ಮೂರು ರಾಜ್ಯ ಗೆದ್ದವರಿಗೆ ಗದ್ದುಗೆ ಹಾದಿ ಸುಗಮ

ಮಂಗಳವಾರ, ಜೂನ್ 18, 2019
29 °C
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ ಸರಕಾರ ರಚನೆ ಅವಕಾಶ ಹೆಚ್ಚು

ಮೂರು ರಾಜ್ಯ ಗೆದ್ದವರಿಗೆ ಗದ್ದುಗೆ ಹಾದಿ ಸುಗಮ

Published:
Updated:

ನವದೆಹಲಿ: ‘ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ ಬಹುಮತ ಪಡೆದು ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ’ ಎಂದು ಬಹುತೇಕ ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದರೂ ವಿರೋಧಪಕ್ಷಗಳು ಈ ಸಮೀಕ್ಷೆಗಳನ್ನು ಪೂರ್ಣವಾಗಿ ಸ್ವೀಕರಿಸಲು ಸಿದ್ಧವಿಲ್ಲ.

ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯದಲ್ಲಿ ಬಿಜೆಪಿಯು ಈ ಬಾರಿ ನಿರೀಕ್ಷೆಗಿಂತ ಉತ್ತಮ ಸಾಧನೆ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವಿರೋಧಪಕ್ಷಗಳು ಹೊಂದಿರುವುದರಿಂದ, ಅವು ಈ ಮೂರು ರಾಜ್ಯಗಳ ಮೇಲೆ ಹೆಚ್ಚಿನ ಗಮನ ನೆಟ್ಟಿವೆ.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿಯು ಗಮನಾರ್ಹ ಸಾಧನೆ ಮಾಡಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಒಂದು ಸಮೀಕ್ಷೆಯಂತೂ ಈ ರಾಜ್ಯದ ‘42ರಲ್ಲಿ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ’ ಎಂದೂ ಹೇಳಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿಯ ಓಟಕ್ಕೆ ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮಹಾಮೈತ್ರಿ ತಡೆಯೊಡ್ಡಲಿದೆ ಎಂದು ಚುನಾವಣೆಗೂ ಮುನ್ನ ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಸಮೀಕ್ಷೆಗಳು ಇದನ್ನು ತಳ್ಳಿಹಾಕಿವೆ. ರಾಜ್ಯದಲ್ಲಿ ಬಿಜೆಪಿಗೆ ತೀರ ಕೆಟ್ಟ ಸ್ಥಿತಿ ಬರಲಾರದು ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಒಂದು ಸಮೀಕ್ಷೆಯಂತೂ ‘ಉತ್ತರಪ್ರದೇಶದಲ್ಲಿ ಬಿಜೆಪಿ 68 ಸ್ಥಾನಗಳನ್ನು ಗೆಲ್ಲಬಹುದು’ ಎಂದು ಅಂದಾಜಿಸಿದೆ. ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿರುವ ಇನ್ನೊಂದು ರಾಜ್ಯವೆಂದರೆ ಒಡಿಶಾ.

ಆದರೆ, ‘ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದು ಹೇಳಲು ಪೂರಕವಾದ ಅಂಶಗಳೇ ಕಾಣಿಸುತ್ತಿಲ್ಲ’ ಎಂದು ವಿರೋಧಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

‘ಮತಗಟ್ಟೆ ಸಮೀಕ್ಷೆಗಳು ನೀಡಿರುವ ಅಂಕಿ–ಅಂಶಗಳನ್ನು ನಾವು ನಂಬುವುದಿಲ್ಲ. ಆದರೆ, ಸಮೀಕ್ಷೆಗಳು ಈ ರಾಜ್ಯಗಳಲ್ಲಿ ಬಿಜೆಪಿಗೆ ನೀಡಿರುವ ಸ್ಥಾನಗಳು ನಮ್ಮಲ್ಲಿ ಕುತೂಹಲ ಹೆಚ್ಚಿಸಿವೆ ಮತ್ತು ಫಲಿತಾಂಶಕ್ಕಾಗಿ ಕಾತರದಿಂದ ಕಾಯುವಂತೆ ಮಾಡಿವೆ’ ಎಂದು ವಿರೋಧಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ರಾಜಸ್ಥಾನ, ಮಧ್ಯ ಪ್ರದೇಶದಂಥ ರಾಜ್ಯದಲ್ಲಿ ಕಾಂಗ್ರೆಸ್‌ ಒಂದು ಅಥವಾ ಎರಡು ಸ್ಥಾನಗಳಿಗೆ ಸೀಮಿತವಾಗಲಿದೆ ಎಂಬ ವರದಿಯನ್ನು ಒಪ್ಪಲು ಸಹ ಅವರು ಸಿದ್ಧರಿಲ್ಲ.

ಸಿಎಸ್‌ಡಿಎಸ್‌ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯು, ‘ಉತ್ತರಪ್ರದೇಶದಲ್ಲಿ ಎನ್‌ಡಿಎಗೆ ಶೇ 44ರಷ್ಟು ಮತ್ತು ಮಹಾಮೈತ್ರಿಗೆ ಶೇ 41ರಷ್ಟು ಮತಗಳು ಲಭಿಸಲಿವೆ’ ಎಂದು ಅಂದಾಜಿಸಿದೆ.

ಅದರಂತೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಶೇ 39 ಮತ್ತು ಬಿಜೆಪಿಗೆ ಶೇ 37 ಮತಗಳು, ಒಡಿಶಾದಲ್ಲಿ ಬಿಜೆಪಿ ಶೇ 42 ಮತ್ತು ಬಿಜೆಡಿಗೆ ಶೇ 40ರಷ್ಟು ಮತಗಳು ಬರಲಿವೆ ಎಂದು ಅಂದಾಜಿಸಿದೆ.

ಮೈತ್ರಿ ಯತ್ನ ಆರಂಭ

ವಿರೋಧಪಕ್ಷಗಳವರು ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌, ಬಿಜೆಡಿಯಂಥ ಪಕ್ಷಗಳನ್ನು ಸಂಪರ್ಕಿಸಿ ಬಿಜೆಪಿಗೆ ಪರ್ಯಾಯವಾಗಿ ಹೊಸ ಮೈತ್ರಿಯನ್ನು ರಚಿಸುವ ಪ್ರಯತ್ನವನ್ನು ಈಗಾಗಲೇ ಆರಂಭಿಸಿದ್ದಾರೆ. ಈ ಮೂರೂ ಪಕ್ಷಗಳ ಮುಖಂಡರ ಜೊತೆ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಬಿಜೆಡಿಯ ಮುಖ್ಯಸ್ಥ ನವೀನ್ ಪಟ್ನಾಯಕ್‌ ಜೊತೆ ಸಂಪರ್ಕದಲ್ಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷವು ಇತರ ಪ್ರಾದೇಶಿಕ ಪಕ್ಷಗಳವರ ಜೊತೆಗೆ ಮಾತುಕತೆ ನಡೆಸುವ ಹೊಣೆಯನ್ನು ಅಹ್ಮದ್‌ ಪಟೇಲ್‌, ಅಶೋಕ್‌ ಗೆಹ್ಲೋಟ್‌ ಹಾಗೂ ಪಿ. ಚಿದಂಬರಂ ಅವರಿಗೆ ವಹಿಸಿದೆ ಎಂದೂ ತಿಳಿದುಬಂದಿದೆ.

***

ಬಿಜೆಡಿಯ ಕಾದುನೋಡುವ ತಂತ್ರ

ಭುವನೇಶ್ವರ: ಕೇಂದ್ರದಲ್ಲಿ ಯಾವುದೇ ಮೈತ್ರಿಕೂಟಕ್ಕೆ ಬೆಂಬಲಿಸುವ ಬಗ್ಗೆ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರವೇ ಬಿಜೆಡಿ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷವು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

‘ಕೇಂದ್ರದಲ್ಲಿ ನಾವು ಸರ್ಕಾರ ರಚಿಸುವುದಿಲ್ಲ. ನಾವು ಎನ್‌ಡಿಎ ಜತೆಗಾಗಲೀ, ಯುಪಿಎ ಜತೆಗಾಗಲೀ ಇಲ್ಲ. ನಮ್ಮ ನೆರವು ಬೇಕಿದ್ದರೆ, ಅವರೇ ನಮ್ಮ ಬಳಿ ಬರಬೇಕು. ನಾವು ಯಾರ ಬಳಿಯೂ ಹೋಗುವ ಅವ್ಯಕತೆ ಇಲ್ಲ. ಯಾರಾದರೂ ನೆರವು ಕೇಳಿದರೆ, ಸೂಕ್ತ ಸಂದರ್ಭದಲ್ಲಿ ಪಕ್ಷವು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಬಿಜೆಡಿ ವಕ್ತಾರ ಪ್ರತಾಪ್ ದೇವ್ ಹೇಳಿದ್ದಾರೆ.

ಆದರೆ ಪಕ್ಷದ ಕೆಲವು ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕಾಂಗ್ರೆಸ್‌ ನೇತೃತ್ವದ ಯಾವುದೇ ಮೈತ್ರಿಕೂಟದ ಜತೆ ನಾವು ಹೋಗುವುದಿಲ್ಲ. ಬಿಜೆಡಿ ಅಸ್ತಿತ್ವಕ್ಕೆ ಬಂದದ್ದೇ ಕಾಂಗ್ರೆಸ್ ಅನ್ನು ವಿರೋಧಿಸಿ. ಹೀಗಿದ್ದಾಗ ನಾವು ಕಾಂಗ್ರೆಸ್‌ ಜತೆ ಹೋದರೆ ನಮ್ಮ ಮತಬ್ಯಾಂಕ್‌ಗೆ ಹೊಡೆತ ಬೀಳಲಿದೆ. ಆದರೆ ಏನು ಮಾಡಬೇಕು ಎಂದು ನಮ್ಮ ಪಕ್ಷದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಬಿಜೆಡಿಯ ಮತ್ತೊಬ್ಬ ನಾಯಕ ಹೇಳಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟದ ಜತೆ ಗುರುತಿಸಿಕೊಂಡಿಲ್ಲ. ಎರಡೂ ಮೈತ್ರಿಕೂಟಗಳಿಂದ ಸಮಾನ ಅಂತರ ಕಾಯ್ದುಕೊಂಡಿದೆ. ಚುನಾವಣೆಗೂ ಮುನ್ನ ಹಲವು ಭಿನ್ನಾಭಿಪ್ರಾಯಗಳ ಕಾರಣದಿಂದ ಬಿಜೆಪಿ ವಿರುದ್ಧ ಬಿಜೆಡಿ ಅಸಮಾಧಾನಗೊಂಡಿತ್ತು. ಒಡಿಶಾದಲ್ಲಿ ಬಿಜೆಪಿಯೇ ಬಿಜೆಡಿಗೆ ಬದ್ಧ ಪ್ರತಿಸ್ಪರ್ಧಿ. ಆದರೆ ಫೋನಿ ಚಂಡಮಾರುತದ ನಂತರ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರರನ್ನು ಹೊಗಳಿಕೊಂಡಿದ್ದಾರೆ. ಹೀಗಾಗಿ ಬಿಜೆಡಿಯು ಎನ್‌ಡಿಎ ಸೇರಬಹುದು ಎಂಬ ವದಂತಿಯೂ ಚಾಲ್ತಿಯಲ್ಲಿದೆ.

– ಎಸ್‌.ಟಿ.ಬೇವೂರಿಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !