ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

ಮಂಗಳವಾರ, ಜೂನ್ 18, 2019
24 °C
ಇಂದು ಸಂಜೆ 6ಕ್ಕೆ ಪ್ರಕಟವಾಗಲಿದೆ ಎಕ್ಸಿಟ್‌ಪೋಲ್

ಲೋಕಸಭಾ ಚುನಾವಣೆ: ಫಲಿತಾಂಶಕ್ಕೆ ದಿಕ್ಸೂಚಿಯಾಗಲಿದೆಯೇ ಮತಗಟ್ಟೆ ಸಮೀಕ್ಷೆ?

Published:
Updated:

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ಸಂಪನ್ನಗೊಳ್ಳಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಧಿಕಾರ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಇದರ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆ (ಚುನಾವಣೋತ್ತರ ಸಮೀಕ್ಷೆ / ಎಕ್ಸಿಟ್‌ಪೋಲ್) ವರದಿಗಳು ಏನು ಹೇಳಲಿವೆ? ಅವು ನಿಜವಾಗಲಿದೆಯಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

ಮತಗಟ್ಟೆ ಸಮೀಕ್ಷೆ ಎಂದರೇನು? ಇದು ಪ್ರಕಟ/ಪ್ರಸಾರವಾಗಲು ಆರಂಭವಾಗಿದ್ದು ಯಾವಾಗ? ಇವು ಎಷ್ಟು ಬಾರಿ ನಿಜವಾಗಿವೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚುನಾವಣೆಯ ಸಂದರ್ಭದಲ್ಲಿ ಜನರ ಒಲವು ಯಾವ ಪಕ್ಷ, ಅಭ್ಯರ್ಥಿ, ಮೈತ್ರಿಕೂಟದ ಕಡೆಗಿತ್ತು ಎಂಬುದನ್ನು ಸಮೀಕ್ಷೆಯ ಮೂಲಕ ಅರಿಯುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದಿದೆ. 80ರ ದಶಕದಲ್ಲೇ ಮತದಾರರ ಒಲವು ಅರಿಯುವ ಸಲುವಾಗಿ ಒಪೀನಿಯನ್ ಪೋಲ್ ನಡೆಸಿದ್ದರು ಪತ್ರಕರ್ತ ಪ್ರಣಯ್ ರಾಯ್. ಆರಂಭದಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಮತಗಟ್ಟೆ ಸಮೀಕ್ಷೆ ವರದಿಗಳು 90ರ ದಶಕದಲ್ಲಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಲು ಆರಂಭವಾವದವು. ಸಾಮಾನ್ಯವಾಗಿ, ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಸಮೀಕ್ಷೆ ನಡೆಸಲಾಗುತ್ತದೆ. ಕೊನೆಯ ಹಂತದ ಮತದಾನ ನಡೆದ ಬಳಿಕ ಸುದ್ದಿವಾಹಿನಿಗಳು ಮತಗಟ್ಟೆ ಸಮೀಕ್ಷೆ ವರದಿ ಪ್ರಸಾರ ಮಾಡುತ್ತವೆ.

ಮತಗಟ್ಟೆ ಸಮೀಕ್ಷೆ ವರದಿ ಪ್ರಸಾರದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ದೂರದರ್ಶನ, 1996ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ. ಆಗ ಸಿಎಸ್‌ಡಿಎಸ್‌ (ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌) ನಡೆಸಿದ ಮತಗಟ್ಟೆ ಸಮೀಕ್ಷೆ ಆಧಾರದಲ್ಲಿ ದೂರದರ್ಶನ ವರದಿ ಪ್ರಸಾರ ಮಾಡಿತ್ತು.

ಇದನ್ನೂ ಓದಿ: ಮತಗಟ್ಟೆ ಸಮೀಕ್ಷೆಗಳು ಎಷ್ಟರಮಟ್ಟಿಗೆ ನಿಜವಾಗಿವೆ?​

ಸಿಎಸ್‌ಡಿಎಸ್‌ ಮತಗಟ್ಟೆ ಸಮೀಕ್ಷೆಯು ಅತಂತ್ರ ಲೋಕಸಭೆ ನಿರ್ಮಾಣವಾಗುವ ಭವಿಷ್ಯ ನುಡಿದಿತ್ತು. ಅದು ನಿಜವೂ ಆಗಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದರು. ಆದರೆ, ಬಿಜೆಪಿ ನೇತೃತ್ವದ ಸರ್ಕಾರ 13 ದಿನಗಳಲ್ಲೇ ಪತನಗೊಳ್ಳಬೇಕಾಯಿತು.

1998ರ ಲೋಕಸಭೆ ಚುನಾವಣೆ ಬಳಿಕ ದೇಶದ ಪ್ರಮುಖ ಸುದ್ದಿವಾಹಿನಿಗಳೆಲ್ಲ ಮತಗಟ್ಟೆ ಸಮೀಕ್ಷೆ ವರದಿ ಪ್ರಸಾರ ಮಾಡಿದವು. ಎನ್‌ಡಿಎಯು ಬಹುಮತದ ಸನಿಹ ಬರಲಿದೆಯಾದರೂ ಸ್ಪಷ್ಟ ಬಹುಮತಕ್ಕೆ ಕೆಲವು ಸ್ಥಾನಗಳು ಕಡಿಮೆಯಾಗಬಹುದು ಎಂದು ಇಂಡಿಯಾ ಟುಡೆ, ಸಿಎಸ್‌ಡಿಎಸ್, ಡಿಆರ್‌ಎಸ್, ಔಟ್‌ಲುಕ್, ಎಸಿ ನೀಲ್ಸನ್, ಫ್ರಂಟ್‌ಲೈನ್, ಸಿಎಂಎಸ್‌ ಮತಗಟ್ಟೆ ಸಮೀಕ್ಷೆಗಳು ತಿಳಿಸಿದ್ದವು. ಈ ಸಮೀಕ್ಷೆಗಳಲ್ಲಿ ಎನ್‌ಡಿಎಗೆ 214ರಿಂದ 249 ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ 145ರಿಂದ 164 ಸ್ಥಾನ ದೊರೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಮತಗಟ್ಟೆ ಸಮೀಕ್ಷೆಗಳನ್ನು ಚುನಾವಣೆಗೆ ಮೊದಲು ನಡೆಸಲಾಗಿತ್ತು. ಕೊನೆಗೆ ಫಲಿತಾಂಶ ಪ್ರಕಟವಾದಾಗ ಎನ್‌ಡಿಎ 252 ಸ್ಥಾನಗಳನ್ನೂ ಕಾಂಗ್ರೆಸ್ 166 ಸ್ಥಾನಗಳನ್ನೂ ಗಳಿಸಿದ್ದವು.

ಇಂತಹದ್ದೇ ಮತಗಟ್ಟೆ ಸಮೀಕ್ಷೆಗಳನ್ನು 1999ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ನಡೆಸಲಾಗಿತ್ತು. ಹೆಚ್ಚಿನೆಲ್ಲ ಸಮೀಕ್ಷೆಗಳು ಎನ್‌ಡಿಎಗೆ ಭರ್ಜರಿ ಗೆಲುವು ಸಾಧಿಸಲಿದೆ ಎಂದೇ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೆ, ಎಚ್‌ಟಿ–ಎಸಿ ನೀಲ್ಸನ್, ಟೈಮ್ಸ್‌ಪೋಲ್, ಡಿಆರ್‌ಎಸ್, ಪಯೊನೀರ್–ಆರ್‌ಡಿಐ ಮತ್ತು ಔಟ್‌ಲುಕ್, ಸಿಎಂಎಸ್ ಸಮೀಕ್ಷೆಗಳು ಬಿಜೆಪಿ ಮತ್ತು ಮಿತ್ರ‍ಕ್ಷಗಳು 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದಿದ್ದವು. ಎನ್‌ಡಿಎಗೆ ಬಹುಮತವೇನೋ ದೊರೆಯಿತು. ಆದರೆ 300ರ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು 132–150 ಸ್ಥಾನ ಗೆಲ್ಲಬಹುದು ಎಂಬ ಮತಗಟ್ಟೆ ಸಮೀಕ್ಷೆ ಬಹುತೇಕ ನಿಜವಾಗಿತ್ತು. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು 134 ಸ್ಥಾನ ಗಳಿಸಿದ್ದವು. ಆದರೆ, ತೃತೀಯ ರಂಗದ ಲೆಕ್ಕಾಚಾರವನ್ನು ಅಂದಾಜಿಸುವಲ್ಲಿ ಸಮೀಕ್ಷೆಗಳು ವಿಫಲವಾಗಿದ್ದವು. ಸಮೀಕ್ಷೆಗಳ ಪ್ರಕಾರ 34–95 ಸ್ಥಾನ ಗಳಿಸಬೇಕಿದ್ದ ತೃತೀಯರಂಗ ಅಸಲಿಗೆ 113 ಸ್ಥಾನ ಗಳಿಸಿತ್ತು.

2004, 2009ರಲ್ಲಿ ತಲೆಕೆಳಗಾಯ್ತು ಲೆಕ್ಕಾಚಾರ

2004ರ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಮತದಾರರ ಮನದಾಳ ಅರಿಯುವಲ್ಲಿ ಮತಗಟ್ಟೆ ಸಮೀಕ್ಷೆಗಳು ಬಹುದೊಡ್ಡ ಸೋಲನುಭವಿಸಿದವು. ‘ಇಂಡಿಯಾ ಶೈನಿಂಗ್’ ಎಂಬ ಧ್ಯೇಯವಾಕ್ಯದೊಂದಿಗೆ ಚುನಾವಣೆ ಎದುರಿಸಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿದ್ದವು. ಆದರೆ, ಎನ್‌ಡಿಎ ಕೇವಲ 189 ಸ್ಥಾನ ಗಳಿಸಿತ್ತು. 222 ಸ್ಥಾನ ಗಳಿಸಿದ ಕಾಂಗ್ರೆಸ್ ಮೈತ್ರಿಕೂಟವು ಎಡ‍ಪಕ್ಷಗಳು, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತು.

2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಮತಗಟ್ಟೆ ಸಮೀಕ್ಷೆಗಳು ಮತ್ತೆ ಸೋತವು. ಎನ್‌ಡಿಎ ಮತ್ತು ಯುಪಿಎ ನಡುವೆ ಸಮಾನವಾದ ಸ್ಪರ್ಧೆ ಏರ್ಪಡಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು. ಯುಪಿಎಗೆ 199 ಮತ್ತು ಎನ್‌ಡಿಎಗೆ 197 ಸ್ಥಾನ ದೊರೆಯಲಿವೆ ಎಂದು ನೀಲ್ಸನ್ ಸಮೀಕ್ಷೆ ಹೇಳಿತ್ತು. ಆದರೆ, ಯುಪಿಎಗೆ 262 ಸ್ಥಾನಗಳು ದೊರೆತು ಎನ್‌ಡಿಎ 159ಕ್ಕೆ ಕುಸಿದಿತ್ತು.

ನಿಜವಾಯ್ತು 2014ರ ಸಮೀಕ್ಷೆ

ನರೇಂದ್ರ ಮೋದಿ ಅಲೆಯ ಪರಿಣಾಮವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಮತಗಟ್ಟ ಸಮೀಕ್ಷೆಗಳು ಅಭಿಪ್ರಾಯಪಟ್ಟಿದ್ದವು. ಒಂದು ಸಮೀಕ್ಷೆಯಂತೂ ಬಿಜೆಪಿಗೆ 291 ಸ್ಥಾನ ಮತ್ತು ಎನ್‌ಡಿಎಗೆ 340 ಸ್ಥಾನ ದೊರೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಫಲಿತಾಂಶ ಪ್ರಕಟವಾದಾಗ ಬಿಜೆಪಿಗೆ 282 ಸ್ಥಾನ ದೊರೆತು ಎನ್‌ಡಿಎಗೆ 336 ಸ್ಥಾನ ದೊರೆತಿತ್ತು. ಸಮೀಕ್ಷೆ ಬಹುತೇಕ ನಿಜವಾಗಿತ್ತು.

ಆದಾಗ್ಯೂ, ಕಾಂಗ್ರೆಸ್‌ ನೇತೃತ್ವದ ಯುಪಿಎ ಸ್ಥಾನಗಳ ಬಗ್ಗೆ ನಿಖರವಾಗಿ ಅಂದಾಜಿಸುವಲ್ಲಿ ಸಮೀಕ್ಷೆಗಳು ವಿಫಲವಾದವು. ಯುಪಿಎ 97ರಿಂದ 135 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿತ್ತು. ಆದರೆ, ಕಾಂಗ್ರೆಸ್‌ ಕೇವಲ 44 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಯುಪಿಎಗೆ ಕೇವಲ 59 ಸ್ಥಾನ ದೊರೆತಿತ್ತು.

ಪ್ರಸಕ್ತ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಸಂಜೆಯಷ್ಟರಲ್ಲಿ ಮತಗಟ್ಟೆ ಸಮೀಕ್ಷೆಯ ವರದಿಗಳು ಪ್ರಕಟಗೊಳ್ಳಲಿವೆ. ಇವು ಎಷ್ಟು ನಿಜವಾಗಲಿವೆ ಎಂಬುದನ್ನು ತಿಳಿಯಬೇಕಾದರೆ ಮೇ 23ರವರೆಗೂ ಕಾಯಲೇಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !