ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಸ್‌ಬ್ರೂಕ್‌ನ ಐತಿಹಾಸಿಕ ಕಟ್ಟಡ ಗೋಲ್ಡನ್ ರೂಫ್

Last Updated 27 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಮುತ್ತು ಹೆಚ್ಚಾಗಿದ್ದರೆ, ಕೂದಲಿಗೆಲ್ಲಾ ಪೋಣಿಸಿಕೊಂಡ ನಂತೆ’ ಎಂಬ ಗಾದೆ ಇದೆಯಲ್ಲ. ಹಾಗೆ, ಇಲ್ಲೊಬ್ಬ ರಾಜ ಕಟ್ಟಡವೊಂದಕ್ಕೆ ಬಂಗಾರದ ಮಾಳಿಗೆಯನ್ನೇ ಮಾಡಿಸಿದ್ದಾನಂತೆ. ಈಗ ಅದು ಐತಿಹಾಸಿಕ ಕಟ್ಟಡವಾಗಿದೆ ಯಂತೆ. ಅದನ್ನು ತೋರಿಸುತ್ತೇನೆ ಬನ್ನಿ ಎಂದು ನಮ್ಮ ಪ್ರವಾಸದ ಮಾರ್ಗದರ್ಶಿ ಪ್ರೀತಮ್ ಹೇಳಿದಾಗ ನಾವು ಹುಬ್ಬೇರಿಸಿದೆವು.

ಯೂರೋಪ್‌ ಪ್ರವಾಸದಲ್ಲಿದ್ದ ನಾವು ಇನ್ಸ್‌ಬ್ರುಕ್‌ಪಟ್ಟಣ ತಲುಪಿದ್ದೆವು. ಇಲ್ಲಿ ‘ಗೋಲ್ಡನ್ ರೂಫ್’ (ಬಂಗಾರದ ಮಾಳಿಗೆ) ಎಂಬುದು ಐತಿಹಾಸಿಕ ಕಟ್ಟಡ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆ. ಇದರ ಬಗ್ಗೆಯೇ ಪ್ರೀತಮ್ ನಮಗೆ ಹೇಳಿ ಕುತೂಹಲ ಮೂಡಿಸಿದ್ದು.

ಮ್ಯಾಕ್‌ಮಿಲನ್ ದೊರೆಯ ಅರಮನೆಯಾಗಿದ್ದ ಇದನ್ನು ಈಗ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಈ ಅರಮನೆಯ ಇಳಿಜಾರಾದ ಚಾವಣಿಗೆ ತಾಮ್ರದ ಲೇಪನವಿದೆ. 2,957 ತಾಮ್ರದ ಹೆಂಚು ಹೊದಿಸಿ ಈ ಚಾವಣಿಯನ್ನು ರೂಪಿಸಲಾಗಿದೆ. ನೋಡಲು ಅಂದವಾಗಿದೆ. ಬಿಸಿಲಿಗೆ ಬಂಗಾರದ ಬಣ್ಣದಿಂದ ಹೊಳೆಯುವ ಇದನ್ನು ‘ಗೋಲ್ಡನ್ ರೂಫ್’ ಎನ್ನುತ್ತಾರೆ.

ಮ್ಯಾಕ್‌ಮಿಲನ್ ಚಕ್ರವರ್ತಿಯ ಎರಡನೇ ಮದುವೆ ಸ್ಮರಣಾರ್ಥವಾಗಿ ಹದಿನಾರನೆಯ ಶತಮಾನದ ಆರಂಭದಲ್ಲಿ ಈ ಭವ್ಯ ಕಟ್ಟಡವನ್ನು ಪೂರ್ಣಗೊಳಿಸಲಾಯಿತಂತೆ. ರಾಜ ಮ್ಯಾಕ್‌ಮಿಲನ್ ಈ ಕಟ್ಟಡದ ಮಾಳಿಗೆಯ ಕೆಳಅಂತಸ್ತಿನಲ್ಲಿ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದನಂತೆ. ಪ್ರಜೆಗಳ ಯೋಗಕ್ಷೇಮವನ್ನು ಅಲ್ಲಿಂದಲೇ ವಿಚಾರಿಸುತ್ತಿದ್ದ ನಂತೆ. ಮೂರು ಅಂತಸ್ತುಗಳ ಈ ಕಟ್ಟಡವನ್ನು ನಾಲ್ಕು ಶತಮಾನಗಳಿಂದ ಜೋಪಾನವಾಗಿ ಕಾಯ್ದುಕೊಂಡು ಬರಲಾಗಿದೆ.

ಆಲ್ಫ್ಸ್ ಪರ್ವತದಲ್ಲಿ ಹಬ್ಬಿರುವ ಎಂಟು ದೇಶಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಆಲ್ಫೈನ್ ಪಾರಂಪರಿಕ ಕಚೇರಿಯು ಈ ಭವ್ಯ ಕಟ್ಟಡದಲ್ಲಿದೆ.

ಈ ಹಳೆಯ ಅರಮನೆ, ಸುತ್ತಲಿನ ಪುರಾತನ ಕಟ್ಟಡಗಳು, ವಿಶಾಲ ಪ್ರದೇಶ ಗತವೈಭವವನ್ನು ಸಾರುತ್ತವೆ. ಹಲವು ಚಾರಿತ್ರಿಕ ಸಂಗತಿಗಳಿಗೆ ಸಾಕ್ಷಿಯಾದ ಈ ಪ್ರದೇಶದಲ್ಲಿ ಈಗ ಅಂಗಡಿ ಮಳಿಗೆಗಳು, ಹೋಟೆಲ್‌ಗಳು ಇವೆ. ಈ ಪ್ರದೇಶ ಸದಾ ಪ್ರವಾಸಿಗರಿಂದ ತುಂಬಿರುತ್ತದೆ.

ಇನ್ಸ್‌ಬ್ರುಕ್ ನಗರದ ಹಳೆಯ ಭವ್ಯ ಕಟ್ಟಡಗಳು, ನಗರದ ಟ್ರಾಮ್, ಉದ್ಯಾನವನ ಎಲ್ಲವೂ ಸುಂದರವಾಗಿವೆ. ಅರಮನೆಯ ಮುಂಭಾಗದ ವಿಶಾಲ ಪ್ರದೇಶದಲ್ಲಿ ಕಲಾವಿದರು ಚಿತ್ರ ಬಿಡಿಸುತ್ತಿರುತ್ತಾರೆ. ಕಲಾವಿದರ ಮುಂದೆ ಕುಳಿತು ಪ್ರವಾಸಿಗರು ತಮ್ಮ ಚಿತ್ರವನ್ನು ಬಿಡಿಸಿಕೊಳ್ಳುತ್ತಿರುತ್ತಾರೆ.

ಆಸ್ಟ್ರಿಯಾ ದೇಶ ಪರ್ವತಾರೋಹಣ, ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್, ಬೈಸಿಕಲ್ ಸ್ಪರ್ಧೆ ಮುಂತಾದ ಕ್ರೀಡೆಗಳಿಗೆ ಪ್ರಸಿದ್ಧ. ಆಟಕ್ಕೆ ಪ್ರಾಧಾನ್ಯ ನೀಡುವ ಈ ದೇಶದಲ್ಲಿ 1964, 1976 ಮತ್ತು 2012 ರ ಚಳಿಗಾಲದ ಒಲಂಪಿಕ್ಸ್ ಅನ್ನು ಇನ್ಸ್‌ಬ್ರುಕ್ ನಲ್ಲಿಯೇ ನಡೆಸಲಾಗಿತ್ತು.

ಇನ್ಸ್‌ಬ್ರುಕ್ ನಗರದ ಸುತ್ತಮುತ್ತ ಸುಂದರ ಪರ್ವತಗಳು, ಸರೋವರಗಳು, ಕಲಾಭವನಗಳು, ಅತ್ಯುತ್ತಮ ವೈನ್ ತಯಾರಿಕಾ ಘಟಕಗಳು, ಉದ್ಯಾನವನಗಳು, ಐತಿಹಾಸಿಕ ಹಾಗೂ ಪ್ರಕೃತಿ ರಮಣೀಯ ತಾಣಗಳು ಹೇರಳವಾಗಿವೆ.

ಇನ್ಸ್‌ಬ್ರುಕ್‌ ನಗರದ ಕ್ಲಾಕ್‌ ಟವರ್
ಇನ್ಸ್‌ಬ್ರುಕ್‌ ನಗರದ ಕ್ಲಾಕ್‌ ಟವರ್

ನಿಸರ್ಗ ಸದೃಶ ಆಸ್ತ್ರಿಯಾ..

ಯೂರೋಪ್ ಪ್ರವಾಸದಲ್ಲಿ ಆಸ್ಟ್ರ್ರಿಯಾ ದೇಶ ಪ್ರವೇಶಿಸುತ್ತಿದ್ದಂತೆಯೇ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆಸ್ಟ್ರಿಯಾ ದೇಶದ ಅರ್ಧಭಾಗ ಅರಣ್ಯಪ್ರದೇಶದಿಂದ ಆವೃತವಾಗಿದೆ. ನಿಸರ್ಗ ಸೌಂದರ್ಯದ ಹಿನ್ನೆಲೆಯಲ್ಲಿ ಸ್ವಿಡ್ಜರ್‌ಲ್ಯಾಂಡ್‌ಗೆ ಸಮನಾದ ದೇಶವಿದು. ಪ್ರಸಿದ್ಧ ಸಂಗೀತಗಾರ ಮೊಸಾರ್ಟ್ ಇದೇ ದೇಶದವನು. ಅವನ ಗೌರವಾರ್ಥ ಶಾಲಾ ಕಾಲೇಜುಗಳಲ್ಲಿ ಸಂಗೀತ ಮತ್ತು ನೃತ್ಯ ಕಲಿಕೆ ಕಡ್ಡಾಯ. ಸಂಗೀತ, ನೃತ್ಯ ಮತ್ತು ನಾಟಕ ಶೈಕ್ಷಣಿಕ ಪಠ್ಯಕ್ರಮದಲ್ಲಿ ಅಳವಡಿಸಿದ್ದಾರೆ.

ಸ್ವಿಡ್ಜರ್ಲೆಂಡ್‌ನಲ್ಲಿ ಉಪಹಾರ ಮುಗಿಸಿ, ಲೀಚೆನ್‌ಸ್ಟೇನ್ ಎಂಬ ಪುಟ್ಟ ದೇಶದಲ್ಲಿ ಊಟ ಮಾಡಿ, ಅಲ್ಲಿಂದ ನಾವು ಬಸ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪ್ರವೇಶಿಸಿದಾಗ ರಸ್ತೆಯುದ್ದಕ್ಕೂ ಆಲ್ಫ್ಸ್ ಪರ್ವತಗಳು ನಮ್ಮೊಂದಿಗೇ ಬರುತ್ತಿರುವಂತೆ ಭಾಸವಾಗುತ್ತಿತ್ತು. ಹಿಮಾಚ್ಚಾದಿತ ಬೆಟ್ಟಗಳು ನೀಲಾಗಸದ ಹಿನ್ನೆಲೆಯಲ್ಲಿ ನೋಡಲು ಬಲು ಸುಂದರ.

ಹೊಳೆಯುವ ಸ್ಫಟಿಕದ(ಕ್ರಿಸ್ಟಲ್) ‘ಮ್ಯೂಸಿಯಮ್ ಸ್ವರೋಸ್ಕಿ‘ ನೋಡಿಕೊಂಡು ಆಸ್ಟ್ರಿಯಾದ ಪ್ರಮುಖ ನಗರ ಇನ್ಸ್‌ಬ್ರುಕ್‌ಗೆ ಬಂದೆವು. ಆಸ್ಟ್ರಿಯಾ ದೇಶದ ದಕ್ಷಿಣ ತುದಿಯಲ್ಲಿನ ಇನ್ಸ್‌ಬ್ರುಕ್, ಸುಂದರ ನಗರ. ಇಲ್ಲಿ ಹರಿಯುವ ‘ಇನ್’ ನದಿಯಿಂದಾಗಿ ಇದಕ್ಕೆ ಈ ಹೆಸರು. ಇನ್ಸ್‌ಬ್ರುಕ್ ಅಂದರೆ ‘ನದಿಯ ಮೇಲಿನ ಸೇತುವೆ’ ಎಂದು. ಇಲ್ಲಿರುವ ನದಿಯ ಮೇಲಿನ ಸೇತುವೆ ಹಲವು ಶತಮಾನಗಳಷ್ಟು ಹಳೆಯದು.

ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ಸೈನಿಕ ನೆಲೆಯನ್ನು ಇಲ್ಲಿ ಸ್ಥಾಪಿಸಲಾಗಿತ್ತು. ಆಲ್ಫ್ಸ್ ಪರ್ವತಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗುವ ರಸ್ತೆ ಈ ನಗರದ ಮುಖಾಂತರ ಹಾದು ಹೋದದ್ದರಿಂದ ಸಾಗಾಣಿಕೆಯ ಕರವಸೂಲಿಯಿಂದ ನಗರ ಬೆಳೆಯಿತು. ವ್ಯಾಪಾರ ಹೆಚ್ಚಿದಂತೆ ನಗರ ಶ್ರೀಮಂತವಾಯಿತು. 15ನೇ ಶತಮಾನದ ಅಂತ್ಯದಲ್ಲಿ ಪ್ರಸಿದ್ಧ ಸಾಮ್ರಾಟ ಒಂದನೆಯ ಮ್ಯಾಕ್‌ಮಿಲನ್‌ನಿಂದ ಈ ನಗರ ಯೂರೋಪಿನ ರಾಜತಾಂತ್ರಿಕ, ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿತು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT