ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕನ್ನಡಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

Published 25 ಮಾರ್ಚ್ 2024, 16:56 IST
Last Updated 25 ಮಾರ್ಚ್ 2024, 16:56 IST
ಅಕ್ಷರ ಗಾತ್ರ

ಕನ್ನಡಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?

ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಜಯಪ್ರಕಾಶ್ ಹೆಗ್ಡೆ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ನಡುವೆ ವಾಕ್ಸಮರ ಶುರುವಾಗಿದೆ. ಪೂಜಾರಿಯವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ, ಅವರು ಲೋಕಸಭೆಯಲ್ಲಿ ಹೇಗೆ ಮಾತನಾಡುತ್ತಾರೆ ಎಂಬುದು ಹೆಗ್ಡೆ ಅವರ ಪ್ರಶ್ನೆ. ಅದಕ್ಕೆ ಪೂಜಾರಿಯವರು ಆರು ತಿಂಗಳೊಳಗೆ ಹಿಂದಿ ಕಲಿಯುವುದಾಗಿ ಸಮಜಾಯಿಷಿ ನೀಡಿದ್ದಾರೆ.

ಇದು ಲೋಕಸಭೆಯಲ್ಲಿ ಹಿಂದಿಯೇತರ ಭಾಷೆಗಳಿಗೆ ಕನ್ನಡಕ್ಕೆ ಇರುವ ದಯನೀಯ ಸ್ಥಿತಿಯನ್ನು ತಿಳಿಸುತ್ತದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವಂತೆ, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣುತ್ತೇವೆ ಎಂಬುದು ಬಾಯಿ ಮಾತಾಗಿಯೇ ಉಳಿದಿದೆ. ಇಂತಹ ಸ್ಥಿತಿಯಲ್ಲಿ, ಕರ್ನಾಟಕಕ್ಕೆ, ಕನ್ನಡಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಲೋಕಸಭೆಯಲ್ಲಿ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡು ಕನ್ನಡದಲ್ಲಿ ಮಾತನಾಡಲೂ ಧೈರ್ಯವಿಲ್ಲದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಹಿಂದಿಯ ಗುಲಾಮಿ ಮನಃಸ್ಥಿತಿ ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ
ಲ್ಲಿದೆ. ಇನ್ನು ಇವರು ಹಿಂದಿ ಹೇರಿಕೆಯನ್ನು ವಿರೋಧಿಸುವುದು ದೂರದ ಮಾತು. ಇದೇ ಮೇ ತಿಂಗಳಲ್ಲಿ ಯುಪಿಎಸ್‌ಸಿ ಮೊದಲ ಹಂತದ ಪೂರ್ವಭಾವಿ ಪರೀಕ್ಷೆ ಹಿಂದಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತಿದೆ. ಇಂತಹ ವಿಷಯಗಳು ಪಕ್ಷಗಳ ಪ್ರಣಾಳಿಕೆಗಳಲ್ಲಿ ಸ್ಥಾನ ಪಡೆದುಕೊಳ್ಳುವುದಿಲ್ಲ. ಕನ್ನಡಪರ ಸಂಘಟನೆಗಳಿಗೂ ಈ ಬಗ್ಗೆ ಗಂಭೀರ ಗಮನ ಇದ್ದಂತಿಲ್ಲ. ಒಕ್ಕೂಟ ಭಾರತದಲ್ಲಿ ಕನ್ನಡವನ್ನು ಕಾಪಾಡುವವರಾರು?

–ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

ನೀರು ಪೋಲು: ಶಿಕ್ಷೆ ಸೂಕ್ತ

ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಎರಡು ಲಕ್ಷ ಲೀಟರ್ ನೀರಿಗೆ ಬಣ್ಣ ಹಾಕಿ ‘ರೈನ್‌ ವಾಟರ್ ಡಾನ್ಸ್’ ಎನ್ನುವ ಹೆಸರಿನಲ್ಲಿ ಹೋಳಿ ಹಬ್ಬ ಆಚರಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದು ಜಲಮಂಡಳಿ ಆದೇಶದ ಸ್ಪಷ್ಟ ಉಲ್ಲಂಘನೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನೀರಿನ ಸಮಸ್ಯೆ ತೀವ್ರವಾಗಿದೆ. ಮನೆಗಳು, ಹಾಸ್ಟೆಲ್‌ಗಳು, ಪಿ.ಜಿ.ಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಸಾವಿರಾರು ರೂಪಾಯಿ ಕೊಡಲು ಸಿದ್ಧರಿರುವವ
ರಿಗೂ ನೀರು ದೊರಕುವುದು ಸುಲಭವಿಲ್ಲ. ಇನ್ನು ಬಡ, ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲ.

ಹಲವೆಡೆ ಅಡುಗೆಗೆ ಒಂದು ಕೊಡ ನೀರು, ಶೌಚಕ್ಕೆ ತಂಬಿಗೆ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಲಕ್ಷ ಲೀಟರ್ ನೀರನ್ನು ಹೋಳಿ ಹಬ್ಬದ ಹೆಸರಿನಲ್ಲಿ ಪೋಲು ಮಾಡಿದ್ದು ದುರಹಂಕಾರದ ಪರಮಾವಧಿ, ಬೇಜವಾಬ್ದಾರಿ ನಡವಳಿಕೆ. ಭಾರಿ ಪ್ರಮಾಣದ ನೀರನ್ನು ವ್ಯರ್ಥ ಮಾಡಿದ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗೆ ದಂಡ ವಿಧಿಸಿ, ಅದರಲ್ಲಿ ಪಾಲ್ಗೊಂಡವರ ಮೇಲೆ ಕಾನೂನಿನ ಅನ್ವಯ ಕ್ರಮ ಜರುಗಿಸಬೇಕು.

–ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಅರ್ಥವಾಗದಿರುವುದೇ ರಾಜಕಾರಣ!

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದ ಕೆಆರ್‌ಪಿಪಿ ಪಕ್ಷದ ಸ್ಥಾಪಕ, ಶಾಸಕ ಜನಾರ್ದನ ರೆಡ್ಡಿ ಈಗ ಬಿಜೆಪಿ ಸೇರಿದ್ದಾರೆ. ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್ ಕಾಂಗ್ರೆಸ್ ಪರ ಮತ ಹಾಕಿದ್ದರೆ, ಮತ್ತೊಬ್ಬ ಶಾಸಕ ಶಿವರಾಮ ಹೆಬ್ಬಾರ್ ಮತದಾನ ಮಾಡಲೇ ಇಲ್ಲ. ಆದರೂ ಇವರಿಬ್ಬರ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ವಂತ ಬಲದಿಂದಲೇ ಮೂರು ಕ್ಷೇತ್ರಗಳನ್ನು ಗೆಲ್ಲಬಲ್ಲ ಸಾಧ್ಯತೆ ಇರುವ ಜೆಡಿಎಸ್ ಬರೀ ಮೂರು ಸ್ಥಾನಗಳಿಗಾಗಿ, ಕೆಲವೇ ತಿಂಗಳುಗಳ ಹಿಂದೆ ನಿಂದಿಸುತ್ತಿದ್ದ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

‘ರಾಜಕಾರಣಿಗಳ ಸಂಗ ಮಾಡಿದರೆ ಓದಿದ್ದೇ ವ್ಯರ್ಥ ಎನಿಸುತ್ತದೆ’ ಎಂದು ಭಾಷಣ ಮಾಡಿದ್ದ ಹೃದಯವಂತರು ಲೋಕಸಭಾ ಅಭ್ಯರ್ಥಿಯಾಗಿ ಸ್ವಯಂ ರಾಜಕಾರಣಿ ಆದರು. ‘ರಾಜಾ ಪ್ರತ್ಯಕ್ಷ ದೇವತಾ’ ಎಂದು ಇಂದಿಗೂ ಭಾವಿಸುವ ಜನರ ನಡುವೆ ರಾಜಕುಮಾರನೇ ಅಭ್ಯರ್ಥಿಯಾಗಿ ಮತದಾರರ ಬಳಿ ಬಂದು ಮತ ಯಾಚಿಸಲಿದ್ದಾರೆ. ಯಾವುದೋ ಕಾರಣಕ್ಕೆ ಪಕ್ಷದಿಂದ ಟಿಕೆಟ್ ಲಭಿಸದಿದ್ದರೆ ಮಾತೃ ಪಕ್ಷವನ್ನೇ ವಾಚಾಮಗೋಚರ ನಿಂದಿಸಿ ಮತ್ತೊಂದು ಪಕ್ಷ ಸೇರುವವರು, ಅಂತಹವರಿಗೆ ಕೆಂಪುಹಾಸಿನ ಸ್ವಾಗತ ಕೋರುವವರ ಸಂಖ್ಯೆ ಕಡಿಮೆಯೇನಿಲ್ಲ. ಇದನ್ನೆಲ್ಲಾ ನೋಡಿದರೆ, ರಾಜಕಾರಣಿಗಳಿಗೆ ಆತ್ಮಸಾಕ್ಷಿಯೇ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಅಂತಿಮವಾಗಿ ಜನಸಾಮಾನ್ಯರಿಗೆ ರಾಜಕಾರಣ ಅರ್ಥವಾಗುವುದೇ ಇಲ್ಲ. ರಾಜಕೀಯ ಅಂದರೆ ಹೀಗೆಯೇ?!

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಜಲವಿವಾದ: ಹೂಳು ತೆಗೆಯುವುದೂ ಪರಿಹಾರ

ಮುಳುಗುತ್ತಿವೆ’ ಜಲಾಶಯಗಳು ಎಂಬುದು ನಾಡಾಭಿಮಾನಿಗಳು ಗಮನಿಸಲೇಬೇಕಾದ ಲೇಖನ
(ಪ್ರ.ವಾ., ಮಾರ್ಚ್‌ 24). ಇಂದು ರಾಜಕೀಯ ಸ್ವಾರ್ಥಕ್ಕಾಗಿ ಹೊಸ ಅಣೆಕಟ್ಟುಗಳನ್ನು ನಿರ್ಮಿಸುವ ಘೋಷಣೆಗಳನ್ನು ಮಾಡುತ್ತಿರುವ ರಾಜಕಾರಣಿಗಳು, ಇರುವ ಅಣೆಕಟ್ಟುಗಳನ್ನು ಉಳಿಸಿಕೊಳ್ಳುವ ಮತ್ತು ಅವುಗಳ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ. ‘ಕೆಆರ್‌ಎಸ್ ಆಯಸ್ಸು 100-120 ವರ್ಷ’ ಎಂದು ಅದರ ನಿರ್ಮಾತೃ ವಿಶ್ವೇಶ್ವರಯ್ಯನವರು ಹೇಳಿದ್ದರು. ಕನ್ನಡನಾಡು ಕಂಡ ಶ್ರೇಷ್ಠ ನೀರಾವರಿ ತಜ್ಞರಲ್ಲಿ ಒಬ್ಬರಾದ ಎಸ್.ಜಿ.ಬಾಳೇಕುಂದ್ರಿ ಅವರು ಹೊಸಪೇಟೆಯ ‘ತುಂಗಭದ್ರಾ ಜಲಾಶಯದಲ್ಲಿ ಮೂರನೇ ಒಂದು ಭಾಗದಷ್ಟು ಹೂಳು ತುಂಬಿದೆ. ಹೂಳು ತೆಗೆಯುವುದು ಕಷ್ಟಸಾಧ್ಯ. ತೆಗೆದರೂ ಅದರ ವಿಲೇವಾರಿ ಇನ್ನೂ ಕಷ್ಟ. ಕಿರು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು ಮತ್ತು ನೀರು ಬರುತ್ತಿರುವಾಗ ಕೆರೆಗಳಿಗೆ ಹರಿಸಬೇಕು’ ಎಂದು ಸಲಹೆ ಕೊಟ್ಟಿದ್ದರು.

ನಿಯಮಿತವಾಗಿ ಹೂಳು ತೆಗೆಯುವುದೂ ಜಲವಿವಾದದ ಪರಿಹಾರಕ್ಕೆ ಒಂದು ಕಿರು ಮಾರ್ಗ. ಕಾವೇರಿ ಕೊಳ್ಳದ ಜಲಾಶಯಗಳ ಹೂಳು ತೆಗೆದರೆ 100 ಟಿಎಂಸಿ ಅಡಿ ಹೆಚ್ಚು ನೀರು ಸಂಗ್ರಹಿಸಬಹುದು ಎಂದು ನೀರಾವರಿ ತಜ್ಞರು ಹೇಳುತ್ತಾರೆ. ಮಳೆಗಾಲಕ್ಕೆ ಮುನ್ನ, ತೀವ್ರ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯವಾಗಿ ಜನ ಮತ್ತು ಸರ್ಕಾರ ಗಮನಿಸಬೇಕಿರುವ ವಿಚಾರವೆಂದರೆ, ಮಲಿನವಾಗಿರುವ ನದಿಗಳನ್ನು ಸ್ವಚ್ಛಗೊಳಿಸುವುದು.

–ರಾ.ನಂ.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT