‘ಕಲ್ಲಪ್ಪ ಹಂಡಿಬಾಗ್‌ ರೀತಿ ಆತ್ಮಹತ್ಯೆಗೆ ಸಿದ್ಧ’

7
ರೌಡಿ ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಯತ್ನ: ಪಿಎಸ್‌ಐ ಗೋಪಾಲ ಹಳ್ಳೂರ ತಂದೆ ವಿಠ್ಠಲ ಆರೋಪ

‘ಕಲ್ಲಪ್ಪ ಹಂಡಿಬಾಗ್‌ ರೀತಿ ಆತ್ಮಹತ್ಯೆಗೆ ಸಿದ್ಧ’

Published:
Updated:
ವಿಠ್ಠಲ ಹಳ್ಳೂರ

ಬೆಳಗಾವಿ: ‘ಪೊಲೀಸ್‌ ಇಲಾಖೆಯ ಕೆಲವು ಮೇಲಧಿಕಾರಿಗಳು ಕುತಂತ್ರ ನಡೆಸಿ ನನ್ನ ಮಗನನ್ನು ಸಿಲುಕಿಸಲು ಪ್ರಯತ್ನ ನಡೆಸಿದ್ದಾರೆ. ಇದೇನಾದರೂ ನಡೆದರೆ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್‌ ಅವರಂತೆ ನಾವು ಕೂಡ ನೇಣು ಹಾಕಿಕೊಳ್ಳುತ್ತೇವೆ’ ಎಂದು ಬಂಧಿತ ಪಿಎಸ್‌ಐ ಗೋಪಾಲ ಹಳ್ಳೂರ ಅವರ ತಂದೆ ವಿಠ್ಠಲ ಬುಧವಾರ ಇಲ್ಲಿ ಹೇಳಿದರು.

ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಮಗ ಮೇಲಧಿಕಾರಿಗಳ ಆದೇಶ ಪಾಲಿಸಿದ್ದಾನೆ. ಈಗ ಅದನ್ನು ಅವನ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇಲಾಖೆಯ ಕೆಳಹಂತದ ಅಧಿಕಾರಿಗಳೇ ಈ ಮಾತನ್ನು ನಮಗೆ ತಿಳಿಸಿದ್ದಾರೆ’ ಎಂದರು.

‘ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ದೂರವಾಣಿ ಮೂಲಕ ಹೇಳಿರುವ ಗೋಪಾಲ, ಧೈರ್ಯದಿಂದ ಇರುವಂತೆ ಹೇಳಿದ್ದಾನೆ. ಅವನನ್ನು ಓದಿಸಲು 7 ಎಕರೆ ಹೊಲ ಮಾರಿದ್ದೇನೆ. ಬಹಳ ಕಷ್ಟಪಟ್ಟಿದ್ದೇನೆ. ಅವನು ಯಾವ ರೀತಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಅಲ್ಲಿನ ಜನರನ್ನು ಕೇಳಬೇಕು. ಅವನು ಯಾರಿಂದಲೂ ಹಣ ಪಡೆದಿಲ್ಲ. ರೌಡಿಗಳಿಂದ ₹ 5 ಕೋಟಿ ಪಡೆದಿರುವ ಆರೋಪ ಶುದ್ಧ ಸುಳ್ಳು’ ಎಂದು ಹೇಳಿದರು.

‘ನನ್ನ ಮಗ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಆದರೆ, ಸುಮ್ಮ ಸುಮ್ಮನೇ ಸಿಲುಕಿಸಬಾರದು. ಅವಶ್ಯಕತೆ ಬಿದ್ದರೆ ನಾನು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಒತ್ತಾಯಿಸುತ್ತೇನೆ’ ಎಂದು ಹೇಳಿದರು.

ಭೀಮಾತೀರದ ರೌಡಿ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣದಲ್ಲಿ ಗೋಪಾಲ ಹಳ್ಳೂರ ಅವರನ್ನು ಬಂಧಿಸಲಾಗಿದ್ದು, ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಜೆಯಲ್ಲಿದ್ದೇನೆ

‘ಸದ್ಯಕ್ಕೆ ರಜೆಯಲ್ಲಿದ್ದೇನೆ. ವಾಪಸ್‌ ಕರ್ತವ್ಯಕ್ಕೆ ಹಾಜರಾದ ನಂತರ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಉತ್ತರ ವಲಯದ ಐಜಿಪಿ ಅಲೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !