ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ ವಿಶೇಷ: ಪರಂಪರೆಯ ಜಾಡು...

Last Updated 3 ಸೆಪ್ಟೆಂಬರ್ 2022, 23:30 IST
ಅಕ್ಷರ ಗಾತ್ರ

ಶಾಲಾ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಎಷ್ಟೊಂದು ಜನ ಎಂತೆಂಥ ದೊಡ್ಡ ಸಾಧನೆ ಮಾಡಿದ್ದಾರೆ ಗೊತ್ತೆ? ಅಂತಹ ಸಾಧಕ ತಾರೆಗಳಲ್ಲಿ ಕೆಲವರನ್ನು ನಿಮ್ಮ ಮುಂದೆ ಮತ್ತೆ ಕರೆತಂದಿದ್ದಾರೆ ಮಂಜುಶ್ರೀ ಎಂ. ಕಡಕೋಳ. ಈ ಸಾಧಕರ ಸ್ಮರಣೆ ಗುರುಮಾರ್ಗದಲ್ಲಿ ಹೊಸ ಬೆಳಕನ್ನೂ ಚೆಲ್ಲಬಲ್ಲುದು.

ಪಾ.ವೆಂ. ಆಚಾರ್ಯ

ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪಾಡಿಗಾರು ವೆಂಕಟರಮಣ ಆಚಾರ್ಯ (ಪಾ.ವೆಂ. ಆಚಾರ್ಯ) ಅವರೂ ಒಂದುಕಾಲಕ್ಕೆ ಶಿಕ್ಷಕರಾಗಿದ್ದರು. ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದ ಅವರು ಹೊಂದಿದ ವಿದ್ವತ್ತು ಮಾತ್ರ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳನ್ನು ಮೀರಿಸುವಂಥದ್ದಾಗಿತ್ತು.

ಪಾ.ವೆಂ. ಅವರಿಗೆ ಹಣದ ಕೊರತೆಯಿಂದ ಹೆಚ್ಚಿನ ಶಿಕ್ಷಣ ಪಡೆಯಲಾಗಲಿಲ್ಲ. ಆದರೆ, ಪತ್ರಿಕೋದ್ಯಮದಲ್ಲಿ ಕಲಿತದ್ದು ಅಪಾರ. ಉಡುಪಿಯಲ್ಲಿ ಶಾಲಾ ಮಾಸ್ತರರಾಗಿ ವೃತ್ತಿ ಜೀವನ ಆರಂಭಿಸಿದ ಆಚಾರ್ಯರು, ಮುದ್ರಣಾಲಯದ ಕಾರ್ಮಿಕ, ಅಂಗಡಿಯಲ್ಲಿ ಲೆಕ್ಕಿಗರಾಗಿಯೂ ಕಾರ್ಯನಿರ್ವಹಿಸಿದ್ದುಂಟು. ಹಂತಹಂತವಾಗಿ ಬರವಣಿಗೆಯ ರುಚಿ ಹಚ್ಚಿಸಿಕೊಂಡ ಆಚಾರ್ಯರು ಮುಂದೆ ‘ಕಸ್ತೂರಿ’ ಮಾಸಿಕಕ್ಕೆ ಸಂಪಾದಕರಾಗಿದ್ದು ಇತಿಹಾಸ.

‘ಲಾಂಗೂಲಾಚಾರ್ಯ’ ಎನ್ನುವ ಕಾವ್ಯನಾಮದ ಅವರ ಬರಹಗಳು, ಪದಾರ್ಥ ಚಿಂತಾಮಣಿ ಅಂಕಣದ ಮೂಲಕ ಅವರು ನಡೆಸುತ್ತಿದ್ದ ಚರ್ಚೆಗಳು ಓದುಗರ ಅರಿವನ್ನು ಹೆಚ್ಚಿಸುತ್ತಿದ್ದವು. ನಿತ್ಯ ಜೀವನದಲ್ಲಿ ನಾವು ಬಳಸುವ ‘ಪದ’ವೊಂದಕ್ಕೆ ಇರುವ ನಾನಾ ಅರ್ಥಗಳು, ಅದರ ಬಳಕೆಯ ಸ್ವರೂಪ, ಪುರಾಣ– ಇತಿಹಾಸ– ವರ್ತಮಾನದಲ್ಲಿ ಆ ಪದದ ಬಳಕೆ ಇತ್ಯಾದಿ ಕುರಿತ ‘ಪದಾರ್ಥ ಚಿಂತಾಮಣಿ’ ಅಂಕಣವು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. ಸಾಹಿತ್ಯ, ಮನೋವಿಜ್ಞಾನ, ಖಗೋಳ ಶಾಸ್ತ್ರ, ಸಸ್ಯಶಾಸ್ತ್ರ, ‌ಪ್ರಾಣಿಶಾಸ್ತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಆಚಾರ್ಯರು, ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ ಮಾದರಿಯಲ್ಲಿ ‘ಪೆಂಗೋಪದೇಶ’ ಪದ್ಯಗಳನ್ನೂ ರಚಿಸಿದ್ದಾರೆ.

‘ಸಿಸು’ ಸಂಗಮೇಶ

ಕನ್ನಡ ಶಿಶು ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ‘ಸಿಸು’ ಸಂಗಮೇಶ ಕೂಡ ಶಾಲಾ ಮಾಸ್ತರರು. ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳ ಗ್ರಾಮ. ಪೂರ್ಣ ಹೆಸರು ಸಂಗಮೇಶ ಸಿದ್ದರಾಮಪ್ಪ ಮನಗೊಂಡ.

ಶಾಲಾ ಮಾಸ್ತರರಾಗಿ ವೃತ್ತಿ ಜೀವನದ ಆರಂಭಿಸಿದ ಸಂಗಮೇಶ ಅವರು ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದವರು. ಶಾಲಾ ಮಕ್ಕಳೊಂದಿಗೆ ಜೀವನದ ಬಹುಭಾಗವನ್ನು ಕಳೆದ ಸಂಗಮೇಶ ಅವರು, ಮಕ್ಕಳ ಮನೋಲೋಕ ಅರಿತು ಅನೇಕ ಕೃತಿಗಳನ್ನು ರಚಿಸಿದವರು. ಸಾಹಿತ್ಯದ ಆಸಕ್ತಿಯು ಕವಿತೆ, ಅನುವಾದ, ಸಂಪಾದನೆಯತ್ತ ಸೆಳೆಯಿತು. ಮಕ್ಕಳ ಸಾಹಿತ್ಯ ಪ್ರಕಾರವನ್ನು ಬೆಳೆಸುವಲ್ಲಿ ಅಪಾರ ಆಸಕ್ತಿ ವಹಿಸಿದವರು. ಇದಕ್ಕಾಗಿಯೇ ‘ಬಾಲಭಾರತಿ’ ಪ್ರಕಾಶನ ಸ್ಥಾಪಿಸಿ ಅದರಡಿ 80ಕ್ಕೂ ಹೆಚ್ಚು ಮಕ್ಕಳ ಕೃತಿಗಳನ್ನು ಮುದ್ರಿಸಿದರು. ಅಂತೆಯೇ ‘ಬಾಲಭಾರತಿ’ ಎನ್ನುವ ಮಕ್ಕಳ ಮಾಸಪತ್ರಿಕೆಯನ್ನು ನಾಲ್ಕು ವರ್ಷ ನಡೆಸಿದರು.

ಮಕ್ಕಳ ಸಾಹಿತ್ಯ ಪ್ರೋತ್ಸಾಹಿಸಲು ರಾಜ್ಯಮಟ್ಟದಲ್ಲಿ ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪಿಸಿದ್ದ ಸಂಗಮೇಶ ಅವರು, ಕನ್ನಡ ಸಾಹಿತ್ಯ ಪರಿಷತ್ತು ಚನ್ನಪಟ್ಟಣದಲ್ಲಿ ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೇಶ, ವಿದೇಶಗಳಲ್ಲಿ ಅನೇಕ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಭಾಗಿಯಾಗಿದ್ದರು.

ಸಿಂಪಿ ಲಿಂಗಣ್ಣ

‘ಜಾನಪದ ದಿಗ್ಗಜ’ರೆಂದೇ ಖ್ಯಾತರಾಗಿದ್ದ ಸಿಂಪಿ ಲಿಂಗಣ್ಣ ಅವರು ತಮ್ಮ ಕೃತಿಗಳ ಮೂಲಕ ಗ್ರಾಮೀಣ ಸಾಂಸ್ಕೃತಿಕ ಸೊಗಡನ್ನು ಕಟ್ಟಿಕೊಟ್ಟವರು. ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಇನ್ನಿತರ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿದವರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ 1905ರ ಫೆ. 10ರಂದು ಜನಿಸಿದ ಅವರು, ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಆಗಿನ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.

ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಸೇರಿದಂತೆ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದರು. ತಾಯಿ ಮತ್ತು ಅತ್ತಿಗೆ ಹಾಡುತ್ತಿದ್ದ ತ್ರಿಪದಿಗಳನ್ನು ಕೇಳುತ್ತಾ ಬೆಳೆದಿದ್ದ ಲಿಂಗಣ್ಣ ಅವರಿಗೆ ಬಾಲ್ಯದಿಂದಲೇ ಜನಪದ ಸಾಹಿತ್ಯದತ್ತ ಅಪಾರ ಒಲವು. ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳ ಆಯ್ದ ಭಾಗಗಳು ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯವೂ ಆಗಿವೆ. ಇತಿಹಾಸ, ಅಧ್ಯಾತ್ಮ, ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ಲಿಂಗಣ್ಣ ಅವರ ಸಾಧನೆ ಕುರಿತು ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆದಿವೆ.

ವಿಶ್ವಾಮಿತ್ರನ ಸಾಹಸ, ಲೊಬೊಲೊಬೊ, ಕಿರುಗನ್ನಡಿ, ಅಂದ ಚೆಂದ, ನಾಮದೇವ, ಗುಡ್ಡಾಪುರದ ದಾನಮ್ಮ ಸೇರಿದಂತೆ 16ಕ್ಕೂ ಹೆಚ್ಚಿನ ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ ಅಗ್ಗಳಿಕೆ ಅವರದ್ದು. ಸಿಂಪಿ ಲಿಂಗಣ್ಣ ಅವರು ‘ಆದರ್ಶ ಶಿಕ್ಷಕ’ರೆಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರಿಂದ ಪ್ರಶಸ್ತಿಗೂ ಭಾಜನರಾಗಿದ್ದರು.

ಸುದರ್ಶನ ದೇಸಾಯಿ

ಕನ್ನಡದ ಪತ್ತೇದಾರಿ ಕಾದಂಬರಿ ಲೋಕದಲ್ಲಿ ಸುದರ್ಶನ ದೇಸಾಯಿ ಅವರದ್ದು ಅಚ್ಚಳಿಯದ ಹೆಸರು. ಧಾರವಾಡದಲ್ಲಿ ಹುಟ್ಟಿ ಬೆಳೆದ ಸುದರ್ಶನ ಅವರು, ಆರಂಭಿಕ ಶಿಕ್ಷಣ ಪಡೆದಿದ್ದು, ಮುಂದೆ ಶಿಕ್ಷಕ ತರಬೇತಿ ಪೂರೈಸಿ ವೃತ್ತಿ ಜೀವನ ಆರಂಭಿಸಿದ್ದೂ ಸರ್ಕಾರಿ ಶಾಲೆಯಲ್ಲೇ.

34 ವರ್ಷಗಳ ಸುದೀರ್ಘ ಕಾಲ ಶಿಕ್ಷಕರಾಗಿ ಮಕ್ಕಳ ಒಡನಾಟದಲ್ಲಿದ್ದ ಸುದರ್ಶನ ಅವರು ಮಕ್ಕಳಲ್ಲಿನ ಕುತೂಹಲವನ್ನು ತಮ್ಮ ಪತ್ತೇದಾರಿ ಕಾದಂಬರಿಯಲ್ಲೂ ಕಾಪಿಟ್ಟುಕೊಂಡವರು. ಕನ್ನಡ ಸಾಹಿತ್ಯ ಲೋಕದಲ್ಲಿ ಪತ್ತೇದಾರಿ ಸಾಹಿತ್ಯಕ್ಕೊಂದು ಘನತೆ, ಗೌರವ ತಂದುಕೊಟ್ಟಿದ್ದ ಅವರು, ಮಕ್ಕಳ ಸಾಹಿತ್ಯ ಮತ್ತು ಹಾಸ್ಯ ಸಾಹಿತ್ಯ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ.

ದ.ರಾ.ಬೇಂದ್ರೆ, ದಿನಕರ ದೇಸಾಯಿ ಅವರ ಪ್ರೇರಣೆಯಿಂದ ಸಾಹಿತ್ಯ ಲೋಕ ಪ್ರವೇಶಿಸಿದ ಸುದರ್ಶನ ಅವರು ಆರಂಭದ ದಿನಗಳಲ್ಲಿ ಕಥೆಗಾರರಾಗಿ ಖ್ಯಾತರಾದವರು. ಜಗತ್ತಿನಾದ್ಯಂತ ಓದುಗರ ಗಮನ ಸೆಳೆದ ಜೈಲಿನ ಕಥೆಗಳನ್ನು ಆಧರಿಸಿ ‘ಸುಧಾ’ ವಾರಪತ್ರಿಕೆಗೆ ಬರೆದ ‘ಮೃತ್ಯುವಿಗೆ ಮುತ್ತಿಟ್ಟವರು’ ಧಾರಾವಾಹಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. 60ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ಪತ್ತೇದಾರಿ ಕಾದಂಬರಿ ಪ್ರಿಯರ ಮನದಲ್ಲಿ ಇಂದಿಗೂ ತಮ್ಮ ಛಾಪು ಉಳಿಸಿಕೊಂಡಿರುವ ಅವರು, ಮಕ್ಕಳಿಗಾಗಿ ಜಾಣಮಗು, ಸರಕೆ ಭರಕೆ, ಪುಟ್ಟ ಹಕ್ಕಿ ಕವನ ಸಂಕಲನಗಳನ್ನೂ ರಚಿಸಿದ್ದಾರೆ.

ಸುದರ್ಶನ ಅವರ ‘ತಿರುವು’ ಕಾದಂಬರಿಯನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ಅವರು ‘ಮಾನಸ ಸರೋವರ’ ಸಿನಿಮಾ ಮಾಡಿದ್ದಾರೆ. ಅಂತೆಯೇ ಅವರ ರಚನೆಯ ಶರವೇಗದ ಸರದಾರ, ಕೆರಳಿದ ಸರ್ಪ, ಎಂಟೆದೆಯ ಭಂಟ, ಮೃತ್ಯು ಬಂಧನ ಮೊದಲಾದ ಕಾದಂಬರಿಗಳು ಸಿನಿಮಾಗಳಾಗಿ ಜನಪ್ರಿಯತೆ ಗಳಿಸಿವೆ. ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಅರುಣರಾಗ ಸಿನಿಮಾಗಳಿಗೆ ಸುದರ್ಶನ ಅವರು ಸಂಭಾಷಣೆಯನ್ನೂ ಬರೆದಿದ್ದಾರೆ. ರೇಡಿಯೊ ನಾಟಕಗಳನ್ನೂ ರಚಿಸಿದ್ದ ಅವರು, 1999ರಲ್ಲಿ ಕೇಂದ್ರ ಸರ್ಕಾರದಿಂದ ‘ಆದರ್ಶ ಶಿಕ್ಷಕ’ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT