ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ದೀಪಗಳು: ಕನ್ನಡದ ರಾಜಪುರೋಹಿತ

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಧಾರವಾಡ ಭಾಗದಲ್ಲಿ ಕನ್ನಡ ಕಟ್ಟಿದವರಲ್ಲಿ ನಾ. ಶ್ರೀ. (ನಾರಾಯಣಾಚಾರ್ಯ ಶ್ರೀನಿವಾಸಾಚಾರ್ಯ) ರಾಜಪುರೋಹಿತ (1887– 1953) ಪ್ರಮುಖರು. ಹಾವೇರಿ ಸಮೀಪದ ಅಗಡಿ ಇವರ ಊರು. ಹೆಸರು ರಾಜಪುರೋಹಿತ ಎಂದಾದರೂ ಮನೆಯಲ್ಲಿ ಬಡತನ. ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಅವರು ಧಾರವಾಡ ಜಿಲ್ಲೆಗೆ ಪ್ರಥಮರಾಗಿ ಪಾಸಾದರು. ಅದೇ ರೀತಿ ತಮ್ಮ ಮೂರು ವರ್ಷಗಳ ಶಿಕ್ಷಕ ವೃತ್ತಿಯ ತರಬೇತಿಯನ್ನೂ ಯಶಸ್ವಿಯಾಗಿ ಮುಗಿಸಿ, 1905ರಲ್ಲಿ ಧಾರವಾಡದಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾದರು.

ಪತ್ರಿಕೆಯಲ್ಲಿ ಪ್ರತಿಕ್ರಿಯೆಯಾಗಿ ಬರೆದ ಪತ್ರದಿಂದ ನೌಕರಿಯನ್ನು ಕಳೆದುಕೊಳ್ಳಬೇಕಾಯಿತು. ಅದೇ ಸಂದರ್ಭದಲ್ಲಿ ಆಲೂರು ವೆಂಕಟರಾಯರು ಕಾನೂನು ಪದವಿಯನ್ನು ಪಡೆದುಕೊಂಡು ಧಾರವಾಡಕ್ಕೆ ಬಂದರು. ಅವರು1908ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಾಲೆಗೆ ರಾಜಪುರೋಹಿತರು ಶಿಕ್ಷಕರಾಗಿ ಸೇರಿಕೊಂಡದ್ದು ಕೂಡ ಒಂದು ಮಹತ್ವದ ಯೋಗಾಯೋಗ. ಆಗಿನಿಂದ ಕೊನೆಯವರೆಗೆ ಇಬ್ಬರ ಸಂಬಂಧ ಗಟ್ಟಿಯಾಗಿತ್ತು.

ರಾಜಪುರೋಹಿತರಿಗೆ ಓದಿನ ಅಭಿರುಚಿ ದೊಡ್ಡದಾಗಿತ್ತು. ಸಂಶೋಧನಾ ಪ್ರಬಂಧಗಳನ್ನೂ ಅವರು ಬರೆಯತೊಡಗಿದರು. ಪುಣೆಯಲ್ಲಿದ್ದಾಗ ಲೋಕಮಾನ್ಯ ತಿಲಕರ ಸಂಪಾದಕತ್ವದ ‘ಕೇಸರಿ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ರಾಜಪುರೋಹಿತರಿಗೆ ದೊಡ್ಡ ಅವಕಾಶವನ್ನೇ ಒದಗಿಸಿತು. ‘ಕೇಸರಿ’ಯಲ್ಲಿ ಅವರು 1912ರಿಂದ 1914ರವರೆಗೆ ಬರೆದ ಆರು ಲೇಖನಗಳು ಅವರ ಮಹತ್ವದ ಸಂಶೋಧನಾ ಲೇಖನಗಳು.

ಮಹಾರಾಷ್ಟ್ರದ ಅಂದಿನ ವಿದ್ವಾಂಸ-ಇತಿಹಾಸಕಾರರು ಕರ್ನಾಟಕದ ಬಹುಭಾಗವನ್ನು ತಮ್ಮದೆಂದು ಸಾಧಿಸಿದ್ದಲ್ಲದೆ ಚಾಲುಕ್ಯ ಹಾಗೂ ರಾಷ್ಟ್ರಕೂಟ ವಂಶದ ರಾಜರುಗಳನ್ನು ತಮ್ಮವರೆಂದು ಘೋಷಿಸಿಕೊಂಡಿದ್ದರು. ಇದು ಹಾಗಲ್ಲವೆಂದು ಆಧಾರಸಹಿತ (ಈ ಆಧಾರಗಳಲ್ಲಿ ವಾಯುಪುರಾಣ, ಹ್ಯು ಯೆನ್‌ ತ್ಸಾಂಗ್‌ ಹಾಗೂ ಕೆಲವು ಶಾಸನಗಳು) ತಮ್ಮ 6 ಲೇಖನಗಳಲ್ಲಿ ಸಿದ್ಧಪಡಿಸಿ ಆ ಮರಾಠಿ ವಿದ್ವಾಂಸರಿಂದಲೇ ಹೌದೆನ್ನಿಸಿಕೊಂಡರು. ಅಲ್ಲಿ ಆಗ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದವರಿಗೆ ಹಾಗೂ ಈ ನಾಲ್ಕು ಜಿಲ್ಲೆಗಳ ಸುಶಿಕ್ಷಿತರಿಗೆ ಅಸ್ಮಿತೆ ಒದಗಿಸಿಕೊಟ್ಟರು.

ಈ ಲೇಖನಗಳ ಜೊತೆಗೆ ರಾಜಪುರೋಹಿತರು ಮುಂಬೈಯಲ್ಲಿ 1935ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಶೋಧನಾ ಗೋಷ್ಠಿಯ ಅಧ್ಯಕ್ಷರಾಗಿ ಮಾಡಿದ ಭಾಷಣವನ್ನು ಓದಬೇಕು. ಆಗ ನಮಗೆ ಗೊತ್ತಾಗುತ್ತದೆ -What was he out for?- ಅವರ ಗುರಿ, ನಡೆಯಬೇಕಾದ ದಾರಿ ಏನಾಗಿತ್ತು, ಯಾವ ಕಡೆಗಿತ್ತು ಎಂಬುದು ಮತ್ತು ನಿಶ್ಚಿತವಾಗಿಯೂ ರಾಜಪುರೋಹಿತರಂತಹ ಬುದ್ಧಿವಂತ, ನಿರಂತರ ಶ್ರಮಪಡುವ ಕನ್ನಡ ಪ್ರೇಮಿ ಸಂಶೋಧನಾಕಾರರು ಮತ್ತಾರೂ ಇಲ್ಲ ಎಂಬುದು.

ರಾಜಪುರೋಹಿತರ ಒತ್ತಾಸೆಯಂತೆ ಆಲೂರು ವೆಂಕಟರಾಯರು ‘ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ’ ಯನ್ನು ಸ್ಥಾಪಿಸಿದರು (ಅದು ಇಂದಿಗೂ ಇದೆ). ರಾಜಪುರೋಹಿತರು ಸಂಶೋಧನೆಯನ್ನೇ ಜೀವನದ ಉಸಿರಾಗಿಸಿಕೊಂಡು ಕರ್ನಾಟಕ ಇತಿಹಾಸ ಸಂಶೋಧನ ಮಂಡಳದಲ್ಲಿ ಅಪ್ರತಿಮ ಕೆಲಸ ಮಾಡಿದರು.

ರಾಜಕಾರಣವು ಇತಿಹಾಸದ ಮಹತ್ವದ ಭಾಗವಾದರೂ ಅದಷ್ಟೇ ಇತಿಹಾಸವಲ್ಲ; ಭಾಷೆಗೆ, ಸಾಹಿತ್ಯಕ್ಕೆ, ಸಾಂಸ್ಕೃತಿಕವಾಗಿ ಬೆಳೆಯುವ ಕ್ರಿಯೆಗೆ ಇತಿಹಾಸದಲ್ಲಿ ದಿಕ್ಕು ಬದಲಿಸಬಲ್ಲ ಶಕ್ತಿ ಇರುವುದನ್ನು ಕೂಡ ಇತಿಹಾಸ ದಾಖಲಿಸಬೇಕು ಎಂದು ನಂಬಿದ್ದರು.
ನೃಪತುಂಗ, ಹರಿಹರ, ರನ್ನ, ಚಾಮರಸ, ಕುಮಾರವ್ಯಾಸರಂತಹ ಶ್ರೇಷ್ಠ ಕವಿಗಳ ಬಗೆಗೆ ಸಂಶೋಧನೆಗಳನ್ನು ಆ ರೀತಿ ಮೊದಲಿಗೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು.

ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರ ಸಾಧನೆಯ ಶ್ರೇಷ್ಠತೆಯ ಹಲವಾರು ಅಂಶಗಳು ಇವರ ಸಂಶೋಧನೆಗಳ ಸಾಮಗ್ರಿಗಳಾಗಿದ್ದವು. ವಿಜಯನಗರ ಸಾಮ್ರಾಜ್ಯ- ‘ಅದು ಕನ್ನಡ ಸಾಮ್ರಾಜ್ಯ’, ವಿಜಯನಗರ ಆ ಸಾಮ್ರಾಜ್ಯದ ಒಂದು ರಾಜಧಾನಿಯಾಗಿತ್ತು ಎಂದು ಮೊದಲಿಗೆ ಹೇಳಿದವರು ನಾ ಶ್ರೀ ಅವರು. ಅಂತೆಯೇ ಆ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ನಿರ್ಣಾಯಕ ಯುದ್ಧ ನಡೆದದ್ದು ತಾಳಿಕೋಟೆಯಲ್ಲಲ್ಲ, ರಕ್ಕಸತಂಗಡಗಿಯಲ್ಲಿ ಎನ್ನುವುದನ್ನು ಕ್ಷೇತ್ರ ಅಧ್ಯಯನ, ವಿಶಾಲ ಖನನ, ಆ ಖನನದಲ್ಲಿ ಸಿಕ್ಕ ಅವಶೇಷಗಳು ಹಾಗೂ ಕುರುಹುಗಳ ಮೂಲಕ ಸಿದ್ಧಮಾಡಿದವರು ಅವರು.

1928 ಡಿಸೆಂಬರ್‌ನಲ್ಲಿ ಆ ಬಗೆಗೆ ಸಿದ್ಧಪಡಿಸಿದ ಲೇಖನವನ್ನು ‘ಭಾರತೀಯ ಇತಿಹಾಸ ಸಂಶೋಧನಾ ಮಂಡಳ’ದ ಸಭೆಯಲ್ಲಿ ಪ್ರಸ್ತುತಪಡಿಸಿದ್ದರು. ಇವರ ಅಚ್ಚುಮೆಚ್ಚಿನ ಕನ್ನಡ ರಾಜ ಎಂದರೆ ಕಲ್ಯಾಣ ಚಕ್ರವರ್ತಿ ಆರನೇ ವಿಕ್ರಮಾದಿತ್ಯ. ಅವನಿಗೆ ಸಂಬಂಧಿಸಿದ ಎರಡು ಲೇಖನಗಳು ಮಾಹಿತಿ ಕೊಡುವುದಲ್ಲದೆ ಓದುಗರ ಕನ್ನಡಾಭಿಮಾನ ಇನ್ನೂ ಗಟ್ಟಿಗೊಳ್ಳುವಂತೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT