ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 4 ಜುಲೈ 2023, 19:30 IST
Last Updated 4 ಜುಲೈ 2023, 19:30 IST
ಅಕ್ಷರ ಗಾತ್ರ

ವಿಧಾನಸಭೆ ಕಲಾಪ ನೇರ ಪ್ರಸಾರವಾಗಲಿ
ಕೊರೊನಾ ಕಾಲಘಟ್ಟದಲ್ಲಿ ಮಕ್ಕಳು ಆನ್‌ಲೈನ್ ಮೂಲಕ ಪಾಠ ಕೇಳುತ್ತಿದ್ದಾಗ, ಪಾಠ ಮಾಡುವ ಶಿಕ್ಷಕರು ಯಾರು, ಏನು ಪಾಠ ಮಾಡಿದರು, ಹೇಗೆ ಮಾಡುತ್ತಿದ್ದಾರೆ, ತಮ್ಮ ಮಕ್ಕಳ ಏಕಾಗ್ರತೆ ಎಂತಹದ್ದೆಂದು ತಿಳಿಯಲು ಪೋಷಕರಿಗೆ ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ಸೆಮಿನಾರ್‌ಗಳು ಕಡಿಮೆಯಾಗಿ ವೆಬಿನಾರ್ ಇಲ್ಲವೇ ಜೂಂ ಮೀಟಿಂಗ್‌ಗಳು ಹೆಚ್ಚುತ್ತಿವೆ. ಈಗಿರುವ ತಂತ್ರಜ್ಞಾನ ಬಳಸಿಕೊಂಡು ಕಲಿಯಲು ಅವಕಾಶವಿರುವ ಕಾಲದಲ್ಲಿ, ಮತ ಹಾಕಿ ಗೆಲ್ಲಿಸಿದ ನಮ್ಮ ಶಾಸಕರು ವಿಧಾನಸಭೆಗಳಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇರಬಾರದೇ?

ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳಿಗೆ ಹಿಂದಿನ ಸರ್ಕಾರ ಹೇರಿದ್ದ ನಿಷೇಧವನ್ನು ಈ ಸರ್ಕಾರವೂ ತೆರವು ಮಾಡದೆ ಹಾಗೆಯೇ ಮುಂದುವರಿಸಿದರೆ ಹೇಗೆ? ಮಾಧ್ಯಮಗಳು ನೇರವಾಗಿ ವಿಧಾನಸಭೆಯ ಕಾರ್ಯಕಲಾಪಗಳನ್ನು ಸೆರೆಹಿಡಿದು ತೋರಿಸುವುದರಿಂದ ಶಾಸಕರ ಕಾರ್ಯವೈಖರಿ ಹಾಗೂ ಅವರ ಜವಾಬ್ದಾರಿ ಹೆಚ್ಚಾಗುತ್ತದೆ. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಯಾವ ಯಾವ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದರು, ಯಾರು ಸುಮ್ಮನೆ ಕುಳಿತು ಬಂದರೆಂದೂ ತಿಳಿಯಬಹುದು. ನೇರಪ್ರಸಾರವು ಮತದಾರರಿಗೂ ಒಂದು ಪ್ರಜಾಪ್ರಭುತ್ವದ ಪಾಠ. ಆದ್ದರಿಂದ ವಿಧಾನಸಭೆ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡಲು ಅನುಕೂಲವಾಗುವಂತೆ ಮಾಧ್ಯಮಗಳ ಕ್ಯಾಮೆರಾಗಳಿಗೆ ಅವಕಾಶ ಇರಲಿ.

–ತಾ.ಸಿ.ತಿಮ್ಮಯ್ಯ, ಬೆಂಗಳೂರು

**

ಕಂಗಾಲಾಗಿದ್ದಾನೆ ರೈತ, ನೆರವಿಗೆ ಧಾವಿಸಿ

ಈ ಬಾರಿ ಮುಂಗಾರು ಸರಿಯಾದ ಸಮಯಕ್ಕೆ ಬಾರದೇ ರೈತರಲ್ಲಿ ಆತಂಕ ಸೃಷ್ಟಿಸಿದೆ. ನಮ್ಮಲ್ಲಿ ಮುಕ್ಕಾಲುಪಾಲು ಜನರು ಮಳೆ ಆಶ್ರಯದಲ್ಲಿ ಬೆಳೆ ಬೆಳೆಯುತ್ತಾರೆ. ಎಲ್ಲರ ಬಳಿಯೂ ಕೊಳವೆಬಾವಿ ವ್ಯವಸ್ಥೆ ಇರುವುದಿಲ್ಲ. ಇಂತಹವರು ಈ ವ್ಯವಸ್ಥೆ ಇರುವವರಿಂದ ಗಂಟೆಗೆ ಇಂತಿಷ್ಟು ಅಂತ ರೊಕ್ಕ ಕೊಟ್ಟು ನೀರು ಪಡೆಯುತ್ತಾರೆ. ಇದು, ತಾತ್ಕಾಲಿಕ ಪರಿಹಾರ ಕ್ರಮ. ಮಳೆಗೆ ಸಾಟಿ ಬೇರೊಂದಿಲ್ಲ. ಮಳೆ ಕೊರತೆಯಿಂದ ರೈತ ಕಂಗಾಲಾಗಿ ಮೋಡದ ಕಡೆಗೆ ಮುಖಮಾಡಿ ಕುಳಿತಿದ್ದಾನೆ. ಕೆಲವು ರೈತರು ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಅಲ್ಪ ಪ್ರಮಾಣದ ಸಾಲವನ್ನು ಪಡೆದು, ಸರಿಯಾಗಿ ಪಾವತಿಸಲು ಆಗದೆ, ಮತ್ತೆ ಹೊಸದಾಗಿ ಸಾಲವನ್ನು ಪಡೆಯಲಾಗದೆ ಪರದಾಡುವಂತಾಗಿದೆ. ಇಂತಹ ರೈತರ ₹ 50,000ದವರೆಗಿನ ಸಾಲವನ್ನು ಸರ್ಕಾರ ಮನ್ನಾ ಮಾಡಿ, ಹೊಸ ಸಾಲ ಪಡೆಯಲು ಅನುವಾಗಿಸಲಿ.

–ಎ.ಎಸ್.ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ

**

ಮೂಲ ಸೌಕರ್ಯ ಕಾಮಗಾರಿಗೆ ತಡೆ ಏಕೆ?

ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ ಆರಂಭಗೊಂಡಿದ್ದ ಹಾಗೂ ಇನ್ನಷ್ಟೇ ಆರಂಭ ಆಗಬೇಕಿರುವ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿಯುವಂತೆ ಆರ್ಥಿಕ ಇಲಾಖೆಯು ಸುತ್ತೋಲೆ ಹೊರಡಿಸಿದ್ದು ಸರಿಯಷ್ಟೆ. ಆದರೆ ಈ ಸುತ್ತೋಲೆಯನ್ನೇ ನೆಪವಾಗಿಸಿಕೊಂಡು, ರಾಜ್ಯದ ಜನವಸತಿಯುಳ್ಳ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆರಂಭಗೊಂಡಿದ್ದ ಒಳಚರಂಡಿ, ರಸ್ತೆ ದುರಸ್ತಿ ಕಾಮಗಾರಿಗಳನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ, ಸರ್ಕಾರದ ಸುತ್ತೋಲೆ ಕಡೆ ಕೈ ತೋರಿಸಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಮಳೆ ಹೆಚ್ಚಾಗುವುದಕ್ಕೂ ಮೊದಲು, ಈ ರೀತಿ ಅರ್ಧಕ್ಕೇ ಸ್ಥಗಿತಗೊಂಡಿರುವ ಮೂಲ ಸೌಕರ್ಯ ಕಾಮಗಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತಾಗಿ ಆರಂಭಿಸಲು ಸರ್ಕಾರ ಆದೇಶ ಹೊರಡಿಸಲಿ.

–ಪುಟ್ಟದಾಸು, ಮಂಡ್ಯ

**

ವಿರೋಧ ಪಕ್ಷದ ನಾಯಕ ಸ್ಥಾನ: ಮಹತ್ವ ಅರಿಯಿರಿ

ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಜಂಟಿ ಅಧಿವೇಶನ ಆರಂಭವಾಗಿದೆ. ಶಾಸನಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಮಹತ್ವವಿದೆಯೋ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಅಷ್ಟೇ ಪ್ರಾಮುಖ್ಯ ಇದೆ. ರಾಷ್ಟ್ರೀಯ ಪಕ್ಷವೊಂದು ಇದನ್ನು ಅರಿಯದೇ ಹೋದುದು ವಿಪರ್ಯಾಸ. ಶಿಸ್ತಿನ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಯಲ್ಲಿ ಗುಂಪುಗಾರಿಕೆ ವಿಪರೀತಕ್ಕೆ ಹೋಗಿದೆ. ವಿರೋಧ ಪಕ್ಷದ ನಾಯಕನ ಆಯ್ಕೆಯ ಜಗ್ಗಾಟಕ್ಕೆ ಇದೇ ಕಾರಣ.

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ಮಹತ್ವದ್ದು. ಆದರೆ ಈಚಿನ ದಿನಗಳಲ್ಲಿ ವಿರೋಧ ಪಕ್ಷಗಳ ದನಿ ಕಿಮ್ಮತ್ತು ಕಳೆದುಕೊಂಡಿದೆ. ಇದು ಒಳ್ಳೆಯದಲ್ಲ. 

–ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

**

ಅರ್ಹತೆ, ಬದ್ಧತೆ ಇಲ್ಲದಿದ್ದರೆ...

‘ಒಂದು ಮಳೆಗೇ ಮಂಗಳೂರಿನ ಪಂಪ್‌ವೆಲ್ ಸುತ್ತ ಜಲಾವೃತ’ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ (ಕಿಡಿನುಡಿ, ಜುಲೈ 4). ರಸ್ತೆಯಲ್ಲೇ ನೀರು ಹರಿಯುವಂತೆ ಆಗಿರುವ ಸ್ಥಿತಿ ಮಂಗಳೂರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಪಟ್ಟಣ, ನಗರಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಅದೇ ರೀತಿ ಇದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ಕೈಗೊಂಡಿರುವ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ (ಸಿ.ಸಿ. ರಸ್ತೆ) ಕಾಮಗಾರಿಗಳು ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಗುಂಡಿ ಬಿದ್ದು, ವಾಹನಗಳಲ್ಲಿ ಅಡ್ಡಾಡುವಾಗ ಮೈ ಮೂಳೆಗಳು ಕಿತ್ತು ಬರುವ ಅನುಭವ ಆಗುತ್ತದೆ. ನಗರದ ಮೂಲಕ ಹಾದು ಹೋಗಿರುವ ವಾಣಿವಿಲಾಸ ಸಾಗರ ಜಲಾಶಯದ ಚಾನೆಲ್ ನೀರು ಏಕಾಏಕಿ ನಗರಕ್ಕೆ ನುಗ್ಗಿ ಎರಡು– ಮೂರು ಬಡಾವಣೆಗಳು ಎರಡು ಬಾರಿ ಪೂರ್ಣ ಜಲಾವೃತ ಆದದ್ದೂ ಇದೆ. ಅವಘಡ ಸಂಭವಿಸಿದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಬೇರೇನೂ ಬದಲಾವಣೆ ಆಗಿಲ್ಲ. 

ಸಿ.ಸಿ. ರಸ್ತೆ ಹಾಳಾಗಲು ಪ್ರಮುಖ ಕಾರಣ ಕಳಪೆ ಕಾಮಗಾರಿ. ಸಮಸ್ಯೆ ಏನೆಂದರೆ, ಗುತ್ತಿಗೆದಾರರನ್ನು ಆಯ್ಕೆ ಮಾಡುವವರು, ಕಾಮಗಾರಿಗೆ ಮಂಜೂರಾತಿ ನೀಡುವವರು, ಉಸ್ತುವಾರಿ ನೋಡುವವರು, ಗುಣಮಟ್ಟ ಪರಿಶೀಲನೆ ನಡೆಸುವವರು ಎಲ್ಲರೂ, ಕಕ್ಕಿಲ್ಲಾಯ ಅವರು ಹೇಳಿದಂತೆ, ಅರ್ಹತೆ ಇಲ್ಲದ ಎಂಜಿನಿಯರ್‌ಗಳು, ಬದ್ಧತೆ ಇಲ್ಲದ ಅಧಿಕಾರಿಗಳು, ಕಮಿಷನ್‌ಗೆ ಬಾಯಿ ತೆರೆಯುವ ಜನಪ್ರತಿನಿಧಿಗಳು. ಕುರಿ ರಕ್ಷಣೆಗೆ ತೋಳಗಳನ್ನೇ ನೇಮಿಸಿದಂತೆ ಇದೆ ನಮ್ಮ (ಅ)ವ್ಯವಸ್ಥೆ.

–ಪ್ರೊ. ಎಂ.ಜಿ.ರಂಗಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT