ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅತಿ ದೊಡ್ಡ ಜಾತ್ರೆಗೆ ಬೇಕು ಸೋಗಿಲ್ಲದವರು

Published 7 ಮೇ 2024, 0:30 IST
Last Updated 7 ಮೇ 2024, 0:30 IST
ಅಕ್ಷರ ಗಾತ್ರ

ಅತಿ ದೊಡ್ಡ ಜಾತ್ರೆಗೆ ಬೇಕು ಸೋಗಿಲ್ಲದವರು

ಪ್ರಜಾಪ್ರಭುತ್ವದಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆ ಎಂದರೆ ಅದು ಚುನಾವಣೆ. ಪ್ರಜೆಗಳು ಸೌಖ್ಯವಾಗಿ ಇರಬೇಕೆಂದರೆ ಮತ ಚಲಾವಣೆಯ ಹಕ್ಕನ್ನು ಪ್ರತಿಯೊಬ್ಬರೂ ಮನಗಾಣಬೇಕು. ಉತ್ತಮ ನಾಯಕರನ್ನು ಚುನಾಯಿಸುವುದು ನಮ್ಮ ಮುಖ್ಯ ಕರ್ತವ್ಯ. ಸರ್ಕಾರದ ಪರವಾಗಿ ಮೂಲಸೌಕರ್ಯಗಳನ್ನು ಪ್ರತಿ ಪ್ರದೇಶಕ್ಕೆ ಪಾರದರ್ಶಕವಾಗಿ ಮುಟ್ಟಿಸುವ ಯೋಗ್ಯ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಮತದಾರರು ತಪ್ಪದೇ ಮತ ಚಲಾವಣೆ ಮಾಡಬೇಕು.

ಆಕಾಶವನ್ನೇ ಧರೆಗಿಳಿಸುವವರಂತೆ ಸೋಗು ಹಾಕಿಕೊಂಡು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಮುಖಂಡರನ್ನು ದೂರ ಸರಿಸಿ, ಜನನಿಷ್ಠ ನಾಯಕರನ್ನು ಆಯ್ಕೆ ಮಾಡಬೇಕು. ಸ್ವಾತಂತ್ರ್ಯ ದೊರೆತು 75 ವರ್ಷ ಗತಿಸಿದರೂ ಮೂಲ ಸೌಕರ್ಯಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಇದನ್ನೆಲ್ಲಾ ಸರಿಪಡಿಸುವಂತಹ ದೂರದೃಷ್ಟಿಯುಳ್ಳವರು ನಮಗೆ ಬೇಕಾಗಿದ್ದಾರೆ. ಹೀಗಾಗಿ, ಯಾವುದೇ ಆಸೆ– ಆಮಿಷಕ್ಕೆ ಮಾರುಹೋಗದೆ ಎಚ್ಚರವಹಿಸಿ ಜನಸೇವಕರನ್ನು ಆರಿಸೋಣ. 

-ಮಹಾಂತೇಶ ರಾಜಗೋಳಿ, ಬೈಲಹೊಂಗಲ, ಬೆಳಗಾವಿ

ಅನಧಿಕೃತ ಶಾಲೆ: ಪಟ್ಟಿ ಹೊರಬೀಳಲಿ

ರಾಜ್ಯದಲ್ಲಿ 2024- 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ, ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಬಿರುಸು ಪಡೆದಿದೆ. ಆದರೆ ಅನಧಿಕೃತ ಶಾಲೆಗಳ ಬಗೆಗಿನ ಮಾಹಿತಿಯ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಅಂತಹ ಶಾಲೆಗಳಿಗೆ ಕಳುಹಿಸುವ ಸಾಧ್ಯತೆ ಇದೆ. ಆದಕಾರಣ, ಸರ್ಕಾರ ಆದಷ್ಟು ಬೇಗ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕು. ಅನಧಿಕೃತ ಶಾಲೆಗಳ ಹಾವಳಿಗೆ ಕಡಿವಾಣ ಹಾಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕೆಲವು ಶಾಲೆಗಳು ಅನುಮತಿ ಇಲ್ಲದ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವುದು, ನೋಂದಣಿ ಇಲ್ಲದೇ ತರಗತಿಗಳನ್ನು ಉನ್ನತೀಕರಿಸುವುದು ಹಾಗೂ ಒಪ್ಪಿಗೆ ಪಡೆಯದೇ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವುದು ಸೇರಿದಂತೆ ವಿವಿಧ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿವೆ. ಇಂತಹ ಶಾಲೆಗಳ ಕುರಿತು ಪಾಲಕರಿಗೆ ಅಗತ್ಯ ಮಾಹಿತಿ ಇರಲೇಬೇಕಿದೆ. ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಬಯಸುವ ಪೋಷಕರ ಅನುಕೂಲಕ್ಕಾಗಿ ಶಾಲೆಯ ಸ್ಥಿತಿಗತಿಯನ್ನು ತಿಳಿಸುವ ಸೂಚನೆಯನ್ನು ಪ್ರವೇಶದ್ವಾರದಲ್ಲಿ ಪ್ರದರ್ಶಿಸುವುದನ್ನು ಎಲ್ಲಾ ಖಾಸಗಿ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ಇದು ಪೋಷಕರನ್ನು ಎಚ್ಚರಗೊಳಿಸುವುದಲ್ಲದೆ ಅವರ ಹಣ ಮತ್ತು ಸಮಯವನ್ನು ಉಳಿಸುತ್ತದೆ. ಅಲ್ಲದೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಒಂದೆರಡು ತಿಂಗಳ ಮೊದಲೇ ಅನಧಿಕೃತ ಶಾಲೆಗಳ ಬಗ್ಗೆ ಮಾಹಿತಿ
ನೀಡಬೇಕಾದುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕಲು ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತರುವುದು ಅಗತ್ಯ. 

-ಪುಟ್ಟರಾಜು, ಮಂಡ್ಯ

ಹೆದ್ದಾರಿ: ಇರಿಸುಮುರಿಸಿಗೆ ರಹದಾರಿ?

ತುಮಕೂರಿನಿಂದ ಶಿರಾಕ್ಕೆ ಹೋಗಲು ನಾನು ಇತ್ತೀಚೆಗೆ ರಾಜ್ಯ ರಸ್ತೆ ಸಾರಿಗೆ ನಿಗಮವೊಂದರ ಬಸ್ಸನ್ನು ಹತ್ತಿದೆ. ಬಸ್ಸು ಹೆದ್ದಾರಿಯಲ್ಲಿ ಸುಮಾರು ಇಪ್ಪತ್ತು ಕಿಲೊಮೀಟರ್ ದೂರ ಕ್ರಮಿಸಿತ್ತು. ಆಗ ಸುಮಾರು 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬಸ್ಸನ್ನು ನಿಲ್ಲಿಸುವಂತೆ ಬೇಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಕೆಲವರು ಚಾಲಕನಿಗೆ ನಿಲ್ಲಿಸುವಂತೆ ಹೇಳಿದರು. ಬಸ್ ನಿಂತಾಗ ಆ ವ್ಯಕ್ತಿ ಶೌಚಕ್ಕೆ ಹೋಗಬಯಸಿದ್ದುದು ಎಲ್ಲರಿಗೂ ತಿಳಿಯಿತು. ಆದರೆ ಬಸ್‌ ನಿಂತ ಜಾಗ ಸಂಪೂರ್ಣ ಬರಡು ಭೂಮಿಯಾಗಿದ್ದು ಗಿಡ ಮರಗಳಿಲ್ಲ, ಮಧ್ಯಾಹ್ನದ ಬಿಸಿಲು, ನೀರಿನ ಸಮಸ್ಯೆ ಜೊತೆಗೆ ಬಸ್ಸಿನಲ್ಲಿ ಇದ್ದವರಿಗೆಲ್ಲ ಇರಿಸುಮುರಿಸು ಉಂಟಾಯಿತು. ಜನಸಾಮಾನ್ಯರಿಗೆ ಆಗುತ್ತಿರುವ ಇಂತಹ ತೊಂದರೆಯನ್ನು ಅರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ 10 ಕಿಲೊಮೀಟರಿಗೆ ಒಂದೊಂದು ಶೌಚಾಲಯ ನಿರ್ಮಾಣ ಮಾಡಬೇಕು.  

-ಸಣ್ಣಮಾರಪ್ಪ, ಚಂಗಾವರ, ಶಿರಾ

ಅಗಾಧ ನೋವಿನ ಉಪಶಮನ

‘ಮರಣ: ಏಕಿಷ್ಟು ವೈಭವೀಕರಣ?’ ಎಂಬ ಯೋಗಾನಂದ ಅವರ ಲೇಖನ (ಸಂಗತ, ಮಾರ್ಚ್‌ 29) ಬದುಕಿನ ಸ್ವಾಭಾವಿಕ ಕ್ರಿಯೆಯಾದ ಸಾವಿನ ಕುರಿತಾದ ಚಿಂತನಾರ್ಹ ಬರಹವಾಗಿದೆ. ನಮ್ಮವರನ್ನು ಕಳೆದುಕೊಂಡಾಗ ಅನುಭವಿಸುವ ಅಗಾಧವಾದ ನೋವನ್ನು ಉಪಶಮನ ಮಾಡಿಕೊಳ್ಳುವುದು ಹೇಗೆ ಎಂಬ ವಿವರಣಾತ್ಮಕ ಅಂಶಗಳು, ಗತಿಸಿದವರ ಕುರಿತು ಅತಿಯಾಗಿ ದುಃಖಪಡುವ ಬದಲು ಅವರ ಒಳ್ಳೆಯ ಗುಣಗಳನ್ನು ನಮ್ಮ ಬದುಕಿಗೆ ತಂದುಕೊಳ್ಳಬೇಕೆಂಬ ಸದಾಶಯವನ್ನು ಸೂಚಿಸುತ್ತವೆ. ದುಃಖಿತ ಮನಸ್ಸನ್ನು ಸಾಂತ್ವನಗೊಳಿಸುವ ವಿವರಣಾತ್ಮಕ ಅಂಶಗಳೊಂದಿಗೆ ಮನಮುಟ್ಟುವಂತಿವೆ.

ಒಂದು ವರ್ಷದ ಹಿಂದೆ ನಡೆದ ನನ್ನ ತಾಯಿಯ ಅನಿರೀಕ್ಷಿತ ಸಾವಿನ ನೋವಿನಿಂದ ಹೊರಬರಲಾರದೆ ಇಂದಿಗೂ ನಾನು ದಿನವೂ ಕಣ್ಣೀರಿಡುತ್ತಿದ್ದೇನೆ. ಈ ಲೇಖನ ಓದಿದ ಮೇಲೆ ನನ್ನ ತಾಯಿಯ ಸಾವನ್ನು ಅರಗಿಸಿಕೊಳ್ಳಲು ನನ್ನ ಮನಸ್ಸನ್ನು ಅಣಿಗೊಳಿಸುವ ಪ್ರಯತ್ನ ಮಾಡಲೇಬೇಕೆನಿಸಿತು.

-ಕೆ.ಎಂ.ರುಕ್ಮಿಣಿ, ಬೆಂಗಳೂರು 

ಪರೀಕ್ಷಾ ಕೇಂದ್ರ: ಪೋಷಕರಿಗೂ ಅನುಕೂಲವಿರಲಿ 

ನನ್ನ ಮನೆಯ ಸಮೀಪವಿರುವ ಒಂದು ಶಾಲೆಯಲ್ಲಿ ಆಗಾಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಭಾನುವಾರದಂದು ಕೂಡ ‘ನೀಟ್‌’ ಆಯೋಜಿಸಲಾಗಿತ್ತು. ಆದರೆ, ಶಾಲೆಯಲ್ಲಿ ಪೋಷಕರು ವಿಶ್ರಾಂತಿ ಪಡೆಯಲು ಅನುಕೂಲ ಇರದ ಕಾರಣಕ್ಕೆ, ಶಾಲೆಯ ಪಕ್ಕದಲ್ಲಿಯೇ ಇದ್ದ ಆದರೆ ಮುಚ್ಚಿದ್ದ ಬಿಬಿಎಂಪಿ ಉದ್ಯಾನದ ಸುತ್ತಲೂ ಬಿಸಿಲ ಧಗೆಯಲ್ಲಿ ಪೋಷಕರು ಕುಳಿತಿದ್ದ ದೃಶ್ಯ ಅಯ್ಯೋ ಪಾಪ ಎನಿಸುವಂತೆ ಇತ್ತು. ಪೋಷಕರು ಆಹಾರ ಪದಾರ್ಥಗಳನ್ನು ತರುವುದರಿಂದ ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳ ಶೇಖರಣೆಯಾಗುತ್ತದೆ, ಅದನ್ನು ಸಂಗ್ರಹಿಸುವುದು ಕಷ್ಟದ ಕೆಲಸ ಎನ್ನುವ ಬಿಬಿಎಂಪಿ ಸಿಬ್ಬಂದಿಯ ಕಾರಣ ನ್ಯಾಯಯುತವಾದರೂ ಸಮಸ್ಯೆಯನ್ನು ಅರಿತು ಪರಿಹಾರಗಳನ್ನು ಕಂಡುಕೊಳ್ಳಬೇಕಲ್ಲವೇ?

ಕೊನೆಗೆ, ಸ್ಥಳೀಯನಾದ ನಾನು ಉದ್ಯಾನದ ಸಿಬ್ಬಂದಿಯ ಮನವೊಲಿಸಿದ ಬಳಿಕ ಪೋಷಕರನ್ನು ಒಳಗೆ ಬಿಡಲಾಯಿತು. ಆಗ ಬಿರು ಬೇಸಿಗೆಯಲ್ಲಿ ನಿಂತು ಸಾಕಾಗಿದ್ದವರು ನೆರಳಿನಲ್ಲಿ ನಿಟ್ಟುಸಿರುಬಿಟ್ಟರು. ಆದ್ದರಿಂದ, ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವಾಗ ಪರೀಕ್ಷಾ ಆಯೋಜಕರು ಪೋಷಕರ ಅನುಕೂಲಗಳನ್ನೂ ಗಮನದಲ್ಲಿ ಇರಿಸಿಕೊಳ್ಳುವಂತೆ ಆಗಲಿ. 

-ಜಿ.ಬೈರೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT