ಬುಧವಾರ, ನವೆಂಬರ್ 13, 2019
25 °C

ಪ್ರತ್ಯೇಕ ನಾಡಧ್ವಜ ಅನುಚಿತ

Published:
Updated:

ರಾಷ್ಟ್ರಕವಿ ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ‌, ಜಯ ಹೇ ಕರ್ನಾಟಕ ಮಾತೆ’ ಕವನವನ್ನು ಕರ್ನಾಟಕ ಸರ್ಕಾರವು 2004ರಲ್ಲಿ ಅಧಿಕೃತ ‘ನಾಡಗೀತೆ’ ಎಂದು ಘೋಷಿಸಿದ್ದು ಬಹು ಉಚಿತವಾದ ಕಾರ್ಯ. ಆಂಧ್ರಪ್ರದೇಶ, ತಮಿಳುನಾಡು ಇತ್ಯಾದಿ ರಾಜ್ಯಗಳಿಗೂ ಪ್ರತ್ಯೇಕ ‘ನಾಡಗೀತೆ’ಗಳಿವೆ. ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯ ಹೇ, ಭಾರತ ಭಾಗ್ಯವಿಧಾತ’ ಎಂಬ ಕವನವು ‘ರಾಷ್ಟ್ರಗೀತೆ’ಯಾಗಿ ಮನ್ನಣೆ ಪಡೆದಿದೆ, ‘ವಂದೇ ಮಾತರಂ’ಗೂ ಅದಕ್ಕೆ ಸಮಾನವಾದ ಸ್ಥಾನವಿದೆ.

ಕರ್ನಾಟಕದ ಕೆಲವು ಮುಖಂಡರು ಕರ್ನಾಟಕಕ್ಕೆ ಪ್ರತ್ಯೇಕ ‘ನಾಡಧ್ವಜ’ ಇರಬೇಕೆಂದು ಈಚೆಗೆ ಪ್ರತಿಪಾದಿಸಿರುವುದು
ಸರಿ ಅಲ್ಲ. ಭಾರತದ ಯಾವ ರಾಜ್ಯಕ್ಕೂ ಪ್ರತ್ಯೇಕ ‘ನಾಡಧ್ವಜ’ ಇಲ್ಲ. ‘ನಾಡಗೀತೆ’ಗೆ ಅಪಮಾನ ಮಾಡುವುದು ಅಷ್ಟು ಸುಲಭ ಅಲ್ಲ. ಆದರೆ ಕಿಡಿಗೇಡಿಗಳು ‘ನಾಡಧ್ವಜ’ವನ್ನು ಹರಿದೋ, ಸುಟ್ಟೋ, ತಲೆಕೆಳಗಾಗಿ ಹಾರಿಸಿಯೋ ಅದಕ್ಕೆ ಅಪಮಾನಪಡಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ನಾಡಧ್ವಜ ಇತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇತ್ತೀಚೆಗೆ ಆ ಅವಕಾಶವನ್ನು ಇಲ್ಲವಾಗಿಸಿ, ಕಾಶ್ಮೀರಕ್ಕೆ ಭಾರತ ಒಕ್ಕೂಟದ ಇತರ ರಾಜ್ಯಗಳಿಗೆ ಇರುವ ಸ್ಥಾನಮಾನವನ್ನು ನೀಡಿದ್ದು ಎಲ್ಲರ ಪ್ರಶಂಸೆ ಪಡೆದಿದೆ. ಕೆಲವು ವರ್ಷಗಳ ಹಿಂದೆ, ಕರ್ನಾಟಕದಿಂದ ಪ‍್ರತ್ಯೇಕಗೊಳ್ಳಬೇಕು ಎಂದು ಒತ್ತಾಯಿಸಿ ಬೇರೆ ಬೇರೆ ಭಾಗಗಳವರು ಪ್ರತ್ಯೇಕ ಧ್ವಜಗಳನ್ನು ಹಾರಿಸಿದುದನ್ನು ಜನ ಮರೆತಿಲ್ಲ. ಈಗ ಇರುವ ಹಳದಿ– ಕೆಂಪು ಧ್ವಜವು ಕರ್ನಾಟಕದ ‘ಅಧಿಕೃತ ನಾಡಧ್ವಜ’ ಅಲ್ಲದಿದ್ದರೂ ಅದನ್ನು ಜನ ಗೌರವದಿಂದ ಕಾಣುತ್ತಾರೆ– ಅಷ್ಟು ಸಾಕು– ಪ್ರತ್ಯೇಕ, ಅಧಿಕೃತ ನಾಡಧ್ವಜ ಅನಗತ್ಯ ಮಾತ್ರವಲ್ಲ, ತೀರಾ ಅನುಚಿತ. ಬೇರೆ ಬೇರೆ ರಾಜ್ಯಗಳು ತಮ್ಮದೇ ‘ನಾಡಧ್ವಜ’ ರೂಪಿಸಿಕೊಂಡರೆ ಭಾರತದ ಒಕ್ಕೂಟ ವ್ಯವಸ್ಥೆಗೆ ತೀವ್ರ ಅಪಾಯ ಖಚಿತ.

ಡಾ. ಎಂ.ಚಿದಾನಂದಮೂರ್ತಿ, ಬೆಂಗಳೂರು

ಪ್ರತಿಕ್ರಿಯಿಸಿ (+)