ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜಕಿಸ್ತಾನ: ಚಾರಣಿಗರ ಒಲವಿನ ತಾಣ

Last Updated 4 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ತಜಕಿಸ್ತಾನ, ಚಾರಣಿಗರಿಗೆ ಆಪ್ತವೆನಿಸುವ ತಾಣ. ಪರ್ವತಗಳು, ನದಿ ತಟಗಳು, ವಿಶಾಲ ಸರೋವರಗಳು, ಬಿಸಿನೀರಿನ ಬುಗ್ಗೆಗಳು ಚಾರಣಿಗರನ್ನಷ್ಟೇ ಅಲ್ಲ, ಪ್ರವಾಸಿಗರನ್ನೂ ಕೈ ಬೀಸಿ ಕರೆಯುತ್ತವೆ.

***

ಸೋವಿಯತ್ ಒಕ್ಕೂಟ ಕಳೆದ ಶತಮಾನದ ಕೊನೆಯಲ್ಲಿ ಒಡೆದು ಚೂರಾದಾಗ ಮಧ್ಯ ಏಷ್ಯಾದಲ್ಲಿ ಹುಟ್ಟಿಕೊಂಡ ಐದು ‘ಸ್ತಾನ’ಗಳೆಂದರೆ, ಕಜಕಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ ಹಾಗೂ ತುರ್ಕಮೇನಿಸ್ತಾನ. ಈ ಐದರ ಮಧ್ಯದಲ್ಲಿರುವ ದೇಶವೇ ತಜಕಿಸ್ತಾನ.

ಒಂದೂವರೆ ಲಕ್ಷ ಚದರ ಕಿಲೋಮೀಟರ್‌ ಭೂ ವಿಸ್ತೀರ್ಣವಿದ್ದರೂ ಇರುವುದು ಮಾತ್ರ 89 ಲಕ್ಷ ಜನಸಂಖ್ಯೆ. ಸೋವಿಯತ್ ಒಕ್ಕೂಟದಿಂದ ಬೇರ್ಪಟ್ಟು ಸ್ವತಂತ್ರವಾದ ಮೇಲೆ ಗಂಟು ಬಿದ್ದ ಅಂತರ್ಯುದ್ಧದಲ್ಲಿ ತಜಕಿಸ್ತಾನ ನಲುಗಿತು. ಈಗ ಎರಡು ದಶಕಗಳಲ್ಲಿ ಮೈಕೊಡವಿ ಮೇಲೆದ್ದು ನಿಂತಿದೆ. ಜಾಗತಿಕ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಅದು ಆಯಕಟ್ಟಿನ ಭೌಗೋಳಿಕ ಸ್ಥಾನದಲ್ಲಿರುವುದು. ಅತ್ತ, ರಾಜಕೀಯ ಕಾರಣಗಳಿಗಾಗಿ ತಜಕಿಸ್ತಾನ ಜಗತ್ತಿನ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರೆ ಇತ್ತ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಜನಪ್ರಿಯ ತಾಣವೆನಿಸುತ್ತಿದೆ.

ದುಶಾಂಬೆಯ ಕಬೀರ್ ಪಾರ್ಕ್‌ನಲ್ಲಿರುವ ಹೂವ ಹಾಸು
ದುಶಾಂಬೆಯ ಕಬೀರ್ ಪಾರ್ಕ್‌ನಲ್ಲಿರುವ ಹೂವ ಹಾಸು

ಪರ್ವತಗಳ ನಾಡು

ತಜಕಿಸ್ತಾನ ಮೂಲತಃ ಪರ್ವತ ಪ್ರದೇಶ. ಸಮತಟ್ಟಾದ ಜಾಗವೇ ಕಡಿಮೆ. ಇಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಕೊರೆಯುವ ಚಳಿ. ಅನೇಕ ಭಾಗಗಳಲ್ಲಿ ಮೈನಸ್ ಡಿಗ್ರಿ ಉಷ್ಣಾಂಶವಿರುತ್ತದೆ. ಹಿಮಪಾತ ಮಾಮೂಲಿಯಾಗಿದೆ. ಜೂನ್ -ಜುಲೈ-ಆಗಸ್ಟ್‌ನಲ್ಲಿ ಬಿಸಿಲ ಝಳ. ಸೆಪ್ಟೆಂಬರ್‌ನಿಂದ ಚಳಿ ಆರಂಭಗೊಂಡರೂ ಡಿಸೆಂಬರ್‌ವರೆಗೆ ಹಿತವಾದ ವಾತಾವರಣ ಎನ್ನಬಹುದು. ಅಸಂಖ್ಯ ಪರ್ವತಗಳು ಹಾಗೂ ಅವುಗಳ ಕೊಳ್ಳಗಳಲ್ಲಿ ಹರಿಯುವ ನದಿಗಳು ಈ ದೇಶದ ಆಸ್ತಿ. ಬೆರ‍್ರಿ, ಚೆರ‍್ರಿ, ಮೆಲೆನ್ ಮುಂತಾದ ನಾನಾ ತರಹದ ಹಣ್ಣುಗಳು, ತರಕಾರಿಗಳು, ಗೋಧಿ, ಹತ್ತಿ ಇಲ್ಲಿಯ ಪ್ರಮುಖ ಬೆಳೆಗಳು. ಚಾರಣಪ್ರಿಯರಿಗೆ ತಜಕಿಸ್ತಾನದಲ್ಲಿ ಹೇರಳ ಆಕರ್ಷಣೆಗಳಿದ್ದು, ಪರ್ವತಗಳು, ನದಿ ತಟಗಳು, ವಿಶಾಲ ಸರೋವರಗಳು, ಬಿಸಿನೀರಿನ ಬುಗ್ಗೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಚಾರಿತ್ರಿಕವಾಗಿ ತಜಕಿಸ್ತಾನದೊಂದಿಗೆ ಭಾರತಕ್ಕೆ ಒಳ್ಳೆಯ ಸಂಬಂಧವಿದ್ದರೂ ಕಳೆದ ಒಂದು ವರ್ಷದಿಂದ ತಜಕಿಸ್ತಾನಕ್ಕೆ ಭಾರತದಿಂದ ನೇರ ವಿಮಾನ ಸಂಪರ್ಕವೇ ಇಲ್ಲ. ಹೀಗಾಗಿ ಭಾರತೀಯರು ತಜಕಿಸ್ತಾನಕ್ಕೆ ಬರುವುದಾಗಲೀ ಭಾರತಕ್ಕೆ ತಜಕಿಗಳು ಭೇಟಿ ನೀಡುವುದಾಗಲೀ ಕಷ್ಟ ಹಾಗೂ ದುಬಾರಿ ಎನಿಸಿತ್ತು. ಇದೀಗ ಶಾಪ ವಿಮೋಚನೆಯಾಗುವ ಕಾಲ ಬಂದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸೊಮೊನ್ ಏರ್ ನವದೆಹಲಿಗೆ ವಾರಕ್ಕೆ ಎರಡು ದಿನ ನೇರ ವಿಮಾನ ಹಾರಾಟ ಆರಂಭಿಸುತ್ತಿದೆ. ಇದರಿಂದ ಭಾರತೀಯರಿಗೆ ತಜಕಿಸ್ತಾನದ ಪ್ರವಾಸಕ್ಕೆ ಬಾಗಿಲು ತೆರೆಯುತ್ತದೆ.

‘ಸೋಮವಾರಪೇಟೆ’ಯಂತೆ...

ತಜಕಿಸ್ತಾನದ ರಾಜಧಾನಿ ದುಶಾಂಬೆ. ತಜಕಿ ಭಾಷೆಯಲ್ಲಿ ದುಶಾಂಬೆಯೆಂದರೆ ಸೋಮವಾರದ ಮಾರುಕಟ್ಟೆ ಎಂದು ಅರ್ಥ. ನಮ್ಮ ಸೋಮವಾರ ಪೇಟೆ ಇರುವ ಹಾಗೆ! ನಮ್ಮ ಉದ್ಯಾನ ನಗರಿಗಳೆಲ್ಲ ಅಧ್ವಾನ ನಗರಿಗಳಾಗಿರುವಾಗ ದುಶಾಂಬೆ ನಿಜ ಅರ್ಥದಲ್ಲಿ ಉದ್ಯಾನ ನಗರಿ. ಏಕೆಂದರೆ, ಈ ನಗರದ ತುಂಬಾ ರುದಾಕಿ, ಐನಿ, ಫಿರ್‍ದೌಸಿ, ಕಬೀರ್ ಮತ್ತು ಕೇಂದ್ರೀಯ ಸಸ್ಯೋದ್ಯಾನ ಹೀಗೆ ಐದು ಮುಖ್ಯ ಪಾರ್ಕ್‌ಗಳಿವೆ. ಜತೆಗೆ ನಗರದ ತುಂಬಾ ನೂರಾರು ಸಣ್ಣ ಪುಟ್ಟ ಉದ್ಯಾನಗಳು ಇವೆ. ಪಾರ್ಕ್‌ನಲ್ಲಿ ವರ್ಣರಂಜಿತ ಸಂಗೀತ ಕಾರಂಜಿಗಳಿವೆ. ನಮ್ಮ ಊರಲ್ಲೂ ಬೆಳೆಯುವ ಡೇಲಿಯಾ, ಸೇವಂತಿಗೆ, ನಿತ್ಯಪುಷ್ಪವನ್ನೂ ಕೂಡ ಗುಂಪಾಗಿ ಬಿತ್ತಿ ವಿವಿಧ ಆಕೃತಿಗಳಲ್ಲಿ ಬೆಳೆಸುವ ಚಾಕಚಕ್ಯತೆ ಅಚ್ಚರಿಗೊಳಿಸುತ್ತದೆ. ಪ್ರತಿಯೊಂದು ಪಾರ್ಕಿನಲ್ಲೂ ಮಕ್ಕಳಿಗೆ ಆಟಕ್ಕೆ, ದೊಡ್ಡವರಿಗೆ ವ್ಯಾಯಾಮಕ್ಕೆ ಪ್ರತ್ಯೇಕ ಅಂಗಣಗಳಿವೆ. ಇಡೀ ದುಶಾಂಬೆಯಲ್ಲಿ ಎದ್ದು ಕಾಣುವ ಶಿಸ್ತೆಂದರೆ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ನೆಲಹಾಸುಗಳಿಂದ ಅಲಂಕೃತಗೊಂಡ ರಸ್ತೆಗಳು. ಅವನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಳ್ಳುವ ಸಾಧ್ಯತೆಯೇ ಇಲ್ಲ! ಹೀಗಾಗಿ ಇಲ್ಲಿ ರಸ್ತೆಬದಿಗೆ ಹೂಗಳ ನಡುವೆ ನಡೆಯುವುದೇ ಖುಷಿ.

ತಜಕಿಸ್ತಾನದ ಪ್ರವಾಸಿ ಆಕರ್ಷಣೆಯ ಕೇಂದ್ರಸ್ಥಾನ ದುಶಾಂಬೆ. ಇಲ್ಲಿನ ಜನಾಂಗೀಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ವಸ್ತುಸಂಗ್ರಹಾಲಯ, ಸೊಮೊನಿ ವೃತ್ತ, ನವರೂಜ್ ಅರಮನೆ, ಸಸ್ಯೋದ್ಯಾನ ಹಾಗೂ ನದಿ ದಂಡೆಗಳು ಹಾಗೂ ಪಾರ್ಕ್‌ಗಳು ದುಶಾಂಬೆಯ ಪ್ರವಾಸಿ ಮೌಲ್ಯವನ್ನು ಹೆಚ್ಚಿಸಿವೆ. ಎತ್ತರೆತ್ತರ ಕಟ್ಟಡಗಳಿಂದ ಸೆಳೆಯುವ ಆಧುನಿಕ ನಗರ ಶಿಸ್ತುಬದ್ಧ ಬೆಳವಣಿಗೆ ಹೊಂದಿದೆ. ದುಶಾಂಬೆಗೆ ಸನಿಹದಲ್ಲಿ ವಾರ್‍ಜೋಬ್, ರೋಮಿತ್, ರಷ್ಟ್ ಮುಂತಾದ ಸುಂದರ ಪ್ರದೇಶಗಳಿದ್ದು ಅವು ನದೀತೀರಗಳಾಗಿವೆ.

ಚಾರಣದ ಸೊಬಗು

ಹಿಮಾಲಯದಿಂದ ಬಂದಿಳಿಯುವ ತಣ್ಣನೆ ನೀರಲ್ಲಿ ಆಡೋದು ಸುಖ. ನದಿಗಳ ದಂಡೆಗಳ ಮೇಲೆ ಸಾಕಷ್ಟು ಹೋಂಸ್ಟೇಗಳು ತಲೆ ಎತ್ತಿವೆ. ಅಲ್ಲಿಂದ ಚಾರಣಕ್ಕೆ ಕರೆದೊಯ್ಯಲಾಗುತ್ತದೆ. ಹಣ್ಣುಗಳ ತೋಟ ನೋಡಬಹುದು. ಹಿಸೋರ್, ಅಜಿನಾಟಿಪ್ಪೆ, ಕನ್ನಿಬದಾಮ್ ಮುಂತಾದ ಚಾರಿತ್ರಿಕ ಸ್ಥಳಗಳಿವೆ. ಪಂಜಿಕೆಂಟ್ ನಾನಾ ಬಣ್ಣದ ನೀರಿನ ಏಳು ಸರೋವರಗಳಿಂದ ಪ್ರಸಿದ್ಧವಾಗಿದೆ. ಇಸ್ಕಾಂದರ್ ಕೂಲ್ ಎಂಬ ‘ಕೂಲಾದ ಪ್ರದೇಶ’ ಅಲೆಕ್ಸಾಂಡ್‌ ಹೆಸರಿನ ಕೊಳ, ತನ್ನ ವಿಸ್ತಾರದಿಂದಾಗಿ ಪ್ರವಾಸಿಗರ ಸೆಳೆಯುತ್ತಿದೆ. ಕುಜಾಂಡಿನಲ್ಲಿ ಸಾಗರೋಪಾದಿಯಾಗಿ ಕಾಣುವ ನದಿಯ ಹಿನ್ನೀರು ಜನರಿಗೆ ಜಲ ಕ್ರೀಡೆಗಳಿಗೆ ಅವಕಾಶ ನೀಡಿದೆ.

ದುಶಾಂಬೆಯ ಪೂರ್ವದಲ್ಲಿ ಪಮೀರ್ ಪರ್ವತಗಳ ಸಾಲು ಇವೆ. ಇದನ್ನು ಜಗತ್ತಿನ ಮೇಲ್ಛಾವಣಿ ಎನ್ನುತ್ತಾರೆ. ಇಲ್ಲಿಂದ ಚಾರಣಿಗರು ಇಷ್ಕೋಷಿಮ್ ಪ್ರಾಂತ್ಯಕ್ಕೆ ಹೋಗುತ್ತಾರೆ. ಅಲ್ಲಿ ಕಾಲ್ ಮಾರ್ಕ್ಸ್‌ ಪರ್ವತ, ಸಫರ್ ಕೋಜಾ ತುದಿ, ಮಾಯಾಕಾವ್ಸ ತುದಿ.. ಹೀಗೆ ಸಮುದ್ರ ಮಟ್ಟದಿಂದ ಐದು ಸಾವಿರ ಮೀಟರುಗಳಿಗಿಂತ ಎತ್ತರವಿರುವ ಅನೇಕ ಪರ್ವತಗಳಿವೆ. ಅಲ್ಲಿನ ಪರ್ವತಾರೋಹಣ ಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ. ಆದರೆ ಛಾತಿ ಇರುವವರಿಗೆ ಸಾರ್ಥಕಭಾವ ಉಕ್ಕಿಸುತ್ತದೆ.

ಚಾರಣಕ್ಕೆ ಹೋಗದಿದ್ದರೂ ಪಮೀರ್ ಪ್ರಾಂತ್ಯಕ್ಕೆ ಭೇಟಿ ನೀಡುವುದೇ ಒಂದು ಮರೆಯಲಾರದ ಅನುಭವ. ಆರು ತಿಂಗಳು ಹಿಮದಲ್ಲಿ ಮುಚ್ಚಿರುವ ಈ ಪ್ರದೇಶದ ಮುಖ್ಯ ಪಟ್ಟಣ ಖೊರೋಗ್‍ಗೆ ಹೋಗುವ ದಾರಿಯಲ್ಲಿ ಕಂಡುಬರುವ ಪ್ರಾಕೃತಿಕ ಸೌಂದರ್ಯ, ಮಧ್ಯ ಏಷ್ಯಾದ ಈ ಭಾಗವನ್ನು ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಪ್ರವಾಸಿ ತಾಣವನ್ನಾಗಿಸುತ್ತದೆ.

ತಜಕಿಗಳಿಗೆ ಭಾರತೀಯರನ್ನು ಕಂಡರೆ ಬಹಳ ಪ್ರೀತಿ. ಭಾರತೀಯರನ್ನು ನೋಡಿದವರೇ ‘ನಮಸ್ತೆ’ ಎನ್ನುತ್ತಾರೆ. ಬಾಲಿವುಡ್‌ ನಟ ಶಾರುಕ್ ಖಾನ್‌ನನ್ನು ನೆನಪಿಸುತ್ತಾರೆ. ಇವರು ನೋಡುವಷ್ಟು ಹಿಂದಿ ಸಿನಿಮಾಗಳನ್ನು ನಾವು ನೋಡಿರುವುದಿಲ್ಲ! ಹೆಚ್ಚಿನ ತಜಕಿಗಳ ಜೀವನದ ಧ್ಯೇಯವೆಂದರೆ ಭಾರತದ ತಾಜ್‌ಮಹಲ್‌ ನೋಡಬೇಕೆಂದು. ಹೀಗಾಗಿ ತಜಕಿಸ್ತಾನಕ್ಕೆ ಬಂದರೆ ಅವರ ಪ್ರೀತಿಯ ಆತಿಥ್ಯದಿಂದ ನೆಂಟರಮನೆಗೆ ಬಂದ ಅನುಭವವೂ ಆದೀತು!

ಹಿಸ್ಸೋರ್ ಕೋಟೆ
ಹಿಸ್ಸೋರ್ ಕೋಟೆ

ಪ್ರವಾಸಕ್ಕೆ ಸೂಕ್ತ ಅವಧಿ

ತಜಕಿಸ್ತಾನ ಪ್ರವಾಸಕ್ಕೆ ಮೇನಿಂದ ಸೆಪ್ಟೆಂಬರ್ ತಿಂಗಳು ಸೂಕ್ತ ಕಾಲ. ಹಿಮಪಾತದಲ್ಲಿ ಪ್ರವಾಸ ಮಾಡುವ ಆಸಕ್ತಿ ಇರುವವರು ಜನವರಿಯಲ್ಲಿ ಬರಬೇಕು (ಸೊನ್ನೆಗಿಂತ ಕಡಿಮೆಯಿರುವ ತಾಪಮಾನ ತಡೆದುಕೊಳ್ಳುವ ಗಟ್ಟಿತನ ಬೇಕು).

ಹೋಗುವುದು ಹೇಗೆ ?

ಇದೇ ತಿಂಗಳಿನಿಂದ (ಸೆಪ್ಟೆಂಬರ್‌) ವಿಮಾನಯಾನ ಆರಂಭವಾಗುವುದರಿಂದ, ಬೆಂಗಳೂರು–ದೆಹಲಿ ಮೂಲಕ ದುಶಾಂಬೆಯ ಸೋಮೊನ್ ಏರ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಬಹುದು. ದುಬೈಗೆ ಪ್ರವಾಸ ಹೋಗುವವರು ಅಲ್ಲಿಂದ ದುಶಾಂಬೆಗೆ ಬರಬಹುದು.

ಆನ್‍ಲೈನ್‍ನಲ್ಲಿ ತಜಕಿಸ್ತಾನದ ವೀಸಾಕ್ಕೆ ಅರ್ಜಿ ಹಾಕಿದರೆ ಮೂರ್ನಾಲ್ಕು ದಿನದಲ್ಲಿ ವೀಸಾ ಸಿಗುತ್ತದೆ. ವೀಸಾಕ್ಕೆ ತೆರಬೇಕಿರುವುದು 50 ಡಾಲರ್ ಅಂದರೆ ಸುಮಾರು 3500 ರೂಪಾಯಿಗಳು ಮಾತ್ರ.

ಊಟ–ವಸತಿ

ತಜಕಿಸ್ತಾನ ಮಾಂಸಾಹರಿಗಳಿಗಂತೂ ಸ್ವರ್ಗ. ಶಾಖಾಹಾರಿಗಳಿಗೆ ತರಕಾರಿ- ಹಣ್ಣುಗಳಿಗೆ ಕೊರತೆಯಿಲ್ಲ. ಸಾಕಷ್ಟು ಹಣವಿದ್ದು ಪ್ರತಿವರ್ಷ ಹೊಸ ದೇಶ ನೋಡಬೇಕೆಂಬ ಹುಚ್ಚಿರುವವರಿಗೆ ತಜಕಿಸ್ತಾನ ಅತ್ಯಂತ ಸೂಕ್ತ ಆಯ್ಕೆ. ಆನಲೈನ್‍ನಲ್ಲೇ ಹೋಟೆಲ್‌ಗಳನ್ನು ಬುಕ್‌ ಮಾಡಬಹುದು. ಮುಂಗಡವಾಗಿ ಕಾಯ್ದಿರಿಸಬಹುದು. ಹೀಗಾಗಿ ಬರುವುದು ಕಷ್ಟವಾಗೋಲ್ಲ.

– ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT