ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಪಡೆಯದು: ಕುಮಾರಸ್ವಾಮಿ ವಾಗ್ದಾಳಿ

ಶನಿವಾರ, ಏಪ್ರಿಲ್ 20, 2019
27 °C

ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಪಡೆಯದು: ಕುಮಾರಸ್ವಾಮಿ ವಾಗ್ದಾಳಿ

Published:
Updated:

ಕಾರವಾರ: ‘ಈ ಬಾರಿ ಮೋದಿ ನೇತೃತ್ವದ ಬಿಜೆಪಿ, ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಕಿಚಡಿ ಎಂದು ಹೇಳಿದ್ದ ಅವರು, ಖುದ್ದು ಭೇಟಿ ನೀಡಿ 13 ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಒಂದು ನಾಲ್ಕು ಜನ ರಸ್ತೆಯಂಚಲ್ಲಿ ನಿಂತು ಮೋದಿ ಮೋದಿ ಎಂದು ಕೂಗಿದ ಮಾತ್ರಕ್ಕೆ ಆಗಲ್ಲ. ಜನ ಈ ಬಗ್ಗೆ ಚರ್ಚಿಸ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ್ ಗುರುವಾರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೂ ಮೊದಲು ಹಮ್ಮಿಕೊಂಡ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರ ಮಾತುಗಳನ್ನು ಕೇಳಿದರೆ ಅವರ ಸಂಸ್ಕೃತಿ ತಿಳಿಯುತ್ತದೆ. ಹಿಂದೂ ಸಂಸ್ಕೃತಿಯ ಪರಿಪಾಲಕರು ಎಂದು ಬಿಂಬಿಸಿಕೊಂಡು ಅನಾಗರಿಕ ಶಬ್ದಗಳನ್ನು ಬಳಕೆ ಮಾಡುತ್ತಾರೆ. ಅನಾಗರಿಕರೂ ಅಂತಹ ಶಬ್ದಗಳನ್ನು ಬಳಕೆ ಮಾಡುವುದಿಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಗೂ ರಕ್ಷಣೆ ನೀಡುವ ಸಂವಿಧಾನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಉದ್ಧಟತನದ ಮಾತನಾಡುತ್ತಾರೆ. ಐದು ಅವಧಿಗೆ ಆಯ್ಕೆಯಾದ ಅವರಿಂದ ಜಿಲ್ಲೆಗೆ ಕೊಡುಗೆಯೇನು’ ಎಂದು ಪ್ರಶ್ನಿಸಿದರು.

‘ವಿಧಾನಸಭೆ ಚುನಾವಣೆಗೆ ಮೊದಲು ಕರಾವಳಿಯಲ್ಲಿ ಹಿಂದುಳಿದ ಸಮುದಾಯದ ಯುವಕನೊಬ್ಬನ ಅನುಮಾನಾಸ್ಪದ ಸಾವಾಯಿತು. ಅದರ ಹಿಂದಿನ ಚಿತಾವಣೆಯೇನು?. ಅವನ ಬಲಿ ಪಡೆದು ಬಿಜೆಪಿ ನಾಯಕರು, ಹಿಂದುಳಿದ ಸಮಾಜದ ಯುವಕರನ್ನು ಮುಂದೆ ಬಿಟ್ಟು ತಮ್ಮ ರಾಜಕೀಯ ಉನ್ನತಿ ಮಾಡಿಕೊಂಡರು’ ಎಂದು ಟೀಕಿಸಿದರು.

ಜಿಲ್ಲೆಯ ಜನರ ಕ್ಷಮೆಯಾಚನೆ: ‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾತನಾಡುತ್ತ ಪಕ್ಷ ಅಧಿಕಾರಕ್ಕೆ ಬಂದರೆ ಎರಡು ತಿಂಗಳಲ್ಲಿ ಜಿಲ್ಲೆಗೆ ಬಂದು ಅರಣ್ಯ ಒತ್ತುವರಿಕಾರರ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದೆ. ಆದರೆ, ಅದಾಗಲಿಲ್ಲ. ಬಿಜೆಪಿ ಮುಖಂಡರು ಮುಕ್ತವಾಗಿ ಮೈತ್ರಿ ಸರ್ಕಾರವನ್ನು ನಡೆಸಲು ಅವಕಾಶ ನೀಡಲಿಲ್ಲ. ಹಾಗಾಗಿ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಜಿಲ್ಲೆಯ ಕ್ಷಮೆ ಕೋರುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಚಿವ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಗೈರು ಹಾಜರಾದರು.

ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್, ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್, ವಿಧಾನಪರಿಷತ್ ಸದಸ್ಯ ಘೊಟ್ನೆಕರ್, ಮುಖಂಡರಾದ ಯು.ಆರ್.ಸಭಾಪತಿ, ಶಾರದಾ ಶೆಟ್ಟಿ, ಜೆ.ಡಿ.ನಾಯ್ಕ, ಶಶಿಭೂಷಣ ಹೆಗಡೆ, ಮಂಕಾಳ ವೈದ್ಯ ಸೇರಿದಂತೆ ಜೆಡಿಎಸ್‌, ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !