ಬುಧವಾರ, ಮೇ 12, 2021
22 °C
ಸೂಕ್ತ ಭೂಬಳಕೆ ನೀತಿ ಹಾಗೂ ಕಾಲಬದ್ಧ ಸಂರಕ್ಷಣಾ ಯೋಜನೆಗಳು ಅಗತ್ಯ

ಸಹ್ಯಾದ್ರಿಗೆ ಒಗ್ಗುವ ವಿಕಾಸ ನೀತಿ ಬೇಕು

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ರಾಜ್ಯದ ನೂರೈವತ್ತಾರು ತಾಲ್ಲುಕುಗಳು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸುವುದರೊಂದಿಗೆ, ಬರಲಿರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಮೇವಿನಂಥ ಪ್ರಾಥಮಿಕ ಅಗತ್ಯಗಳ ಪೂರೈಕೆಯೂ ಕಷ್ಟವಾಗಲಿರುವ ಮುನ್ಸೂಚನೆ ದೊರಕಿದೆ. ಮುನ್ನೂರು ಇಂಚಾದರೂ ಮಳೆ ಬೀಳಬೇಕಾದ ಮಲೆನಾಡು ಹಾಗೂ ಕರಾವಳಿಯ ತಾಲ್ಲೂಕುಗಳೂ ಈ ಪಟ್ಟಿಯಲ್ಲಿವೆ!

ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರದ ಹಲವು ಭಾಗಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಖರೀದಿಸಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರಾಯಚೂರು, ಬಳ್ಳಾರಿ, ಯಾದಗಿರಿಯ ಹಲವೆಡೆ ಜಾನುವಾರುಗಳಿಗೆ ಮೇವು ಒದಗಿಸುವುದೂ ಸರ್ಕಾರಕ್ಕೆ ಸವಾಲಾಗುತ್ತಿದೆ. ಕರುನಾಡು ಸಂಪೂರ್ಣವಾಗಿ ಬರದ ನಾಡಾಗುತ್ತಿರುವುದಕ್ಕೆ ನಾವೆಲ್ಲ ಸಾಕ್ಷಿಗಳಾಗುತ್ತಿದ್ದೇವೆ!

ಇದೇನೂ ಅನಿರೀಕ್ಷಿತವಾಗಿ ಬಂದೊರಗಿದ ಸನ್ನಿವೇಶವೇನಲ್ಲ. ಕಳೆದ ಒಂದೂವರೆ ದಶಕದಿಂದಂತೂ ರಾಜ್ಯದ ಬಹುತೇಕ ಭಾಗಗಳು ಬರಕ್ಕೆ ತುತ್ತಾಗುತ್ತಲೇ ಇವೆ. ಜಾಗತಿಕ ಹವಾಮಾನ ಬದಲಾವಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸ್ಥಳೀಯವಾಗಿ ನಾವಿಡುತ್ತಿರುವ ತಪ್ಪು ಹೆಜ್ಜೆಗಳು- ಇವೆರಡೂ ಇದಕ್ಕೆ ಕಾರಣ. ತಾಪಮಾನ ಏರಿದಂತೆಲ್ಲ ಕೃಷಿ ಉತ್ಪಾದಕತೆಯೂ ಗಣನೀಯವಾಗಿ ಕಡಿಮೆಯಾಗುವುದರಿಂದ, ರೈತರು ಹಾಗೂ ವನವಾಸಿಗಳು ತೀರಾ ಸಂಕಷ್ಟಕ್ಕೀಡಾಗುವ ಅಂಶಗಳನ್ನು ಅಧ್ಯಯನಗಳು ದಾಖಲಿಸಿವೆ. ಈ ಕಾರಣಕ್ಕಾಗಿ ದೇಶದಲ್ಲಿ ಕೃಷಿ ಉತ್ಪಾದನೆಯು ಶೇಕಡ 20 ರಿಂದ ಶೇ 25ರವರೆಗೆ ಕುಸಿತವಾಗಲಿದೆಯೆಂದು, ಸಂಸತ್ತಿನಲ್ಲಿ ಮಂಡಿಸಿದ ಹಣಕಾಸು ಪರಿಸ್ಥಿತಿ ಸಮೀಕ್ಷೆಯೇ (2018) ಹೇಳಿದೆ!

ಹವಾಮಾನ ಬದಲಾವಣೆ ಕುರಿತ ಅಂತರರಾಷ್ಟ್ರೀಯ ಸಮಿತಿಯು (IPCC) ಕಳೆದ ಅಕ್ಟೋಬರಿನಲ್ಲಿ ಬಿಡುಗಡೆ ಮಾಡಿದ ವರದಿಯಂತೂ 2020 ರಿಂದ 2050ರ ಅಲ್ಪಾವಧಿಯಲ್ಲಿ ಜಾಗತಿಕ ತಾಪಮಾನವು ಸುಮಾರು 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರುವ ಮುನ್ಸೂಚನೆ ನೀಡಿದೆ. ನೀರಿನ ಕೊರತೆಯು ತೀವ್ರವಾಗಿ, ಕಾಲ-ದೇಶವನ್ನು ಮೀರಿ ಬರವು ಎಲ್ಲರನ್ನೂ ತಬ್ಬಿಕೊಳ್ಳುತ್ತಿರುವ ಪರಿಯಿದು!

ಹದಗೆಡುತ್ತಿರುವ ನೆಲ–ಜಲ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ, ಪಶ್ಚಿಮಘಟ್ಟ ಶ್ರೇಣಿಯನ್ನು ಸಂರಕ್ಷಿಸುವುದೂ ಅತ್ಯಗತ್ಯ ಕಾರ್ಯ ಎಂಬುದೀಗ ತಜ್ಞರು ಒಪ್ಪಿಕೊಂಡಿರುವ ಅಂಶ. ಸಹ್ಯಾದ್ರಿ ಶ್ರೇಣಿಯ ನಿರ್ವಹಣೆಯನ್ನು ಈ ವಿಶಾಲ ದೃಷ್ಟಿಕೋನದಿಂದ ನೋಡಬೇಕಾಗಿದೆ. ಪಶ್ಚಿಮಘಟ್ಟಗಳು ಜೀವವೈವಿಧ್ಯ ತಾಣಗಳಷ್ಟೇ ಅಲ್ಲ. ಪೂರ್ವಕ್ಕೆ ಹರಿಯುವ ಕೃಷ್ಣಾ-ಕಾವೇರಿ ಹಾಗೂ ಪಶ್ಚಿಮಾಭಿಮುಖವಾದ ಕಾಳಿ, ಅಘನಾಶಿನಿ, ಶರಾವತಿ, ನೇತ್ರಾವತಿಯಂಥ ನದಿಗಳಿಗೆ ನೀರುಣಿಸುವ ಕಾಮಧೇನು ಕೂಡ.

ಬಯಲುಸೀಮೆಯ ತೇವಾಂಶವನ್ನೋ ಅಥವಾ ಕರಾವಳಿಯಲ್ಲಿ ಸಿಹಿನೀರಿನ ಲಭ್ಯತೆಯನ್ನೋ ನಿರ್ಧರಿಸುವುದು ಈ ವಿಶಿಷ್ಟ ಪರಿಸರವೇ. ಈ ಮೂಲಕ, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಉತ್ಪಾದಕತೆಯನ್ನು ಕಾದಿಡುವಲ್ಲಿ ಇದರ ಪಾತ್ರ ಗಣನೀಯ. ಕೃಷಿ ಕ್ಷೇತ್ರದಲ್ಲಿ ಶೇ 1ರಷ್ಟು ಹೆಚ್ಚಳವಾದರೂ, ಬಡತನ ನಿರ್ಮೂಲನೆ ಪ್ರಮಾಣ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುವುದನ್ನು ಆರ್ಥಿಕತಜ್ಞರು ತೋರಿಸಿದ್ದಾರಲ್ಲ! ರಾಜ್ಯ ಸರ್ಕಾರದ ಹವಾಮಾನ ಬದಲಾವಣೆ ನಿರ್ವಹಣೆ ಸಮಿತಿಯೂ ಕೃಷಿಕ್ಷೇತ್ರದ ಪ್ರಗತಿ, ನೀರಿನ ಸುರಕ್ಷತೆಗಾಗಿ ಪಶ್ಚಿಮಘಟ್ಟಗಳ ಸಂರಕ್ಷಣೆ ಅಗತ್ಯ ಎಂದು ಹೇಳಿದೆ.

ಆದರೆ, ಇಂದಿನ ಮಲೆನಾಡು ಸಮೃದ್ಧವಾಗಿಯೇನೂ ಉಳಿದಿಲ್ಲ. ರಾಷ್ಟ್ರೀಯ ಅರಣ್ಯ ನೀತಿಯು (1985), ಗುಡ್ಡಗಾಡುಗಳಲ್ಲಿ ಕನಿಷ್ಠ ಶೇ 66 ಹಾಗೂ ಬಯಲು ಪ್ರದೇಶಗಳಲ್ಲಿ ಕನಿಷ್ಠ ಶೇ 33ರಷ್ಟು ನೈಸರ್ಗಿಕ ಅರಣ್ಯ ಪ್ರದೇಶವಿರಬೇಕೆಂದೇನೋ ಹೇಳುತ್ತದೆ. ವಾಸ್ತವದಲ್ಲಿ, ರಾಜ್ಯದಲ್ಲಿ ನೈಜ ಅರಣ್ಯ ಪ್ರದೇಶವು ಈಗ ಶೇ 12 ಕೂಡ ಇರದಿರುವುದನ್ನು ಸಂಶೋಧನೆಗಳು ದಾಖಲಿಸಿವೆ! ಬುಡಕಟ್ಟು ಜನಾಂಗ ಹಾಗೂ ವನವಾಸಿಗಳಿಗೆ ಐತಿಹಾಸಿಕ ನ್ಯಾಯ ಒದಗಿಸುವ ಉದ್ದೇಶದಿಂದ ಬಂದ ಅರಣ್ಯ ಹಕ್ಕು ಕಾಯ್ದೆ ಅನ್ವಯ ಮಲೆಕುಡಿಯ, ಗೌಳಿ, ಕುಣಬಿ ತರಹದ ನೈಜ ಬುಡಕಟ್ಟು ಕುಟುಂಬಗಳಿಗೇನೂ ಕೃಷಿಭೂಮಿ ದೊರಕಿಲ್ಲ.

ಇದನ್ನು ದುರ್ಬಳಕೆ ಮಾಡಿ, ಪಶ್ಚಿಮಘಟ್ಟದಾದ್ಯಂತ ಬಲಾಢ್ಯರು ಮಾತ್ರ ಭೂಕಬಳಿಸುತ್ತಿದ್ದಾರೆ! ಜೊತೆಗೆ, ಸಹ್ಯಾದ್ರಿಯ ಹೃದಯದಂತಿರುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ವಿಸ್ತಾರವಾದ ಗೋಮಾಳ, ಬಾಣೆ, ಬನ, ಕಾನು ಇತ್ಯಾದಿ ಸರ್ಕಾರಿ ಕಂದಾಯ ಭೂಮಿಯಲ್ಲಿನ ‘ಡೀಮ್ಡ್ ಅರಣ್ಯ’ವಂತೂ ಅತಿಕ್ರಮಣವಾಗುತ್ತಿದೆ. ಇದನ್ನು ನಿಯಂತ್ರಿಸುವ ಬದಲು, ಭೂಕಬಳಿಕೆದಾರರ ರಾಜಕೀಯ ಒತ್ತಡಕ್ಕೆ ಮಣಿದು, ರಾಜ್ಯ ಕಂದಾಯ ಇಲಾಖೆಯು ಬಗರ್‌ಹುಕುಂ ಅರ್ಜಿ ಪಡೆಯುವ ದಿನಾಂಕವನ್ನೇ ವಿಸ್ತರಿಸುತ್ತಿದೆ!

ಮಲೆನಾಡಿನ ನದಿ ತಪ್ಪಲುಗಳಲ್ಲಂತೂ ಅನುಮತಿರಹಿತ ಮರಳು ಗಣಿಗಾರಿಕೆ ಹಾಗೂ ಕ್ವಾರಿಗಳು ಸಾಮಾನ್ಯವಾಗಿವೆ. ಅರಣ್ಯದಂಚಿನಲ್ಲಿ ದಿಕ್ಕುದೆಸೆಯಿಲ್ಲದೆ ನಗರೀಕರಣವೂ ಸಾಗಿದೆ. ಸರ್ಕಾರ ಅಥವಾ ಖಾಸಗಿಯವರು ಬೆಳೆಸಿದ ಅಕೇಶಿಯಾ, ನೀಲಗಿರಿ, ಪೈನಸ್, ರಬ್ಬರಿನಂಥ ಏಕಪ್ರಭೇದ ನೆಡುತೋಪುಗಳೇ ಉಳಿಯುತ್ತಿರುವ ‘ಕಾಡುಗಳು’! ಕೈಗಾರಿಕೆಗಳು ಹಾಗೂ ಪಟ್ಟಣಗಳ ತ್ಯಾಜ್ಯದಿಂದಾಗಿ ನದಿ-ತೊರೆಗಳು ಮಾಲಿನ್ಯವಾಗುತ್ತಿದ್ದರೆ, ಕೆರೆಗಳಲ್ಲಿ ಹೂಳು ತುಂಬುತ್ತಿದೆ. ಸೂಕ್ತ ಭೂಬಳಕೆ ನೀತಿಯೂ ಇಲ್ಲದೆ ಹಾಗೂ ಇರುವ ಕಾನೂನುಗಳನ್ನೂ ಪಾಲಿಸದೆ ಮಲೆನಾಡನ್ನು ನಿರ್ವಹಿಸುತ್ತಿರುವ ಪರಿಣಾಮವಿದು! ಕಳೆದ ಮಳೆಗಾಲದಲ್ಲಿ ಕೊಡಗಿನಲ್ಲಾದ ಭಾರಿ ಭೂಕುಸಿತದ ಅಧ್ಯಯನ ಮಾಡಿದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ, ಅವೈಜ್ಞಾನಿಕ ಭೂಪರಿವರ್ತನೆಯೇ ಈ ಅವಘಡಕ್ಕೆ ಕಾರಣವೆಂದು ಸ್ಪಷ್ಟವಾಗಿ ಹೇಳಿದ್ದರೂ, ಸಹ್ಯಾದ್ರಿಯ ಕುರಿತು ಸರ್ಕಾರದ ನಿರ್ಲಕ್ಷ್ಯ ಮುಂದುವರಿದೇ ಇದೆ. ಜನರ ಅಪೇಕ್ಷೆ ಹಾಗೂ ಅಗತ್ಯದ ಕುರಿತ ಪ್ರಾಥಮಿಕ ಅಧ್ಯಯನಗಳನ್ನೂ ಮಾಡದೆ, ಲಕ್ಷಾಂತರ ಮರಗಳನ್ನು ಕಡಿದುಮಲೆನಾಡಿನ ಸಾವಿರಾರು ಕಿ.ಮೀ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿರುವುದೇ ಇದಕ್ಕೆ ಸಾಕ್ಷಿ!

ಜಲಮೂಲಗಳಾದ ಸಹ್ಯಾದ್ರಿಯ ಅರಣ್ಯ, ನದಿತೊರೆಗಳು ಹಾಗೂ ಕೃಷಿ ಸಂಸ್ಕೃತಿಯನ್ನು ರಕ್ಷಿಸುತ್ತಲೇ, ಇಲ್ಲಿಯ ನೈಜ ಅಭಿವೃದ್ಧಿ ಸಾಧಿಸಬೇಕಾದ್ದು ಇಂದಿನ ಸವಾಲು. ಇದನ್ನೆಲ್ಲ ಗ್ರಹಿಸುವ ಸೂಕ್ತವಾದ ಮತ್ತು ಸಶಕ್ತವಾದ ಭೂಬಳಕೆ ನೀತಿಯೊಂದು ಜಾರಿಗೆ ಬಂದರೆ ಮಾತ್ರ, ನಾಡಿನ ಸುಸ್ಥಿರ ಅಭಿವೃದ್ಧಿ ಸಾಧ್ಯವೇನೋ. ಪರಿಸರ ಸಂರಕ್ಷಣಾ ಕಾಯ್ದೆಯ (1986) ಅನ್ವಯ, ಅರಣ್ಯ ಮತ್ತು ಪರಿಸರ ಸಚಿವಾಲಯವು ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ಮುಂದಾಗಿರುವುದು ಈ ಉದ್ದೇಶದಿಂದ.

ಈ ನಿಟ್ಟಿನಲ್ಲಿ ರಚಿತವಾಗಿದ್ದ ಮಾಧವ ಗಾಡ್ಗೀಳ್‌ ಸಮಿತಿಯು ಪಶ್ಚಿಮಘಟ್ಟದ ಶೇ 64ರಷ್ಟು ಪ್ರದೇಶವನ್ನಾದರೂ ಸಂರಕ್ಷಿಸಲು ಸೂಚಿಸಿತ್ತು. ಪರಿಸರ ಸುಸ್ಥಿರತೆ ಮತ್ತು ಜನರ ಶ್ರೇಯೋಭಿವೃದ್ಧಿ- ಇವೆರಡನ್ನೂ ಸರಿದೂಗಿಸುವ ಆಡಳಿತ ಸೂತ್ರಗಳು ಅದರಲ್ಲಿದ್ದವು. ಅದರ ಮಹತ್ವನ್ನರಿಯದ ಜನಪ್ರತಿನಿಧಿಗಳು ಈ ವರದಿಯನ್ನೇ ವಿರೋಧಿಸಿದ್ದರಿಂದ, ಹೊಸದಾಗಿ ಕಸ್ತೂರಿ ರಂಗನ್ ಸಮಿತಿ ರಚಿತವಾಯಿತು. ತೀರಾ ಅಮೂಲ್ಯವಾಗಿರುವ ಕನಿಷ್ಠ ಶೇ 37ರಷ್ಟಾದರೂ ಅರಣ್ಯ ಪ್ರದೇಶವನ್ನು ಸಂರಕ್ಷಿಸಲು ಈ ಸಮಿತಿ ಸಲಹೆ ಮಾಡಿದೆ. ಆದರೆ, ಕಾನೂನುಗಳನ್ನು ರೂಪಿಸಬೇಕಾದ ಶಾಸಕರೇ ಅದನ್ನು ಓದದೆಯೇ ತಿರಸ್ಕರಿಸಿದ್ದಾರೆ. ಮಲೆನಾಡಿನಲ್ಲಿ ನಿರಂತರ ಸುಳ್ಳು ವದಂತಿಗಳನ್ನು ಹಬ್ಬಿಸಿ ಈ ವರದಿಗೆ ‘ಕೃತಕ ವಿರೋಧ’ ಸೃಷ್ಟಿಸುವಲ್ಲೂ ಯಶಸ್ವಿಯಾಗಿದ್ದಾರೆ!

ಸೂಕ್ತ ಭೂಬಳಕೆ ನೀತಿ ಹಾಗೂ ಕಾಲಬದ್ಧ ಸಂರಕ್ಷಣಾ ಯೋಜನೆಗಳ ಮೂಲಕ, ಪಶ್ಚಿಮಘಟ್ಟದ ಸೂಕ್ಷ್ಮಪ್ರದೇಶಗಳನ್ನು ಕಾಪಾಡಲೇಬೇಕಿದೆ. ಕೃಷ್ಣರಾಜಸಾಗರ ಹಿನ್ನಿರಿನಲ್ಲಿ ಡಿಸ್ನಿಲ್ಯಾಂಡ್ ಬಗೆಯ ಅನಗತ್ಯ ಯೋಜನೆ ಹಮ್ಮಿಕೊಳ್ಳುವುದರ ಬದಲಾಗಿ, ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಜನರ ಸಹಭಾಗಿತ್ವದೊಂದಿಗೆ ವ್ಯಾಪಕವಾಗಿ ಅರಣ್ಯೀಕರಣ, ಕೆರೆಗಳ ಹೂಳೆತ್ತುವಂಥ ಕಾರ್ಯ ಕೈಗೊಳ್ಳಬಾರದೇ? ಈ ಬಗೆಯ ವಿವೇಕಯುತ ನೀತಿ, ದೂರದೃಷ್ಟಿಯ ಯೋಜನೆಗಳು ಮತ್ತು ಅವನ್ನು ಸಾಧಿಸುವ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ, ನಾಡು ಬರದಿಂದ ಪಾರಾಗಬಹುದೆಂದು ಸರ್ಕಾರ ಅರಿಯಬೇಕಿದೆ.


ಕೇಶವ ಎಚ್. ಕೊರ್ಸೆ

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು