ಶುಕ್ರವಾರ, ಜೂನ್ 5, 2020
27 °C
ಪ್ರತಿಕ್ವಿಂಟಲ್‌ಗೆ ₹2,897 ದರ, ಜ.15ರವರೆಗೆ ನೋಂದಣಿ, ಮಾ.31ರವರೆಗೆ ಖರೀದಿ

ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ: ನೋಂದಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ  2018–19ನೇ ಸಾಲಿನ ಮುಂಗಾರು ಅವಧಿಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಸಲುವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 15ರವರೆಗೆ ನೋಂದಣಿ ನಡೆಯಲಿದೆ.

ಸರ್ಕಾರ, ಪ್ರತಿ ಕ್ವಿಂಟಲ್‌ ರಾಗಿಗೆ ₹2,897 ದರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಸಲಾಗುತ್ತಿದ್ದು, ಗರಿಷ್ಠ ಮಿತಿ 75 ಕ್ವಿಂಟಲ್‌. ರೈತರು ಬೆಳೆದಿರುವ ರಾಗಿಯನ್ನು ನೋಂದಣಿ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿದಂತಹ ರೈತರಿಂದ ನೇರವಾಗಿ ಖರೀದಿ ಏಜೆನ್ಸಿಗಳ ಮೂಲಕ ಜಿಲ್ಲಾಡಳಿತ ಖರೀದಿಸಲಿದೆ. ಸಂಗ್ರಹಣಾ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ನೇಮಕ ಮಾಡಲಾಗಿದೆ.

ನೋಂದಣಿ ಮಾಡುವ ಕೇಂದ್ರದಲ್ಲಿ ರಾಗಿಯ ಮಾದರಿಯನ್ನು ಹಾಜರು ಪಡಿಸಬೇಕು. ರೈತರು ಅವರ ಸ್ವಂತ ಖರ್ಚಿನಲ್ಲಿ ಖರೀದಿ ಮತ್ತು ಸಂಗ್ರಹ ಮಾಡುವ ಸಂಗ್ರಹಣಾ ಸ್ಥಳಕ್ಕೆ ತರಬೇಕು. ರಾಗಿಯನ್ನು ಒಂದು ಬಾರಿ ಉಪಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ ಸಾಮರ್ಥ್ಯದ) ಗೋಣಿ ಚೀಲಗಳಲ್ಲಿ ತರಬೇಕು.

ರಾಗಿಯ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ಗುಣಮಟ್ಟದ ಪರೀಕ್ಷಕರನ್ನು ನೇಮಿಸಲಾಗಿದೆ. ಗುಣಮಟ್ಟ ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ದೃಢಪಟ್ಟರೆ ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ರೈತರು 2018–19ನೇ ಸಾಲಿನ ಕಂಪ್ಯೂಟರ್ ಪಹಣಿ ಮತ್ತು 2018ನೇ ಸಾಲಿನಲ್ಲಿ ಮುಂಗಾರಿನಲ್ಲಿ ಎಷ್ಟು ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ ಎಂಬ ಬಗ್ಗೆ ಹಾಗೂ ರೈತರ ಮಾದರಿ ಸಹಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ದೃಢೀಕರಿಸಿರುವ ಪತ್ರಗಳನ್ನು ಕಂದಾಯ ನಿರೀಕ್ಷಕ (ಆರ್.ಐ) ಅವರಿಂದ ಅನುಮೋದನೆಗೆ ಒಳಗೊಂಡ ದಾಖಲೆಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಬೇಕು.

ರೈತರ ಆಧಾರ್ ದೃಢೀಕೃತ ಸಂಖ್ಯೆಯ ನೋಂದಾವಣೆ ಕಡ್ಡಾಯವಾಗಿದ್ದು, ಹಾಗೂ ಅಂತಹ ರೈತರಿಂದ ಮಾತ್ರ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗುತ್ತದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ಆನ್‌ಲೈನ್‌ ಮೂಲಕ ನೇರವಾಗಿ ಜಮೆ ಮಾಡಲಾಗುತ್ತದೆ. ರೈತರು ಬ್ಯಾಂಕ್ ಖಾತೆಯ ವಿವರ ಐ.ಎಫ್.ಎಸ್.ಸಿ ಕೋಡ್ ಸೇರಿದಂತೆ ಇತರೆ ವಿವರಗಳನ್ನು ದೃಢೀಕರಿಸಿ ನೀಡಬೇಕು.

ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು, ತಹಶೀಲ್ದಾರರು, ಉಗ್ರಾಣ ವ್ಯವಸ್ಥಾಪಕರ ಗಮನಕ್ಕೆ ತರಬಹುದು. ದೂರುಗಳನ್ನು ದೂರವಾಣಿ ಸಂಖ್ಯೆ 08226-224660, ಮೊಬೈಲ್ 9737875870 ಮತ್ತು 7760967049ಗೆ ಕರೆಮಾಡಿ ನೀಡಬಹುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 ಖರೀದಿ ಕೇಂದ್ರಗಳು
ಖರೀದಿ ಕೇಂದ್ರಗಳನ್ನು ಚಾಮರಾಜನಗರ ಮತ್ತು ಕೊಳ್ಳೇಗಾಲದ ರಾಜ್ಯ ಉಗ್ರಾಣ ನಿಗಮ, ಗುಂಡ್ಲುಪೇಟೆ, ಸಂತೇಮರಹಳ್ಳಿ ಮತ್ತು ಹನೂರಿನ ಎ.ಪಿ.ಎಂ.ಸಿ ಅವರಣದಲ್ಲಿ ತೆರೆಯಲಾಗಿದೆ. ರೈತರು ಈ ಕೇಂದ್ರಗಳಲ್ಲೇ ಜನವರಿ 15ರವರೆಗೆ ನೋಂದಣಿ ಮಾಡಬೇಕು. ಜನವರಿ 16 ರಿಂದ ಮಾರ್ಚ್ 31ರ ವರೆಗೆ ನೋಂದಾಯಿಸಿದ ರೈತರಿಂದ ರಾಗಿಯನ್ನು ಖರೀದಿಸಲಾಗುತ್ತದೆ.

ಅಂಕಿ ಅಂಶ
* ₹2,897 –‌ಪ್ರತಿ ಕ್ವಿಂಟಲ್‌ ರಾಗಿಗೆ ಸರ್ಕಾರ ನಿಗದಿಪಡಿಸಿರುವ ದರ
* 75 ಕ್ವಿಂಟಲ್‌ –ಗರಿಷ್ಠ ಖರೀದಿ ಮಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು