ಬುಧವಾರ, ಅಕ್ಟೋಬರ್ 28, 2020
28 °C

PV Web Exclusive| ಕಪಿಲಾ ವಾತ್ಸ್ಯಾಯನ: ವ್ಯಕ್ತಿ ಮತ್ತು ಶಕ್ತಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಕಪಿಲಾ ವಾತ್ಸ್ಯಾಯನ ಎಂದ ಕೂಡಲೇ ನನಗೆ ನೆನಪಾಗುವುದು ಆನಂದ ಕುಮಾರಸ್ವಾಮಿ. ಇದಕ್ಕೆ ಕಾರಣವೂ ಸ್ಪಷ್ಟ. ಆನಂದ ಕುಮಾರಸ್ವಾಮಿ ಅವರ ಸಮಗ್ರ ಕೃತಿಗಳು ಭಾರತದಲ್ಲಿ ಪ್ರಕಟವಾಗಲು ಕಾರಣವಾದವರು ಅವರು. ಇದೊಂದೇ ಕಾರಣಕ್ಕೆ ಅವರು ನನಗೆ ಮುಖ್ಯರಾಗಿ ಕಂಡವರಲ್ಲ; ಕುಮಾರಸ್ವಾಮಿ ಅವರ ಬೌದ್ಧಿಕ ವಾರಸಿಕೆಯನ್ನೂ ಸಮರ್ಥವಾಗಿ ಮುಂದುವರಿಸಿದವರು ಅವರು.

ಪ್ರಾಚೀನ ಭಾರತೀಯ ಕಲಾಮೀಮಾಂಸೆಗೆ ಹೊಸದಾದ ಕಾಂತಿಯನ್ನು ಒದಗಿಸಿದವರು ಕುಮಾರಸ್ವಾಮಿ. ಆದರೆ ಅವರ ಬರಹಗಳು ಎಲ್ಲರಿಗೂ ಸುಲಭವಾಗಿ ದಕ್ಕುವಂತಿರಲಿಲ್ಲ; ಎರಡು ರೀತಿಯಲ್ಲೂ ದಕ್ಕುತ್ತಿರಲಿಲ್ಲ. ಒಂದು: ಗ್ರಂಥಗಳ ರೂಪದಲ್ಲಿಯೇ ಸಿಗುತ್ತಿರಲಿಲ್ಲ; ಇನ್ನೊಂದು: ಚಿಂತನೆಯಾಗಿ ಎಲ್ಲರಿಗೂ ದಕ್ಕುವಷ್ಟು ಅವರ ಬರಹಗಳು ಸುಲಭವಲ್ಲ. ಈ ಎರಡೂ ನೆಲೆಗಳಲ್ಲಿ ಕಪಿಲಾ ಅವರು ಕೆಲಸವನ್ನು ಮಾಡಿದರು. ಅವರೇ ಹುಟ್ಟುಹಾಕಿ, ಬೆಳೆಸಿದ ‘ಐಜಿಎನ್‌ಸಿಎ’ ಸಂಸ್ಥೆಯಿಂದ ಕುಮಾರಸ್ವಾಮಿ ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವ ಕಾರ್ಯವನ್ನು ಕೈಗೆತ್ತಿಕೊಂಡರು; ಇದುವರೆಗೂ ಹಲವು ಸಂಪುಟಗಳು ಪ್ರಕಟವಾಗಿವೆ. ಕುಮಾರಸ್ವಾಮಿ ಅವರ ಚಿಂತನೆಗಳನ್ನೇ ಕೇಂದ್ರವನ್ನಾಗಿಸಿಕೊಂಡು ಅವರು ಸಾಕಷ್ಟು ಬರಹಗಳನ್ನು ಮಾಡಿದರು. ಕುಮಾರಸ್ವಾಮಿ ಮತ್ತು ಎಂ. ಹಿರಿಯಣ್ಣ ಅವರ ಪ್ರಭಾವದ ಬಗ್ಗೆ ಅವರ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಕಪಿಲಾ ಅವರ ಬರಹಗಳು ನಮಗೆ ತುಂಬ ನೆರವಿಗೆ ಬರುತ್ತವೆ.

ಕಪಿಲಾ ಅವರ ಪುಸ್ತಕವೊಂದಕ್ಕೆ ಕಮಲೇಶ್‌ ದತ್ತ ತ್ರಿಪಾಠಿ ಅವರ ಪೀಠಿಕೆಯನ್ನು ಬರೆಯುತ್ತ, ಕಪಿಲಾ ಅವರನ್ನು ‘ವೇದಕಾಲೀನ ಋಷಿಕೆ‘ ಎಂದು ಸಮೀಕರಿಸಿದ್ದಾರೆ. ಅವರ ಸಾಧನೆಯನ್ನು ನೋಡಿದಾಗ ಈ ಮಾತು ಉತ್ಪ್ರೇಕ್ಷೆ ಎಂದೆನಿಸದು. ಭಾರತೀಯ ಕಲೆಗಳ ಮೂಲವನ್ನು ವೇದಮೂಲವಾಗಿಯೇ ಗ್ರಹಿಸಿದವರು ಕುಮಾರಸ್ವಾಮಿ; ಇದೇ ಪರಂಪರೆಯನ್ನು ಮುಂದುವರೆಸಿದವರು ಕಪಿಲಾ. ಹೀಗೆಂದು ಇದೇನು ಭಾವುಕತೆಯ ಪ್ರದರ್ಶವಾಗಿ ಉಳಿಯಲಿಲ್ಲ; ಆಳವಾದ ಸಂಶೋಧನೆ, ಅಪೂರ್ವ ಒಳನೋಟಗಳು ಮತ್ತು ಆಧುನಿಕ ವಿಧಿ–ವಿಧಾನಗಳ ಮೂಲಕ ಅವರ ನಿಲವುಗಳನ್ನು ಪ್ರಕಟಿಸುತ್ತಹೋದರು. 

ದಿನವೂ ಸೂರ್ಯ ಹುಟ್ಟುತ್ತಿದ್ದಾನೆ; ಮುಳುಗುತ್ತಿದ್ದಾನೆ. ಸೂರ್ಯೋದಯದ ಮೊದಲು ಉಷಃಕಾಲವೂ ಮೂಡುತ್ತಿದೆ. ಈ ವಿದ್ಯಮಾನ ಸಾವಿರ ಸಾವಿರ ವರ್ಷಗಳಿಂದಲೂ ದಿನವೂ ನಡೆಯುತ್ತಲೇ ಇದೆ. ವೇದಕಾಲದ ಋಷಿಗಳಿಗೂ ಈ ವಿದ್ಯಮಾನ ಪರಿಚಿತವೇ. ಆದರೆ ಅವರು ಇದನ್ನು ಕೇವಲ ಮಾಹಿತಿಯನ್ನಾಗಿ ದಾಖಲಿಸಿಲ್ಲ. ಋಷಿಯೊಬ್ಬ ಈ ವಿದ್ಯಮಾನದ ಹಿಂದಿರುವ ಕಲಾರಹಸ್ಯವನ್ನು ಅದ್ಭುತವಾಗಿ ಕಂಡರಿಸಿದ್ದಾನೆ:

ಅಧಿ ಪೇಶಾಂಶಿ ವಪತೇ ನೃತೂರಿವಾಪೋರ್ಣತೇ ವಕ್ಷ

ಉಸ್ರೇವ ಬರ್ಜಹಮ್‌ । 

ಜ್ಯೋತಿರ್ವಿಶ್ವಸ್ಮೈ ಭುವನಾಯ ಕೃಣ್ವತೀ ಗಾವೋ ನ

ವ್ರಜಂ ವ್ಯುಷಾ ಆವರ್ತಮಃ ।।

(ನರ್ತನಮಾಡುವ ಸ್ತ್ರೀಯಂತೆ, ಉಷೋದೇವಿಯು ತನ್ನ ಆಕರ್ಷಕ ರೂಪಲಾವಣ್ಯಗಳನ್ನು ಸಂಪೂರ್ಣವಾಗಿ ಧರಿಸುತ್ತಾಳೆ. ಕರೆಯುವ ಕಾಲದಲ್ಲಿ ಹಸುವ ತನ್ನ ಕೆಚ್ಚಲನ್ನು ತೋರುವಂತೆ, ಉಷಸ್ಸು ತನ್ನ ವಕ್ಷಸ್ಥಳವನ್ನು ತೋರಿಸುತ್ತಾಳೆ. ಹಸುಗಳು ತನ್ನ ಕೊಟ್ಟಿಗೆಯನ್ನು ಸೇರುವಂತೆ ಉಷಸ್ಸು ಕೂಡ ಪೂರ್ವದಿಕ್ಕನ್ನು ಸೇರಿ, ಎಲ್ಲ ಲೋಕಕ್ಕೂ ಬೆಳಕನ್ನುಂಟುಮಾಡುತ್ತ ಕತ್ತಲೆಯನ್ನು ಸಂಪೂರ್ಣವಾಗಿ ನಾಶಮಾಡುತ್ತಾಳೆ.)

ಈ ಮಂತ್ರವನ್ನು ಸ್ಮರಿಸಿಕೊಳ್ಳುತ್ತ, ವೇದಕಾಲದ ಜನಜೀವನ ಹೇಗೆ ಕಲಾಮಯವಾಗಿತ್ತು ಎನ್ನುವುದನ್ನು ಸೂಚಿಸುತ್ತಾರೆ, ಕಪಿಲಾ. ನಮ್ಮ ಪರಂಪರೆಯ ಎಷ್ಟೋ ಕಲಾತತ್ತ್ವಗಳ ಮೂಲವೇ ವೇದಗಳು ಎನ್ನುವುದನ್ನು ಸಾಕ್ಷ್ಯಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ವೇದಗಳನ್ನು ನಾವು ಅಧ್ಯಾತ್ಮದ ಮೂಲವಾಗಿಯೂ ಧಾರ್ಮಿಕತೆಯ ಭಾಗವಾಗಿಯೂ ಮಾತ್ರವೇ ನೋಡುತ್ತಿದ್ದೇವೆ. ಅವು ನಮ್ಮ ಕಲಾಪರಂಪರೆಯ ಆಕರಗ್ರಂಥಗಳು ಕೂಡ ಹೌದು ಎಂಬುದನ್ನು ಅವರು ಖಚಿತವಾಗಿ ಪ್ರತಿಪಾದಿಸಿದ್ದಾರೆ. ಹೀಗಿದ್ದರೂ ಭಾರತೀಯ ಕಲಾತತ್ತ್ವಗಳನ್ನು ಬೇರೆ ಬೇರೆ ಸಿದ್ಧಾಂತಗಳ ಹಿನ್ನೆಲೆಯಲ್ಲೂ ಕಂಡುಕೊಳ್ಳುವಂಥ ಕಾರ್ಯವೂ ನಡೆಯಬೇಕೆಂದೂ ಅವರು ಪ್ರತಿಪಾದಿಸಿದರು. ಮನುಷ್ಯಜೀವನದ ಸಮಗ್ರತೆಯನ್ನೇ ಭಾರತೀಯ ಕಲೆಗಳು ಪ್ರತಿಪಾದಿಸುವುದರಿಂದ ಕಲಾತತ್ತ್ವಗಳಿಗೆ ಚಾರ್ವಾಕ ಸಿದ್ಧಾಂತದಿಂದ ಮೊದಲುಗೊಂಡು ವೇದಾಂತದರ್ಶನದ ತನಕ ಎಲ್ಲವೂ ಒದಗುತ್ತವೆ ಎಂಬುದನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ ಎನ್ನುವುದನ್ನು ಎತ್ತಿಹಿಡಿದರು.

ಭಾರತೀಯ ಕಲೆಗಳ ಉದ್ದೇಶದ ಬಗ್ಗೆಯೂ ಸಾಕಷ್ಟು ಚಿಂತನೆಯನ್ನು ನಡೆಸಿದವರು ಕಪಿಲಾ. ಭಾರತೀಯ ಶಾಸ್ತ್ರಪರಂಪರೆಯ ವಿಪುಲತೆಯ ಬಗ್ಗೆ ಬರೆಯುತ್ತ, ನಮ್ಮ ಬದುಕಿಗೆ ಬೇಕಾದ ಎಲ್ಲ ವಿವರಗಳ ಬಗ್ಗೆಯೂ ನಮ್ಮಲ್ಲಿ ಶಾಸ್ತ್ರಪರಂಪರೆ ಬೆಳೆಯಿತು. ಧರ್ಮ, ಅರ್ಥ ಮತ್ತು ಕಾಮ ಎಂಬ ಪುರುಷಾರ್ಥಗಳನ್ನು ಈ ಶಾಸ್ತ್ರಗಳು ಪ್ರತಿನಿಧಿಸುತ್ತವೆ, ದಿಟ. ಆದರೆ ದಿಟವಾದ ಪುರುಷಾರ್ಥವಾದ ಮೋಕ್ಷವೇ ಈ ಶಾಸ್ತ್ರಗಳ ಗುರಿ. ಭಾರತೀಯ ಪರಂಪರೆಯಲ್ಲಿ ಮೋಕ್ಷಕ್ಕೆ ಹೆಚ್ಚಿನ ಮಹತ್ವವಿದ್ದರೂ ’ಇದು ಮೋಕ್ಷಶಾಸ್ತ್ರ‘ ಎಂಬ ಪ್ರತ್ಯೇಕ ಶಾಸ್ತ್ರವೊಂದು ಸಿದ್ಧವಾಗಿಲ್ಲ. ಏಕೆಂದರೆ ಎಲ್ಲ ಶಾಸ್ತ್ರಗಳ ಗುರಿಯೇ ಮೋಕ್ಷವಾದ್ದರಿಂದ ಅದಕ್ಕೊಂದು ಪ್ರತ್ಯೇಕ ಶಾಸ್ತ್ರದ ಆವಶ್ಯಕತೆಯೇ ಇಲ್ಲವಾಗುತ್ತದೆ – ಎಂದು ಪ್ರತಿಪಾದಿಸುತ್ತ, ಭಾರತೀಯ ಆಧ್ಯಾತ್ಮಿಕ ಪರಂಪರೆಯ ವೈಶಾಲ್ಯವನ್ನು ಎತ್ತಿಹಿಡಿದರು. 'The body is the medium to transcend the 'body’.’ ( ಶರೀರವೇ ಶರೀರವನ್ನು ಮೀರಲು ಒದಗುವ ಮಾಧ್ಯಮವಾಗಿದೆ.) ಸೂತ್ರದಂಥ ಈ ಒಂದೇ ಮಾತಿನ ಮೂಲಕ ಅವರು ಭಾರತೀಯ ಕಲೆಗಳ ರೂಪವನ್ನೂ ಸ್ವರೂಪವನ್ನೂ, ದಾರಿಯನ್ನೂ ಗುರಿಯನ್ನೂ ಕಟ್ಟಿಕೊಟ್ಟರು. ಕಲೆ ಎನ್ನುವುದು ಕಲಾವಿದನ ವೈಯಕ್ತಿಕ ನೋವು, ದುಃಖ, ಸಂಕಟ, ತಳಮಳಗಳನ್ನು ರಸಿಕನಿಗೆ ದಾಟಿಸುವ ಆತ್ಮಘಾತಕ ಪ್ರಕ್ರಿಯೆಯಲ್ಲ; ಅದು ಆ ಎಲ್ಲ ವೈಯಕ್ತಿಕ ವಿವರಗಳಿಂದ ಮುಕ್ತವಾಗಿ ದಕ್ಕಿಸಿಕೊಂಡ ಅರಿವು–ಇರವು–ನಲವುಗಳನ್ನು ಸಹೃದಯನ ಅನುಭವಕ್ಕೆ ಬರುವ ಆತ್ಮವಿಸ್ತರಣತತ್ತ್ವ ಎನ್ನುವ ಭಾರತೀಯ ಕಲಾದರ್ಶನದ ಆದರ್ಶವೇ ಅವರ ಎಲ್ಲ ಬರಹಗಳ ಆಧಾರಶ್ರತಿಯಾಗಿದೆ ಎನ್ನುವುದು ಗಮನೀಯ.

ಕಪಿಲಾ ಅವರು ಐಜಿಎನ್‌ಸಿಎ ಮೂಲಕ ಎಷ್ಟೆಲ್ಲ ಯೋಜನೆಗಳನ್ನು ರೂಪಿಸಿದರು ಎನ್ನುವುದನ್ನು ಮೆಲುಕುಹಾಕಿದರೆ ಅವರ ದೂರದೃಷ್ಟಿಯ ವ್ಯಾಪ್ತಿ ತಿಳಿಯುತ್ತದೆ. ಅವರು ರೂಪಿಸಿರುವ ಭಾರತೀಯ ಕಲಾಮೂಲಕೋಶ, ಕಲಾತತ್ತ್ವಕೋಶ – ಇಂಥ ಹಲವು ಯೋಜನೆಗಳು ಪೂರ್ಣವಾಗಿ ಸಾಕ್ಷಾತ್ಕಾರಗೊಂಡರೆ ಭಾರತೀಯ ಕಲಾಪರಂಪರೆಯ ವಿಶ್ವರೂಪದರ್ಶನಕ್ಕೆ ನಮಗೆ ಬೇಕಾದ ದರ್ಶನಶಕ್ತಿಯನ್ನು ಅವು ಒದಗಿಸುವುದು ಖಂಡಿತ. ಕುಮಾರಸ್ವಾಮಿ ಸಮಗ್ರ ಕೃತಿಗಳ ಯೋಜನೆಯೂ ಪೂರ್ಣಗೊಳ್ಳಬೇಕಿದೆ. ಐಜಿಎನ್‌ಸಿಎ ಈ ಯೋಜನೆಗಳೆಲ್ಲವನ್ನೂ ಪೂರ್ಣಮಾಡುತ್ತದೆ ಎಂದು ನಾವು ಈಗ ಹಾರೈಸಬೇಕಾಗಿದೆ.

ಕಪಿಲಾ ಅವರ ಹಲವು ಕೃತಿಗಳು ಅವರ ವಿದ್ವತ್ತೆಗೂ ಒಳನೋಟಗಳಿಗೂ ಸಾಕ್ಷ್ಯಗಳು. ಇವು ಭಾರತೀಯ ಕಲಾದರ್ಶನದ ಹೃದಯವನ್ನು ಅರಿತುಕೊಳ್ಳಲು ಸಹಾಯಕ ಸಾಮಗ್ರಿ ಮಾತ್ರವಲ್ಲ, ನಮ್ಮಲ್ಲಿ ಇಂದು ಹ್ರಾಸವಾಗುತ್ತಿರುವ ವಿದ್ವತ್‌ ಪರಂಪರೆಯನ್ನು ಉಜ್ಜೀವಿತಗೊಳಿಸಲು ದಿಕ್ಸೂಚಿಯಾಗಿಯೂ ನೆರವಾಗುತ್ತವೆ. 

ವ್ಯಕ್ತಿಯಾಗಿಯೂ ಸಂಸ್ಥೆಯಾಗಿಯೂ ಸಾರ್ಥಕತೆಯನ್ನು ಹೇಗೆ ಸಂಪಾದಿಸಿಕೊಳ್ಳಬೇಕು ಎನ್ನುವುದಕ್ಕೆ ಕಪಿಲಾ ವಾತ್ಸ್ಯಾಯನ ಅವರು ಶ್ರೇಷ್ಠ ಉದಾಹರಣೆಯಾಗಿದ್ದಾರೆ. ಹೌದು, ಅವರು ನಮ್ಮ ಕಾಲದ ಋಷಿಕೆಯೇ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು