ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್‌ ಕಿಂಗಸ್ಲೆ ‘ಗಾಂಧಿ’ಯಾದ ಕಥನ

Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಗಾಂಧಿ ಎಂಬ ಸಹಜ ವ್ಯಕ್ತಿ ಈ ಭೂಮಿಯ ಮೇಲೆ ಓಡಾಡಿದ್ದರು ಎಂದರೆ, ಮುಂಬರುವ ಪೀಳಿಗೆಗಳು ನಂಬಲಿಕ್ಕಿಲ್ಲ.

–ಅಲ್ಬರ್ಟ್ ಐನ್‌ಸ್ಟೀನ್, ವಿಜ್ಞಾನಿ

***

ಮಾನವೀಯತೆ, ಪ್ರಗತಿಯ ಸಂಕೇತ ಗಾಂಧಿ. ಜೀವನವಿಡೀ ಶಾಂತಿ, ಸಹನೆ ಧ್ಯಾನಿಸಿದರು. ಅಕ್ಷರಶಃ ಪರಿಪಾಲಿಸಿದರು.

–ಮಾರ್ಟಿನ್ ಲುಥರ್ ಕಿಂಗ್ ಜೂನಿಯರ್, ಮಾನವ ಹಕ್ಕುಗಳ ಹೋರಾಟಗಾರ

***

–ಹೀಗೆ ವ್ಯಾಖ್ಯಾನಿಸಲ್ಪಡುವ ಮಹಾತ್ಮ ಗಾಂಧಿ ಪಾತ್ರ ನಿಭಾಯಿಸುವುದು ಮತ್ತು ನ್ಯಾಯ ಸಲ್ಲಿಸುವುದು ಹೇಗೆ ಎಂಬ ಪ್ರಶ್ನೆ ನಟ ಬೆನ್‌ ಕಿಂಗಸ್ಲೆಗೆ ಕಾಡದೇ ಇರಲಿಲ್ಲ. ರಿಚರ್ಡ್‌ ಅಟೆನ್‌ಬೊರೊ ನಿರ್ಮಾಣ-ನಿರ್ದೇಶನದ ‘ಗಾಂಧಿ’ ಚಲನಚಿತ್ರದಲ್ಲಿ ತಮಗೆ ಕೊಡಲಾದ ಪಾತ್ರಕ್ಕೆ ಅವರು ಅಕ್ಷರಶಃ ಜೀವ ತುಂಬಿದರು. ಹಲವು ಸವಾಲುಗಳನ್ನು ಎದುರಿಸಿದರು.

1982ರಲ್ಲಿ ತೆರೆ ಕಂಡ ‘ಗಾಂಧಿ’ ಚಲನಚಿತ್ರದಲ್ಲಿ ಬೆನ್‌ ಅಭಿನಯ ಯಾವ ಪರಿ ಪರಿಣಾಮ ಬೀರಿತೆಂದರೆ, ಸ್ವತಃ ಗಾಂಧೀಜಿಯೇ ಇದರಲ್ಲಿ ಅಭಿನಯಿಸಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿತು. ಅತ್ಯುತ್ತಮ ನಟ ಸೇರಿದಂತೆ 11ಕ್ಕೂ ಹೆಚ್ಚು ಆಸ್ಕರ್ ಪ್ರಶಸ್ತಿಯನ್ನು ಈ ಚಿತ್ರವು ಬಾಚಿಕೊಂಡಿತು.

ಚಲನಚಿತ್ರದ ಚಿತ್ರೀಕರಣಕ್ಕೂ ಮುನ್ನ ಬೆನ್‌, ಗಾಂಧೀಜಿ ಕುರಿತು 28ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದರು. ಸ್ಥಿರಚಿತ್ರ, ವಿಡಿಯೊಗಳ ಮೂಲಕ ನಡಿಗೆ, ಹಾವಭಾವ ಅರಿತರು. ದಪ್ಪವಿದ್ದ ಅವರು ದಿನ ಕಳೆದಂತೆ ತೂಕ ಇಳಿಸಿಕೊಂಡರು. ಚಿತ್ರೀಕರಣದ ವೇಳೆ ಅವರ ಮುಂಜಾವು ಯೋಗಾಭ್ಯಾಸ, ಧ್ಯಾನದಿಂದ ಆರಂಭಗೊಂಡು, ಚರಕ ಸುತ್ತುವುದರೊಂದಿಗೆ ಸಂಜೆ ಕೊನೆಗಾಣುತಿತ್ತು. ಚಿತ್ರ ತೆರೆಕಂಡ ಬಳಿಕವೂ ಅವರ ಜೀವನದ ಮೇಲೆ ಇವೆಲ್ಲವೂ ಪ್ರಭಾವ ಬೀರಿದವು.

‘ದೇಶದ ವಿವಿಧೆಡೆ ಸುತ್ತಿದ್ದು ಅಲ್ಲದೇ ಜನರೊಂದಿಗೆ ಸಂವಾದಿಸಿದಾಗ, ಗಾಂಧಿಯ ವಿವಿಧ ಮುಖಗಳು ಪರಿಚಯವಾದವು. ಬ್ರಿಟಿಷ್ ಸಾಮ್ರಾ‌ಜ್ಯಶಾಹಿ ಮೇಲಿದ್ದ ಸಿಟ್ಟನ್ನು ಅವರು ಶಾಂತಿ ಮತ್ತು ಅಹಿಂಸೆ ರೂಪದಲ್ಲಿ ಪರಿವರ್ತಿಸಿಕೊಂಡಿದ್ದು ಬೆರಗು ಮೂಡಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಅವರು ನೀಡಿದ ಕರೆಗೆ ಜನರು ಒಗ್ಗೂಡಿದ್ದು ಅಚ್ಚರಿ ತಂದಿತು’ ಎಂದು ಬೆನ್‌ ಕಿಂಗಸ್ಲೆ ಮನದಾಳದ ಭಾವನೆ ಹಂಚಿಕೊಂಡರು.

‘ಗಾಂಧಿ ಚಿತ್ರದ ಬಳಿಕ ಹಲವು ಚಿತ್ರಗಳಲ್ಲಿ ನಟಿಸಿರುವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿರುವೆ. ಜನ ನನ್ನನ್ನು ಈಗಲೂ ಗಾಂಧಿಯೆಂದೇ ಗುರುತಿಸುತ್ತಾರೆ. ಇದಕ್ಕಿಂತ ಹೆಮ್ಮೆಯ ಸಂಗತಿ ಇನ್ನೇನಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT