ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧವೆಯರ `ಪಾದಪೂಜೆ' ಅಗತ್ಯವೇ?

Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಿನಾಂಕ 26.12.12ರ `ಪ್ರಜಾವಾಣಿ'ಯಲ್ಲಿ `ಕುದ್ರೋಳಿ ದೇವಸ್ಥಾನದಲ್ಲಿ ಪರಿಶಿಷ್ಟ ವಿಧವೆಯ ಪಾದಪೂಜೆ' ಎಂಬೊಂದು ವಿಷಯ ಪ್ರಕಟವಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿಯವರು ಕೈಕೊಂಡ ಕ್ರಾಂತಿಕಾರಕವೆನ್ನಬಹುದಾದ ಕೆಲವು ಕಾರ್ಯಕ್ರಮಗಳು ಸರ್ವವಿದಿತ.

ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಕೆಲವೊಂದು ಪದ್ಧತಿ ಪರಂಪರೆಗಳಲ್ಲಿ ಕಾಲೋಚಿತವಾಗಿ ಪರಿವರ್ತನೆಗಳಾಗ ಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಂಪ್ರದಾಯವಾದಿಗಳಾದವರ ಅಂಧ ಸಂಪ್ರದಾಯಗಳನ್ನು ವಿರೋಧಿಸುವವರು ಪರ್ಯಾಯವಾಗಿ ಅಂಥದೇ ಆಚರಣೆಗಳಲ್ಲಿ ಭಾಗಿಗಳಾಗಬಾರದಲ್ಲವೇ? ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ `ಮಡೆಸ್ನಾನ' ಎಂಬ ಎಂಜಲೆಲೆಗಳ ಮೇಲಿನ ಹೊರಳಾಟ, ಉಡುಪಿ ಮಠದಲ್ಲಿನ ಮಡೆಸ್ನಾನ ಹಾಗೂ ಪಂಕ್ತಿಭೇದ ಇತ್ಯಾದಿಗಳನ್ನು ವಿರೋಧಿಸುವ ನೆವದಲ್ಲಿ ಬೇರೆ ರೀತಿಯ ಉರುಳುಸೇವೆ ಮಾಡುವುದು ಒಂದು ಅಣಕದಂತೆ ಕಂಡೀತಲ್ಲದೆ ಪರಿಣಾಮಕಾರಿಯಾಗದು. `ಮಡೆಸ್ನಾನ'ದಂಥ ಅನಿಷ್ಟ ಆಚರಣೆ ನಿಶ್ಶೇಷವಾಗಿ ತೊಲಗಬೇಕಾದುದು ಮುಖ್ಯ. ಒಂದು ವಿಕೃತಿಗೆ ಬದಲಾಗಿ ಮತ್ತೊಂದು ವಿಕೃತಿಯನ್ನು ಹುಟ್ಟುಹಾಕುವುದು ಸರಿಯಲ್ಲ.

ವಿಧವೆಯರ ವಿಚಾರದಲ್ಲಿ ಈ ಮೊದಲು ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಗಳು ನಿಜವಾಗಿಯೂ ಅಭೂತಪೂರ್ವ. ಸ್ತ್ರೀಯರಿಗೆ ಸಂಬಂಧಿಸಿದ ಸೂಕ್ಷ್ಮ ಸಮಸ್ಯೆಗಳನ್ನು ಗಮನಿಸುವುದು ಅಪೇಕ್ಷಣೀಯ. ಸ್ತ್ರೀಯರಿಗೆ ಗೌರವ ನೀಡುವುದು ಬೇರೆ, ಪಾದಪೂಜೆಯಂಥ ಆಚರಣೆ ಬೇರೆ. ಗೌರವಭಾಜನರ ಪಾದಾಭಿವಂದನಕ್ಕೂ ಪಾದಪೂಜೆಗೂ ವ್ಯತ್ಯಾಸವಿದೆ. ಯಾರದೇ ಆಗಲಿ, ಪಾದಪೂಜೆ ಮಾಡುವುದಾಗಲೀ ಪಾದಪ್ರಕ್ಷಾಳನ ಮಾಡುವುದಾಗಲೀ ಯುಕ್ತವಲ್ಲ. ಧಾರ್ಮಿಕರಂಗವೂ ಸೇರಿದಂತೆ ಎಲ್ಲ ರಂಗಗಳಲ್ಲೂ ಮಹಿಳೆಯರಿಗೆ ಸಮಾನತೆ ನೀಡುವುದೇ ನಿಜವಾದ ಮಾನವ ಘನತೆ. ಜನಾರ್ದನ ಪೂಜಾರಿಯವರು ಈ ಕುರಿತು ತುಸು ಯೋಚಿಸುತ್ತಾರೆಂದು ಭಾವಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT