ಗುರುವಾರ , ಡಿಸೆಂಬರ್ 5, 2019
25 °C

ಬೋರನ ಕಣಿವೆ...ಇದು ತುಮಕೂರು ಜಿಲ್ಲೆಯ ಪ್ರವಾಸಿ ತಾಣ

Published:
Updated:

ಎರಡು ಹಸಿರು ಹೊದ್ದ ಗುಡ್ಡಗಳು. ನಡುವೆ ಒಂದು ಅಣೆಕಟ್ಟು. ಮುಂಭಾಗದಲ್ಲಿ ನೀರು ಧುಮ್ಮಿಕ್ಕಿ ಹರಿಯುಲು ಇಳಿಜಾರು. ಅಣೆಕಟ್ಟೆಯ ಹಿಂಭಾಗದಲ್ಲಿ ಕಣ್ಣು ಹಾಯಿಸಿದಷ್ಟು ಜಲರಾಶಿ !

ಇದು ಬೋರನಕಣಿವೆ ಎಂಬ ಪುಟ್ಟ ಜಲಾಶಯದ ವಿವರಣೆ. ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿಗೆ ಸೇರುವ ತಾಣ. ಹುಳಿಯಾರು – ಸಿರಾ ರಸ್ತೆಯಲ್ಲಿ ಹೊಯ್ಸಳಕಟ್ಟೆ ಗ್ರಾಮದ ಸಮೀಪದಲ್ಲಿದೆ. ಜಲಾಶಯ ನೋಡಬೇಕೆಂದರೆ ಮುಖ್ಯರಸ್ತೆಯಿಂದ ಸ್ವಲ್ಪ ದೂರ ಒಳಭಾಗಕ್ಕೆ ನಡೆದು ಹೋಗಬೇಕು.

ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ ಪುಟ್ಟ ಅಣೆಕಟ್ಟೆ ಇದು. ನೀರು ಭರ್ತಿಯಾಗಿ ಧುಮ್ಮಿಕ್ಕಿದರೆ, ಜಲಪಾತದ ರೀತಿ ಕಾಣುತ್ತದೆ. 2001ರಲ್ಲಿ ಈ ಜಲಾಶಯ ತುಂಬಿತ್ತು. ಇಂಥದ್ದೊಂದು ಜಲಧಾರೆಯನ್ನು ಇಲ್ಲಿ ಕಂಡಿದ್ದೆವು. ಅಲ್ಲಿಂದ ಇಲ್ಲಿವರೆಗೂ ಈ ಜಲಾಶಯ ಕೋಡಿ ಹರಿದಿಲ್ಲ. ಆದರೆ, ಮಳೆ ಬಂದಾಗಲೆಲ್ಲ, ಜಲಾಶಯದ ಸುತ್ತಲಿನ ವಾತಾವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಹೀಗಾಗಿ ಇದೊಂದು ಪುಟ್ಟ ಪಿಕ್‌ನಿಕ್‌ ತಾಣವಾಗಿದೆ.

ಇದನ್ನೂ ಓದಿ: ಪ್ರವಾಸಿಗರ ಕೈ ಬೀಸಿ ಕರೆಯಲಿದೆಯೇ ಕೇಬಲ್ ಕಾರ್?

ಮೈಸೂರು ಅರಸರ ಜನಪರ ಕಾಳಜಿಯಿಂದ ನಿರ್ಮಾಣಗೊಂಡ ಅಣೆಕಟ್ಟೆ ಇದು. ಮೈಸೂರಿನ ಅರಸರಾಗಿದ್ದ 10ನೇ ಚಾಮರಾಜ ಒಡೆಯರ್ ಕಾಲದಲ್ಲಿ (1885 ರಲ್ಲಿ ಆರಂಭ 1897ರಲ್ಲಿ ಪೂರ್ಣ) ಇದನ್ನು ಕಟ್ಟಿದ್ದಾರೆ. ಹಿರಿಯೂರಿನ ಮಾರಿಕಣಿವೆಗಿಂತ ಹತ್ತು ವರ್ಷ ಮುಂಚೆಯೇ ನಿರ್ಮಾಣವಾಗಿದೆ.

ಎಂಟು–ಹತ್ತು ವರ್ಷಗಳಿಂದೀಚೆಗೆ ಈ ತಾಣದ ಸಮೀಪದಲ್ಲಿ ಸಾಯಿಬಾಬಾ ಮಂದಿರವೊಂದು ನಿರ್ಮಾಣವಾಗಿದೆ. ಪಕ್ಕದ ಬೆಟ್ಟದಲ್ಲಿ ಪುಟ್ಟ ಉದ್ಯಾನವಿದೆ. ಇಲ್ಲಿ ನಿಂತು, ಜಲಾಶಯದ ಹಿನ್ನೀರನ್ನು ಕಣ್ಣು ತುಂಬಿಕೊಳ್ಳಬಹುದು. ರಜಾ ಅವಧಿಯಲ್ಲಿ ಒಂದು ದಿವಸದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಹೋಗುವುದು ಹೇಗೆ ?

ತುಮಕೂರು – ಸಿರಾ ಮೂಲಕ ಹೊಯ್ಸಳಕಟ್ಟೆ ತಲುಪಬಹುದು. ಚಿಕ್ಕನಾಯ್ಕನಹಳ್ಳಿ–ಹುಳಿಯಾರು ಮೂಲಕ ಹೊಯ್ಸಳಕಟ್ಟೆಗೆ ಬರಬಹುದು. ಇಲ್ಲಿಂದ ಆಟೊಗಳ ಮೂಲಕ ಬೋರನಕಣಿವೆಗೆ ಹೋಗಬಹುದು. ರಜೆ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು