ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆ ಹಣ ಹೋಗಬೇಕಾದ್ದೆಲ್ಲಿಗೆ?

Published 29 ಮಾರ್ಚ್ 2024, 22:41 IST
Last Updated 29 ಮಾರ್ಚ್ 2024, 22:41 IST
ಅಕ್ಷರ ಗಾತ್ರ

ಆ ಹಣ ಹೋಗಬೇಕಾದ್ದೆಲ್ಲಿಗೆ?

ಚುನಾವಣೆ ದಿನದಿನಕ್ಕೂ ಕಾವು ಪಡೆದುಕೊಳ್ಳುತ್ತಿರುವಂತೆ, ಲಾರಿ, ಬಸ್ಸು, ಕಾರು, ದ್ವಿಚಕ್ರ ವಾಹನಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗುತ್ತಿದೆ. ಎಲ್ಲಿಂದ ಬಂದು ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಯಾರೂ ಬಾಯಿ
ಬಿಡುತ್ತಿಲ್ಲ. ಚುನಾವಣಾ ಆಯೋಗ ಇದನ್ನು ಅಕ್ರಮ ಹಣವೆಂದು ವಶಪಡಿಸಿಕೊಳ್ಳುತ್ತದೆ. ಆ ಹಣದ ಬಗ್ಗೆ
ಸಾರ್ವಜನಿಕರಿಗೆ ಸಿಗುವುದು ಅಷ್ಟೇ ಮಾಹಿತಿ. ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಚಿಕ್ಕ ಕಲ್ಲೆಸೆತದ ಪ್ರಸಂಗದಿಂದ ಹಿಡಿದು ಅತ್ಯಂತ ಜಾಣತನದಿಂದ ನಿರ್ವಹಿಸಿದ ಕೊಲೆಯನ್ನೂ, ಬಾಂಬ್‍ ಸ್ಫೋಟದ ರೂವಾರಿಗಳನ್ನೂ ನಮ್ಮ ತನಿಖಾ ದಳಗಳು ಪತ್ತೆ ಹಚ್ಚುತ್ತವೆ. ಹೀಗಿರುವಾಗ, ಅದರ ವಾರಸುದಾರರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ
ಆಗಲಾರದು. ಆ ಹಣವನ್ನು ಸಾಗಿಸುತ್ತಿರುವ ವಾಹನ ಚಾಲಕನಿಗೆ ಅದು ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿದೆ, ಅದನ್ನು ಯಾರು ವಾಹನದಲ್ಲಿ ಇರಿಸಿದರು ಎಂಬುದು ತಿಳಿದಿರುವುದಿಲ್ಲವೇ?

ಚುನಾವಣಾ ಅವ್ಯವಹಾರ ಕೂಡ ದೇಶದ ಅಭದ್ರತೆಗೆ ಕಾರಣವಾಗುವ ಕುಕೃತ್ಯದಂತೆ ಪ್ರಜಾಪ್ರಭುತ್ವ ದ್ರೋಹಿ ಕೆಲಸ. ಇದನ್ನು ಎನ್ಐಎಯಂತಹ ಸಂಸ್ಥೆಗೆ ವಹಿಸಿ, ಆ ಹಣದ ಮೂಲ ಪತ್ತೆ ಮಾಡಿ, ಸಂಬಂಧಪಟ್ಟ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದರೆ,  ಚುನಾವಣೆಯಲ್ಲಿ ಹಣದ ಪ್ರಭಾವ ತಗ್ಗಿ ಅದು ಪಾರದರ್ಶಕವಾಗಿ ನಡೆಯಲು ಸಾಧ್ಯವಾಗುತ್ತದೆ. ಆಗ ಪ್ರಾಮಾಣಿಕರು ಚುನಾಯಿತರಾಗಿ ಪ್ರಜಾಪ್ರಭುತ್ವ ವಿಜೃಂಭಿಸೀತು.

 -ಸತ್ಯಬೋಧ, ಬೆಂಗಳೂರು

‘ರಾಜಕೀಯ ಮೋಹಿನಿ’ಗೆ ಒಲಿದ ಸ್ವಾಮಿಗಳು!

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳು ವೈಯಕ್ತಿಕ ಕಾರಣಕ್ಕೆ ಪ್ರಲ್ಹಾದ ಜೋಶಿಯವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡದಂತೆ ಬಿಜೆಪಿಯನ್ನು ಒತ್ತಾಯಿಸಿರುವ ಹೇಳಿಕೆ ವಿವಾದದ ಸ್ವರೂಪ ಪಡೆದಿದೆ. ಅದಕ್ಕಾಗಿ ಲಿಂಗಾಯತ ಸಮುದಾಯವನ್ನು ಎಳೆದು ತರಲಾಗಿದೆ. ವಿವಿಧ ಸ್ವಾಮೀಜಿಗಳಿಗೆ ರಾಜಕೀಯ ಹೊಸದಲ್ಲ, ಅಂತಹುದರಲ್ಲಿ ಈ ಪ್ರಕರಣ ಮೊದಲನೆಯದೂ ಅಲ್ಲ, ಕೊನೆಯದೂ ಆಗಿರಲಾರದು. ಸ್ವತಃ ಸ್ವಾಮೀಜಿಗಳೇ ಚುನಾವಣೆಗೆ ನಿಂತು, ಅವರಲ್ಲಿ ಕೆಲವರು ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ರಾಜಕೀಯವೆಂಬ ಮೋಹಿನಿಗೆ ಅವರೂ ವಶವಾಗುತ್ತಿದ್ದಾರೆ. ಮಠಗಳಿಗೆ ಸರ್ಕಾರದಿಂದಲೇ ಹಣ ನೀಡುವ ಪರಿಪಾಟ ಚಲಾವಣೆಗೆ ಬಂದಂದಿನಿಂದ ರಾಜಕೀಯ ನೇತಾರರು ಅವರ ಕೃಪೆಗೆ, ಅವಕೃಪೆಗೆ ಒಳಗಾಗುತ್ತಿದ್ದಾರೆ. ಬಿಜೆಪಿಯು ರಾಮಮಂದಿರ ನಿರ್ಮಾಣವನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡರೆ ತಪ್ಪೇನಲ್ಲ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದರು. ಈಗ ಜಾತಿಗೆ ಅಷ್ಟೇ ಅಲ್ಲ ಉಪಜಾತಿಗೂ ಮಠಾಧೀಶರು ಹುಟ್ಟಿಕೊಂಡಿದ್ದು, ತಮ್ಮ ಜಾತಿಗೇ ಟಿಕೆಟ್‌, ಸಚಿವ ಸ್ಥಾನ ಬೇಕೆಂದು ಹಟ ಹಿಡಿಯುತ್ತಾರೆ. ಇಲ್ಲದಿದ್ದರೆ ಸರ್ಕಾರವನ್ನು ಬೀಳಿಸುವುದಾಗಿ ಬೆದರಿಕೆ ಒಡ್ಡುತ್ತಾರೆ. ಸಿದ್ಧೇಶ್ವರ ಸ್ವಾಮಿಗಳಂಥ ಕೆಲವರು ಇದಕ್ಕೆ ಅಪವಾದವಾಗಿ ನಿಲ್ಲುತ್ತಾರೆ. ಧರ್ಮ ಮತ್ತು ರಾಜಕೀಯವು ಹಾಲು, ಜೇನಿನಂತೆ ಬೆರೆತುಕೊಂಡಿವೆ.
ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವುದು ಮತ್ತು ಆ ಮಾರ್ಗದಲ್ಲಿ ಭಕ್ತರನ್ನು ಕರೆದೊಯ್ಯುವುದು ಸ್ವಾಮಿಗಳ ಗುರಿಯಾಗಿ ಉಳಿದಿಲ್ಲ.

-ಶಿವಕುಮಾರ ಬಂಡೋಳಿ, ಹುಣಸಗಿ

ದೇವರ ನಂಬಿಕೆ ವೈಯಕ್ತಿಕ ಆಯ್ಕೆ

‘ದಲಿತ ಸಮುದಾಯವು ದೇವರು ಮತ್ತು ಕುಡಿತದಿಂದ ದೂರ ಇರದೇ ಹೋದರೆ ಉದ್ಧಾರವಾಗಲ್ಲ’ ಎಂಬ, ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಭಾಷ್ ಭರಣಿ ಅವರ ಹೇಳಿಕೆ (ಪ್ರ.ವಾ., ಮಾರ್ಚ್‌ 28) ವಿವಾದಕ್ಕೆ ಎಡೆ ಮಾಡಿಕೊಡುವಂತಿದೆ. ಕುಡಿತದಿಂದ ದೂರ ಇರಿ ಎನ್ನುವುದು ಸೂಕ್ತವಾದರೂ ದೇವರಿಂದ ದೂರ ಇರಿ ಎಂದು ಹೇಳುವುದು ಸರಿಯಲ್ಲ. ದೇವರನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ನಂಬಿಕೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸಮೂಹದ ಎದುರಾಗಲೀ ಸಾರ್ವಜನಿಕ ಸಭೆಗಳಲ್ಲಾಗಲೀ ಇಂತಹ ಹೇಳಿಕೆಗಳನ್ನು ನೀಡಬಾರದು. ಕಷ್ಟಕಾಲದಲ್ಲಿ ಸಹಾಯ ಮಾಡುವವರು ಮನುಷ್ಯರೇ ವಿನಾ ದೇವರಲ್ಲ ಎಂಬ ಮಾತು ಒಪ್ಪತಕ್ಕ
ದ್ದಾದರೂ ಭಗವಂತನು ಮನುಷ್ಯನ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಎಂಬುದು ಎಲ್ಲ ಧರ್ಮಗಳ ನಂಬಿಕೆಯೂ ಆಗಿದೆ.

ದೇವರು, ನಂಬಿಕೆ, ನಿರೀಕ್ಷೆ ಮತ್ತು ಭರವಸೆಯ ಮೇಲೆಯೇ ಮನುಷ್ಯ ಜೀವನ ಸಾಗುತ್ತದೆ. ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‍ ಅವರಿಗೆ ಸುಪ್ರೀಂ ಕೋರ್ಟ್‌, ಒಬ್ಬ ಸಚಿವರಾಗಿ ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅವು ಉಂಟು ಮಾಡುವ ಸಂಭವನೀಯ ಪರಿಣಾಮಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿರುವುದನ್ನು ತಿಳಿದುಕೊಳ್ಳುವುದು ಅಗತ್ಯ.

-ಎಲ್.ಚಿನ್ನಪ್ಪ, ಬೆಂಗಳೂರು

ಸಭಾ ಕಾರ್ಯಕ್ರಮ: ಯುವಜನರಿಗಷ್ಟೇ ಅ‍ಪಥ್ಯವಲ್ಲ!

ಸಭಾ ಕಾರ್ಯಕ್ರಮಗಳು ಯುವಜನರಿಗೆ ಅಪಥ್ಯವಾಗಿರುವ ಕುರಿತು ಡಾ. ಮುರಳೀಧರ ಕಿರಣಕೆರೆ ಉತ್ತಮವಾಗಿ ವಿಶ್ಲೇಷಿಸಿದ್ದಾರೆ (ಸಂಗತ, ಮಾರ್ಚ್‌ 28). ಇದಕ್ಕೆ ಪೂರಕವಾಗಿ ಒಂದು ಪ್ರಸಂಗ ನೆನಪಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಒಂದು ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ಇಂತಹ ಕಾರ್ಯಕ್ರಮ ಸಾಮಾನ್ಯವಾಗಿ ಪ್ರೇಕ್ಷಕರ ಕೊರತೆಯನ್ನು ಎದುರಿಸುವುದರಿಂದ, ಅದನ್ನು ತಪ್ಪಿಸಲು  ಅದರೊಟ್ಟಿಗೆ ಮಹಿಳಾ ದಿನಾಚರಣೆಯನ್ನೂ ಆಯೋಜಿಸಿದರೆ, ಆ ನೆಪದಲ್ಲಿ ಮಹಿಳಾಮಣಿಗಳಾದರೂ ಬಂದು ಪ್ರೇಕ್ಷಕರ ಕೊರತೆ ನೀಗೀತೆಂಬ ದೂರದೃಷ್ಟಿಯಿಂದ ಘಟಕದ ಅಧ್ಯಕ್ಷರು ಮುಂದಾದರು. ಆದರೆ ಮಹಿಳೆಯರು ಉಪನ್ಯಾಸ ಕೇಳಲು ತಮಗೆ ಇಷ್ಟವಿಲ್ಲವೆಂದೂ ಉಪನ್ಯಾಸ ಮುಗಿದ ಮೇಲೆಯೇ ತಾವು ಕಾರ್ಯಕ್ರಮಕ್ಕೆ ಬರುವುದಾಗಿಯೂ ಪಟ್ಟು ಹಿಡಿದರು. ದತ್ತಿ ಉಪನ್ಯಾಸ ಎಂದಿನಂತೆ ಕಸಾಪ ಪದಾಧಿಕಾರಿಗಳ ಹಾಗೂ ಬೆರಳೆಣಿಕೆಯಷ್ಟು ಮಂದಿಯ  ಸಮ್ಮುಖದಲ್ಲಿ ನೀರಸವಾಗಿ ನಡೆಯಿತು. ಅದು ಮುಗಿಯುವುದಕ್ಕೇ ಕಾಯುತ್ತಿದ್ದಂತೆ ಮಹಿಳೆಯರು ಆಮೇಲೆ ಬಂದರು. ಪ್ರೇಕ್ಷಕರಿಗಾಗಿ ಹಾಕಿದ್ದ ಆಸನಗಳು ಭರ್ತಿಯಾದವು. ತಮಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆ, ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ ‘ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. ಹೀಗಿದೆ, ಹೆಚ್ಚಿನವರಿಗೆ ಬೇಡವಾದ ಈ ಉಪನ್ಯಾಸಗಳ ಕತೆ!

 -ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT