ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಕೈ ಬೀಸಿ ಕರೆಯಲಿದೆಯೇ ಕೇಬಲ್ ಕಾರ್?

ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಯೋಜನೆ; ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಶಕೆ; ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆ
Last Updated 30 ಜೂನ್ 2017, 5:35 IST
ಅಕ್ಷರ ಗಾತ್ರ

ತುಮಕೂರು: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ‘ಕೇಬಲ್‌ ಕಾರ್‌’ ಅಳವಡಿಸುವ ಯೋಜನೆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಯಲ್ಲಿ ಹೊಸ ಶಕೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಏಕಶಿಲಾ ಬೆಟ್ಟ ಹಿರಿಮೆಯ ಮಧುಗಿರಿ, ಪ್ರವಾಸಿ ತಾಣವಾಗಿ ಈಗಾಗಲೇ ರಾಜ್ಯದ ಜನರ ಗಮನ ಸೆಳೆದಿದೆ. ಮೈದಣಿಸಿ ಬೆಟ್ಟ ಏರುವುದನ್ನು ಹಗುರಾಗಿಸುವ ಮತ್ತು ಎತ್ತರದಲ್ಲಿಯೇ ಬೆಟ್ಟ ಕಣ್ತುಂಬಿಕೊಳ್ಳಲು ಸಾಧ್ಯವಾಗುವ ಯೋಜನೆಯಿಂದ ಹೊರ ರಾಜ್ಯದ ಪ್ರವಾಸಿಗರನ್ನೂ ಸೆಳೆಯಲಿದೆ. ಈ ಯೋಜನೆಯಿಂದ ಸಹಜವಾಗಿ ಜಿಲ್ಲೆಯ ಇತರ ಪ್ರವಾಸಿ ತಾಣಗಳೂ ಅಭಿವೃದ್ಧಿಗೊಳ್ಳುತ್ತವೆ.

ದೇವರಾಯನದುರ್ಗ, ನಾಮದ ಚಿಲುಮೆ, ಸಿದ್ಧರಬೆಟ್ಟ, ಕೊರಟಗೆರೆಯ ಮಹಾಲಕ್ಷ್ಮಿ ದೇವಸ್ಥಾನ, ತೀತಾ ಜಲಾಶಯ, ಪಾವಗಡದ ಕೋಟೆಗಳು, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ಶಿರಾದ ಐತಿಹಾಸಿಕ ಸ್ಮಾರಕಗಳು ಮಧುಗಿರಿ ತಾಲ್ಲೂಕಿಗೆ ಹೊಂದಿಕೊಂಡಿರುವ ರಸ್ತೆಗಳಿಗೆ ಸಮೀಪದಲ್ಲಿಯೇ ಇವೆ. ಮಧುಗಿರಿಗೆ ಬರುವ ಪ್ರವಾಸಿಗರೂ ಈ ಸ್ಥಳಗಳಿಗೂ ಭೇಟಿ ನೀಡುವ ಅವಕಾಶ ಇರುತ್ತದೆ.

2015–16ರ ಬಜೆಟ್‌ನಲ್ಲಿಯೇ ರಾಜ್ಯ ಸರ್ಕಾರ  ನಂದಿಬೆಟ್ಟ, ಮಧುಗಿರಿ ಬೆಟ್ಟ, ಯಾದಗಿರಿ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಯೋಜನೆಗೆ  ₹ 100 ಕೋಟಿ ಮೀಸಲಿಟ್ಟಿದೆ. ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಬೇಕಿದೆ. ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಯೋಜನೆ ಜಾರಿಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಸ್ವಂತ ವೆಚ್ಚದಲ್ಲಿ ಕೋಲ್ಕತ್ತದಿಂದ ತಜ್ಞರ ತಂಡ ಕರೆಸಿ ಪ್ರಾಥಮಿಕ ಸಮೀಕ್ಷೆ ಸಹ ಮಾಡಿಸಿದ್ದಾರೆ.

ಎಲ್ಲಿಂದ ಕೇಬಲ್ ಕಾರ್: ಕಸಬಾ ಹೋಬಳಿಯ ಹರಿಹರರೊಪ್ಪ ಗ್ರಾಮದ ಸರ್ವೆ ನಂಬರ್ 7ರಲ್ಲಿ 9.20 ಎಕರೆ ಜಮೀನನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾಡಳಿತ ಮಂಜೂರು ಮಾಡಿದೆ. ಸರ್ಕಾರ ಗೊತ್ತು ಮಾಡುವ ಸ್ಥಳದಿಂದಲೇ ಕೇಬಲ್ ಕಾರ್ ಅಳವಡಿಸಲು ತಂತ್ರಜ್ಞರು ಒಪ್ಪುವರೇ ಎನ್ನುವ ಗೊಂದಲ ಆರಂಭದಲ್ಲಿ ಮನೆ ಮಾಡಿತ್ತು. ಆದರೆ ಅವುಗಳೆಲ್ಲದಕ್ಕೂ ಪರಿಹಾರ ಎನ್ನುವುಂತೆ ಜಿಲ್ಲಾಡಳಿತ ನೀಡಿದ ಜಮೀನಿನಿಂದಲೇ ಕೇಬಲ್ ಕಾರ್ ಅಳವಡಿಸಲು ಯಾವುದೇ ತೊಂದರೆ ಇಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ.

ಬೆಟ್ಟದ ಬುಡದಲ್ಲಿ ಕೆರೆ ನಿರ್ಮಿಸಿ ದೋಣಿ ವಿಹಾರ, ಜಲವಿಹಾರ, ಬೆಳಕು ಮತ್ತು ಸಂಗೀತದ ನೀರಿನ ಕಾರಂಜಿ, ವ್ಯವಸ್ಥೆ ಕಲ್ಪಿಸಬೇಕು. ವಿಶ್ರಾಂತಿ ಗೃಹಗಳು, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ಬಗೆಯ ವ್ಯಾಪಾರಕ್ಕೆ ಅನುಕೂಲವಾಗುವಂತೆ ವ್ಯಾಪಾರಿ ಬಜಾರು, ಧ್ಯಾನ ಮಂದಿರ, ಏರ್ ಬಲೂನ್, ಉದ್ಯಾನ, ಊಟ ಮತ್ತು ವಸತಿಸಹಿತ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಕೇಂದ್ರ, ಮಕ್ಕಳ ಆಟದ ಪಾರ್ಕ್, ಪ್ರವಾಸಿಗರ ವಿಶ್ರಾಂತಿ ತಾಣ, ಸಾಂಸ್ಕೃತಿಕ ಕೇಂದ್ರವನ್ನು ತೆರೆಯಬೇಕು ಎಂದು ಕೋಲ್ಕತ್ತಾದ ಮಾರ್ಕೆಟಿಂಗ್ ಕನ್ವೇಯರ್ ರೂಪ್‌ವೇ ಸರ್ವಿಸ್ ಸಂಸ್ಥೆಯ ಮಾರುಕಟ್ಟೆ ನಿರ್ವಹಣಾ ವಿಭಾಗದ ನಿರ್ದೇಶಕ ರೋಹಿತ್ ಸಾಹು ನೇತೃತ್ವದ ತಜ್ಞರ ತಂಡ ಪ್ರಾಥಮಿಕ ವರದಿ ನೀಡಿದೆ.

ಇವುಗಳಲ್ಲಿ ಅಲ್ಲಿನ ಸಾಧ್ಯತೆಗಳನ್ನು ನೋಡಿಕೊಂಡು ಯಾವುದನ್ನು ಜಾರಿಗೊಳಿಸಬಹುದೋ ಅದನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸಬಹುದು. ಇವುಗಳಲ್ಲಿ ಮುಕ್ಕಾಲು ವ್ಯವಸ್ಥೆಗಳು ಜಾರಿಯಾದರೂ ಜಿಲ್ಲೆಯಷ್ಟೇ ಅಲ್ಲದೆ ಸುತ್ತಲಿನ ಯಾವುದೇ ಪ್ರವಾಸಿ ತಾಣಗಳು ಹೊಂದದಷ್ಟು ಸೌಲಭ್ಯಗಳನ್ನು ಮಧುಗಿರಿ ಹೊಂದಲಿದೆ. 

ಸ್ಥಳೀಯರಿಗೆ ಅವಕಾಶ ಕಲ್ಪಿಸಲಿ: ‘ಕೇಬಲ್ ಕಾರ್ ಅಳವಡಿಕೆಯಿಂದ ರೈತರಿಗೆ ಅನುಕೂಲವೇನಿಲ್ಲ. ಆದರೆ ಗುಡಿ ಕೈಗಾರಿಕೆಗಳಿಗೆ ಮತ್ತು ಕರಕುಶಲಕರ್ಮಿಗಳಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗಿರಿಯ ಶಂಕರಪ್ಪ.
‘ಜಮೀನು ಇಲ್ಲದೆ ಸಣ್ಣಪುಟ್ಟ ಕಿರಾಣಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುವವರು ಮಧುಗಿರಿಯಲ್ಲಿಯೇ ಹಲವರು ಇದ್ದಾರೆ. ಅವರಿಗೆ ಮತ್ತು ಕರಕುಶಲ ಕರ್ಮಿಗಳಿಗೆ ಇಂತಿಷ್ಟು ಎಂದು ಬಾಡಿಗೆ ನಿಗದಿ ಮಾಡಿ ಯೋಜನಾ ಸ್ಥಳದಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಈ ರೀತಿ ಆದರೆ ಮಾತ್ರ ಸ್ಥಳೀಯರಿಗೆ ಅನುಕೂಲವಾಗಲಿದೆ’ ಎಂದು ಹೇಳುವರು.

‘ಈ ಭಾಗದಲ್ಲಿ ಶೇಂಗಾ ಪ್ರಮುಖ ಬೆಳೆ. ಹುರಿಗಡಲೆ ಸೇರಿದಂತೆ ಸ್ಥಳೀಯ ಸಂಪನ್ಮೂಲಗಳಿಗೆ ಮೌಲ್ಯ ಬರುವಂತೆ ಕಾರ್ಯಕ್ರಮ ರೂಪಿಸಿದರೆ
ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವ್ಯಾಪಾರ ವಹಿವಾಟು ಹೆಚ್ಚಳ: ‘ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಲಿದೆ. ಮಧುಗಿರಿ ಬೆಟ್ಟ ಈಗ ಕೆಲವು ಜನರಿಗೆ ಮಾತ್ರ ತಿಳಿದಿದೆ. ಹೊರಗಿನ ಜನರ ಪ್ರವೇಶದಿಂದ ಮತ್ತಷ್ಟು ಜನರಿಗೆ ಸ್ಥಳ ಪರಿಚಯವಾಗಲಿದೆ. ಕಾಫಿ, ತಿಂಡಿ ಸೇರಿದಂತೆ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗಲಿದೆ. ಪ್ರಮುಖವಾಗಿ ಹಣದ ಹರಿವು ಹೆಚ್ಚಲಿದೆ’ ಎಂದು ಸಾಹಿತಿ ಮ.ಲ.ನ.ಮೂರ್ತಿ ತಿಳಿಸುವರು.

**

ಅಧಿಕಾರಿಗಳಿಂದಲೇ ಅಡ್ಡಿ

‘ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಇಲಾಖೆಯ ಅಡ್ಡಿಯ ಕಾರಣಕ್ಕೆ ಟೆಂಡರ್ ಕರೆಯುವುದು ತಡವಾಗುತ್ತಿದೆ. ಸರ್ಕಾರ ಈಗಾಗಲೇ ಕೆಳಗಿನ ನಿಲ್ದಾಣಕ್ಕೆ ಜಮೀನು ಮಂಜೂರು ಮಾಡಿದೆ’ ಎಂದು  ಶಾಸಕ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದರು.

‘ಬೆಟ್ಟದಲ್ಲಿನ ಸ್ಮಾರಕದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಬಾರದು ಎಂದು ಪುರಾತತ್ವ ಇಲಾಖೆ ಮಾರ್ಗಸೂಚಿ ಇದೆ. ನಾವು ಇದನ್ನು ಒಪುತ್ತೇವೆ. ಆ ವ್ಯಾಪ್ತಿಯ ಹೊರಗೆ ಕಾಮಗಾರಿ ಆರಂಭಿಸುತ್ತೇವೆ ಎಂದರೂ ಅದಕ್ಕೂ ಅಡ್ಡಿಗಳನ್ನು ಮಾಡುತ್ತಿದ್ದಾರೆ’ ಎಂದು ಬೇಸರ ಮಾಡಿಕೊಂಡರು.

‘ಪುರಾತತ್ವ ಇಲಾಖೆಗೆ ತಮ್ಮ ವ್ಯಾಪ್ತಿ ಎಷ್ಟು ಎನ್ನುವ ಅರಿವೇ ಇಲ್ಲ. ತಮ್ಮ ಕಾರ್ಯವ್ಯಾಪ್ತಿಯ ಸರಿಯಾದ ಗಡಿಯನ್ನೇ ಗುರುತಿಸಿಲ್ಲ. ಮಧುಗಿರಿ ಬೆಟ್ಟವೇ ತಮ್ಮ ವ್ಯಾಪ್ತಿ ಎನ್ನುವ ನಿಲುವು ಹೊಂದಿದೆ’ ಎಂದು ಹೇಳಿದರು.

‘ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಬೇಕು. ಕೆಲಸಕ್ಕೆ ಚಾಲನೆ ದೊರೆತರೆ ಖಂಡಿತ ಖಾಸಗಿಯವರು ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೇ ನಾವು ಈ ಯೋಜನೆಯನ್ನು ಬಿಟ್ಟು ಕೊಡುತ್ತೇವೆ. ಬೇಕಿದ್ದರೆ ಅವರೇ ಮಾಡಲಿ. ಒಟ್ಟಿನಲ್ಲಿ ಯೋಜನೆ ಪೂರ್ಣವಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸಾಕು’ ಎಂದು ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT