ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಮಂಡಳಿ ವಿರೋಧ ದುರದೃಷ್ಟಕರ

Last Updated 12 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರು ನಿರ್ಮಾಣ ಮಾಡಿದ ಮತ್ತು ನಿರ್ದೇಶಿಸಿದ ಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸುವ ಸರ್ಕಾರದ ತೀರ್ಮಾನದ ಜತೆ ಕೈಜೋಡಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಿರಾಕರಿಸಿರುವುದು (ಪ್ರ.ವಾ., ಡಿ. 10) ದುರದೃಷ್ಟಕರ.

ನಿಜ, ‘ನಮ್ಮಲ್ಲಿ ಜಾತಿಭೇದ ಇಲ್ಲ, ನಾವೆಲ್ಲ ಒಂದೇ’ ಎನ್ನುವ ಮಂಡಳಿಯ ಭಾವ ಮೆಚ್ಚತಕ್ಕದ್ದು. ಆದರೆ ವಾಸ್ತವ? ಭಾರತದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಇರುವುದು ಸುಳ್ಳೇ? ಮತ್ತು ಆ ಅಸ್ಪೃಶ್ಯತೆ ಮತ್ತು ಜಾತಿವ್ಯವಸ್ಥೆ ಕಾರಣಕ್ಕೆ ಸಮಾಜದ ಕೆಲ ವರ್ಗಗಳನ್ನು ಸಿನಿಮಾ ಸೇರಿದಂತೆ ಬಹುತೇಕ ವಾಣಿಜ್ಯ ವ್ಯವಹಾರಗಳಿಂದ ದೂರ ಇಟ್ಟಿರುವುದು ಸುಳ್ಳೇ? ಖಂಡಿತ ಇಲ್ಲ. ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಪ್ರಮುಖ ಭಾವವಾಗಿದೆ. ಅದನ್ನು ಯಾರೂ ‘ಇಲ್ಲ, ಇದೆ’ ಎಂದು ಹೇಳಿಕೊಂಡು, ಎಲ್ಲರ ಕಣ್ಣಿಗೆ ಕಾಣುವಂತೆ ಎಂದೂ ಆಚರಿಸುವುದಿಲ್ಲ. ತಮ್ಮ ಮನೋಭಾವ ಮತ್ತು ವರ್ತನೆಗಳ ಮೂಲಕ ಅದನ್ನು ಆಚರಿಸುತ್ತಾರೆ. ಪ್ರಶ್ನಿಸಿದರೆ ತನ್ನ ಮನೋಭಾವದ ಅರ್ಥ ಹಾಗಿರಲಿಲ್ಲ, ವರ್ತನೆಯ ಅರ್ಥ ಹಾಗಿರಲಿಲ್ಲ ಎಂದೇ ಹೇಳುತ್ತಾರೆ. ವಾಣಿಜ್ಯ ಮಂಡಳಿ ಕೂಡ ಇದಕ್ಕೆ ಹೊರತಾದುದಲ್ಲ.

ಇನ್ನು ‘ಕನ್ನಡ ಚಿತ್ರರಂಗಕ್ಕೆ ಜಾತಿಯ ಲೇಪ ಬೇಕಿಲ್ಲ’ ಎಂಬ ಮಂಡಳಿಯ ಸದಸ್ಯರೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸುವುದಾದರೆ, ಜಾತಿಯನ್ನು ಮೀರಿ ಕನ್ನಡ ಚಿತ್ರರಂಗ ಎಷ್ಟು ಜನ ಪರಿಶಿಷ್ಟ ಜಾತಿ– ಪಂಗಡಗಳ ನಟರನ್ನು, ನಿರ್ಮಾಪಕರನ್ನು, ನಿರ್ದೇಶಕರನ್ನು, ಸಿನಿ ತಂತ್ರಜ್ಞರನ್ನು ಬೆಳೆಸಿದೆ? ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರನ್ನು ತನ್ನ ಕಾರ್ಯವ್ಯಾಪ್ತಿಯಲ್ಲಿ ಎಷ್ಟರ ಮಟ್ಟಿಗೆ ಅದು ಒಳಗೊಂಡಿದೆ ಎಂದು ಕೇಳಬೇಕಾಗುತ್ತದೆ.

ಖಂಡಿತ, ಇದಕ್ಕೆ ಉತ್ತರ ಇತರೇ ಕ್ಷೇತ್ರಗಳಲ್ಲಿ ನಡೆದಿರುವಂತೆ ಶೂನ್ಯಕ್ಕೆ ಹತ್ತಿರ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ನಿಟ್ಟಿನಲ್ಲಿ ಬೇರೆ ಕ್ಷೇತ್ರಗಳಲ್ಲಿರುವಂತೆ ಚಿತ್ರರಂಗದಲ್ಲಿಯೂ ಎಸ್ಸಿ, ಎಸ್ಟಿಗಳು ಬರೀ ಗ್ರಾಹಕರಾಗಿ ಅರ್ಥಾತ್ ಪ್ರೇಕ್ಷಕರಾಗಿಯೇ ಇರಬೇಕೆ? ಆದ್ದರಿಂದ ಸಂವಿಧಾನದ ಆಶಯಗಳ ಅನುಸಾರ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರ್ಮಾಪಕರಿಂದ ನಿರ್ಮಿತ ಚಲನಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸಲು ಅರ್ಜಿ ಆಹ್ವಾನಿಸಿರುವುದು ನ್ಯಾಯಬದ್ಧವಾಗಿದೆ. ಈ ನಿಟ್ಟಿನಲ್ಲಿ ಈ ನ್ಯಾಯಬದ್ಧ ತೀರ್ಮಾನವನ್ನು ತುಂಬು ಹೃದಯದಿಂದ, ವಿಶಾಲ ಮನಸ್ಸಿನಿಂದ ವಾಣಿಜ್ಯ ಮಂಡಳಿ ಸ್ವಾಗತಿಸಲಿ. ಭಾರತೀಯ ಸಾಮಾಜಿಕ ವ್ಯವಸ್ಥೆಯ ಏರುಪೇರಿನ ವಾಸ್ತವವನ್ನು, ಅದಕ್ಕೆ ಸ್ಪಂದಿಸುವ ತನ್ನ ಹೊಣೆಗಾರಿಕೆಯನ್ನು ಚಿತ್ರರಂಗ ಅರಿಯಲಿ.

ರಘೋತ್ತಮ ಹೊ.ಬ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT