ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗಲಲ್ಲಿ ಬ್ಯಾಗು, ಕಾಲಲ್ಲಿ ಚಕ್ರ

Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹೆಸರು ನಾಗರಾಜ್‌, ವಯಸ್ಸು 70, ವಾಸ ಬೆಂಗಳೂರು. ಚಟದಂತಹ ಹವ್ಯಾಸ ಲೋಕಸಂಚಾರ. ವರ್ಷಕ್ಕೆ ನಾಲ್ಕೈದು ಬಾರಿಯಾದರೂ ವಿದೇಶಕ್ಕೆ ವಿಮಾನ ಹತ್ತುತ್ತಾರೆ. ಹಾಗೆಂದು ದೊಡ್ಡ ಬಿಸಿನೆಸ್‌ಮ್ಯಾನ್‌ ಅಲ್ಲ. ವಿದೇಶಗಳಲ್ಲಿ ಯಾವ ಕಾರುಬಾರೂ ಇಲ್ಲ. ‘ದೇವರು ಸೃಷ್ಟಿಸಿದ ಈ ಜಗತ್ತಿನ ಎಲ್ಲ ದೇಶಗಳನ್ನೂ ಕಣ್ಣಾರೆ ನೋಡಬೇಕು ಎನ್ನುವುದಷ್ಟೇ ನನ್ನ ಆಸೆ’ ಎನ್ನುವುದು ಇವರ ಟ್ಯಾಗ್‌ಲೈನ್‌. ಈಗಾಗಲೆ 49 ದೇಶಗಳನ್ನು ನೋಡಿಯಾಗಿದೆ. ಕಳೆದ ತಿಂಗಳು ವಿಯೆಟ್ನಾಂಗೆ ಹೋಗಿ ಬಂದರು. ಇನ್ನೀಗ ಅರ್ಜೆಂಟೀನಾ, ಬ್ರೆಜಿಲ್‌, ಚಿಲಿಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ.

ಮಂಗಳೂರಿನ ಕಾಟಿಪಳ್ಳದ ನಾಗರಾಜ್‌ ಬೆಂಗಳೂರಿಗೆ 70ರ ದಶಕದ ಆರಂಭದಲ್ಲಿ ಉದ್ಯೋಗ ಹುಡುಕಿಕೊಂಡು ಬಂದವರು. ‘ಕೈಯಲ್ಲಿ ಬಿಎ ಡಿಗ್ರಿ ಬಿಟ್ಟರೆ ಬಿಡಿಗಾಸೂ ಇರಲಿಲ್ಲ. ಕೇರ್‌ ಆಫ್‌ ಫುಟ್‌ಪಾತ್‌. ಟೈಪಿಂಗ್‌ ಗೊತ್ತಿತ್ತು. ಅಲ್ಲಲ್ಲಿ ಪಾರ್ಟ್‌ಟೈಮ್‌ ಟೈಪಿಸ್ಟ್‌ ಕೆಲಸ ಮಾಡಿದೆ. ಕೊನೆಗೆ ಬಾಡಿಗೆಗೆ ಟೈಪ್‌ರೈಟರ್‌ ಒಂದನ್ನು ತೆಗೆದುಕೊಂಡು ಡಿಸಿ ಕಚೇರಿಯ ಮುಂದೆ ಸ್ಟೂಲು ಹಾಕಿದೆ. ಆಗ ಟೈಪಿಸ್ಟ್‌ ಅಂತ ಅಲ್ಲಿದ್ದದ್ದೇ 3–4 ಜನ. ಸಂಪಂಗಿರಾಮ ನಗರದಲ್ಲಿ 8 ರೂಪಾಯಿ ಬಾಡಿಗೆಗೆ ರೂಮ್‌ ಹಿಡಿದೆ. ಹೆಗಲಲ್ಲಿ ಟೈಪ್‌ರೈಟರ್‌ ಹೊತ್ಕೊಂಡು ಡಿಸಿ ಆಫೀಸಿಗೆ ಬರುತ್ತಿದ್ದೆ. ದಿನಕ್ಕೆ 1–2 ರೂಪಾಯಿ ಸಂಪಾದನೆ. ಸಂಜೆ ಬಳಿಕ ಕೆಲವರ ಬಳಿಗೆ ಹೋಗಿ ಟೈಪಿಂಗ್‌ ಆರ್ಡರ್‌ ಪಡೆದುಕೊಂಡು ರಾತ್ರಿಯಿಡೀ ಟೈಪಿಸುತ್ತಿದ್ದೆ. ಕನ್ನಡ ಚಲನಚಿತ್ರಗಳ ಚಿತ್ರಕಥೆ ಹೊಡೆದುಕೊಟ್ಟದ್ದೂ ಉಂಟು. ಆಗಲೇ ಎಲ್‌ಎಲ್‌ಬಿ ಮಾಡಬೇಕೆಂದು ಒಂದು ವರ್ಷ ಮಣ್ಣು ಹೊತ್ತೆ. ದುಡ್ಡಿಲ್ಲದೆ ಕೈಬಿಟ್ಟೆ. ಆದರೆ ಟೈಪಿಂಗ್‌ ನನ್ನ ಕೈಬಿಡಲಿಲ್ಲ.ಕ್ರಮೇಣ ಹತ್ತಾರು ಜನರ ಪರಿಚಯವಾಯಿತು. ಬೆಂಗಳೂರಿನ ಭೂಮಿ ಕಾನೂನುಗಳ, ಸೈಟ್‌ ವ್ಯವಹಾರಗಳ ಒಳಹೊರಗು ಗೊತ್ತಾಯಿತು. ಈಗ ಬಿಡಿ ಸರ್‌, ನಾನು ಫೀಲ್ಡಲ್ಲಿ ಎಕ್ಸ್‌ಪರ್ಟ್‌. ದೊಡ್ಡದೊಡ್ಡವರೆಲ್ಲ ಸಲಹೆ ಕೇಳಿ ಬರುತ್ತಾರೆ. ಎಷ್ಟೋ ಜನರಿಗೆ ಲೇಔಟ್‌ಗಳನ್ನು ಮಾಡಿಸಿಕೊಟ್ಟಿದ್ದೇನೆ. ಸ್ವಂತಕ್ಕೊಂದು ಮಹಡಿ ಮನೆ ಕಟ್ಟಿಸಿದ್ದೇನೆ, ಸಾಕು. ದೇಶ ವಿದೇಶಗಳನ್ನು ಸುತ್ತುವುದೇ ನನ್ನ ಜೀವನದ ಪರಮಗುರಿ’– ಎನ್ನುತ್ತಾ ತಮ್ಮ ಬಯೊಡಾಟಾ ಬಿಚ್ಚಿಡುತ್ತಾರೆ.

ನಾಗರಾಜ್‌ ಬ್ರಹ್ಮಚಾರಿ, ಮದುವೆ ಆಗಿಲ್ಲ. ಆದರೆ ಒಬ್ಬರೇ ಲೋಕಸಂಚಾರ ಮಾಡುವುದಿಲ್ಲ ಅನ್ನುವುದು ವಿಶೇಷ. ಅವರದ್ದೊಂದು ಸ್ನೇಹಿತರ ಬಳಗವಿದೆ. ಒಮ್ಮೆ ವಿದೇಶಕ್ಕೆ ಹೊರಟರೆ ಗುಂಪಲ್ಲಿ 15ರಿಂದ 25 ಜನ ಇರುತ್ತಾರೆ. ನಾಲ್ಕೈದು ಜನ ಒಬ್ಬಂಟಿಗರು, ಉಳಿದವರು ಸಂಸಾರಸ್ಥರು. ಎಲ್ಲರ ವಯಸ್ಸೂ 60ರಿಂದ 85 ವರ್ಷ! ಇವರದ್ದು ಹಿರಿಯರ ಕ್ಯಾರವಾನ್‌!

‘ಯಾವೆಲ್ಲ ದೇಶಗಳನ್ನು ನೋಡಿದ್ದೀರಿ ಸಾರ್‌?’ ಎಂದು ಕೇಳಿದರೆ, ‘ಅಮೆರಿಕ, ಕೀನ್ಯಾ, ಇಂಗ್ಲೆಂಡ್‌, ಪೋಲಂಡ್‌, ಇಟಲಿ, ಸ್ವಿಟ್ಜರ್ಲೆಂಡ್, ನೆದರ್ಲೆಂಡ್‌, ಸ್ಪೇನ್‌, ಡೆನ್ಮಾರ್ಕ್‌, ಜೆಕ್‌ ರಿಪಬ್ಲಿಕ್‌, ಸ್ಲೊವಾಕಿಯಾ, ಟರ್ಕಿ, ದುಬೈ, ಚೀನಾ, ಟಿಬೆಟ್‌, ಕಾಂಬೋಡಿಯಾ, ಜಪಾನ್‌, ನ್ಯೂಜಿಲೆಂಡ್‌, ಜೋರ್ಡಾನ್‌, ಬಹಾಮಾಸ್‌, ದಕ್ಷಿಣ ಆಫ್ರಿಕಾ, ಫ್ರಾನ್ಸ್‌, ಬೆಲ್ಜಿಯಂ, ವ್ಯಾಟಿಕನ್‌, ಜರ್ಮನಿ, ಆಸ್ಟ್ರಿಯಾ, ನಾರ್ವೆ, ಸ್ವೀಡನ್‌, ಹಂಗರಿ, ಗ್ರೀಸ್‌, ರಷ್ಯಾ... ಹೀಗೆ ನೆನಪಿಸುತ್ತಾ ಹೋದರು! ಈಗೀಗ ಮರೆವು ಜಾಸ್ತಿ. ‘ಆಮೇಲೆ ಫೋಟೊಗಳನ್ನು ನೋಡಿ ಪಟ್ಟಿ ಕಳಿಸುತ್ತೇನೆ’ ಎಂದರು. ಅವರು ಕಳಿಸಿದ ಪಟ್ಟಿ ನೋಡಿದರೆ ವಿಯೆಟ್ನಾಂಗೆ ಹೋಗಿದ್ದು 49ನೇ ದೇಶ. ಭಾರತದ ಸುತ್ತಮುತ್ತಲ ಕೆಲವು ದೇಶಗಳಿಗೆ 2–3 ಸಲ ಹೋಗಿ ಬಂದಿದ್ದಾರೆ. ಈಗ ಅವರದ್ದು ಅರ್ಧಶತಕದ ಸಂಭ್ರಮ.

‘ಮೊದಲು ಇಡೀ ಭಾರತ ಸುತ್ತಿದೆ. ತಮಿಳುನಾಡಿನಿಂದ ಶುರು. ಭಾರತದ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಸ್ಥಳ ಯಾವುದನ್ನೂ ಬಿಟ್ಟಿಲ್ಲ. ನೇಪಾಳದಿಂದ ವಿದೇಶ ಯಾತ್ರೆ ಶುರು. 70ರಲ್ಲೂ ಕೈಕಾಲು ಗಟ್ಟಿಯಾಗಿದೆ. ಮುಂದಿನ ವರ್ಷ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಕ್ಕೆ ಹೋಗಿಬರಬೇಕು ಸಾರ್‌’– ಕಣ್ಣರಳಿಸಿದರು ನಾಗರಾಜ್‌.

‘ತುಂಬ ಹಣ ಖರ್ಚಾಗುತ್ತಲ್ಲ ಸಾರ್‌?’ ಎಂಬ ಪ್ರಶ್ನೆಗೆ ನಕ್ಕರು ನಾಗರಾಜ್‌. ‘ನನಗೆ ಖರ್ಚಿಲ್ಲ. ತುಂಡು, ಗುಂಡು, ಸಿಗರೇಟು ಮುಟ್ಟಲ್ಲ. ಮೊಸರನ್ನ, ಬಾಳೆಹಣ್ಣು, ಬಿಸ್ಕತ್‌ ಸಿಕ್ಕರೆ ಅದೇ ಪರಮಾನ್ನ. ನನ್ನದು ಐಶಾರಾಮಿ ಪ್ರವಾಸವಲ್ಲ. ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಕಡಿಮೆ ಬೆಲೆಯ ವಿಮಾನಯಾನ, ಹೋಟೆಲ್‌ ಬುಕಿಂಗ್‌ ಸಿಗುತ್ತದೆ. ನಿಮಗೆ ಪರಸ್ಥಳಗಳನ್ನು ನೋಡಲೇಬೇಕೆಂಬ ಅದಮ್ಯ ಆಸೆ ಇದ್ದರೆ ಎಲ್ಲವೂ ಸುಲಭ’ ಎಂದರು.

‘ಸದಾ ನೆನಪಾಗುವ ಊರು?’ ಎಂದು ಕೇಳಿದೆ. ‘ಕಾಂಬೋಡಿಯಾದ ದೇವಾಲಯ, ಟರ್ಕಿಯಲ್ಲಿ ನೋಡಿದ ನೀಲಿ ಮಸೀದಿ ಮತ್ತು ವ್ಯಾಟಿಕನ್‌ ಭವ್ಯ ಚರ್ಚ್‌’ ಎಂದರು. ‘ಎಲ್ಲ ದೇಶಗಳ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ಸ್ನಾನ ಮಾಡಿದ್ದೇನೆ. ಮಾನಸ ಸರೋವರ ಮತ್ತು ಕೈಲಾಸ ಪರ್ವತದ ಎದುರು ಬೆಳದಿಂಗಳಲ್ಲಿ ರಾತ್ರಿಯಿಡೀ ಕಳೆದದ್ದು ಮರೆಯಲಾಗದ ಅದ್ಭುತ ಅನುಭವ!’

ಪ್ಯಾರಿಸ್‌ನಲ್ಲಿ ಐಫೆಲ್‌ ಟವರ್‌ಗೆ ಹೋದಾಗ ಭಾರೀ ಜನಜಂಗುಳಿ. ಮೇಲಕ್ಕೆ ಹತ್ತಲು ಲಿಫ್ಟ್‌ ಬಳಿ ಬಂದರೆ ಎಂಟ್ರಿ ಕ್ಲೋಸ್‌. ‘ಮೇಲೆ ಸಿಕ್ಕಾಪಟ್ಟೆ ಜನಸಂದಣಿ. ಇವತ್ತಿಗೆ ಇನ್ಯಾರನ್ನೂ ಬಿಡುವುದಿಲ್ಲ’ ಎಂದರು. ಬಹುದೂರದಿಂದ ಬಂದಿದ್ದೀವೆಂದು ಅಂಗಲಾಚಿದರೂ ಅಧಿಕಾರಿ ಜಪ್ಪೆನ್ನಲಿಲ್ಲ. ಇವರು ಹೋಗಿ, ‘ನೋಡಿ ಸಾರ್‌, ಎಲ್ಲರೂ ಸೀನಿಯರ್‌ ಸಿಟಿಜನ್ಸ್‌. ಮುಂದಿನ ವರ್ಷ ಬದುಕಿರ್ತೀವೋ ಇಲ್ಲವೋ ಗೊತ್ತಿಲ್ಲ. ಜೀವನದಲ್ಲಿ ಇನ್ನೊಮ್ಮೆ ಬರುವುದು ಕಷ್ಟ’ ಎಂದು ಕೈಮುಗಿದರು! ಆತ ಮನಕರಗಿ ಲಿಫ್ಟ್‌ ಬಾಗಿಲು ತೆಗೆದ!

‘ವಿದೇಶಗಳಲ್ಲಿ ಭಾಷೆ ಗೊತ್ತಿಲ್ಲದಿದ್ದರೂ ಸನ್ನೆಯ ಭಾಷೆ ನಡೆಯುತ್ತದೆ. ಅಲ್ಲಿನ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಜಪಾನ್‌ನವರ ಆತಿಥ್ಯ, ಯೂರೋಪಿಯನ್ನರ ನೈರ್ಮಲ್ಯ ನನ್ನ ಮನಸ್ಸಲ್ಲಿ ಗಾಢವಾಗಿ ಅಚ್ಚೊತ್ತಿದೆ. ಬಹಾಮಾಸ್‌ನ ಬೀಚ್‌ ಮನಮೋಹಕ. ನಮ್ಮ ಮೇಘಾಲಯ ಮತ್ತು ನಾಗಾಲ್ಯಾಂಡ್‌ ಜಗತ್ತಿನಲ್ಲೇ ಅತ್ಯಂತ ಸುಂದರ’ ಎನ್ನುವುದು ನಾಗರಾಜ್‌ರ ಸ್ಪಷ್ಟ ಅನ್ನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT