ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಮೊಗ್ಗೆಯಲ್ಲಿ ಮರದರಮನೆ

Last Updated 19 ಜೂನ್ 2019, 19:30 IST
ಅಕ್ಷರ ಗಾತ್ರ

ಇದು ಕರ್ನಾಟಕದಲ್ಲಿರುವ ಕೆಲವೇ ಪ್ರಾಚೀನ ಅರಮನೆಗಳಲ್ಲೊಂದು. ಭಾರತೀಯ ನಗರ ವಾಸ್ತುಶಿಲ್ಪ ಇತಿಹಾಸದಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ಹೀಗೆ ಇತಿಹಾಸ ತಜ್ಞರು ಉಲ್ಲೇಖಿಸುವ ಅರಮನೆಯೇ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಅರಮನೆ. 17ನೇ ಶತಮಾನದಲ್ಲಿ ಕಟ್ಟಿರುವ ಮರದ ಕಟ್ಟಡದ ಮುಖ್ಯಭಾಗ ಇಂದಿಗೂ ಸುಸ್ಥಿತಿಯಲ್ಲಿದೆ.

ಕೆಳದಿ ರಾಜ್ಯವಾಳಿದ ಹೆಸರಾಂತ ಅರಸರಾದ ವೆಂಕಟಪ್ಪನಾಯಕ ಮತ್ತು ಶಿವಪ್ಪನಾಯಕರ ಕಾಲದಲ್ಲಿ ಕಟ್ಟಲಾಗಿದೆ. ಉತ್ತರಾಭಿಮುಖವಾದ ಅರಮನೆಗೆ ಎರಡು ಅಂತಸ್ತುಗಳಿವೆ. ವಿಶಾಲ ಸಭಾಂಗಣ. ಎತ್ತರದ ಮರದ ಕಂಬಗಳು. ಮೊದಲನೇ ಅಂತಸ್ತಿಗೆ ಹತ್ತಲು ಎರಡೂ ಕಡೆ ಮರದ ಮೆಟ್ಟಿಲುಗಳು. ಅರಮನೆಯ ಗೋಡೆಗಳು ಎರಡೂವರೆ ಅಡಿ ಅಗಲವಿದೆ. ಅರಮನೆಯ ದರ್ಬಾರ್ ಹಾಲ್ ಮತ್ತು ಕಾವಲು ಭಟರು ನಿಲ್ಲುವ ಎಂಟು ಸ್ಥಳಗಳು, ಬೃಹದಾಕಾರದ ಮರಗಳಿಂದ ಕೆತ್ತಿರುವ ಆಧಾರ ಸ್ತಂಭಗಳು ಇದರ ಗತವೈಭವವನ್ನು ಸಾರಿ ಹೇಳುವಂತಿದೆ. ಅರಮನೆ ಈಗಿರುವುದಕ್ಕಿಂತ ವಿಶಾಲವಾಗಿದ್ದಿರಬಹುದು ಎನ್ನುತ್ತವೆ ಸಂಶೋಧನೆಗಳು. ಅದಕ್ಕೆ ಸಾಕ್ಷಿ ಎಂಬಂತೆ ಸುತ್ತಲೂ ಒತ್ತುವರಿಯಾಗಿರುವುದನ್ನು ಕಾಣಬಹುದು.

ಅರಮನೆಯ ಹಿಂಭಾಗದ ಚೌಕಾಕಾರದ ಕೈಸಾಲೆಯ ಸ್ಥಳ, ಅರಮನೆಯ ಪೂರ್ವ ಮತ್ತು ದಕ್ಷಿಣ ಭಾಗಗಳ ಖಾಲಿ ಜಾಗದಲ್ಲಿ ನೂರಾರು ಶಿಲಾ ಮೂರ್ತಿಗಳ ಪ್ರದರ್ಶನವಿದೆ. ಇಲ್ಲಿ 8 ರಿಂದ 19ನೇ ಶತಮಾನದವರೆಗಿನ ಪುರಾತತ್ವ ಅವಶೇಷಗಳು, ಕೆಳದಿ ಅರಸರ ಕಾಲದ ನಿತ್ಯೋಪಯೋಗಿ ವಸ್ತುಗಳು, ಫಿರಂಗಿಗಳು, ಅದಕ್ಕೆ ಬಳಸುವ ಮದ್ದು–ಗುಂಡುಗಳು, ವಿವಿಧ ಶೈಲಿ ಹಾಗೂ ಕಾಲಘಟ್ಟದ ಶಿಲಾ ಮೂರ್ತಿಗಳು ಮತ್ತು ಶಿಲಾ ಶಾಸನಗಳನ್ನು ಕಾಣಬಹುದು.

ವಸ್ತು ಸಂಗ್ರಹಾಲಯದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಉತ್ಖನನದಲ್ಲಿ ದೊರಕಿದ ಅಪರೂಪದ ವಿಗ್ರಹಗಳನ್ನು ಸಂಗ್ರಹಿಸಿ ಮಾಹಿತಿ ಸಹಿತ ಈ ಅರಮನೆಯ ಆಸುಪಾಸು ಪ್ರದರ್ಶನಕ್ಕಿಟ್ಟಿದೆ. ಜೊತೆಗೆ ಅರಮನೆಯ ಪ್ರಾಂಗಣದಲ್ಲಿ ಶಿಲಾಯುಗದಲ್ಲಿ, ಪ್ರಾಗೈತಿಹಾಸಿಕ ಕಾಲದಲ್ಲಿ ಬಳಕೆಯಲ್ಲಿದ್ದ ಕಲ್ಲಿನ ಆಯುಧಗಳು, ಮಣ್ಣಿನ ಪಾತ್ರೆಗಳನ್ನೂ ಕಾಣಬಹುದು.

ಒಂದೇ ದೇವತೆಯ ವಿವಿಧ ಸ್ವರೂಪದ ಮೂರ್ತಿಗಳು ಇಲ್ಲಿವೆ. ಅದರಲ್ಲಿ ಗಮನ ಸೆಳೆಯುವುದು ಏಳಕ್ಕೂ ಹೆಚ್ಚು ಮಹಿಷಾಸುರ ಮರ್ಧಿನಿ ಮೂರ್ತಿಗಳು. ಗಾತ್ರದಲ್ಲಿ ಹಾಗೂ ಕೆತ್ತಿರುವ ಕಲ್ಲಿನಲ್ಲಿ ವ್ಯತ್ಯಾಸವಿದೆ. ಅದೇ ರೀತಿ ಅಪರೂಪದ ವಿಷ್ಣು, ಸೂರ್ಯ, ರಸಿಕ ದಂಪತಿಗಳು, ಯಕ್ಷಿಣಿ, ನರಸಿಂಹನ ವಿವಿಧ ಭಂಗಿಯ ಮೂರ್ತಿಗಳು, ಕಾರ್ತಿಕೇಯ, ಉಮಾಮಹೇಶ್ವರ, ಮಹಾಸತಿಯರು, ಸಪ್ತ ಮಾತೃಕೆಯರು, ಪಾರ್ಶ್ವನಾಥ ತೀರ್ಥಂಕರರು ಹೀಗೆ ವಿವಿಧ ರೀತಿಯ ಮೂರ್ತಿಗಳನ್ನು ನೋಡಬಹುದು. ಅರಮನೆಯ ಮುಂಭಾಗದಲ್ಲಿ ಬೃಹದಾಕಾರದ ಲೋಹದ ಗಂಟೆಯನ್ನು ತೂಗು ಹಾಕಲಾಗಿದೆ. ಅದರ ಗಾತ್ರ ಅಚ್ಚರಿ ಹುಟ್ಟಿಸುತ್ತದೆ. ಆದರೆ ಸದ್ದು ಹೊರಡಿಸುವುದಿಲ್ಲ. ಏಕೆಂದರೆ ಅದರ ನಾಲಿಗೆ ಇಲ್ಲವಾಗಿದೆ.

ಡಿಜಿಟಲ್ ತಾಳೆಗರಿ ಪ್ರದರ್ಶನ: ವಾಲ್ಮೀಕಿ ರಾಮಾಯಣದ ಸುಂದರಕಾಂಡ, ವೇದ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಮಹಾಭಾರತದ ತಾತ್ಪರ್ಯ ಹೀಗೆ ಹತ್ತಾರು ಕನ್ನಡ, ತುಳು, ಮಲೆಯಾಳಂ ಕೃತಿಗಳ ತಾಳೆಗರಿಗಳನ್ನೂ ಸಂರಕ್ಷಿಸಲಾಗಿದೆ. ಈ ಡಿಜಿಟಲ್ ಯುಗದಲ್ಲಿ ಇವುಗಳನ್ನು ಮಕ್ಕಳಿಗೆ ತೋರಿಸುವುದು ಅವಶ್ಯಕ.

ತುಂಗಾ ನದಿ ತಟದಲ್ಲಿಯೇ ಅರಮನೆ ನಿರ್ಮಾಣವಾಗಿದೆ. ಇಲ್ಲಿ ನಿಂತು ತಂಪಾದ ಗಾಳಿಯನ್ನು ಆಹ್ವಾದಿಸಬಹುದು. ಅರಮನೆಗೆ ಹೊಂದಿಕೊಂಡಂತೆಯೇ ದೂರ್ವಾಸ ಕ್ಷೇತ್ರವಾದ ಕೋಟೆ ಸೀತಾರಾಮಾಂಜನೇಯ ಹಾಗೂ ಭೀಮೇಶ್ವರ ದೇವಸ್ಥಾನಗಳಿವೆ. ಪ್ರವೇಶ ದ್ವಾರ ಹಾಗೂ ಅರಮನೆ ಮುಂಭಾಗ ಹುಲ್ಲಿನ ಹಾಸಿದೆ. ಆದರೆ ಸ್ವಚ್ಚ ಶೌಚಾಲಯವಿಲ್ಲ. ಹಲವು ಶಿಲಾ ಮೂರ್ತಿಗಳು ಹಾಗೂ ಇತರೆ ಪುರಾತನ ಕಲ್ಲಿನ ಕೆತ್ತನೆಗಳನ್ನು ಅಲ್ಲಲ್ಲಿ ಎಸೆಯಲಾಗಿದೆ.

ಇಷ್ಟೆಲ್ಲಾ ವೈಶಿಷ್ಟ್ಯಗಳಿದ್ದರೂ ಶಿವಮೊಗ್ಗದ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಈ ಅರಮನೆಗೆ ಪ್ರವಾಸಿಗಳ ಸಂಖ್ಯೆ ಕಡಿಮೆಯೇ. ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಿದರೆ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ.

ಹೋಗುವುದು ಹೇಗೆ?

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಂದಲೂ ಶಿವಮೊಗ್ಗಕ್ಕೆ ಬಸ್‌, ರೈಲು ಸಂಪರ್ಕವಿದೆ. ನಗರದ ಹೃದಯ ಭಾಗದಲ್ಲಿನ ಕೋಟೆ ರಸ್ತೆಯಲ್ಲಿರುವ ಅರಮನೆ ಬಸ್‌ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‌ನಿಂದ ಸುಮಾರು 2 ಕಿ.ಮೀ ದೂರವಿದೆ. ಎರಡೂ ಕಡೆಯಿಂದಲೂ ಸಿಟಿ ಬಸ್ ಮತ್ತು ಆಟೊಗಳು ಸಿಗುತ್ತವೆ.

ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅರಮನೆ ವೀಕ್ಷಣೆಗೆ ಅವಕಾಶ.

ಚಿತ್ರಗಳು: ಮಲ್ಲಿಕಾರ್ಜುನ ಹೊಸಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT