ಸೋಮವಾರ, ಡಿಸೆಂಬರ್ 9, 2019
17 °C

ಉಗ್ರರ ವಿರುದ್ಧ ಕಾರ್ಯಾಚರಣೆಗೆ ಎನ್‌ಎಸ್‌ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ/ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಶೀಘ್ರದಲ್ಲೇ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ನಿಯೋಜಿಸುವ ಸಾಧ್ಯತೆಗಳಿವೆ.

‘ಬ್ಲ್ಯಾಕ್‌ ಕ್ಯಾಟ್‌’ ಎಂದೇ ಕರೆಯಲಾಗುವ ಎನ್‌ಎಸ್‌ಜಿ ಕಮಾಂಡೊಗಳು ಹಲವು ದಿನಗಳಿಂದ ನಗರದ ಹೊರವಲಯದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

ಉಗ್ರರ ವಿರುದ್ಧ ಕಾರ್ಯಾಚರಣೆಗೆ ಎನ್‌ಎಸ್‌ಜಿ ನಿಯೋಜಿಸುವ ನಿರ್ಧಾರವನ್ನು ಇತ್ತೀಚೆಗೆ ಗೃಹ ಸಚಿವಾಲಯ ಕೈಗೊಂಡಿದೆ.  ಉಗ್ರರ ವಿರುದ್ಧ ಎಲ್ಲ ಕಾರ್ಯಾಚರಣೆಗಳ ನೋಡಲ್‌ ಏಜನ್ಸಿಯಾಗಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರ 
ಜತೆ ಎನ್‌ಎಸ್‌ಜಿ ಕಾರ್ಯನಿರ್ವಹಿಸಲಿದೆ.

ಭದ್ರತಾ ಪಡೆಗಳ ಜತೆ ಎನ್‌ಕೌಂಟರ್‌ಗಳು ಹೆಚ್ಚುತ್ತಿರುವುದರಿಂದ ಎನ್‌ಎಸ್‌ಜಿ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಜೀವನ ಅಸ್ತವ್ಯಸ್ತ: ಪ್ರತ್ಯೇಕತಾವಾದಿಗಳು ಗುರುವಾರ ಕರೆ ನೀಡಿದ್ದ ಮುಷ್ಕರದಿಂದ ಕಾಶ್ಮೀರ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.

ಇತ್ತೀಚೆಗೆ ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ ಹತ್ಯೆಯಾಗಿರುವುದನ್ನು ಖಂಡಿಸಿ ಮತ್ತು ಭದ್ರತಾ ಪಡೆಗಳ ಗುಂಡಿನ ದಾಳಿಗೆ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಪ್ರತ್ಯೇಕತಾವಾದಿಗಳು ಮುಷ್ಕರಕ್ಕೆ ಕರೆ ನೀಡಿದ್ದರು.

ಬಹುತೇಕ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಶ್ರೀನಗರದಲ್ಲಿ ಮುಚ್ಚಿದ್ದವು. ವಾಹನಗಳ ಸಂಚಾರ ವಿರಳವಾಗಿತ್ತು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮ
ವಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಶುಜಾತ್‌ ಬುಖಾರಿ ಅವರ ಹತ್ಯೆ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಪ್ರತ್ಯೇಕತವಾದಿ ನಾಯಕರು ಒತ್ತಾಯಿಸಿದ್ದಾರೆ.

ಮುರಿದ ಮೈತ್ರಿ ’ಫಿಕ್ಸ್ಡ್‌ ಮ್ಯಾಚ್‌’ : ಒಮರ್‌

ಪಿಡಿಪಿ–ಬಿಜೆಪಿ ಮೈತ್ರಿ ಮುರಿದು ಬಿದ್ದಿರುವುದು ಅತ್ಯದ್ಭುತ ’ಫಿಕ್ಸ್ಡ್‌ ಮ್ಯಾಚ್‌’ ಎಂದು  ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ.

’ರಾಜಕೀಯ ಕಾರ್ಯತಂತ್ರ ರೂಪಿಸಲು ಈ ಪಕ್ಷಗಳು ಬಾಲಿವುಡ್‌ ಸಿನಿಮಾಗಳನ್ನು ವೀಕ್ಷಿಸಿವೆ. ಈ ಸಿನಿಮಾಗಳ ರೀತಿಯಲ್ಲಿ ಉಭಯ ಪಕ್ಷಗಳು ವಿಚ್ಛೇದನ ಪಡೆದುಕೊಳ್ಳುವ ರೂಪುರೇಷೆಗಳನ್ನು ಸಿದ್ಧಪಡಿಸಿದವು. ಪರಿಪೂರ್ಣತೆ ಪಡೆಯುವವರೆಗೂ ಕಥೆಯನ್ನು ಹೆಣೆದವು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈಗಿನ ಸನ್ನಿವೇಶಕ್ಕೆ ಹೋಲಿಕೆ ಮಾಡುವ 1977ರಲ್ಲಿ ಬಿಡುಗಡೆಯಾಗಿದ್ದ ‘ಕಿಸ್ಸಾ ಕುರ್ಸಿ ಕಾ’ ಚಿತ್ರವನ್ನು ಸಹ ಒಮರ್‌ ಅಬ್ದುಲ್ಲಾ ಟ್ವೀಟ್‌ ಜತೆ ಹಂಚಿಕೊಂಡಿದ್ದಾರೆ.

‘ರಾಜ್ಯ ವಿಧಾನಸಭೆಯನ್ನು ತಕ್ಷಣವೇ ವಿಸರ್ಜಿಸಬೇಕು. ಅಮಾನತಿನಲ್ಲಿಡುವುದರಿಂದ ದಲ್ಲಾಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಕುದುರೆ ವ್ಯಾಪಾರಕ್ಕೆ ಅವಕಾಶವಿಲ್ಲ ಮತ್ತು ಹೊಸ ಮೈತ್ರಿ ಇಲ್ಲ ಎಂದು ಬಿಜೆಪಿ ಹೇಳಿರುವಾಗ ವಿಧಾನಸಭೆ ವಿಸರ್ಜಿಸಲು ತೊಂದರೆ ಏನು’ ಎಂದು ಪ್ರಶ್ನಿಸಿದ್ದಾರೆ.

 ಪಾಕಿಸ್ತಾನದಿಂದ ಬೆದರಿಕೆ: ಬಿಜೆಪಿ ಅಧ್ಯಕ್ಷ ದೂರು

‘ಕಳೆದ ಎರಡು ದಿನಗಳಿಂದ ನನಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್‌ ರೈನಾ ದೂರಿದ್ದಾರೆ.

‘ಬೆದರಿಕೆ ಕರೆಗಳ ಬಗ್ಗೆ ರಾಜ್ಯಪಾಲರಿಗೆ ಮತ್ತು ಭದ್ರತಾ ಪಡೆಗಳಿಗೆ ಮಾಹಿತಿ ನೀಡಲಾಗಿದೆ. ಕರಾಚಿ, ರಾವಲ್ಪಿಂಡಿ ಮತ್ತು ಮುಝಾಫರಬಾದ್‌ನಿಂದ ಕೆಲವು ದಿನಗಳಿಂದ ಕರೆಗಳು ಬರುತ್ತಿವೆ. ಯಾವುದೇ ರೀತಿಯ ಬೆದರಿಕೆಗಳಿಗೆ ಮಣಿಯದೆ ಪಾಕಿಸ್ತಾನದ ಕುತಂತ್ರಗಳನ್ನು ಬಹಿರಂಗಗೊಳಿಸಲಾಗುವುದು’ ಎಂದು ರೈನಾ ತಿಳಿಸಿದ್ದಾರೆ.

’ಪಾಕಿಸ್ತಾನ ಹೇಡಿಗಳ ರಾಷ್ಟ್ರ. ಪಾಕಿಸ್ತಾನದ ವಿರುದ್ಧ ವಿಧಾನಸಭೆಯಲ್ಲಿ ಘೋಷಣೆಗಳನ್ನು ಹಾಕಿದ್ದೆ. ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಭಯವಿದೆ. ಹತಾಶೆಗೊಂಡಿರುವುದರಿಂದ ಜೀವ ಬೆದರಿಕೆ ಕರೆಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಬಿಜೆಪಿ ಅಧ್ಯಕ್ಷರು ಅಧಿಕೃತವಾಗಿ ದೂರು ನೀಡಿಲ್ಲ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ. ವೇದ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು