ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲ್ಲದಿದ್ದರೆ ಯಾರಾಗಬಹುದು ಮುಂದಿನ ಪ್ರಧಾನಿ?

Last Updated 20 ಮೇ 2019, 5:16 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಇಂದು ಮುಗಿದಿದೆ. 2014ರಲ್ಲಿ ಎನ್‌ಡಿಎ ಅರಧಿಕಾರಕ್ಕೇರುವ ಬಗ್ಗೆ ಸ್ಪಷ್ಟತೆಯಿತ್ತು. ಆದರೆ ಈ ಬಾರಿ ಹಾಗಲ್ಲ. ಅತಂತ್ರ ಲೋಕಸಭೆ ಸೃಷ್ಟಿಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೊಸ ಮಿತ್ರರ ಸ್ವಾಗತಕ್ಕೆ ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಾಗಲೇ ಘೋಷಿಸಿಕೊಂಡಿದ್ದಾರೆ.ಈ ಮಧ್ಯೆ, ಅತಂತ್ರ ಫಲಿತಾಂಶ ಬಂದರೆ ಉನ್ನತ ನಾಯಕತ್ವದ ರೇಸ್‌ನಲ್ಲಿ ತಾನಿಲ್ಲ ಎಂದು ಕಾಂಗ್ರೆಸ್ ಸಹ ಹೇಳಿದೆ. ಹೀಗಾಗಿ ಪ್ರಾದೇಶಿಕ ಪಕ್ಷಗಳ ನಾಯಕರೂ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಯಾದಿಯಲ್ಲಿ ಕಾಣಸಿಕೊಂಡಿದ್ದಾರೆ. 1996ರ ರೀತಿಯ ಫಲಿತಾಂಶ ಬಂದರೆ ಚಂದ್ರಬಾಬು ನಾಯ್ಡು (ಟಿಡಿಪಿ), ಕೆ.ಚಂದ್ರಶೇಖರ ರಾವ್ (ಟಿಆರ್‌ಎಸ್), ಮಾಯಾವತಿ (ಬಿಎಸ್‌ಪಿ) ಮತ್ತು ಮಮತಾ ಬ್ಯಾನರ್ಜಿ (ಟಿಎಂಸಿ) ಹೆಸರು ಪ್ರಧಾನಿ ಹುದ್ದೆಗೆ ಕೇಳಿಬಂದರೂ ಅಚ್ಚರಿಯಿಲ್ಲ. ಹೀಗಾಗಿ ಮೋದಿ ಅಲ್ಲದಿದ್ದರೆ ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.

ಏನೆಲ್ಲ ಸಾಧ್ಯತೆಗಳು?

ಮೊದಲನೆಯದಾಗಿ;ಬಿಜೆಪಿಗೆ ಸ್ಪಷ್ಟ ಬಹುಮತ ಬರಬಹುದು. ಹೀಗಾದರೆ ಮುಂದಿನ ಪ್ರಧಾನಿ ಯಾರೆಂಬ ಪ್ರಶ್ನೆಯೇ ಉದ್ಭವಿಸದು. ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಬಹುದು.

ಎರಡನೆಯದಾಗಿ:ಬಿಜೆಪಿ 200ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿ ಎನ್‌ಡಿಎ ಮಿತ್ರ‍ಕ್ಷಗಳ ನೆರವನ್ನು ಪಡೆಯಬೇಕಾಗಿ ಬಂದಾಗಲೂ ಮೋದಿ ಅವರಿಗೆ ಹೆಚ್ಚೇನೂ ಹಿನ್ನಡೆಯಾಗದು. ಆರ್‌ಎಸ್‌ಎಸ್‌ನ ಮಧ್ಯಸ್ಥಿಕೆ, ಮಿತ್ರ ಪಕ್ಷಗಳ ಸಹಕಾರದೊಂದಿಗೆ ಅವರೇ ಮತ್ತೆ ಪ್ರಧಾನಿಯಾಗಬಹುದು. ಶಿವಸೇನಾ ಮತ್ತು ಜೆಡಿಯು ಸಹ ಮೋದಿಯವರನ್ನು ತಡೆಯುವಲ್ಲಿ ಯಶಸ್ವಿಯಾಗುವುದು ಅನುಮಾನವಿದೆ.

ಸಾಧ್ಯತೆ 3:ಬಿಜೆಪಿ 180ರಷ್ಟು ಸ್ಥಾನಗಳನ್ನು ಗಳಿಸಿ ಎನ್‌ಡಿಎ 220–250 ಸ್ಥಾನಗಳನ್ನು ಗಳಿಸಿದರೆ ಆಗ ಹೊಸ ಮಿತ್ರರನ್ನು ಹುಡುಕಬೇಕಾಗಲಿದೆ. ಹೊಸ ಮಿತ್ರಪಕ್ಷಗಳು ಬೆಂಬಲ ನೀಡುವ ವೇಳೆ ಮೋದಿ ಅವರ ನಾಯಕತ್ವ ವಿರೋಧಿಸಿದರೂ ಅಚ್ಚರಿಯಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಪರ್ಯಾಯ ನಾಯಕರ ಆಯ್ಕೆ ಅನಿವಾರ್ಯವಾಗಲಿದ್ದು ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಹೆಸರು ಕೇಳಿಬರುವ ಸಾಧ್ಯತೆ ಇದೆ.

ಸಾಧ್ಯತೆ 4:ಎನ್‌ಡಿಎಗೆ 220ಕ್ಕಿಂತಲೂ ಕಡಿಮೆ ಸ್ಥಾನ ದೊರೆತು, ಕಾಂಗ್ರೆಸ್ 125ರಷ್ಟು ಸ್ಥಾನ ಗೆದ್ದು ಯುಪಿಎ 170ಕ್ಕಿಂತ ಹೆಚ್ಚು ಮತ್ತು ಇತರರು 160–170 ಸ್ಥಾನ ಗಳಿಸಿದರೆ ಬಿಜೆಪಿಗೆ ಸರ್ಕಾರ ರಚನೆ ಹಕ್ಕು ಮಂಡಿಸುವುದು ಸಾಧ್ಯವಾಗದು. ಇಂತಹ ಸಂದರ್ಭ ಎದುರಾದರೆ ಎನ್‌ಡಿಎಯೇತರ ಪಕ್ಷಗಳು ಜತೆಯಾಗಿ ಸರ್ಕಾರ ರಚಿಸಲು ಮುಂದಾಗಬಹುದು. ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಬಹುದು. ಆದರೆ, ಈ ಮೈತ್ರಿ ಸದಾ ಅನಿಶ್ಚಿತತೆಯಲ್ಲೇ ಮುಂದುವರಿಯಬೇಕಾಗಬಹುದು.

ಸಾಧ್ಯತೆ 5:ಎನ್‌ಡಿಎ 220ಕ್ಕಿಂತಲೂ ಕಡಿಮೆ ಸ್ಥಾನ ಗಳಿಸಿ ಕಾಂಗ್ರೆಸ್/ಯುಪಿಎ 100/160ರಷ್ಟು ಸ್ಥಾನ ಪಡೆದು ಇತರರು 170ರಷ್ಟು ಸ್ಥಾನ ಗೆದ್ದರೆ 1996ರ ಪರಿಸ್ಥಿತಿ ನಿರ್ಮಾಣವಾಗಲಿದೆ. 1996ರಲ್ಲಿ ದೇವೇಗೌಡರು ಪ್ರಧಾನಿಯಾದಂತೆ ಈಗ ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಅಂತಹ ಅವಕಾಶಗಳು ದೊರೆತರೂ ದೊರೆಯಬಹುದು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿಯೂ ಸರ್ಕಾರ ರಚನೆಯ ಕಸರತ್ತು ಮಾಡದಿರದು ಎನ್ನಲಾಗದು. ಎಲ್ಲ ಪ್ರಾದೇಶಿಕ ಪಕ್ಷಗಳೂ ಬಿಜೆಪಿಗೆ ವಿರುದ್ಧವಾಗಿಲ್ಲ. ಬಿಜೆಡಿಯಂತಹ ಪಕ್ಷಗಳ ನೆರವು ಬಿಜೆಪಿಗೆ ದೊರೆತರೂ ದೊರೆಯಬಹುದು.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯಂತೂ ಪ್ರಧಾನಿ ಹುದ್ದೆ ಆಕಾಂಕ್ಷಿ ಎಂಬುದನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಲಿ, ಅವರಿಗೇ ನಮ್ಮ ಬೆಂಬಲ ಎಂದು ಈಗಾಗಲೇ ಘೋಷಿಸಿದ್ದಾರೆ.

ಚಾಲ್ತಿಯಲ್ಲಿದೆ ಇವರೆಲ್ಲರ ಹೆಸರು...

ನಿತಿನ್ ಗಡ್ಕರಿ

ಆರ್‌ಎಸ್‌ಎಸ್‌ ಬೆಂಬಲವಿದ್ದು, ಪ್ರಧಾನಿ ಹುದ್ದೆ ಯಾದಿಯಲ್ಲಿ ಗಡ್ಕರಿ ಹೆಸರು ಈ ಹಿಂದೆ ಕೆಲವು ಬಾರಿ ಕೇಳಿಬಂದಿದೆ. ಆದರೆ ಎನ್‌ಡಿಎಗೆ ಸ್ಪಷ್ಟಬಹುಮತ ಬಂದರೆ ಗಡ್ಕರಿಗೆ ಅವಕಾಶ ದೊರೆಯದು. ಮೋದಿ, ಅಮಿತ್ ಶಾ ಕಾರ್ಯವೈಖರಿ ಮಧ್ಯೆ ಇವರಿಗೆ ಸ್ಥಾನ ದೊರೆಯುವುದು ಕಷ್ಟ. ಪಕ್ಷದೊಳಗೆ ಮತ್ತು ಮಿತ್ರಪಕ್ಷಗಳಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದರೂ ಮಾಸ್ ಲೀಡರ್ ಅಲ್ಲ ಎಂಬುದು ಇವರಿಗೆ ಹಿನ್ನಡೆಯಾಗಲಿದೆ. ಮೋದಿ, ಅಮಿತ್ ಶಾ ನಾಯಕತ್ವ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್ ಅವರನ್ನು ಮುಖ್ಯಮಂತ್ರಿ ಮಾಡಿದ ಬಳಿಕ ರಾಜ್ಯದಲ್ಲಿಯೂ ಗಡ್ಕರಿ ಪ್ರಭಾವ ಕಡಿಮೆ ಎನ್ನಲಾಗಿದೆ.

ರಾಜನಾಥ್ ಸಿಂಗ್

ಉತ್ತರ ಪ್ರದೇಶದ ರೈತ ನಾಯಕ ಎಂದು ಬಿಂಬಿಸಿಕೊಂಡಿರುವ ಮತ್ತು ಸದ್ಯ ಸರ್ಕಾರದ ಎರಡನೇ ಅತ್ಯುನ್ನತ ಹುದ್ದೆಯಲ್ಲಿರುವ ರಾಜನಾಥ್ ಸಿಂಗ್ ಹೆಸರು ಸಹ ಪ್ರಧಾನಿ ಹುದ್ದೆಗೆ ಕೇಳಿಬರುವ ಸಾಧ್ಯತೆಗಳಿವೆ. ಬಹಳ ಹಿಂದಿನಿಂದಲೂ ಆರ್‌ಎಸ್‌ಎಸ್‌ ಜತೆ ಸಂಪರ್ಕ ಹೊಂದಿರುವ ಇವರಿಗೆ ಅನೇಕ ನಾಯಕರ ಬೆಂಬಲವೂ ಇದೆ. ಮೋದಿ ಸರ್ಕಾರದ ಮೊದಲ ಮೂರು ವರ್ಷ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ‘ರೈತ ವಿರೋಧಿ ನರೇಂದ್ರ ಮೋದಿ’ ಅಭಿಯಾನವನ್ನು ಸಮರ್ಥವಾಗಿ ಎದುರಿಸಲು ಪಕ್ಷವು ರಾಜನಾಥ್ ಅವರನ್ನೇ ನಿಯೋಜಿಸಿತ್ತು ಎಂಬುದೂ ಗಮನಾರ್ಹ.

ಸುಷ್ಮಾ ಸ್ವರಾಜ್

ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ ಆಪ್ತೆಯಾಗಿರುವ ಸುಷ್ಮಾ ಅವರು ನರೇಂದ್ರ ಮೋದಿ ಅವರು ಮುನ್ನೆಲೆಗೆ ಬಂದ ಬಳಿಕ ತುಸು ಕಡೆಗಣನೆಗೆ ಒಳಗಾದರು. ಮೋದಿ ನಾಯಕತ್ವವನ್ನು ಅಡ್ವಾಣಿ ಅವರು ವಿರೋಧಿಸಿದ ಬಳಿಕ ಸುಷ್ಮಾಗೆ ಹಿನ್ನಡೆಯಾಯಿತು ಎನ್ನಲಾಗುತ್ತಿದೆ. ಇವರು ಈ ಬಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ಸುಷ್ಮಾ ಅವರ ತಂದೆ ಹರದೇವ್‌ ಶರ್ಮಾ ಆರ್‌ಎಸ್‌ಎಸ್ ನಾಯಕರಾಗಿದ್ದರು. ಆದರೂ ಇವರಿಗೆ ಆರ್‌ಎಸ್‌ಎಸ್‌ ಜತೆ ಪ್ರಬಲ ನಂಟಿಲ್ಲ. ಇಂದಿರಾ ಗಾಂಧಿ ಅವರ ಬಳಿಕ ವಿದೇಶಾಂಗ ಸಚಿವೆಯಾಗಿ ಕಾರ್ಯನಿರ್ವಹಿಸಿದ ಮತ್ತೊಬ್ಬ ಮಹಿಳೆ ಸುಷ್ಮಾ. ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಲ್ಲದೆ ಅನೇಕ ಮಂದಿಗೆ ನೆರವಾದ ಹೆಗ್ಗಳಿಕೆ ಇವರದ್ದು. ಇದಕ್ಕಾಗಿ ಪ್ರತಿಪಕ್ಷಗಳ ಅನೇಕ ನಾಯಕರೂ ಸುಷ್ಮಾ ಅವರ ಬಗ್ಗೆ ಮೆಚ್ಚುಗೆಯ ಹಲವು ಬಾರಿ ಮಾತುಗಳನ್ನಾಡಿದ್ದಾರೆ.

ರಾಹುಲ್ ಗಾಂಧಿ

ಕಾಂಗ್ರೆಸ್‌ಗೆ ಗಣನೀಯ ಸಂಖ್ಯೆಯ ಸ್ಥಾನಗಳು, ಕನಿಷ್ಠ 150ಕ್ಕಿಂತ ಹೆಚ್ಚು ದೊರೆತರೆ ಮಾತ್ರ ರಾಹುಲ್ ಗಾಂಧಿಗೆ ಅವಕಾಶ ದೊರೆಯಬಹುದು. ಇಲ್ಲದಿದ್ದಲ್ಲಿ ಗಾಂಧಿ ಕಟುಂಬದವರು ಪ್ರಧಾನಿಯಾಗುವುದು ಸುಲಭವಲ್ಲ. ಇಂತಹ ಸ್ಥಿತಿಯಲ್ಲಿ ಒಂದು ವೇಳೆ ರಾಹುಲ್ ಪ್ರಧಾನಿಯಾದರೂ ಮಿತ್ರಪಕ್ಷಗಳನ್ನು ಸಂಭಾಳಿಸಲು ಹರಸಾಹಸಪಡಬೇಕಾಗಬಹುದು.

ಮಮತಾ ಬ್ಯಾನರ್ಜಿ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಂತರ ಅತಿ ಹೆಚ್ಚಿನ ಸ್ಥಾನ ಗಳಿಸಿವು ನಿರೀಕ್ಷೆಯಲ್ಲಿದೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ. ಮಮತಾಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಉತ್ತಮ ಬಾಂಧವ್ಯವಿದೆ. ‘ಇವರನ್ನು ಪ್ರಧಾನಿಯಾಗಿ ಮಾಡುವುದರಿಂದ ಸಮಾಜಕ್ಕೆ ಯಾವುದೇ ರೀತಿಯ ಗಟ್ಟಿ ಸಂದೇಶ ಸಾರಿದಂತಾಗದು ಮತ್ತು ಕಾಂಗ್ರೆಸ್, ಬಿಜೆಪಿಗೂ ಯಾವುದೇ ಲಾಭವಾಗದು. ಆಕ್ರಮಣಶೀಲ ವ್ಯಕ್ತಿತ್ವದ ಕಾರಣ ಮೈತ್ರಿಕೂಟವನ್ನು ಮುನ್ನಡೆಸಲು ಇತರ ಪಕ್ಷಗಳ ಆಯ್ಕೆ ಮಮತಾ ಆಗಿರುವ ಸಾಧ್ಯತೆ ಕಡಿಮೆ’ ಎಂಬುದುರಾಜಕೀಯ ಪರಿಣಿತರ ಅಭಿಪ್ರಾಯ.

ಮಾಯಾವತಿ

ಉತ್ತರ ಪ್ರದೇಶದಲ್ಲಿ ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಈ ಬಾರಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ, ಈ ಬಾರಿ ಉತ್ತರ ಪ್ರದೇಶದವರೇ ಪ್ರಧಾನಿಯಾಗಬೇಕು ಎಂದಿದ್ದಾರೆ ಎಸ್‌ಪಿ ಮುಖಂಡ ಅಖಿಲೇಶ್ ಯಾದವ್. ಆದರೆ, ದಲಿತ ನಾಯಕಿ ಮಾಯಾವತಿ ಅವರನ್ನು ಪ್ರಧಾನಿ ಹುದ್ದೆಗೆ ಅನುಮೋದಿಸಿದರೆ ತಮ್ಮದೇ ಪಕ್ಷದಲ್ಲಿರುವ ದಲಿತ ನಾಯಕರಿಂದ ಬಂಡಾಯ ಎದುರಿಸಬೇಕಾಗಿ ಬರಬಹುದು ಎಂಬ ಆತಂಕ ಇತರ ಪಕ್ಷಗಳಲ್ಲಿದೆ ಎನ್ನಲಾಗಿದೆ.

ಚಂದ್ರಬಾಬು ನಾಯ್ಡು

1990ರಲ್ಲಿ ಯುನೈಟೆಡ್ ಫ್ರಂಟ್‌ ಸರ್ಕಾರದ ರಾಷ್ಟ್ರೂಯ ಸಂಚಾಲಕರಾಗಿದ್ದ ಚಂದ್ರಬಾಬು ನಾಯ್ಡು ಈ ಬಾರಿ ಸಕ್ರಿಯರಾಗಿದ್ದಾರೆ. ಬಿಜೆಪಿಯೇತರ ಸರ್ಕಾರ ರಚನೆಗಾಗಿ ಈಗಾಗಲೇ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತಡೆ ನಡೆಸಿದ್ದಾರೆ. ಕಾಂಗ್ರೆಸ್ ಅಸ್ತಿತ್ವವೇ ಹೊಂದಿಲ್ಲದೆ ಇರುವ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸುತ್ತಿರುವುದು ಅವರಿಗೆ ವರದನಾವಾಗಲಿದೆ. ನಾಯ್ಡು ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸುವ ಮೂಲಕ ಆಂಧ್ರದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಕಾಂಗ್ರೆಸ್ ಯತ್ನಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ನವೀನ್ ಪಟ್ನಾಯಕ್

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಹೀಗಾಗಿ ಅನಿವಾರ್ಯ ಸಂದರ್ಭ ಎದುರಾದರೆ ಅವರು ಉಭಯ ಪಕ್ಷಗಳ ಆಯ್ಕೆಯಾಗಿರುವ ಸಾಧ್ಯತೆ ಇದೆ. ‘ಫೋನಿ’ ಚಂಡಮಾರುತದ ಸಂರ್ಭ ನವೀನ್ ಪಟ್ನಾಯಕ್ ಆಡಳಿತ ನಿರ್ವಹಿಸಿದ ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಹೊಗಳಿದ್ದರು. ಪ್ರಮುಖ ಮಸೂದೆಗಳಿಗೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಪಟ್ನಾಯಕ್ ಅವರ ಬಿಜೆಡಿ‍ಪಕ್ಷ ನೆರವಾಗಿದೆ. ಆದರೆ, ಅವರ ಪ್ರಭಾವ ಒಡಿಶಾಕ್ಕಷ್ಟೇ ಸೀಮಿತವಾಗಿರುವುದು ಗಮನಾರ್ಹ.

ಸಾಧ್ಯತೆ, ಕುತೂಹಲ ಏನೇ ಇದ್ದರೂ ಅಂತಿಮ ಉತ್ತರಕ್ಕೆಮೇ 23ರವರೆಗೆ ಕಯಲೇಬೇಕು. ಅಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT