ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಸದಸ್ಯರ ವಿರುದ್ಧ ಶೀಘ್ರ ರೂಲಿಂಗ್‌: ಸಭಾಪತಿ

ಸುಳ್ಳು ಮಾಹಿತಿ ನೀಡಿ ಪ್ರಯಾಣ ಭತ್ಯೆ ಪಡೆದ ಪ್ರಕರಣ
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಪ್ರಯಾಣ ಭತ್ಯೆ ಪಡೆದ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ತಿನ ಎಂಟು ಸದಸ್ಯರ ವಿರುದ್ಧದ ಪ್ರಕರಣದ ಕುರಿತು ನಿವೃತ್ತ ಅಡ್ವೊಕೇಟ್ ಜನರಲ್‌ಗಳ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲು ಸಭಾಪತಿ ಡಿ.ಎಚ್. ಶಂಕರಮೂರ್ತಿ ನಿರ್ಧರಿಸಿದ್ದಾರೆ.

ಪರಿಷತ್ತಿನ ಕಾಂಗ್ರೆಸ್‌ ಸದಸ್ಯರಾದ ಆರ್.ಬಿ. ತಿಮ್ಮಾಪೂರ (ಅಬಕಾರಿ ಸಚಿವ), ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಎನ್.ಎಸ್‌. ಬೋಸರಾಜ, ಎಸ್.ರವಿ, ಎಂ.ಡಿ. ಲಕ್ಷ್ಮಿನಾರಾಯಣ, ಜೆಡಿಎಸ್‌ನ ಸಿ.ಆರ್. ಮನೋಹರ್ ಮತ್ತು ಅಪ್ಪಾಜಿಗೌಡ ವಿರುದ್ಧ ಸಭಾಪತಿಗೆ ದೂರು ನೀಡಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಈ ಎಲ್ಲರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿದ್ದರು.

‘ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌  ಮತ್ತು ಜೆಡಿಎಸ್‌ ಮೈತ್ರಿಕೂಟ ಆಡಳಿತ ಹಿಡಿಯುವ ಸಲುವಾಗಿ ಎರಡೂ ಪಕ್ಷಕ್ಕೆ ಸೇರಿದ ಸದಸ್ಯರು ಬೆಂಗಳೂರಿನಲ್ಲಿ ವಾಸ ಇರುವುದಾಗಿ ದೃಢೀಕರಣ ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದರು. ಹಾಗಿದ್ದರೂ ಅಧಿವೇಶನ ಮತ್ತು ವಿವಿಧ ಸಭೆಗಳಿಗೆ ತಮ್ಮ ತವರು ಜಿಲ್ಲೆಯಿಂದ ಬೆಂಗಳೂರಿಗೆ ಬಂದಿರುವುದಾಗಿ ದಾಖಲೆ ನೀಡಿ ಪ್ರಯಾಣ ಭತ್ಯೆ ಪಡೆದಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ’ ಎಂದು ರೆಡ್ಡಿ ದೂರಿನಲ್ಲಿ ವಿವರಿಸಿದ್ದರು.

‘ಇದೊಂದು ಅಪರೂಪದ ಪ್ರಕರಣವಾಗಿದ್ದು, ದೆಹಲಿಯ ಕಾನೂನು ತಜ್ಞರಿಂದಲೂ ಅಭಿಪ್ರಾಯ ಪಡೆದಿದ್ದೇನೆ. ಆದರೆ, ಏಕರೂಪದ ಅಭಿಪ್ರಾಯಗಳು ವ್ಯಕ್ತವಾಗಿಲ್ಲ. ಹೀಗಾಗಿ, ತೀರ್ಪು ನೀಡಲು ವಿಳಂಬವಾಗಿದೆ’ ಎಂದು ಶಂಕರಮೂರ್ತಿ ತಿಳಿಸಿದರು.

‘ಈ ಪ್ರಕರಣ ನನ್ನ ವ್ಯಾಪ್ತಿಯಲ್ಲಿ ನಡೆದಿಲ್ಲ. ಅಲ್ಲದೆ, ಭತ್ಯೆ ಪಡೆದಿರುವ ಪರಿಷತ್ ಸದಸ್ಯರು ಕಾನೂನಾತ್ಮಕವಾಗಿ ತಪ್ಪು ಅಲ್ಲ. ಇದು ನೈತಿಕತೆ ಪ್ರಶ್ನೆ. ಆದರೆ, ಸಭಾಪತಿ ಸ್ಥಾನದಿಂದ ಕೊಡುವ ತೀರ್ಪಿನಿಂದ ಯಾರಿಗೂ ಅನ್ಯಾಯವಾಗಬಾರದು. ಹಾಗೆಯೇ ವಂಚನೆ ನಡೆದಿದ್ದರೆ ಅದನ್ನು ಪ್ರೋತ್ಸಾಹಿಸಬಾರದು ಎನ್ನುವುದು ನನ್ನ ಅಭಿಪ್ರಾಯ’ ಎಂದರು.

ಈ ಪ್ರಕರಣದಲ್ಲಿ ಅಭಿಪ್ರಾಯ ನೀಡಲು ಅಡ್ವೊಕೇಟ್ ಜನರಲ್‌ (ಎ.ಜಿ) ಹಿಂದೇಟು ಹಾಕಿದ್ದಾರೆ. ಸರ್ಕಾರದ ವಿಷಯದಲ್ಲಿ ಎ.ಜಿ ನೀಡುವ ಅಭಿಪ್ರಾಯ ಅಂತಿಮ. ಹೀಗಾಗಿ, ತಾನು ಅಭಿಪ್ರಾಯ ನೀಡುವುದು ಸೂಕ್ತವಲ್ಲ ಎಂದು ಅವರು ಹಿಂದೆಸರಿದಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ನಿವೃತ್ತ ಎ.ಜಿಗಳಿಂದ ಅಭಿಪ್ರಾಯ ಪಡೆಯಲು ಸಭಾಪತಿ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT