ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ : ಮೇ 29 ಬುಧವಾರ 2024

Published 3 ಜೂನ್ 2024, 14:17 IST
Last Updated 3 ಜೂನ್ 2024, 14:17 IST
ಅಕ್ಷರ ಗಾತ್ರ

ಡೆತ್‌ನೋಟ್‌ ಗಂಭೀರವಾಗಿ ಪರಿಗಣಿಸಿ 

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ್ ಅವರು ಯಾರೋ ಎಸಗಿದ್ದಾರೆ ಎನ್ನಲಾದ ತಪ್ಪಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ನಿಗಮದಲ್ಲಿ ನಡೆದಿದೆ ಎನ್ನಲಾದ ಒಂದೊಂದು ತಪ್ಪನ್ನೂ ತಮ್ಮ ಡೆತ್‌ನೋಟಲ್ಲಿ ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ, ತಮ್ಮದೇನೂ ತಪ್ಪಿಲ್ಲ ಎಂದು ಪಶ್ಚಾತ್ತಾಪದ ರೂಪದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅವರು ಬರೆದಿರುವ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ‘ನಾನು ಹೇಡಿಯಲ್ಲ’ ಎಂದು ಚಂದ್ರಶೇಖರ್‌ ಬರೆದಿದ್ದಾರಾದರೂ ತಮ್ಮ ಕುಟುಂಬವನ್ನು ಮರೆತು ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಭಯದ ಮನಃಸ್ಥಿತಿಯನ್ನು ತಿಳಿಸುತ್ತದೆ. ತಮ್ಮ ಮೇಲಧಿಕಾರಿಗಳೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದರೆ ಅದನ್ನು ವಿರೋಧಿಸುವ ಎದೆಗಾರಿಕೆ ತೋರಿಸಬೇಕಿತ್ತು.

ಪ್ರಾಮಾಣಿಕರಾಗಿ ಇರುವವರು ಯಾರದೇ ಮುಲಾಜಿಗೆ ಒಳಗಾಗಬಾರದು. ತಮ್ಮನ್ನು ಎಲ್ಲಿಗೆ ವರ್ಗಾವಣೆ ಮಾಡಿದರೂ ಹೋಗುವುದಕ್ಕೆ ಸಿದ್ಧರಿರಬೇಕು. ಆತ್ಮಹತ್ಯೆಯಿಂದ ಸಾಧಿಸಿದ್ದಾದರೂ ಏನು? ತಾನು ಹೀಗೆ ಮಾಡಿದರೆ ತನ್ನ ಕುಟುಂಬದ ಗತಿ ಏನು ಎಂದು ಸಾಯುವ ಮುನ್ನ ಅವರು ಯೋಚನೆ ಮಾಡಬೇಕಿತ್ತು. ಇಂತಹ ಬೆಳವಣಿಗೆಗಳಿಂದ ಭ್ರಷ್ಟಾಚಾರಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ ಅಷ್ಟೆ.

–ಎಚ್.ತುಕಾರಾಂ, ಬೆಂಗಳೂರು

ಅತಿಥಿ ಶಿಕ್ಷಕರಿಗೆ ಬೇಕು ಸೇವಾ ಭದ್ರತೆ

ರಾಜ್ಯದಾದ್ಯಂತ ಇಂದಿನಿಂದ (ಮೇ 29) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಲಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರಿರದೇ ಸಕಾಲದಲ್ಲಿ ತರಗತಿಗಳು ನಡೆಯುವುದು ಕನಸಿನ ಮಾತು.

ಸರ್ಕಾರ ಮತ್ತೆ ಅತಿಥಿ ಶಿಕ್ಷಕರ ನೇಮಕಾತಿಗೆ ಮುಂದಾಗುತ್ತದೆ. ಆದರೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ಅವರು ಶಾಲೆಗೆ ಹಾಜರಾಗಿ ಪಾಠ ಬೋಧನೆ ಮಾಡಲು ಕನಿಷ್ಠ ಎರಡು–ಮೂರು ವಾರಗಳಾದರೂ ಬೇಕು. ಅತಿಥಿ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ಇಲ್ಲದಿರುವುದರಿಂದ  ಆಕಾಂಕ್ಷಿಗಳು ಪ್ರತಿವರ್ಷ ಬಕಪಕ್ಷಿಗಳಂತೆ ಕಾಯಬೇಕಾಗಿದೆ. ವರ್ಷ ವರ್ಷವೂ ಹೊಸದಾಗಿ ನೇಮಕ ಮಾಡಿಕೊಳ್ಳುವುದರಿಂದ, ಹಿಂದಿನ ವರ್ಷ ಸೇವೆ ಸಲ್ಲಿಸಿದ ಎಲ್ಲರಿಗೂ ಮತ್ತೆ ಅವಕಾಶ ಸಿಗುತ್ತದೆ ಎಂಬ ಖಾತರಿ ಇರುವುದಿಲ್ಲ. 

ಹಿಂದಿನ ವರ್ಷ ಅತಿಥಿ ಶಿಕ್ಷಕರಾಗಿದ್ದವರನ್ನು ಅದೇ ಶಾಲೆಯಲ್ಲಿಯೇ ಮುಂದುವರಿಸಬೇಕು. ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು. ವರ್ಷದ 12 ತಿಂಗಳೂ ವೇತನ ನೀಡಬೇಕು. 

–ಎನ್.ವಿ.ಗಾಣಿಗೇರ, ಯಾವಗಲ್‌

ರಾಜಕಾಲುವೆ ಒತ್ತುವರಿ: ಅಧಿಕಾರಿಗಳೂ ಹೊಣೆಯಾಗಲಿ

ಮಳೆಗಾಲ ಸಮೀಪಿಸುತ್ತಿದ್ದಂತೆ ಬೆಂಗಳೂರಿಗರ ಎದೆಯಲ್ಲಿ ಢವಢವ ಪ್ರಾರಂಭವಾಗುತ್ತದೆ. ರಾಜಕಾಲುವೆ ಒತ್ತುವರಿ ಹಾಗೂ ಅವುಗಳ ಅಸಮರ್ಪಕ ನಿರ್ವಹಣೆಯಿಂದ ಮಳೆನೀರು ಸರಾಗವಾಗಿ ಹರಿದುಹೋಗದೆ, ಕೆಲವು ಪ್ರದೇಶಗಳು ಜಲಾವೃತವಾಗಿ ಜನಜೀವನ ನರಕಸದೃಶವಾಗುತ್ತದೆ. ನೂರಾರು ಕಿ.ಮೀ. ಉದ್ದದ ರಾಜಕಾಲುವೆಗಳ ಹೂಳೆತ್ತಲು ಹಾಗೂ ಸ್ವಚ್ಛಗೊಳಿಸಲು ಅಪಾರ ಹಣ ಖರ್ಚಾಗುತ್ತದೆ. ಹೀಗಾಗಿ, ಕೆಲವೇ ಪ್ರದೇಶಗಳಲ್ಲಿ ಅವುಗಳನ್ನು ತಕ್ಕಮಟ್ಟಿಗೆ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಇತರ ಪ್ರದೇಶಗಳಲ್ಲಿ ನೆರೆ ತಪ್ಪಿದ್ದಲ್ಲ ಎಂಬಂತಾಗಿದೆ. ರಾಜಕಾಲುವೆಗಳ ಒತ್ತುವರಿಯನ್ನು ಒಂದುಕಡೆಯಿಂದ ತೆರವುಗೊಳಿಸುತ್ತಿದ್ದರೂ ಮತ್ತೊಂದು ಕಡೆಯಿಂದ ಹೊಸದಾಗಿ ಒತ್ತುವರಿ ನಡೆಯುತ್ತಿದೆ. ಈ ದುಷ್ಕೃತ್ಯಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುತ್ತಿಲ್ಲ.

ಒತ್ತುವರಿ ತೆರವುಗೊಳಿಸುವಾಗ ಕಟ್ಟಡದ ಮಾಲೀಕನನ್ನಷ್ಟೇ ಹೊಣೆಯಾಗಿಸುವ ಬದಲಿಗೆ, ಕಟ್ಟಡ ನಿರ್ಮಿಸಲು ಪರವಾನಗಿ ನೀಡಿದ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಬೇಕು. ಇದರಿಂದ ರಾಜಕಾಲುವೆ ಒತ್ತುವರಿಗೆ ಹಾಗೂ ಒತ್ತುವರಿಯಿಂದ ಆಗಬಹುದಾದ ತೊಂದರೆಗಳಿಗೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಬಹುದು.

–ಜಿ.ನಾಗೇಂದ್ರ ಕಾವೂರು, ಸಂಡೂರು

ಅವರಿಗೆ ತಿಳಿಯಲೇ ಇಲ್ಲ!

ಮಧ್ಯಮವರ್ಗವೊಂದು ಮಲ್ಟಿಪ್ಲೆಕ್ಸ್‌ನಲ್ಲಿ ಕೂತು ಅರ್ಧ ಲೀಟರ್ ನೀರಿಗೆ

₹ 100 ನೀಡಿ ಗಂಟಲು

ಒಣಗಿಸಿಕೊಂಡಿದ್ದು

ಚಿತ್ರೋದ್ಯಮಕ್ಕೆ ತಿಳಿಯಲೇ ಇಲ್ಲ ಅದು ಬಾಕ್ಸ್ ಆಫೀಸ್ ಹಿಟ್ ಕೋಟಿ ಕ್ಲಬ್ ಎಂದು ಬೀಗುತ್ತಿತ್ತು! ಈಗ ಬಿಸಿ ಮುಟ್ಟಿಸಿಕೊಂಡ ಪ್ರೇಕ್ಷಕ ಚಿತ್ರಮಂದಿರಕ್ಕೆ ಬೆನ್ನು ತಿರುಗಿಸಿದ್ದಾನೆ ಹೊಸ ಚಿತ್ರ ಬಿಡುಗಡೆಗೊಂಡ ಇಷ್ಟೇ ದಿನಕ್ಕೆ ಟಿ.ವಿ. ಚಾನೆಲ್‌ಗೆ ಬರುತ್ತದೆಂದು

ಲೆಕ್ಕಹಾಕಿರುತ್ತಾನೆ!

–ಜೆ.ಬಿ.ಮಂಜುನಾಥ, ಪಾಂಡವಪುರ

ಬನ್ನಿ ‘ಹೂ’ಗಳೇ ಶಾಲೆಗೆ

ತೆರೆದಿದೆ ಶಾಲೆಯ ಬಾಗಿಲು ಬನ್ನಿ ಹೂಗಳೇ ಕಾದಿದೆ ಗುರು ಮನಸು ಬೇಸಿಗೆ ಹೋಗಿ ಮಳೆ ಜೊತೆಯಲಿ ಗರಿಗೆದರಿದೆ ಪುಸ್ತಕದೊಳಗಿನ ಕನಸು ಬನ್ನಿ ನವಿರು ಹೂಗಳೇ ಬಹಳ ದಿನಗಳಾದವು ನಿಮ್ಮ ಮುದ್ದು ಮುಖ ನೋಡಿ   ಓದು ಬರಹದ ಜೊತೆಗೆ ಆಡೋಣ ಆಟ ಮಾಡೋಣ ಕೂಡಿ ಸಿಹಿ ಊಟ!

–ಸಂತೆಬೆನ್ನೂರು ಫೈಜ್ನಟ್ರಾಜ್ ತಳಕು, ಚಳ್ಳಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT