ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪ್‌ಕುಂಡ್ ಹಿಮದ ಮೇಲಿನ ಹೆಜ್ಜೆಗಳು

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದೆ ಸ್ನೇಹಿತನೊಬ್ಬ ಉತ್ತರಖಂಡ ರಾಜ್ಯದ ರೂಪ್‌ಕುಂಡ್‌ಗೆ ಟ್ರೆಕ್ಕಿಂಗ್ ಹೋಗಿದ್ದ ಫೋಟೊಗಳನ್ನು ತೋರಿಸಿದಾಗಲೇ ನಾನು ಮತ್ತು ಸ್ನೇಹಿತ ಪ್ರಭಾತ್ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆವು. ಬಿಡುವಿದ್ದಾಗಲೆಲ್ಲ ಒಂದೇ ಕೆಲಸ, ಇಂಟರ್‌ನೆಟ್‌ನಲ್ಲಿ ಟ್ರೆಕ್ಕಿಂಗ್ ಹುಡುಕಾಟ. ಎರಡು ತಿಂಗಳು ಇದೇ ಕೆಲಸ ಮಾಡಿದ ಮೇಲೆ ‘ಇಂಡಿಯಾ ಹೈಕ್ಸ್‌’ ಸಂಸ್ಥೆಯಲ್ಲಿ ಟಿಕೆಟ್ ಬುಕ್ ಮಾಡಿದ್ದೂ ಆಯಿತು. ನಮ್ಮಿಬ್ಬರ ಉತ್ಸಾಹ ಕಂಡು, ರಾಮಚಂದ್ರ ಭಟ್ಟ, ಪ್ರಶಾಂತ ಕೂಡ ನಮ್ಮ ಜೊತೆ ಸೇರಿದರು.

ದಿನದ ಬಹುಹೊತ್ತು ಸಿಲಿಕಾನ್ ಸಿಟಿ ಬೆಂಗಳೂರಿನ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವ ನಾವು ನಾಲ್ವರು ಎಂಜಿನಿಯರ್‌ಗಳು 15 ದಿನ ರಜೆ ಹಾಕಿ ಮೇ ತಿಂಗಳಿನಲ್ಲಿ ಹೊರಟೇ ಬಿಟ್ಟೆವು. ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿ, ಅಲ್ಲಿಂದ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಟ್ಗೋಧಾಮ್ ತಲುಪಿದೆವು.

ನಮ್ಮನ್ನು ಕರೆದೊಯ್ಯುವ ಇಂಡಿಯಾ ಹೈಕ್ಸ್‌ನವರು ಹೊರಡುವ ಪೂರ್ವದಲ್ಲೇ ಒಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡುತ್ತಾರೆ. ಅಲ್ಲಿ ನಮ್ಮ ಎಲ್ಲ ಅನುಮಾನಗಳನ್ನು ಪರಿಹರಿಸಿ ಕೊಳ್ಳಬಹುದು. ಆ ಗುಂಪಿನಲ್ಲಿದ್ದ ಎಲ್ಲರ ಮುಖ ಪರಿಚಯ ರೈಲ್ವೆ ಸ್ಟೇಷನ್‌ನಲ್ಲಿ ಆಯಿತು. ಬೆಂಗಳೂರಿನವರೇ ಕೆಲವರು, ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರದಿಂದ ಬಂದವರು ನಮಗೆ ಜೊತೆಯಾದರು. ಅದು ಸುಮಾರು 10 ತಾಸಿನ ಪ್ರಯಾಣ, ಘಟ್ಟ ಪ್ರದೇಶದಲ್ಲಿ ಕಡಿದಾದ ತಿರುವುಗಳು ನಮಗೆ ಮುಂದಿನ ದುರ್ಗಮ ದಾರಿಯ ಸುಳಿವು ಕೊಡುತ್ತವೆ. ಎಲ್ಲ ಸೇರಿ ಪ್ರತ್ಯೇಕ ಜೀಪ್‌ನಲ್ಲಿ ರೂಪ್‌ಕುಂಡ್ ಪರ್ವತಾರೋಹಣದ ಮೊದಲ ಕ್ಯಾಂಪ್‌ ಶುರುವಾಗುವ ಲೋಹಾಜಂಗ್ ತಲುಪಿದೆವು.

ಇಲ್ಲಿಂದ ನಮ್ಮ ಖರ್ಚು–ವೆಚ್ಚದ ಎಲ್ಲ ಜವಾಬ್ದಾರಿ ಕರೆದೊಯ್ಯವ ಕಂಪನಿಯದು. ದೇಹದ ರಕ್ತದೊತ್ತಡ, ಹೃದಯ ಬಡಿತ, ಆಮ್ಲಜನಕದ ಪ್ರಮಾಣ ಹೀಗೆ ಪರ್ವತಾರೋಹಿಯಾಗಲು ಅಗತ್ಯವಿರುವ ಎಲ್ಲ ಫಿಟ್‌ನೆಸ್ ಪರೀಕ್ಷೆ ಇಲ್ಲಿ ನಡೆಯುತ್ತದೆ. ಆಗಲೇ ನಮಗೊಂದು ಹೆಲ್ತ್ ಕಾರ್ಡ್‌ ಕೊಡುತ್ತಾರೆ. ದಿನಕ್ಕೆ ಮೂರು ಬಾರಿ ದೇಹಾರೋಗ್ಯ ಪರೀಕ್ಷೆ ಮಾಡಿ ಅದರಲ್ಲಿ ದಾಖಲಿಸುತ್ತಾರೆ. ಟ್ರೆಕ್ಕಿಂಗ್ ಟಿಪ್ಸ್‌ಗಳ ಬಗ್ಗೆ ಅರ್ಧ ಗಂಟೆ ಉಪನ್ಯಾಸವನ್ನೂ ಕೊಡುತ್ತಾರೆ. ಇದರ ಮರುದಿನ ನಮ್ಮ ಟ್ರೆಕ್ಕಿಂಗ್ ಶುರು. ನಮ್ಮ ನಿತ್ಯದ ಚಟುವಟಿಕೆಯ ಸಂಪೂರ್ಣ ನಿಯಂತ್ರಕರು ಅವರಾಗುತ್ತಾರೆ. ಊಟ, ತಿಂಡಿ, ರಾತ್ರಿ ಮಲಗುವ, ಬೆಳಿಗ್ಗೆ ಏಳುವ ಸಮಯ ನಿರ್ಧರಿಸುವವರು ಅವರೇ. ಯಾಕೆಂದರೆ ಅಲ್ಲಿನ ಹವಾಮಾನ ನಮಗೆ ಹೊಸತು, ಅವರಿಗೆ ಅದು ಬದುಕಿನ ಒಂದು ಭಾಗ.

ರಾತ್ರಿ ರೆಡಿ ಮಾಡಿಟ್ಟುಕೊಂಡಿದ್ದ ಕಿಟ್ ಬ್ಯಾಗ್ ಬೆನ್ನಿಗೆ ಹಾಕಿ ಹೊರಟೆವು. ವಾನ್‌ನಿಂದ ನಮ್ಮ ಜೊತೆಗೆ ಇಬ್ಬರು ಗೈಡ್ ಇದ್ದರು. ಒಬ್ಬರು ಮುಂದೆ, ಇನ್ನೊಬ್ಬರು ಕೊನೆಯಲ್ಲಿ ಇದ್ದರು. ಆ ದಾರಿ ಹಿಮ ಹೊದ್ದರೂ, 20 ವರ್ಷಗಳಿಂದ ಕಂಡ ಇವರ ಹೆಜ್ಜೆಯನ್ನು ಗುರುತಿಸಬಲ್ಲದು. ಅವರ ಟ್ರೆಕ್ಕಿಂಗ್ ಕತೆಗಳ ರೋಚಕ ಅನುಭವ ಕೇಳುತ್ತಿದ್ದರೆ, ಆಯಾಸವೂ ಮರೆತು ಹೋಗುತ್ತಿತ್ತು. ಒಂದು ತಾಸು ಗುಡ್ಡದ ನಡಿಗೆ, ಮತ್ತೆ ಅರ್ಧ ಗಂಟೆ ಬಿಡುವು. ಅಲ್ಲೇ ಅಂಗಡಿಯಲ್ಲಿ ಟೀ ಕುಡಿದು, ನೀರಿನ ಸೆಲೆಯಿದ್ದಲ್ಲಿ ಹೋಗಿ, ಬಾಟಲಿಯಲ್ಲಿ ನೀರು ತುಂಬಿಸಿಕೊಂಡೆವು. ಆ ದಿನಕ್ಕೆ ನೀರು ಸಿಗುವ ಜಾಗ ಇದೊಂದೇ ಎಂದು ಅವರು ಮೊದಲೇ ಸೂಚನೆ ನೀಡಿದ್ದರು. ಕಾಲಿನ ಸಾಮರ್ಥ್ಯ ಗೊತ್ತಾಗುವುದೇ ಇಲ್ಲಿಂದ. ಕಡಿದಾದ ದಾರಿಯಲ್ಲಿ ಕಣ್ಣು ಮತ್ತು ಕಾಲಿಗೆ ಮಾತ್ರ ಕೆಲಸ.

ಅಂತೂ ಮೊದಲ ಕ್ಯಾಂಪ್ ಘೈರೋಲಿಪಾತಲ್ ಸೇರಿದೆವು. ಟ್ರೆಕ್ಕಿಂಗ್ ಆರಂಭದಿಂದ ಕೊನೆಯವರೆಗೂ ತರಕಾರಿ ಊಟ ಮಾತ್ರ. ಮದ್ಯಪಾನ, ಸಿಗರೆಟ್ ಸೇವನೆ ಕಡ್ಡಾಯ ನಿಷೇಧ. ನಡಿಗೆಯಿಂದ ದಣಿದ ದೇಹ ರಾತ್ರಿ ಎಂಟಾದರೆ ನಿದ್ದೆಗೆ ಜಾರಿಬಿಡುತ್ತದೆ. ರಾತ್ರಿ ಸುಖ ನಿದ್ರೆ ಬರಲೆಂದೇ ನಮ್ಮ ಗೈಡ್‌ಗಳು ಮಧ್ಯಾಹ್ನ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ಎರಡನೇ ದಿನವಿಡೀ ಕಾಡಿನ ಒಡನಾಟ. ಮುಗಿಲಿಗೆ ಮುಖ ಮಾಡಿದ ಮರಗಳು ನಮಗೆ ನೆರಳಾಗು ತ್ತವೆ. ಮುಂದೆ ಜಗತ್ತೇ ಹಸಿರಾಗಿ ಕಾಣುವ ಹುಲ್ಲುಗಾವಲು. ಮೊದಲ ದಿನವೇ ಮೌಂಟ್ ತ್ರಿಶೂಲ್ ಕಂಡಿದ್ದೆವು. ಪ್ರತಿ ದಿನವೂ ಕಾಣುವ ಪರ್ವತಗಳ ಸಾಲು ನಮ್ಮ ನಡಿಗೆಗೆ ಉತ್ಸಾಹ ತುಂಬುತ್ತಿದ್ದವು. ನಾವು ಅದರ ಹತ್ತಿರ ಹತ್ತಿರಕ್ಕೆ ಹೋದಂತೆ ಭಾಸವಾಗುತ್ತಿತ್ತು. ಹೀಗೆ ನಡೆಯುತ್ತಾ ಅಲಿಬುಗಿಯಾಲ್ ತಲುಪಿದೆವು. ಅಲ್ಲಿ 360 ಡಿಗ್ರಿ ಸುತ್ತ ನೋಡುವುದೇ ಸೊಬಗು.

ಎರಡನೇ ದಿನದ ಕ್ಯಾಂಪ್ ಬೇದ್ನಿಬುಗ್ಯಾಲ್. ಇಲ್ಲಿ ಆಮ್ಲಜನಕದ ಪ್ರಮಾಣ ತೀರಾ ಕಡಿಮೆ. ಹತ್ತು ಹೆಜ್ಜೆ ನಡೆದರೂ ಪ್ರಯಾಸವೇ. ಒಳ್ಳೆಯ ಬಿಸಿಲಿನ ವಾತಾವರಣದಲ್ಲಿ ಮಜಾ ಮಾಡಿದೆವು. ಸಂಜೆ ಒಮ್ಮೆಲೇ ಮೋಡ ಕವಿಯಿತು. ಎಲ್ಲರೂ ಟೆಂಟ್‌ ಒಳಗೆ ಸೇರುವಂತೆ ಗೈಡ್‌ಗಳು ನಿರ್ದೇಶಿಸಿದರು. ಪ್ರಳಯವಾಗುವಷ್ಟು ಮಳೆ, ಪಕ್ಕದ ಟೆಂಟ್ ಹಾರಿ ಹೋಯಿತು. ಒಂದೇ ಟೆಂಟ್‌ನಲ್ಲಿ ನಾಲ್ಕೈದು ಜನ ಕುಳಿತೆವು. ಅಲ್ಲಿಗೇ ನಮಗೆ ಊಟ ತಂದುಕೊಟ್ಟರು. ಗುಡ್ಡದಲ್ಲಿ ಬಿಸಿಲು ಮಳೆಯಾಟ ಹೊಸತಲ್ಲ. ಆದರೆ, ಇದು ಮಾತ್ರ ಇಡೀ ಟ್ರೆಕ್ಕಿಂಗ್‌ನ ಭಯದ ಸುಖಾನುಭವ.

ಮೂರನೇ ದಿನ ಇದು ಹೊಂದಿಕೊಳ್ಳುವ ದಿನ. ಎತ್ತರದ ಹವಾಮಾನಕ್ಕೆ ದೇಹವನ್ನು ಒಗ್ಗಿಸಲು ಬೇದ್ನಿಟಾಪ್ ಏರಬೇಕು. ಅಲ್ಲಿ ಕನಿಷ್ಠ ಮೂರು ತಾಸು ಕುಳಿತುಕೊಳ್ಳಬೇಕು. ತಿರುಗಿ ಬೇದ್ನಿಬುಗ್ಯಾಲ್‌ಗೆ ಬಂದರೆ ಅಲ್ಲಿಯೇ ಪೂರ್ಣ ವಿಶ್ರಾಂತಿ. ನಾಲ್ಕನೇ ದಿನ ಪಾತರ್ ನಚೋನಿ, ಐದನೇ ದಿನ ಬಗ್ವಾಬಾಸಾ. ಅಲ್ಲೊಂದು ಹಿಮ ಮೆತ್ತಿಕೊಂಡ ಕಲ್ಲು ವಿನಾಯಕನಿದ್ದಾನೆ. ಅವನ ದರ್ಶನ ಪಡೆದ ಮೇಲೆ ಮುಂದಿನದೆಲ್ಲ ಹಿಮ ಪ್ರಪಂಚ. ಹಿಮದಾಟದಲ್ಲಿ ಮಿಂದೆದ್ದು ಅಲ್ಲಿಯೇ ತಂಗಿದೆವು. ಮರುದಿನ ಹಿಮ ಕರಗಲು ಶುರುವಾಗುವ ಮುನ್ನ, ನಸುಕಿನ 3.30ಕ್ಕೆ ಎದ್ದು ನವ ಉತ್ಸಾಹದಲ್ಲಿ ದಾರಿ ಕ್ರಮಿಸಿ, ಸಮುದ್ರ ಮಟ್ಟಕ್ಕಿಂತ 4800 ಮೀಟರ್ ಎತ್ತರದಲ್ಲಿರುವ ರೂಪ್‌ಕುಂಡ್ ಸಮಿಟ್ ಪಾಯಿಂಟ್‌ನಲ್ಲಿ ಅಡಿಯಿಟ್ಟೆವು!

ರೂಪ್‌ಕುಂಡ್‌ ತುದಿ ತಲುಪಿದಾಗ ಅಲ್ಲಿ ಮೈನಸ್ ಐದು ಡಿಗ್ರಿ ತಾಪಮಾನ. ಗಡಗುಡುವ ಚಳಿಯಲ್ಲೂ ಮನಸ್ಸು ಬೆಚ್ಚನೆಯ ಕನಸು ನನಸಾಗಿದ್ದನ್ನು ಅನುಭವಿಸುತಿತ್ತು. ಬಸವ ಳಿದು ಪ್ರತಿ ಹೆಜ್ಜೆ ಮುಂದಿಡುವಾಗ ಕೂಡಿಟ್ಟ ಖುಷಿಯೆಲ್ಲ ಇಲ್ಲಿ ಗರಿಬಿಚ್ಚಿ ಹಾರಾಡಿದವು. ಗ್ಲೌಸ್‌ನ ಮುಷ್ಠಿಯೊಳಗೆ ‘Done Roopkund' ಬೋರ್ಡ್‌ ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು ಮರೆಯಲಾರದ ಕ್ಷಣ.

ಕಿಟ್‌ ಬ್ಯಾಗ್‌ನಲ್ಲಿ ಏನೆಲ್ಲ ..?

ಸ್ವಚ್ಛತೆಯ ಕಾರಣಕ್ಕೆ ಊಟ, ತಿಂಡಿ ಮಾಡಲು ನಾವೇ ಪ್ಲೇಟ್, ಲೋಟ ಒಯ್ಬಬೇಕು. ಚಳಿಯಿಂದ ರಕ್ಷಿಸಿಕೊಳ್ಳಲು ಜಾಕೆಟ್, ಹೆಡ್‌ ಟಾರ್ಚ್ (ನಸುಕಿನ ನಡಿಗೆಗೆ ಬೇಕು), ಟಿಶ್ಯು, ಎರಡು ನೀರಿನ ಬಾಟಲಿ, ಎನರ್ಜಿ ಬಾರ್, ಪೆಪ್ಪರ್‌ಮಿಂಟ್‌ನಂತಹ ಶಕ್ತಿವರ್ಧಕ, ಕ್ಯಾಮೆರಾ ಎಲ್ಲ ಸೇರಿ ಸುಮಾರು 8–10 ಕೆ.ಜಿ.ಯಷ್ಟಾಗುತ್ತದೆ. ಸ್ನ್ಯಾಕ್ಸ್ ತರದಿದ್ದರೆ ಉತ್ತಮ. ಮ್ಯೂಲ್ ಪ್ರಾಣಿಯ ಬೆನ್ನ ಮೇಲೆ ಹೊರಿಸಿದರೆ, ಅದರ ವೆಚ್ಚವನ್ನು ನಾವೇ ಭರಿಸಬೇಕು.

ಶೌಚಾಲಯ ಹೇಗೆ ?

ಟ್ರೆಕ್ಕಿಂಗ್ ಮೊದಲ ದಿನ ಹೊರಟರೆ, ಮರಳಿ ಬಂದ ಮೇಲೆ ಸ್ನಾನ ಮಾಡಲು ಸಾಧ್ಯವಾಗುವುದು. ಮುಖ ಮಾತ್ರ ತೊಳೆಯಬಹುದಷ್ಟೇ. ಬಹುತೇಕ ಕ್ಯಾಂಪ್‌ಗಳಲ್ಲಿ ಡ್ರೈ ಶೌಚಾಲಯಗಳಿರುತ್ತವೆ. ಹೊಂಡದಲ್ಲಿ ನಿತ್ಯಕರ್ಮ ಮುಗಿಸಿ, ಮಣ್ಣು ಮುಚ್ಚಿದರಾಯಿತು. ಪುರುಷರು, ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ.

ಖರ್ಚು–ವೆಚ್ಚ

ಒಂದು ಟ್ರೆಕ್ಕಿಂಗ್ ತಂಡದಲ್ಲಿ 20–25 ಜನರಿಗೆ ಮಾತ್ರ ಅವಕಾಶ. ಎಂಟು ದಿನಗಳ ಟ್ರೆಕ್ಕಿಂಗ್ ವೆಚ್ಚ ಸುಮಾರು ₹ 11ಸಾವಿರ ಮತ್ತು ತೆರಿಗೆ. ವಿಮಾನ ಉಳಿದೆಲ್ಲ ವೆಚ್ಚ ಸೇರಿ ₹ 25ಸಾವಿರ ಖರ್ಚಾಗಬಹುದು.

ನಿರೂಪಣೆ: ಸಂಧ್ಯಾ ಹೆಗಡೆ ಆಲ್ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT