ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Published 19 ಏಪ್ರಿಲ್ 2024, 19:34 IST
Last Updated 19 ಏಪ್ರಿಲ್ 2024, 19:34 IST
ಅಕ್ಷರ ಗಾತ್ರ

ಬಚ್ಚಿಟ್ಟ ಮಾಹಿತಿ: ಪ್ರಕರಣ ದಾಖಲಿಸಬಾರದೇಕೆ?

ಪ್ರಸಕ್ತ ಲೋಕಸಭಾ ಚುನಾವಣೆಯ ಕಣ ಹಲವು ರೀತಿಯ ಅಪರಾಧಿಕ ಒಳಸುಳಿಗಳಿಂದ ಕೂಡಿದ ಆರೋಪ, ಪ್ರತ್ಯಾರೋಪಗಳ ಅನಾವರಣಕ್ಕೆ ವೇದಿಕೆಯಾಗಿದೆ. ಪ್ರಚಾರದ ಸಮಯದಲ್ಲಿ ನಾಯಕರು ಪರಸ್ಪರ ಮಾಡುತ್ತಿರುವ ವಿಧ ವಿಧದ ಆರೋಪಗಳು ಜನಸಾಮಾನ್ಯರನ್ನು ದಿಗ್ಭ್ರಮೆಗೊಳಿಸುತ್ತಿವೆ. ಒಂದೆಡೆ, ‘ಆಸ್ತಿಗಾಗಿ ಬಾಲಕಿಯ ಕಿಡ್ನ್ಯಾಪ್‌ ಮಾಡಿ ಅಕ್ರಮ ಬಂಧನದಲ್ಲಿ ಇಡಲಾಗಿತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ, ‘ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ಸರಿಯಾಗಿ ಹಂಚಿಕೆಯಾಗದಿದ್ದರಿಂದ ನಾನು ಸೋಲಬೇಕಾಯಿತು’ ಎಂದು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ದುಃಖ ತೋಡಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ನಮಗೆ ಹೊಳೆಯುವ ಅಂಶವೆಂದರೆ, ಎಂಥೆಂಥ ಅಪರಾಧಗಳು ಜರುಗಿರುವ ಬಗ್ಗೆ ಮಹಾಮಹಿಮರಲ್ಲಿ ಮಾಹಿತಿಯಿದ್ದರೂ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಬೆಳಕಿಗೆ ತರುವ ಒಂದು ಹೊಸ ಧೋರಣೆಯೇ ದಟ್ಟವಾಗಿ ಬೆಳೆಯುತ್ತಿದೆ.

ಪಕ್ಷಗಳು ಆರೋಪ, ಪ್ರತ್ಯಾರೋಪ ಮಾಡುವಾಗ ಅಪ್ರಜ್ಞಾಪೂರ್ವಕವಾಗಿ ಅಪರಾಧಗಳನ್ನು ಬಯಲಿಗೆ
ಎಳೆಯುತ್ತಿರುವುದು ಒಬ್ಬ ಜವಾಬ್ದಾರಿಯುತ ನಾಗರಿಕನ ನಡೆಗೆ ವಿರುದ್ಧವಾಗಿದೆ. ಬಹಿರಂಗವಾಗಿ, ಘಂಟಾಘೋಷವಾಗಿ ಜರುಗಿರುವ ಒಂದು ಅಪರಾಧದ ಬಗ್ಗೆ ತಮಗೆ ಮಾಹಿತಿಯಿದ್ದರೂ ಅದನ್ನು ಪೊಲೀಸರಿಗೆ ತಿಳಿಸದೆ ಗೋಪ್ಯವಾಗಿರಿಸಿ, ಚುನಾವಣಾ ಪ್ರಚಾರಕ್ಕೆ ಆಯುಧವೆಂಬಂತೆ ಬಳಸಿಕೊಳ್ಳುತ್ತಿರುವ ನಾಯಕರ ಇಂತಹ ಪ್ರವೃತ್ತಿಯ ವಿರುದ್ಧ ಪೊಲೀಸರಾಗಲೀ ದಂಡಾಧಿಕಾರಿಗಳಾಗಲೀ ಸ್ವಯಂಪ್ರೇರಿತರಾಗಿ ಅಪರಾಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಏಕೆ ಮುಂದಾಗಬಾರದು ಎಂಬ ಪ್ರಶ್ನೆ ಕಾಡುತ್ತದೆ.

⇒ಸಿ.ಎಚ್.ಹನುಮಂತರಾಯ, ಬೆಂಗಳೂರು

ಚೆಂಬಿಗೆ ವಿಶೇಷ ಪ್ರಾಪ್ತವಾಗುವುದೆಂದರೆ...

ಚೆಂಬಿಗೆ ಬಹು ಅವತಾರಗಳೂ ಅವುಗಳಿಂದ ನಾನಾ ರೀತಿಯ ಉಪಯೋಗಗಳೂ ಇವೆ ಎಂಬುದು ಇತ್ತೀಚಿನ ಮಕ್ಕಳಿಗೆ ಗೊತ್ತಿಲ್ಲ. ಅದನ್ನು ಗೊತ್ತುಮಾಡುವುದು ನಮ್ಮಂಥ ಹಿರಿಯರ ಜವಾಬ್ದಾರಿ. ಈಗ ಚೆಂಬಿನ ವಿಷಯ ಯಾಕೆ ಎಂದು ಮೂಗುಮುರಿಯುವವರ ಕಣ್ಣಮುಂದೆ ಪತ್ರಿಕೆಯ ಮುಖಪುಟದ ಜಾಹೀರಾತನ್ನು (ಪ್ರ.ವಾ., ಏ. 19) ಹಿಡಿದರೆ ಸಾಕು. ಚೆಂಬಿನ ಪೂರ್ವ ಅವತಾರ ಮಣ್ಣಿನ ‘ಮಗೆ’, ಆನಂತರ ಅದಕ್ಕೆ ಬಡ್ತಿ ದೊರೆತು ಕಂಚಿನ ಚೆಂಬು, ಹಿತ್ತಾಳೆ ಚೆಂಬು, ಅಲ್ಯೂಮಿನಿಯಂ ಚೆಂಬು, ಪ್ಲಾಸ್ಟಿಕ್ ಚೆಂಬು, ಸ್ಟೀಲ್ ಚೆಂಬು, ಬೆಳ್ಳಿ ಚೆಂಬು ಎಂಬ ನಾನಾ
ಅವಸ್ಥೆಗಳನ್ನು ಪಡೆಯಿತು. ಚಿನ್ನದ ಚೆಂಬು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಚೆಂಬುಗಳನ್ನು
ಉಪಯೋಗಿಸುವುದರ ಮೇಲೆ ಜನರ ಆರ್ಥಿಕ ಸ್ಥಿತಿಗತಿಯನ್ನು ಅಳೆಯಬಹುದು.

ಯಾರಿಗಾದರೂ ಬರೀ ಚೆಂಬು ಕೊಟ್ಟರೆ ಅದರಲ್ಲಿ ಯಾವುದೇ ವಿಶೇಷ ಇಲ್ಲ. ಚೆಂಬಿಗೆ ಅಥವಾ ಚೊಂಬಿಗೆ ವಿಶೇಷ ಪ್ರಾಪ್ತವಾಗುವುದು ಅದಕ್ಕೆ ಮೂರು ನಾಮ, ಅಂದರೆ ಎರಡು ಬಿಳಿ ನಾಮದ ಮಧ್ಯ ಒಂದು ಕೆಂಪು ನಾಮವನ್ನು ಹಾಕಿದಾಗ ಮಾತ್ರ. ಧಾರ್ಮಿಕ ಭಿಕ್ಷುಕರು ಬವನಾಸಿಗೆ (ದಾಸಯ್ಯಗಳು ಬಳಸುವ ಶಂಖ, ಜಾಗಟೆ, ಬವನಾಸಿ) ಮೂರು ನಾಮ ಹಾಕಿಕೊಂಡು ಮನೆ ಮನೆಗೆ ಉಪಾದಾನಕ್ಕೆ (ಭಿಕ್ಷೆ) ಹೋಗುತ್ತಾರೆ. ಬವನಾಸಿಯನ್ನೂ ಹೊಂಚಿಕೊಳ್ಳುವುದಕ್ಕೆ
ಕಷ್ಟವಾದರೆ ಮನೆಯಲ್ಲೇ ದಿನಬಳಕೆಗೆ ಇಟ್ಟುಕೊಂಡಿದ್ದ ಚೆಂಬಿಗೆ ಮೂರು ನಾಮ ಹಾಕಿಕೊಂಡು ಅದನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಭಿಕ್ಷೆಗೆ ಹೋಗುತ್ತಾರೆ. ಇದನ್ನೇ ‘ಕೈಗೆ ಚೊಂಬು ಕೊಡುವುದು’ ಎನ್ನುವುದು. ಅಂದರೆ, ಭಿಕ್ಷೆಗೆ ಕಳಿಸುವುದು ಎನ್ನುವ ಅರ್ಥದಲ್ಲಿ ಕೈಗೆ ಚೊಂಬು ಕೊಡುವುದು ಎಂಬ ನುಡಿಗಟ್ಟು ಬಳಕೆಯಾಗಿದೆ.

⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಮೂಲಸ್ರೋತ ಒಂದೇ, ವರಸೆ ಮಾತ್ರ ಬೇರೆ!

‘ಏಕಪಕ್ಷದ ಸಾರ್ವಭೌಮತ್ವ ಅಪಾಯಕಾರಿ’ ಎಂದು ರವಿಚಂದ್ರ ಎಂ. ಹೇಳಿದ್ದಾರೆ (ವಾ.ವಾ., ಏ. 19). ಏಕಪಕ್ಷದ ಸಾರ್ವಭೌಮತ್ವ ಮತ್ತು  ಪ್ರಜಾತಂತ್ರ ವ್ಯವಸ್ಥೆ ಎರಡೂ ಪರಸ್ಪರ ವಿರೋಧಾಭಾಸದ ಪರಿಕಲ್ಪನೆಗಳು. ಆದರೇನು, ಪ್ರಜಾತಂತ್ರ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡಿದ್ದರೂ ಭಾರತ ಈ 75 ವರ್ಷಗಳಲ್ಲಿ ಬಹಳ ಕಾಲದವರೆಗೂ ಏಕಪಕ್ಷದ ಸಾರ್ವಭೌಮತ್ವದಲ್ಲೇ ಸಾಗಿಬಂದಿದೆ. ಸ್ವಾತಂತ್ರ್ಯಾನಂತರದ ಹಲವು ದಶಕಗಳವರೆಗೆ ಈ ದೇಶವನ್ನು ಕಾಂಗ್ರೆಸ್ ಆಳಿತಲ್ಲವೇ? ಆಗ ನಮ್ಮಲ್ಲಿ ಇದ್ದುದು ಏಕಪಕ್ಷದ ಸಾರ್ವಭೌಮತ್ವವಷ್ಟೇ ಅಲ್ಲದೆ ಆ ಪಕ್ಷವೇ ಏಕವ್ಯಕ್ತಿಯ ನಿಯಂತ್ರಣದಲ್ಲಿ ಇತ್ತೆನ್ನುವುದೂ ಸತ್ಯವೇ ತಾನೆ? 

ನೆಹರೂ ಮತ್ತು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಕಾಂಗ್ರೆಸ್ಸಿನಲ್ಲಿ ಇವರನ್ನು ಎದುರಿಸುವ ಎಂಟೆದೆ ಯಾರಿಗೆ ಇತ್ತು? ಅದರಲ್ಲೂ ‘ಇಂದಿರಾ ಇಂಡಿಯಾ, ಇಂಡಿಯಾ ಇಂದಿರಾ’ ಘೋಷಣೆಯನ್ನು ಕಾಂಗ್ರೆಸ್ಸಿಗರು ಪ್ರಶ್ನಿಸದೇ ಸ್ವೀಕರಿಸಿದ ದಿನಗಳೂ ಇದ್ದವಲ್ಲವೇ? ಈಗ ಬಿಜೆಪಿ ಕೂಡ ಹಿಂದಿನ ಕಾಂಗ್ರೆಸ್ ತರಹವೇ ಏಕವ್ಯಕ್ತಿ ಕೇಂದ್ರಿತ. ಇವು ಬೇರೆ ಬೇರೆ ಪಕ್ಷಗಳಾದರೂ ಅವುಗಳ ತತ್ವ ಮತ್ತು ಸಿದ್ಧಾಂತಗಳ ಮೂಲಸ್ರೋತ ವ್ಯಕ್ತಿಪೂಜೆ (ಕಲ್ಟ್ ಆಫ್ ಪರ್ಸನಾಲಿಟಿ). ವರಸೆ ಬೇರೆ ಇರಬಹುದು! ಎಲ್ಲ ಪಕ್ಷಗಳೂ ಏಕವ್ಯಕ್ತಿ ಅಥವಾ ಆ ವ್ಯಕ್ತಿಕುಟುಂಬ ಅವಲಂಬಿತವೆ. ಒಬ್ಬ ವ್ಯಕ್ತಿಯ ಹಿಡಿತಕ್ಕೆ ಇಲ್ಲಿ ಪ್ರಾಧಾನ್ಯ. ಇದು ‘ಅಪಾಯಕಾರಿ’ ಎಂದಾದರೂ ಇದೇ ನಮ್ಮ ಪ್ರಜಾಪ್ರಭುತ್ವ ಎಂದೇ ನಾವು ಪ್ರಜೆಗಳು ಒಪ್ಪಿಕೊಂಡಿರುವುದು.⇒ಸಾಮಗ ದತ್ತಾತ್ರಿ, ಬೆಂಗಳೂರು

ಅಂದೇ ಪೂರೈಕೆ, ಅಂದೇ ಪಾವತಿ ವ್ಯವಸ್ಥೆಯಾಗಲಿ

ಕಬ್ಬು ದೇಶದ ಪ್ರಮುಖ ಆರ್ಥಿಕ ಬೆಳೆ. ದೇಶದಲ್ಲಿ ಸುಮಾರು 700 ಹಾಗೂ ರಾಜ್ಯದಲ್ಲಿ 79 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಾದ್ಯಂತ ಸುಮಾರು ಏಳು ಕೋಟಿ ರೈತರು ಕಬ್ಬು ಬೆಳೆಯುತ್ತಾರೆ. ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಉದ್ದರಿ ಪೂರೈಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಮತ್ತು ರೈತರನ್ನು ಶೋಷಣೆ ಮಾಡುವ ವಿಧಾನವಾಗಿದೆ. ಬಹಳಷ್ಟು ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವುದಿಲ್ಲ. ಕೆಲವು ಕಾರ್ಖಾನೆಗಳು ಅರ್ಧ ಬೆಲೆ ಕೊಟ್ಟು ಉಳಿದದ್ದನ್ನು ನುಂಗಿಹಾಕುತ್ತವೆ. ರೈತರು ಧರಣಿ ನಡೆಸಿದರೂ ಹಣ ಬರುವುದಿಲ್ಲ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ದಿನವೇ ಹಣ ಪಾವತಿಸುವುದನ್ನು ಸರ್ಕಾರವು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು. ಇದರಿಂದ ರೈತರಿಗೆ ಬಹುದೊಡ್ಡ ರಕ್ಷಣೆ ದೊರೆಯುತ್ತದೆ ಮತ್ತು ಅವರ ಹಿತರಕ್ಷಣೆಯಲ್ಲಿ ದೊಡ್ಡ
ಮೈಲಿಗಲ್ಲಾಗುತ್ತದೆ.⇒ಕೃಷ್ಣಪ್ಪ ಬಿಲಕೇರಿ, ಅಂಕಲಗಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT