರಿನ ತೊಟ್ಟಿ ಕಟ್ಟಿಸಿಕೊಳ್ಳದೇ ಇರುವವರ ಸಂಕಷ್ಟವಂತೂ ಹೇಳತೀರದು. ದುಬಾರಿ ದರ ನೀಡಿ ಕೊಂಡುಕೊಂಡ ಟ್ಯಾಂಕರ್‌ ನೀರನ್ನು ಪಂಪ್‌ ಮೂಲಕ ಮನೆ ಮೇಲಿನ ಟ್ಯಾಂಕ್‌ಗೆ ನೇರವಾಗಿ ಏರಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ.

ನಮ್ಮ ಕಲಬುರಗಿಗೆ ವಾರದ ಏಳೂ ದಿನಗಳು 24 ಗಂಟೆ ನೀರು ಪೂರೈಕೆ ಮಾಡುವ ಉದ್ದೇಶಿತ ಯೋಜನೆಯು ಐದು ವರ್ಷಗಳಿಂದಲೂ ತೆವಳುತ್ತಾ ಸಾಗಿದೆ. ಅದು ಪೂರ್ಣಗೊಳ್ಳುವವರೆಗೂ ನಮ್ಮ ಕಿಸೆಗೆ ಕತ್ತರಿ ಹಾಗೂ ನಮಗೆ ‘ನೀರು ತುಂಬುವ’ ಹಬ್ಬ ಇದ್ದದ್ದೇ.

-ವೆಂಕಟೇಶ್ ಮುದಗಲ್, ಕಲಬುರಗಿ

ಪಿಎಲ್: ಒಡಕಿಗೆ ಆಸ್ಪದ ಬೇಡ

ಬಹುತೇಕ ಯುವಕ, ಯುವತಿಯರು ಇತ್ತೀಚೆಗೆ ತಮ್ಮ ಭಾಷೆ, ರಾಜ್ಯ ಮತ್ತು ನೆಚ್ಚಿನ ಆಟಗಾರರನ್ನು ಆಧರಿಸಿ, ಐಪಿಎಲ್‌ನಲ್ಲಿ ತಮ್ಮ ತಂಡಗಳನ್ನು ವಿಭಾಗ ಮಾಡಿಕೊಂಡಿದ್ದಾರೆ. ಈ ಮೂಲಕ, ತಮಗೆ ಆಗದ ತಂಡವು ಪಂದ್ಯದಲ್ಲಿ ಸೋತರೆ ಅಥವಾ ಕಳಪೆ ಪ್ರದರ್ಶನ ತೋರಿದರೆ ಆ ತಂಡವನ್ನು, ಆಟಗಾರರನ್ನು ಹೀಯಾಳಿಸುವ ಪ್ರವೃತ್ತಿ
ಬೆಳೆಸಿಕೊಳ್ಳುತ್ತಿದ್ದಾರೆ.

ಆದರೆ ‘ನಾವು ಮೊದಲು ಭಾರತೀಯರು. ನಾವೆಲ್ಲರೂ ಒಂದು. ಅಂತರರಾಷ್ಟ್ರೀಯ ಆಟದಲ್ಲಿ ಈ ಎಲ್ಲಾ ಆಟಗಾರರು ತಮ್ಮ ತಮ್ಮ ಕೊಡುಗೆಗಳ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಾರೆ’ ಎಂಬ ಸಂಗತಿಯನ್ನು ಅವರೆಲ್ಲ ಮರೆತಿದ್ದಾರೆ. ಐಪಿಎಲ್‌ ಇರುವುದು ಮನರಂಜನೆಗಾಗಿಯೇ ವಿನಾ ಜನರಲ್ಲಿ ಒಡಕು ಉಂಟು
ಮಾಡುವುದಕ್ಕಲ್ಲ ಎಂಬುದನ್ನು ನಾವು ಗಮನದಲ್ಲಿ ಇಡಬೇಕಾಗಿದೆ.

-ಬಸವಪ್ರಸಾದ ಶಂಕರ ಸಂಕಪಾಳ, ಬೆಳಗಾವಿ

ಕಲುಷಿತ ನೀರು: ಬೇಕು ಶಾಶ್ವತ ಪರಿಹಾರ

ಮೈಸೂರು ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಯುವಕನೊಬ್ಬ ಮೃತಪಟ್ಟು ಹಲವರು ಅಸ್ವಸ್ಥರಾಗಿರುವುದು ಆತಂಕದ ಸಂಗತಿ. ಬಿರುಬೇಸಿಗೆಯ ನಂತರ ಮಳೆ ಬೀಳಲು ಪ್ರಾರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕಲುಷಿತ ನೀರಿನ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಬರಗಾಲ ಮತ್ತು ಮಳೆಗೂ ಕಲುಷಿತ ನೀರಿಗೂ ಪರಸ್ಪರ ಸಂಬಂಧ ಇರುತ್ತದೆ. ಬರಗಾಲದಲ್ಲಿ ಅಂತರ್ಜಲ ಮಟ್ಟ ಕುಸಿದಾಗ ಅಪಾಯಕಾರಿ ರಾಸಾಯನಿಕಗಳು ನೀರಿಗೆ ಸೇರಿ ಅದು ಕಲುಷಿತಗೊಳ್ಳುತ್ತದೆ. ಅದೇ ರೀತಿ, ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿಗಳು ತುಂಬಿ ಅಲ್ಲಿನ ಕಲ್ಮಶವು ಕುಡಿಯುವ ನೀರಿಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ಕಲುಷಿತ ನೀರು ಸೇವನೆ ಪ್ರಕರಣಗಳು ವರದಿಯಾದ ತತ್‌ಕ್ಷಣ ಆರಂಭಶೂರತ್ವ ತೋರುವ ಆಡಳಿತ ವರ್ಗ, ಮೃತರ ಕುಟುಂಬಕ್ಕೆ ಪರಿಹಾರ, ಅಸ್ವಸ್ಥರ ಚಿಕಿತ್ಸಾ ವೆಚ್ಚ ಭರಿಸುವುದು, ಒಂದಿಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವ ಅಲ್ಪಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ನೀರು ಕಲುಷಿತಗೊಳ್ಳದಂತೆ ಮಾಡುವ ದೀರ್ಘ‌ಕಾಲಿಕ ಕ್ರಮಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಅಲ್ಪಕಾಲಿಕ ಕ್ರಮಗಳು ಎಷ್ಟು  ಮುಖ್ಯವೋ ಶಾಶ್ವತ ಪರಿಹಾರ ಕಂಡುಕೊಳ್ಳುವುದೂ ಅಷ್ಟೇ ಅವಶ್ಯವಾಗಿರುತ್ತದೆ. ಈ ದಿಸೆಯಲ್ಲಿ ಇಂತಹ ಪ್ರಕರಣಗಳು
ಆಡಳಿತಾರೂಢರಿಗೆ ಎಚ್ಚರಿಕೆಯ ಗಂಟೆಯಾಗಬೇಕು.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ರಾಜಧರ್ಮದ ಅರ್ಥ ಅರಿಯಿರಿ

‘ಪ್ರಧಾನಿ ಮಾತು ಮತ್ತು ರಾಜಧರ್ಮ’ ಎಂಬ ಎಸ್‌.ಆರ್‌.ವಿಜಯಶಂಕರ ಅವರ ಲೇಖನ (ಪ್ರ.ವಾ.,
ಮೇ 21) ಕೋಮವಾದದ ದಳ್ಳುರಿಯಿಂದ ತಲ್ಲಣಿಸಿರುವ, ಭವಿಷ್ಯದ ಬಗ್ಗೆ ಆತಂಕಗೊಂಡಿರುವ ಮನಸ್ಸುಗಳಿಗೆ ಚೈತನ್ಯ ತುಂಬುವಂತಿದೆ. ನಿರ್ಮಲವಾದ ಧಾರ್ಮಿಕತೆ, ಆಧ್ಯಾತ್ಮಿಕತೆಯಿಂದ ಸಮಾಜಕ್ಕೆ ಅಪಾಯವಿಲ್ಲ, ಆದರೆ ಕೋಮವಾದದ ಬೆಳವಣಿಗೆಯು ಮನಸ್ಸುಗಳನ್ನು ಒಡೆಯುತ್ತದೆ, ಸಾಮಾಜಿಕ ಭದ್ರತೆಯನ್ನು ಕೆಡಿಸಿ ಅಶಾಂತಿ ಉಂಟುಮಾಡುತ್ತದೆ ಎಂಬ ಲೇಖಕರ ಅಭಿಪ್ರಾಯವು ಪ್ರಜ್ಞಾವಂತರನ್ನು ಚಿಂತನೆಗೆ ಹಚ್ಚುತ್ತದೆ. ಪ್ರಜೆಗಳ ನಡುವೆ ಭೇದಭಾವ ಸಲ್ಲದು ಎಂಬ ರಾಜಧರ್ಮದ ಅರ್ಥವನ್ನು ನಮ್ಮ ರಾಜಕೀಯ ನಾಯಕರು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಬೇಕು.

-ಸಂಗಯ್ಯ ಅ. ಹಿರೇಮಠ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT