ಎಚ್‌ಡಿಕೆಗೆ ವಿಶ್ವಾಸ ತುಂಬಿದ ಮೋದಿ– ರಾಹುಲ್ ಒಡನಾಟ!

7

ಎಚ್‌ಡಿಕೆಗೆ ವಿಶ್ವಾಸ ತುಂಬಿದ ಮೋದಿ– ರಾಹುಲ್ ಒಡನಾಟ!

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೆಹಲಿ ಯಾತ್ರೆ  ಹೊಸ ಹುರುಪು ಮತ್ತು ಆತ್ಮವಿಶ್ವಾಸ ತುಂಬಿದೆ.

‘ಮಂಕು ಬಡಿದ ರಾಜ್ಯ ರಾಜಕೀಯ ವಾತಾವರಣದಲ್ಲಿ ಒಂದು ವರ್ಷ ಅಧಿಕಾರದಲ್ಲಿ ಉಳಿಯಬಹುದು ಎಂದು ಹೇಳುತ್ತಿದ್ದವರು, ಈಗ ಪೂರ್ಣ ಐದು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ’ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ.

‘ದೇಶದ ದಿಗ್ಗಜ ರಾಜಕಾರಣಿಗಳೊಂದಿಗೆ ಮೊದಲ ಬಾರಿಗೆ ಒಡನಾಡಿದ್ದು, ಮಹತ್ವದ ನಾಯಕ ಎಂಬುದಾಗಿ ಅವರು ಬಣ್ಣಿಸಿರುವುದು ಮುಖ್ಯಮಂತ್ರಿಯವರಲ್ಲಿ ಪರಿವರ್ತನೆಗೆ ಕಾರಣವಾಗಿದೆ’ ಎಂದು ಕುಮಾರಸ್ವಾಮಿಯವರ ಆಪ್ತ ಮೂಲಗಳು ತಿಳಿಸಿವೆ.

‘ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಕೇಳಿದ ತಕ್ಷಣ ಅನುಮತಿ ನೀಡಿದ್ದು ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಜತೆಗಿನ ಆಪ್ತ ಮಾತುಕತೆ ಕುಮಾರಸ್ವಾಮಿ ಅವರ ವಿಶ್ವಾಸ ಹೆಚ್ಚಿಸಿದೆ’ ಎಂದು ಮೂಲಗಳು ಹೇಳಿವೆ.

‘ಅಧಿಕಾರ ಸ್ವೀಕರಿಸಿದ ದಿನದಿಂದಲೂ ರಾಜ್ಯ ರಾಜಕೀಯದಲ್ಲಿ ಒಂದು ರೀತಿಯ ಒತ್ತಡ ಮತ್ತು ಆತಂಕದ ದಿನಗಳನ್ನೇ ಎದುರಿಸಿದ್ದ ಮುಖ್ಯಮಂತ್ರಿ, ನೀತಿ ಆಯೋಗದ ಸಭೆಗೆ ದೆಹಲಿಗೆ ಹೋಗಿದ್ದಾಗ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತುಕತೆ ನಡೆಸಿ ಅವರಲ್ಲಿ ವಿಶ್ವಾಸ ತುಂಬಿದರು’ ಎಂದು ಮೂಲಗಳು ಹೇಳಿವೆ.

ಈ ವಿಷಯವನ್ನು ಮಂಗಳವಾರ ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪಿಸಿದ ಕುಮಾರಸ್ವಾಮಿ, ‘ನೀತಿ ಆಯೋಗದ ಸಭೆಗೆ ಹೋದಾಗ, ಪ್ರಧಾನಿ ಆದಿಯಾಗಿ ಎಲ್ಲ ನಾಯಕರು ನನ್ನನ್ನು ಗೌರವದಿಂದ ನಡೆಸಿಕೊಂಡರು. ಇದು ನನಗೆ ವೈಯಕ್ತಿಕವಾಗಿ ಸಿಕ್ಕ ಗೌರವ ಎನ್ನುವುದಕ್ಕಿಂತಲೂ ನಾಡಿನ ಜನರಿಗೆ ಸಿಕ್ಕ ಗೌರವ’ ಎಂದು ಹೇಳಿದರು.

 ‘ಪ್ರಧಾನಿ ಜತೆ ಮಾತುಕತೆ ಮುಖ್ಯಮಂತ್ರಿ ಅವರಲ್ಲಿ ಸಾಕಷ್ಟು ಹುರುಪು ತುಂಬಿತು. ಕರ್ನಾಟಕದ ರಾಜಕೀಯದ ಬಗ್ಗೆ ಹೆಚ್ಚು ಪ್ರಸ್ತಾಪಿಸದೇ ಕುಮಾರಸ್ವಾಮಿ ಮತ್ತು ದೇವೇಗೌಡರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು. ದೇಶದ ರಾಜಕಾರಣದಲ್ಲಿ ದೇವೇಗೌಡರ ಕೊಡುಗೆಯ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿ, ಲಿವಿಂಗ್‌ ಎನ್‌ಸೈಕ್ಲೊಪೀಡಿಯಾ ಎಂದು ಬಣ್ಣಿಸಿದರು’ ಎಂದು ಆಪ್ತ ಮೂಲಗಳು ಹೇಳಿವೆ.

ಪ್ರಧಾನಿ ಜತೆ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಇಬ್ಬರೂ ನಾಯಕರು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದರು. ಕೆಲವು ವಿಚಾರಗಳನ್ನು ಕುಮಾರಸ್ವಾಮಿ ತಮ್ಮ ಆಪ್ತರ ಬಳಿಯೂ ಹಂಚಿಕೊಳ್ಳಲಿಲ್ಲ. ಅವುಗಳನ್ನು ಹೇಳಿದರೆ ಬೇರೆ ರೀತಿಯ ವ್ಯಾಖ್ಯಾನಕ್ಕೆ ಎಡೆಯಾಗಬಹುದು ಎಂಬ ಕಾರಣಕ್ಕೆ ಹೇಳಿಕೊಂಡಿಲ್ಲ ಎನ್ನಲಾಗಿದೆ.

‘ಫಿಟ್ನೆಸ್‌ ಚಾಲೆಂಜ್‌’ಗೆ ಸಂಬಂಧಿಸಿದಂತೆ ತಾವು ನೀಡಿದ ಉತ್ತರ ಮಾಧ್ಯಮಗಳಲ್ಲಿ ನಕಾರಾತ್ಮಕವಾಗಿ ಬಿಂಬಿತವಾದ ಬಗ್ಗೆ ಪ್ರಧಾನಿಯವರ ಬಳಿ ಕುಮಾರಸ್ವಾಮಿ ಪ್ರಸ್ತಾಪಿಸಿದಾಗ, ‘ಅವೆಲ್ಲವನ್ನು ನಾನು ಮನಸ್ಸಿಗೆ ತೆಗೆದುಕೊಂಡಿಲ್ಲ ಮರೆತುಬಿಡಿ’ ಎಂದು ಹೇಳಿದ್ದಾಗಿ ಆಪ್ತ ಮೂಲಗಳು ತಿಳಿಸಿವೆ.

 ಕಸ ನೋಡಿ ತಲೆ ತಗ್ಗಿಸುವ ಹಾಗೆ ಆಗಿದೆ: ಮುಖ್ಯಮಂತ್ರಿ

'ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸ ನೋಡಿ ತಲೆ ತಗ್ಗಿಸುವ ಹಾಗಾಗಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಇದಕ್ಕೆಲ್ಲ ಕಸದ ಮಾಫಿಯಾ ಕಾರಣವೆಂಬುದು ಗೊತ್ತು. ಅದನ್ನು ಮಟ್ಟ ಹಾಕುತ್ತೇನೆ’ ಎಂದು ಅವರು ಸೋಮವಾರ ಮಾಧ್ಯಮ ಸಂದರ್ಶನದಲ್ಲಿ ಕಠಿಣ ಎಚ್ಚರಿಕೆ ನೀಡಿದರು.

‘ಕಸದ ಮಾಫಿಯಾ, ಮರಳು ಮಾಫಿಯಾದ ಒತ್ತಡಗಳಿಗಾಗಲಿ ಮಣಿಯುವ ಪ್ರಶ್ನೆಯೇ ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ಭೀಮಾತೀರದ ಹಂತಕರ ನಡುವಿನ ಹೊಡೆದಾಟ, ಕೊಲೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 27

  Happy
 • 3

  Amused
 • 1

  Sad
 • 4

  Frustrated
 • 4

  Angry

Comments:

0 comments

Write the first review for this !