ಶುಕ್ರವಾರ, ಅಕ್ಟೋಬರ್ 18, 2019
20 °C

ಶೌಚಾಲಯ ಇದ್ದ ಮಾತ್ರಕ್ಕೆ...

Published:
Updated:

‘ಭಾರತ ಈಗ ಬಯಲುಶೌಚ ಮುಕ್ತ ರಾಷ್ಟ್ರವಾಗಿರುವುದು ಹೆಮ್ಮೆಯ ವಿಚಾರ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು (ಪ್ರ.ವಾ., ಅ.3) ಸತ್ಯಕ್ಕೆ ದೂರವಾದದ್ದು. ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು, ಇಲ್ಲದಿದ್ದರೆ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಬೆದರಿಕೆಯೊಡ್ಡಿ, ಜನರನ್ನು ಒತ್ತಾಯಪೂರ್ವಕವಾಗಿ ಸಾಲ-ಸೋಲ ಮಾಡಿ ಶೌಚಾಲಯಗಳನ್ನು ನಿರ್ಮಿಸುವಂತೆ ಮಾಡುವಲ್ಲಿ ನಮ್ಮ ಗ್ರಾಮ ಪಂಚಾಯಿತಿಗಳು ಯಶಸ್ವಿಯಾದವು. ಆದರೆ ಸರ್ಕಾರ ನೀಡುವ ₹ 12 ಸಾವಿರ ಪ್ರೋತ್ಸಾಹ ಧನವನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಉದಾಸೀನ ಮಾಡುತ್ತ ಕಮಿಷನ್ ರೂಪದಲ್ಲಿ ಕೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಲಂಚ ಕೊಡದ ಸ್ವಾಭಿಮಾನಿಗಳು ಪಂಚಾಯಿತಿಗೆ ಅಲೆದೂ ಅಲೆದೂ ಸುಸ್ತಾಗಿದ್ದಾರೆ.

ಶೌಚಾಲಯಗಳನ್ನು ನಿರ್ಮಿಸಿ ಅಂಕಿ ಅಂಶಗಳನ್ನು ನಮೂದಿಸಿಕೊಂಡ ಮಾತ್ರಕ್ಕೆ ಭಾರತ ಬಯಲು ಶೌಚ ಮುಕ್ತವಾಗುವುದಿಲ್ಲ. ಬದಲಿಗೆ, ಅದನ್ನು ನಮ್ಮ ಜನರು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಸೂಕ್ತ ಪರಿಶೀಲನೆ ಅಗತ್ಯ. ನಮ್ಮ ಸರ್ಕಾರಗಳು ಇನ್ನು ಮುಂದಾದರೂ ಜನರು ಶೌಚಾಲಯಗಳನ್ನು ಬಳಸುವಂತೆ ಮನಃಪರಿವರ್ತಿಸುವ ಯೋಜನೆಗಳನ್ನು ರೂಪಿಸಬೇಕು. ಕಟ್ಟುನಿಟ್ಟಿನ ಕಾನೂನಿನ ಮುಖಾಂತರ ಭ್ರಷ್ಟ ಅಧಿಕಾರಿಗಳಿಗೆ ಮೂಗುದಾರ ಹಾಕಬೇಕು.

– ನಾಗರಾಜು ಎಲ್, ಹೊಸದುರ್ಗ

Post Comments (+)