ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನೀರಿಲ್ಲದ ಶೌಚಾಲಯ ವ್ಯರ್ಥ

Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಸರ್ಕಾರಿ ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ಬಾಲಕಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳನ್ನು ನಿರ್ಮಿಸಲು ರಾಷ್ಟ್ರೀಯ ಮಾದರಿ ರೂಪಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕಾಗಿ ಬಂದಿದ್ದು (ಪ್ರ.ವಾ., ನ. 7) ನಮ್ಮ ಪ್ರಜಾಪ್ರಭುತ್ವದ ಸೋಲಿಗೆ ಕನ್ನಡಿ ಹಿಡಿದಿದೆ. ಹೊಸ ಶೌಚಾಲಯಗಳ ನಿರ್ಮಾಣದಿಂದ ಅಧಿಕಾರಿಶಾಹಿ, ಗುತ್ತಿಗೆದಾರರು ಲಾಭ ಪಡೆಯುತ್ತಾರೆ. ಆದರೆ ಲಕ್ಷಾಂತರ ಶೌಚಾಲಯಗಳು ನೀರಿಲ್ಲದೆ ಗಬ್ಬುನಾಥ ಬೀರುತ್ತಾ ಬಳಸಲು ಅಸಾಧ್ಯ ಎನ್ನುವಂತೆ ಇರುತ್ತವೆ. ಆದ್ದರಿಂದ ಶೌಚಾಲಯ ನಿರ್ಮಾಣದ ಜೊತೆಗೆ ನೀರಿನ ಪೂರೈಕೆಯನ್ನು ಸಹ ಮಾಡಬೇಕು.

ಶಾಲೆಯ ಕಟ್ಟಡದ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಶೌಚಾಲಯಗಳಿಗೆ ನೀರು ಪೂರೈಸಬಹುದು. ಶಾಲೆಯ ಶೌಚಾಲಯಗಳನ್ನು ಹಳ್ಳಿಯ ಹೆಣ್ಣುಮಕ್ಕಳು ಸಹ ಬಳಸಲು ಸಾಧ್ಯವಾದರೆ, ಬಯಲುಶೌಚದಿಂದ ಅವರಿಗೆ ಮುಕ್ತಿ ದೊರೆಯುತ್ತದೆ.

-ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

**

ಕನ್ನಡದಲ್ಲಿ ಪರೀಕ್ಷೆ: ಪ್ರಧಾನಿಯ ಮನವೊಲಿಸಬೇಕಿದೆ

ಕೇಂದ್ರ ಸರ್ಕಾರ ನಡೆಸುವ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಲು ಅವಕಾಶ ಕೊಟ್ಟಿರುವಂತೆ, ಕನ್ನಡದಲ್ಲಿ ಬರೆಯಲೂ ಅವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ಸಂಬಂಧಿಸಿ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ರಾಜ್ಯೋತ್ಸವದ ಭಾಷಣದಲ್ಲಿ ಹೇಳಿದ್ದಾರೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಹಲವು ಬಾರಿ ಪತ್ರಗಳನ್ನು ಬರೆದಿವೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿಯವರು ನೇರವಾಗಿ ಪ್ರಧಾನಿ ಅವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ.

ಅಂತೆಯೇ ಈ ವಿಷಯವನ್ನು ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಒಳ್ಳೆಯದೆ. ಶಾಸ್ತ್ರೀಯ ಭಾಷೆಯಾದ ಕನ್ನಡಕ್ಕೆ ಭಾರತದ ಒಕ್ಕೂಟದಲ್ಲಿ ಹಿಂದಿಗೆ ಸಿಕ್ಕಿರುವ ಎಲ್ಲಾ ಸ್ಥಾನಮಾನ, ಅವಕಾಶಗಳು ಸಂವಿಧಾನಬದ್ಧವಾಗಿ ಸಿಗಬೇಕಿದೆ.

-ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

**

ಬರದ ವಿಷಯದಲ್ಲಿ ರಾಜಕೀಯ ಸಲ್ಲ

ರಾಜ್ಯದಲ್ಲಿ ಈ ವರ್ಷ ವಾಡಿಕೆಯಷ್ಟು ಮಳೆ ಬೀಳದ ಕಾರಣ ಕೃಷಿ ವಲಯಕ್ಕೆ ಹೆಚ್ಚು ಪೆಟ್ಟು ಬಿದ್ದಿದೆ. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಗಿದ್ದು, ರೈತರಿಗೆ ನಷ್ಟವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಹಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ರಾಜ್ಯದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ಇದರ ಬೆನ್ನಲ್ಲೇ, ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಪ್ರತ್ಯೇಕವಾಗಿ ಬರ ಅಧ್ಯಯನ ಪ್ರವಾಸ ನಡೆಸಲು ಮುಂದಾಗಿರುವುದು ಎಷ್ಟು ಸರಿ? ಅದರ ಅಗತ್ಯವಾದರೂ ಏನಿದೆ? ಬರದ ವಿಷಯದಲ್ಲೂ ಪಕ್ಷಗಳು ರಾಜಕೀಯ ಮಾಡುತ್ತಿರುವುದು ಸರಿಯಾದ ನಡೆಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಬರ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿ ರೈತರ ಸಂಕಷ್ಟಕ್ಕೆ ನೆರವಾಗಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಕಡೆ ಬೊಟ್ಟು ಮಾಡಿ ಆರೋಪ ಮಾಡುವುದನ್ನು ಬಿಡಬೇಕು. ಕೇಂದ್ರದಿಂದ ಬರ ಪರಿಹಾರದ ಮೊತ್ತ ತರಲು ಸರ್ವಪಕ್ಷಗಳ ಜನಪ್ರತಿನಿಧಿಗಳೂ ಪಕ್ಷಭೇದ ಮರೆತು ಸಂಘಟಿತ ಪ್ರಯತ್ನ ಮಾಡಬೇಕು.

-ಪ್ರಸಾದ್‌ ಜಿ.ಎಂ., ಮೈಸೂರು

**

ಮಕ್ಕಳ ಪ್ರೀತಿಗೆ ಅಪಾರ್ಥ ಕಲ್ಪಿಸುವುದು ಬೇಡ

ಹಿರಿಯ ನಾಗರಿಕರು ಕಾಳಜಿಯ ಹೆಸರಿನಲ್ಲಿ ಮನೆಯವರಿಂದಲೇ ‘ಗೃಹಬಂಧನ’ಕ್ಕೆ ಒಳಗಾಗುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಹೆಗ್ಗಳಗಿ ಕಳವಳ ವ್ಯಕ್ತಪಡಿಸಿದ್ದಾರೆ (ಸಂಗತ., ನ. 3). ಸಾಮಾನ್ಯವಾಗಿ ಮಕ್ಕಳು ದೊಡ್ಡವರಾಗಿ, ಮದುವೆಯಾಗಿ, ಸಂಸಾರದ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಮೇಲೆ, ತಂದೆ–ತಾಯಿ ಜೊತೆ ಮಾತನಾಡುವುದನ್ನು ಕಡಿಮೆ ಮಾಡುತ್ತಾರೆ. ಆಗ ನಿಜಕ್ಕೂ ತಂದೆ–ತಾಯಿಯ ಮನಸ್ಸಿಗೆ ನೋವಾಗುತ್ತದೆ. ಆದರೆ ಮಗನೊಬ್ಬ ವಯಸ್ಸಾದ ತಂದೆಗೆ ‘ನೀನು ಹೊರಗೆ ಹೋಗಬೇಡ, ಗಾಡಿ ಓಡಿಸಬೇಡ, ಇಲ್ಲಿಯವರೆಗೆ ಬಹಳಷ್ಟು ದುಡಿದಾಗಿದೆ, ಮತ್ತೂ ಹೊರಗೆ ಹೋಗಿ ದುಡಿಯುವುದು ಬೇಡ, ಮನೆಯಲ್ಲೇ ತಿಂದುಂಡುಕೊಂಡು, ಟಿ.ವಿ ನೋಡಿಕೊಂಡು, ಪುಸ್ತಕ ಓದಿಕೊಂಡು ಹಾಯಾಗಿರು’ ಎಂದು ಹೇಳಿದರೆ, ಮಗನ ಆ ಪ್ರೀತಿಯ ಮಾತಿಗೆ ಹೆಮ್ಮೆಪಡಬೇಕೇ ವಿನಾ ಅದನ್ನು ‘ಗೃಹಬಂಧನ’ ಎಂದು ತಿಳಿಯುವ ಅಗತ್ಯವಿಲ್ಲ.

ಬಾಳ ಮುಸ್ಸಂಜೆಯಲ್ಲಿರುವ ಹಿರಿಯರು ಮಕ್ಕಳ ಸುಖ, ಸಂತೋಷದಲ್ಲೇ ತಾವೂ ಸುಖ ಪಡುವುದನ್ನು ರೂಢಿಸಿಕೊಂಡರೆ, ಮಕ್ಕಳು ಬೈದರೂ ಅದು ಹಿತವಾಗಿಯೇ ಕೇಳಿಸುತ್ತದೆ. ಹೆತ್ತವರನ್ನು ಅನಾಥಾಶ್ರಮಗಳಿಗೆ
ದಬ್ಬುತ್ತಿರುವ ಹಾಗೂ ಯಾವುದೋ ಕಾಣದ ದೇಶದಲ್ಲಿ ಇದ್ದುಕೊಂಡು ಹೆತ್ತವರ ಸಂಸಾರಕ್ಕೂ ಅವರ ಅಂತ್ಯ
ಸಂಸ್ಕಾರಕ್ಕೂ ಹಣ ಕಳುಹಿಸುವ ಮಕ್ಕಳಿರುವ ಈ ಕಾಲದಲ್ಲಿ, ಮಕ್ಕಳನ್ನು ದಿನವೂ ನೋಡುವ, ಅವರ ಬಳಿ ಮಾತನಾಡುವ, ಅವರ ಪ್ರೀತಿಯ ಮಾತು ಕೇಳುವ ಸೌಭಾಗ್ಯ ದೊರೆತ ತಂದೆ–ತಾಯಿಯೇ ಧನ್ಯರು.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

**

ಕೂಳೆಗೆ ಬೆಂಕಿ: ರೈತರಲ್ಲಿ ಅರಿವು ಮೂಡಲಿ

ಪಂಜಾಬ್ ಸುತ್ತಮುತ್ತ ಕಬ್ಬಿನ ಕೂಳೆಗೆ ಬೆಂಕಿ ಹಾಕುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗಿ, ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾದ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಲೇಖಕ ದೇವಿಂದರ್ ಶರ್ಮಾ (ಪ್ರ.ವಾ., ನ. 6), ರೈತರಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದಿದ್ದಾರೆ. ನಮ್ಮ ರಾಜ್ಯದಲ್ಲಿ ಸಹ ಕಬ್ಬಿನ ಕೂಳೆಗೆ ಬೆಂಕಿ ಹಾಕುವ ಪದ್ಧತಿ ಎಂದಿನಿಂದಲೂ ಇದೆ. ಆದರೆ ನಮ್ಮ ಕೃಷಿ ಇಲಾಖೆಯು ಇದರ ದುಷ್ಪರಿಣಾಮಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ವಿಫಲವಾಗಿದೆ.

ಕಬ್ಬಿನ ಕೂಳೆಗೆ ಬೆಂಕಿ ಹಾಕುವುದರಿಂದ ಭೂಮಿಯ ಮೇಲ್ಪದರದಲ್ಲಿನ ಎರೆಹುಳುಗಳು ಸಾಯುತ್ತವೆ. ಅದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ. ಹೊಗೆಯು ವಾಯುಮಾಲಿನ್ಯ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇಲಾಖೆಯು ಈ ಕುರಿತು ಅರಿವು ಮೂಡಿಸಿದರೆ, ಕಬ್ಬು ಬೆಳೆಗಾರರು ಎಚ್ಚೆತ್ತುಕೊಂಡು ಈ ಸಮಸ್ಯೆ ಬಗೆಹರಿದೀತು.

-ಹುರುಕಡ್ಲಿಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT