ಸೋಮವಾರ, ಏಪ್ರಿಲ್ 19, 2021
32 °C

ಚೂಪಾದ ಪೆನ್ಸಿಲ್‌ ಇದ್ದಂತೆ...!

ಸಂದರ್ಶನ: ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪದವಿ ಪಡೆದು, ದೊಡ್ಡ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದರೂ ಕೆಲಸ ಬಿಟ್ಟು, ಅಧ್ಯಾತ್ಮ ಗುರುವಾಗಿ ಯುವಜನರನ್ನು ಆಕರ್ಷಿಸುತ್ತಿದ್ದಾರೆ, ಗುರು ಗೌರ್‌ ಗೋಪಾಲ್‌ ದಾಸ್‌. ತಮ್ಮ ಮಾತಿನ ಮೂಲಕ ಮೋಡಿ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.

*ಎಂಜಿನಿಯರ್ ಅಧ್ಯಾತ್ಮಗುರುವಾಗಿದ್ದು ಹೇಗೆ?
ನನ್ನ ಹಲವು ಸಹಪಾಠಿಗಳು, ಸ್ನೇಹಿತರು ಪ್ರಮುಖ ಕಂಪನಿಗಳ ಸಿಇಒಗಳಾಗಿದ್ದಾರೆ. ಅಧ್ಯಾತ್ಮಗುರುವಾಗದಿದ್ದರೆ ನಾನೂ ಯಾವುದಾದರೂ ಕಂಪನಿಯ ಸಿಇಒ ಆಗಿರುತ್ತಿದ್ದೆ. ಎಲ್ಲರೂ ಒಂದೇ ರೀತಿ ಯೋಚಿಸಿದರೆ ವಿಶ್ವದಲ್ಲಿ ವೈವಿಧ್ಯ ಎಂಬುದೇ ಇರುವುದಿಲ್ಲ. ಸ್ವಹಿತಾಸಕ್ತಿ ಬಗ್ಗೆಯೇ ಸದಾ ಯೋಚಿಸಬಾರದು, ಸಮಾಜಕ್ಕಾಗಿ ಏನಾದರೂ ಮಾಡಬೇಕು. ಕಂಪ್ಯೂಟರ್‌ಗಳಿಗಿಂತ ಹೆಚ್ಚಾಗಿ ಅಧ್ಯಾತ್ಮವೇ ನನ್ನ ಗಮನ ಸೆಳೆಯಿತು. ಹೀಗಾಗಿ ಈ ಕ್ಷೇತ್ರಕ್ಕೆ ಬಂದೆ. ಇಂದಿನ ತಂತ್ರಜ್ಞಾನಯುಗದಲ್ಲಿ ಜನರು ಹೆಚ್ಚಾಗಿ ಕಂಪ್ಯೂಟರ್‌ ಸಂಗ ಬಯಸುತ್ತಾರೆ. ಆದರೆ ನಾನು ಜನರ ಸಂಗ ಬಯಸುತ್ತೇನೆ.

* ನೀವು ಸಂವಹನದ ಕಲೆ ಕಲಿತದ್ದು ಹೇಗೆ?
ಮಾತನಾಡುವ ಕಲೆ ಕೆಲವರಿಗೆ ಸ್ವಾಭಾವಿಕವಾಗಿ ಬಂದರೆ, ಕೆಲವರು ತಮ್ಮ ಅನುಭವಗಳಿಂದ ಕಲಿಯುತ್ತಾರೆ. ಇನ್ನೂ ಕೆಲವರು ಓದು, ಬರಹದ ಮೂಲಕ ಕಲಿಯುತ್ತಾರೆ. ಈ ಕೌಶಲ ಬರಬೇಕೆಂದರೆ ಹೆಚ್ಚು ಸಮಯ ಬೇಕಾಗಬಹುದು. ನಾನೂ ಹಲವು ವಿಧಗಳಲ್ಲಿ ಕಲಿತಿದ್ದೇನೆ.

*ಯುವಸಮುದಾಯವೇ ನಿಮ್ಮನ್ನು ಹೆಚ್ಚಾಗಿ ಅನುಸರಿಸುತ್ತಿದೆ. ಕಾರಣ ಏನಿರಬಹುದು?
ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಕರು ಹೆಚ್ಚಾಗಿ ಮೊಬೈಲ್‌, ಲ್ಯಾಪ್‌ಟಾಪ್‌... ಹೀಗೆ ವಿವಿಧ ಸಾಧನಗಳ ಬಲೆಗೆ ಸಿಲುಕಿದ್ದಾರೆ. ಅವರನ್ನು ಅಧ್ಯಾತ್ಮದ ಕಡೆಗೆ ಸೆಳೆಯಬೇಕೆಂದರೆ, ಅವರ ಮನ ತಟ್ಟುವಂತೆ ಮಾತನಾಡಬೇಕು, ಏನೇ ಹೇಳಿದರೂ ಅವರಿಗೆ ಸಂಬಂಧವಿರುವ ವಿಷಯ ಆಗಿರಬೇಕು. ನಾನು ಮಾಡುವುದೂ ಅದನ್ನೇ. ಸಂಸ್ಕೃತಶ್ಲೋಕಗಳ ಮೂಲಕ ಬೋಧಿಸಿದರೆ ಸುಲಭವಾಗಿ ಅರ್ಥವಾಗುವುದು ಕಷ್ಟ. ಆದರೆ ಇದೇ ಶ್ಲೋಕಗಳ ಅರ್ಥವನ್ನು ಅವರ ಭಾಷೆಯಲ್ಲಿ ವಿವರಿಸಿದರೆ ಖಂಡಿತ ಇಷ್ಟಪಡುತ್ತಾರೆ.

*ಪುಸ್ತಕ ಬರೆಯಬೇಕೆಂಬ ಪ್ರೇರಣೆ ಹೇಗೆ ಮೂಡಿತು?
‘ಪೆಂಗ್ವಿನ್‌’ ಪ್ರಕಾಶನ ಸಂಸ್ಥೆಯವರು, ನೀವೇಕೆ ಪುಸ್ತಕ ಬರೆಯಬಾರದು ಎಂದು ಕೇಳಿದರು. ನೋಡೋಣ ಅಂತ ಹೇಳಿದ್ದೆ. ಮೂರು ದಿನಗಳ ನಂತರ, ಲಂಡನ್‌ನಲ್ಲಿರುವ ನನ್ನ ಆತ್ಮೀಯ ಸ್ನೇಹಿತರೊಬ್ಬರು ನೀವೇಕೆ ಪುಸ್ತಕ ಬರೆಯಬಾರದು ಎಂದರು. ಕರೆ ಕಡಿತಗೊಳಿಸಿ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ, ಸರ್ ರಿಚರ್ಡ್ ಬ್ರ್ಯಾನ್ಸನ್‌ ಅವರ ನುಡಿಮುತ್ತು ಕಣ್ಣಿಗೆ ಬಿತ್ತು. ‘ನಿಮಗೆ ಒಳ್ಳೆಯ ಅವಕಾಶ ಸಿಕ್ಕರೆ ಮಾಡುತ್ತೇನೆ ಎಂದು ಒಪ್ಪಿಕೊಳ್ಳಿ, ನಂತರ ಹೇಗೆ ಮಾಡಬೇಕೆಂದು ಯೋಚಿಸಿ’ ಎಂಬುದು ಆ ಹೇಳಿಕೆಯಾಗಿತ್ತು. ನಾನು ಅದರಿಂದ ಪ್ರಭಾವಿತನಾದೆ. ಕೂಡಲೇ ಪೆಂಗ್ವಿನ್ ಸಂಸ್ಥೆಯವರಿಗೆ ಕರೆ ಮಾಡಿ ಪುಸ್ತಕ ಬರೆಯುವುದಾಗಿ ತಿಳಿಸಿದೆ.

*‘ಲೈಫ್ಸ್‌ ಅಮೇಜಿಂಗ್ ಸೀಕ್ರೇಟ್ಸ್‌’ ಎಂಬ ಶೀರ್ಷಿಕೆಯಡಿ ಪುಸ್ತಕ ಬರೆದಿದ್ದೀರಿ. ಆ ಗುಟ್ಟುಗಳು ಏನು?
ಈ ಪುಸ್ತಕವನ್ನು ಇಷ್ಟಪಟ್ಟು ಖರೀದಿಸುತ್ತಿರುವವರೆಲ್ಲಾ ಬಹುತೇಕ ಯುವಸಮುದಾಯದವರು. ನನ್ನ ಸ್ವಂತ ಅನುಭವಗಳು ಮತ್ತು ಗಮನಕ್ಕೆ ಬಂದಿದ್ದನ್ನು ಮನಮುಟ್ಟುವ ಹಾಗೆ ಬರೆದಿದ್ದೇನೆ. ಈವರೆಗೆ ನೂರಾರು ಪ್ರತಿಗಳು ಮಾರಾಟವಾಗಿವೆ. ಇದು ನನ್ನ ಮೊದಲ ಪುಸ್ತಕ. ಮುಂದೆಯೂ ಇಂತಹ ಹಲವು ಪುಸ್ತಕಗಳನ್ನು ಬರೆಯುವ ಉದ್ದೇಶವಿದೆ.

*ಸದಾ ಜನರ ಸಂಪರ್ಕದಲ್ಲೇ ಇರುತ್ತೀರಿ. ಪುಸ್ತಕ ಬರೆಯುವುದಕ್ಕೆ, ದೈವಾರಾಧನೆಗೆ ಸಮಯ ಸಿಗುತ್ತದೆಯೆ?
ಸುಮಾರು 24 ವರ್ಷಗಳಿಂದ ನನ್ನ ದಿನ ಆರಂಭವಾಗುವುದೇ ಕೃಷ್ಣನ ಆರಾಧನೆ ಮೂಲಕ. ನಿತ್ಯ ಮುಂಜಾನೆ ಹರೇಕೃಷ್ಣ ಮಂತ್ರವನ್ನು ತಪ್ಪದೇ ಜಪಿಸುತ್ತೇನೆ. ಇದಕ್ಕಾಗಿ ಒಂದೂವರೆ ಗಂಟೆ ಮೀಸಲಿಡುತ್ತೇನೆ. ದೇಹಕ್ಕೆ ಅಧ್ಯಾತ್ಮ ಸಂಪರ್ಕ ಹೆಚ್ಚು ಇದ್ದಷ್ಟೂ ಜನರೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಸಾಧ್ಯ ಎಂಬುದು ನನ್ನ ನಂಬಿಕೆ. 

* ಯುವಸಮುದಾಯ ಅಧ್ಯಾತ್ಮದ ಕಡೆಗೆ ಒಲವು ತೋರಲು ಕಾರಣ ಏನಿರಬಹುದು?
ಪ್ರಮುಖ ಕಾರಣ ಒಂದೇ, ಅವರ ಜೀವನದಲ್ಲಿ ಎದುರಾದ ಕಹಿ ಘಟನೆಗಳು. ಅವುಗಳನ್ನು ನಿರ್ವಹಿಸಲಾಗದೆ, ಒಪ್ಪಲಾಗದೇ, ಮದುವೆ, ಬಾಂಧವ್ಯಗಳಿಂದ ದೂರವಾಗುತ್ತಾರೆ. ಅತಿಯಾದ ಗೊಂದಲಗಳು ಕಾಡುತ್ತವೆ. ಸ್ನೇಹಿತರು, ಪರಿಚಿತರ ವಲಯದಲ್ಲಿಯೂ ಇಂಥವೇ ಸಮಸ್ಯೆಗಳಿರುತ್ತವೆಯೇ ಹೊರತು, ಪರಿಹಾರಗಳಿರುವುದಿಲ್ಲ. ಮನಃಶಾಂತಿ ಕೋರುತ್ತದೆ. ಆ ಶಾಂತಿ ಅಧ್ಯಾತ್ಮದಲ್ಲೇ ಹೆಚ್ಚಾಗಿ ಸಿಗುತ್ತದೆ. ಹಾಗಾಗಿ ಅಧ್ಯಾತ್ಮದತ್ತ ಒಲವು ತೋರುವುದು ಹೆಚ್ಚಾಗಿದೆ.

*ಆಧ್ಯಾತ್ಮಿಕ ವಿಷಯಗಳನ್ನು ಬೋಧಿಸಲು ಸಾಮಾಜಿಕ ಜಾಲತಾಣಗಳನ್ನೇ ಹೆಚ್ಚಾಗಿ ಬಳಸಿಕೊಳ್ಳಲು ಕಾರಣ?
ನಾವು ಏನಾದರೂ ಹೇಳಬೇಕು ಎಂದು ಬಯಸಿದರೆ ಜನ ಇರುವಲ್ಲಿಗೆ ಹೋಗಬೇಕು. ಅವರು ಬೀದಿಯಲ್ಲಿ ನಿಂತಿದ್ದರೆ ಅಲ್ಲಿಗೇ ಹೋಗಿ ಮಾತನಾಡಿಸಬೇಕು. ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಸದಾ ಕ್ರಿಯಾಶೀಲವಾಗಿರುವುದರಿಂದ, ನಾನು ಅವರು ಇದ್ದಲ್ಲಿಗೆ ಹೋಗುತ್ತಿದ್ದೇನೆ.

*ನಿಮ್ಮ ಪ್ರಕಾರ ಅಧ್ಯಾತ್ಮ ಎಂದರೆ?
ಅಧ್ಯಾತ್ಮ ಎಂದರೆ ಚೂಪಾದ ಪೆನ್ಸಿಲ್‌ ಇದ್ದ ಹಾಗೆ. ಅದರಿಂದ ಮನಮುಟ್ಟುವಂತಹ ಚಿತ್ರಗಳನ್ನು ಬರೆಯಬಹುದು. ಹಾಗೆಯೇ ನಮ್ಮ ಮೆದುಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತುಂಬಿಕೊಂಡು ಚುರುಕುಗೊಳಿಸಿಕೊಳ್ಳುತ್ತಿದ್ದರೆ, ವ್ಯಕ್ತಿತ್ವ ಎಲ್ಲರ ಗಮನವನ್ನೂ ಸೆಳೆಯುತ್ತದೆ.

*ಯುವಸಮುದಾಯಕ್ಕೆ ನಿಮ್ಮ ಸಲಹೆ ಏನು?
ಸಾಮಾಜಿಕ ಮಾಧ್ಯಮಗಳಲ್ಲಿನ ಅನವಶ್ಯಕ ಮತ್ತು ಉಪಯೋಗವಿಲ್ಲದ ವಿಷಯಗಳ ಕಡೆಗೆ ಗಮನ ಕೊಟ್ಟು, ಅವುಗಳಿಗೆ ದಾಸರಾಗುತ್ತಾ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ನಾವು ಅವನ್ನು ನಿಯಂತ್ರಿಸಬೇಕೇ ಹೊರತು, ಅವು ನಮ್ಮ ಜೀವನವನ್ನು ನಿಯಂತ್ರಿಸಬಾರದು. ತಂತ್ರಜ್ಞಾನದಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಕಲಿಯಿರಿ ಎಂಬುದಷ್ಟೇ ನನ್ನ ಸಲಹೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು