ಗುರುವಾರ , ಫೆಬ್ರವರಿ 25, 2021
19 °C

ಉದ್ಧಟತನದ ಹೇಳಿಕೆ ಖಂಡನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವುದಾಗಿ ಹೇಳಿರುವ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಹೇಳಿಕೆ (ಪ್ರ.ವಾ., ಜ. 18) ಓದಿ ಬೇಸರವಾಯಿತು. ಬೆಳಗಾವಿ ಮತ್ತು ಇತರ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗಗಳಾಗಿವೆ. ಅಲ್ಲದೆ ಕರ್ನಾಟಕವನ್ನು ಪ್ರತಿನಿಧಿಸುವ ಸುವರ್ಣಸೌಧವೂ ಬೆಳಗಾವಿಯಲ್ಲಿದೆ.

ಇತ್ತಿಚೆಗೆ ಹಲವು ವಿರೋಧಗಳ ಮಧ್ಯೆ ಕರ್ನಾಟಕದಲ್ಲಿನ ಮರಾಠಿಗರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ‘ಮರಾಠ ಅಭಿವೃದ್ಧಿ ನಿಗಮ’ವನ್ನು ಆರಂಭಿಸಿ, ರಾಜ್ಯದ ಅಖಂಡತೆಯನ್ನು ಮೆರೆದಿದ್ದಾರೆ. ಇದೆಲ್ಲವನ್ನೂ ಮರೆತಂತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ, ರಾಜಕೀಯಪ್ರೇರಿತವಾದ ಉದ್ಧಟತನದ ಹೇಳಿಕೆಗಳನ್ನು ಕೊಡುವುದು ಸೂಕ್ತವಲ್ಲ. ಗೌರವಾನ್ವಿತ ಸ್ಥಾನದಲ್ಲಿರುವ ಅವರು ತಣ್ಣಗಾಗಿದ್ದ ಗಡಿ ವಿಷಯವನ್ನು ಮತ್ತೆ ಕೆಣಕಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇಂತಹ ಹೇಳಿಕೆಗಳು ಖಂಡನೀಯ.

ಶ್ರೀಧರ ಎಸ್. ವಾಣಿ, ಕಲ್ಲತಾವರಗೇರಿ, ಕೊಪ್ಪಳ

***

ಹೇಳಿಕೆಗಳಿಗೆ ಕಡಿವಾಣ ಬೀಳಲಿ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಗಡಿ ವಿವಾದಕ್ಕೆ ಜೀವ ತುಂಬುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಮಹಾರಾಷ್ಟ್ರದ ರಾಜಕೀಯ ನಾಯಕರ ಸಂಕುಚಿತ ಮನೋಭಾವದ ಅನಾವರಣವೂ ಹೌದು. ಜನರ ನೆಮ್ಮದಿ ಕದಡಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಬಿಟ್ಟು, ಮರಾಠಿಗರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವುದು ಹಾಗೂ ಜನರ ಗಮನವನ್ನು ಜ್ವಲಂತ ಸಮಸ್ಯೆಗಳಿಂದ ಬೇರೆಡೆ ಸೆಳೆಯುವುದು ಅವರ ಉದ್ದೇಶ.

ಸಾಮರಸ್ಯ, ಸೌಹಾರ್ದ ಸಂಬಂಧಗಳಿಗೆ ಮಾರಕವಾಗುವ ರಾಜಕಾರಣಿಗಳ ಇಂತಹ ಹೇಳಿಕೆಗಳಿಗೆ ಕಡಿವಾಣ ಬೀಳಬೇಕು. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಯಾರೂ ಇಂತಹ ಹೇಳಿಕೆಗಳನ್ನು ನೀಡಬಾರದೆಂದು ಕೋರ್ಟ್‌ನಿಂದ ನಮ್ಮ ರಾಜ್ಯ ಸರ್ಕಾರ ಆದೇಶ ಪಡೆಯಬೇಕು. ಸುಪ್ರೀಂ ಕೋರ್ಟ್‌ ಇಂಥ ಪ್ರಕರಣಗಳನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಬೇಗನೆ ಇತ್ಯರ್ಥಪಡಿಸಿ ಜನರ ಶಾಂತಿಯುತ ಬದುಕಿಗೆ ದಾರಿ ಮಾಡಿಕೊಡಬೇಕು.

ಉದಯ ಮ. ಯಂಡಿಗೇರಿ, ಧಾರವಾಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು