ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬುಧವಾರ, ಮಾರ್ಚ್ 15, 2023

Last Updated 14 ಮಾರ್ಚ್ 2023, 22:05 IST
ಅಕ್ಷರ ಗಾತ್ರ

ಮಕ್ಕಳ ಮನವರಳಿಸಲು ಬೇಕು ಪತ್ರಿಕೆ
ನಾವು ಸಣ್ಣವರಿದ್ದಾಗ ‘ಚಂದಮಾಮ’, ‘ಬಾಲಮಿತ್ರ’, ‘ಬೊಂಬೆಮನೆ’, ‘ಪುಟಾಣಿ’ಯಂತಹ, ಮಕ್ಕಳಿಗೇ ಮೀಸಲಾದ ಪತ್ರಿಕೆಗಳಲ್ಲದೆ ವಿವಿಧ ಕನ್ನಡ ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿನ ಮಕ್ಕಳ ಪುಟಗಳು ನಮ್ಮನ್ನು ಸೆರೆಹಿಡಿಯುತ್ತಿದ್ದವು. ಅವುಗಳ ಆಗಮನಕ್ಕಾಗಿ ನಾವು ಕಾತರದಿಂದ ಕಾದದ್ದಿದೆ. ಅವು ಕೈಗೆ ಸಿಕ್ಕಾಗ ಓದಿ, ಹಾಡಿ, ಕುಣಿದು ಸಂಭ್ರಮಿಸಿದ್ದಿದೆ.

ಈಗ ಕಾಲ ಎಷ್ಟು ಬದಲಾಗಿ ಹೋಗಿದೆ. ಎಷ್ಟೋ ‘ಮಕ್ಕಳ ಪತ್ರಿಕೆ’ಗಳು ಹೇಳಹೆಸರಿಲ್ಲದೇ ಮಾಯವಾಗಿವೆ. ಎಷ್ಟೋ ದಿನಪತ್ರಿಕೆಗಳಲ್ಲಿ ಮಕ್ಕಳ ಪುಟಕ್ಕೆ ಕೊಕ್ ಕೊಡಲಾಗಿದೆ. ಇತ್ತೀಚಿನವರೆಗೂ ಪ್ರಕಟವಾಗುತ್ತಿದ್ದ ಕೆಲವಾದರೂ ಮಕ್ಕಳ ಪತ್ರಿಕೆಗಳು ಕಿಂಚಿತ್ತಾದರೂ ಮಕ್ಕಳ ಮನ ತಣಿಸುತ್ತಿದ್ದವು. ಅವೂ ಈಗ ಉಳಿಯುವ ಭರವಸೆಯಿಲ್ಲ. ಲೌಕಿಕ ವ್ಯವಹಾರದಲ್ಲಿ ಮುಳುಗಿಹೋಗಿರುವ ಯಾರಿಗೂ ಮಕ್ಕಳ ಬಾಲ್ಯದ ಬಗ್ಗೆ ಚಿಂತೆಯಿಲ್ಲ.

ಕೋಟಿ ಕೋಟಿ ಹಣ ಸುರಿದು ಅರ್ಥವಿಲ್ಲದ ಸಮ್ಮೇಳನ ನಡೆಸುವ ಈ ನಾಡಿನಲ್ಲಿ ಮಕ್ಕಳ ಮನವರಳಿಸಲು ಅಗತ್ಯವಾದ ಪತ್ರಿಕೆಗಳು ಲಭ್ಯವಿಲ್ಲ. ಮಕ್ಕಳ ಪತ್ರಿಕೆಗಳ ಅಗತ್ಯವನ್ನು ಮನಗಾಣಿಸಿದ ಟಿ.ಎ.ಎನ್. ಖಂಡಿಗೆ ಅವರ ಲೇಖನ (ಸಂಗತ, ಮಾರ್ಚ್ 13) ಸಕಾಲಿಕ. ಮಕ್ಕಳ ಬಾಲ್ಯದ ಬಗೆಗಿರುವ ಅವರ ಕಾಳಜಿಗೆ ನನ್ನದೊಂದು ಸಲಾಮು.
–ರಾಜಶೇಖರ ಕುಕ್ಕುಂದಾ, ಬಾಗಲಕೋಟೆ

***

ಟೋಲ್ ವಸೂಲಿ ಮಾಡುವ ಮುನ್ನ...
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ದಶಪಥ ರಸ್ತೆಯಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗಿರುವ ಕೆಲವು ಸೌಲಭ್ಯಗಳು ಇಲ್ಲ. ಕಾಫಿ, ಟೀ ಕುಡಿಯುವುದಕ್ಕೆ ವ್ಯವಸ್ಥೆ ಇರಲಿ, ಮೂತ್ರ ವಿಸರ್ಜನೆಗೂ ಜಾಗವಿಲ್ಲ.

ಚನ್ನಪಟ್ಟಣ ಅಥವಾ ರಾಮನಗರಕ್ಕೆ ಹೋಗಬೇಕಾದರೆ, ಸೂಕ್ತ ಸೂಚನಾ ಫಲಕಗಳಿಲ್ಲ. ಈ ಗೊಂದಲದಿಂದಾಗಿ, ಕೆಂಗೇರಿ ತನಕವೂ ಹೋಗಬೇಕಾಗುತ್ತದೆ. ಮೊದಲು ಈ ರಸ್ತೆಯ ಬದಿಗಳಲ್ಲಿ ನಾಲ್ಕಾರು ಹೋಟೆಲ್‌ಗಳು ಮತ್ತು ಹತ್ತಾರು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿ, ನಂತರ ಟೋಲ್ ವಸೂಲಿ ಮಾಡಲಿ.
–ಬೂಕನಕೆರೆ ವಿಜೇಂದ್ರ, ಮೈಸೂರು

***

ಆಜಾನ್‌ ಕರೆ: ವಾಸ್ತವದ ಅರಿವಿರಲಿ
‘ಮೈಕ್ ಹಾಕಿಕೊಂಡು ಕೂಗಿದರೆ ಮಾತ್ರ ಅಲ್ಲಾಹುವಿಗೆ ಕೇಳಿಸುತ್ತದೆಯೇ...?’ ಎಂಬ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆ ಆಜಾನ್ ಕೂಗುವ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳದೇ ಹೇಳಿರುವಂತಹದ್ದಾಗಿದೆ. ವಾಸ್ತವಿಕವಾಗಿ, ಇಸ್ಲಾಂ ಧರ್ಮದ ಪ್ರಕಾರ, ಆಜಾನ್ ಕೂಗುವುದು ಅಲ್ಲಾಹುವಿಗಾಗಿ ಅಲ್ಲ. ಅದು ಪ್ರಾರ್ಥನೆಗೆ ಕರೆಯಲು, ಪ್ರಾರ್ಥನೆಗೆ ಸಮಯವಾಗಿದೆ ಎಂದು ಜನರನ್ನು ಎಚ್ಚರಿಸಲು ಮಾಡಿಕೊಂಡ ಒಂದು ಪದ್ಧತಿ ಯಾಗಿದೆ.

ಇಂತಹ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಏನೋ ಒಂದು ಹೇಳಿಬಿಡುವುದು ಸಮರ್ಥನೀಯವಲ್ಲ. ಹಿಂದೆಲ್ಲಾ ನಾವು ಪರೀಕ್ಷೆಗೆ ಬೆಳಗಿನ ಆಜಾನ್ ಕೇಳಿ ಓದಿಕೊಳ್ಳಲು ಏಳುತ್ತಿದ್ದೆವು. ಈಗಲೂ ಆಜಾನ್ ಕೇಳಿ ಎದ್ದು ಓದಲು ಕುಳಿತುಕೊಳ್ಳುವ ಅನೇಕ ವಿದ್ಯಾರ್ಥಿಗಳು ಇದ್ದಾರೆ. ಆಜಾನ್ ಕರೆಗೆ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿ ಸುವವರೂ ಇದ್ದಾರೆ.
–ಸಾದಿಕ್ಉಲ್ಲಾ ಎಂ.ಎ., ಭರಮಸಾಗರ

***

ಸಾಮರಸ್ಯ ಮೈಗೂಡಿರುವ ನಾಡು
ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರಾವಳಿಗೆ ಭೇಟಿ ನೀಡಿ ಸಾಮರಸ್ಯ, ರಾಷ್ಟ್ರೀಯತೆಯ ಕುರಿತು ಭಾಷಣ ಮಾಡುವ ರಾಜಕಾರಣಿಗಳಲ್ಲಿ ಒಂದು ಮನವಿ. ಕರಾವಳಿ ಮೂಲತಃ ಸಾಮರಸ್ಯವನ್ನು ಮೈಗೂಡಿಸಿಕೊಂಡ ನಾಡು. ಆದರೆ ಮತ ಪ್ರಚಾರಕ್ಕಾಗಿ ಭೇಟಿ ನೀಡಿ, ರಾಷ್ಟ್ರೀಯತೆ ಎನ್ನುವುದರ ಮೂಲಕ ಯುವಜನರಲ್ಲಿ ಕಿಚ್ಚು ಹತ್ತಿಸಿ, ಧರ್ಮ-ಧರ್ಮಗಳ ನಡುವೆ ಕಲಹ ಎಬ್ಬಿಸಿ ಅಲ್ಲಿರುವ ನಿಜವಾದ ಸಾಮರಸ್ಯವನ್ನು ಹಾಳು ಮಾಡಬೇಡಿ.

ರಾಷ್ಟ್ರೀಯತೆ ಎನ್ನುವುದು ನಮ್ಮಲ್ಲಿ ಇದೆ. ಅದನ್ನು ನೀವು ಹೇಳಬೇಕೆಂದಿಲ್ಲ. ಹೇಳಲೇಬೇಕೆಂದಿದ್ದರೆ ಸರಿಯಾದ ರೀತಿಯಲ್ಲಿ ಹೇಳಿ. ಬರೀ ಒಂದು ಧರ್ಮ, ಸಮುದಾಯದ ಪರವಾಗಿ ಒಲವು ತೋರಿಸುವ ಮೂಲಕ ಇನ್ನೊಂದು ಧರ್ಮ, ಸಮುದಾಯದ ಕಡೆಗಣನೆ ಬೇಡ. ಸಾಮರಸ್ಯ ಉಳಿಸುವ ಕೆಲಸ ಮಾಡಿ, ಒಡೆಯುವ ಕೆಲಸವನ್ನಲ್ಲ.
–ಕೆ.ಪ್ರದೀಪ್ ಶಾಕ್ಯ, ಮಂಗಳೂರು

***

ರೆಡ್‌ಕ್ರಾಸ್ ಭ್ರಷ್ಟಾಚಾರ: ಬಯಲಾಗಲಿ ನಿಜಾಂಶ
ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದರಿಂದ, ಅದರ ಪ್ರಾದೇಶಿಕ ಶಾಖೆಗಳಲ್ಲಿ ಸಿಬಿಐ ತನಿಖೆ ಆರಂಭಿಸಿರುವುದು (ಪ್ರ.ವಾ., ಮಾರ್ಚ್ 14) ಸಂಸ್ಥೆಯ ಆಜೀವ ಸದಸ್ಯತ್ವ ಪಡೆದಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆಜೀವ ಸದಸ್ಯತ್ವ ಪಡೆಯುವಂತಹ ನೋಂದಣಿ ಪತ್ರದಲ್ಲಿ ₹ 500 ಎಂದೇ ಮುದ್ರಣ ವಾಗಿದ್ದರೂ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಬರಹದಿಂದ ಬದಲಾಯಿಸಿ ₹ 1,000 ಎಂದು ಮಾಡಿ, ವಿದ್ಯಾರ್ಥಿಗಳಿಂದ ಹೆಚ್ಚುವರಿ ಮೊತ್ತ ಸಂಗ್ರಹಿಸಿದ್ದಾರೆ. ಆದರೆ ಅದಕ್ಕೆ ರಸೀದಿ ನೀಡಿಲ್ಲ. ಸದಸ್ಯತ್ವ ಅಭಿಯಾನ ಮಾಡಿ ಒಂದೂವರೆ ವರ್ಷವಾಗಿದ್ದರೂ ಹಣ ನೀಡಿದ್ದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯಾಗಲಿ, ಭರವಸೆ ನೀಡಿದ್ದಂತೆ ಶಿಬಿರಗಳಾಗಲಿ, ತರಬೇತಿಗಳಾಗಲಿ ನಡೆದಿಲ್ಲ. ಇದರ ಬಗ್ಗೆ ಮಾಹಿತಿ ಪಡೆಯಲು ಹಲವಾರು ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ಕಚೇರಿಯ ದೂರವಾಣಿ ಸಂಖ್ಯೆಗಳು ತಪ್ಪಾಗಿರುತ್ತವೆ, ಇಲ್ಲದಿದ್ದರೆ ಮತ್ತೊಂದು ಸಂಖ್ಯೆಯನ್ನು ಕೊಟ್ಟು, ಅವರಿಗೆ ಕರೆ ಮಾಡಿ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ.

ಸದ್ಯ ಇತ್ತೀಚೆಗಷ್ಟೇ ಒಂದೂವರೆ ವರ್ಷದ ನಂತರ ಆಜೀವ ಸದಸ್ಯತ್ವದ ಕಾರ್ಡ್ ಸಿಕ್ಕಿತೆಂದು ಖುಷಿಪಟ್ಟಿದ್ದ ವಿದ್ಯಾರ್ಥಿಗಳಿಗೆ ಇದೀಗ ಸಿಬಿಐ ತನಿಖೆಯ ಸುದ್ದಿ ಬಂದ ನಂತರ, ಭ್ರಷ್ಟಾಚಾರದ ಅನುಮಾನ ಕಾಡುತ್ತಿದೆ. ಸಿಬಿಐ ತನಿಖೆಯಿಂದ ನಿಜಾಂಶ ಬಯಲಾಗಬೇಕು ಮತ್ತು ಮುಂದಿನ ದಿನಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಹೆಚ್ಚು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರೀಕ್ಷಿಸುತ್ತೇವೆ.
–ನಾಗಾರ್ಜುನ ಪಿ. ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT