ಗುರುವಾರ , ಆಗಸ್ಟ್ 13, 2020
24 °C

ಬೆಳ್ಳಿ ‘ಚರಕ’

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

‘ಆಧುನಿಕತೆಯ ಅಬ್ಬರಕ್ಕೆ ಗ್ರಾಮೀಣ ಬದುಕು, ಸಂಸ್ಕೃತಿ ನಾಶವಾಗುತ್ತಿದೆ’ ಎಂದು ದೂರುವವರಿಗೇನು ಕಡಿಮೆಯಿಲ್ಲ. ಆದರೆ ಅದಕ್ಕೆ ಪ್ರತಿರೋಧ ಒಡ್ಡುವ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವವರು ವಿರಳ. ಹೆಗ್ಗೋಡಿನ ಚರಕ ಸಂಸ್ಥೆ ಈ ಮಾತಿಗೆ ಅಪವಾದ. ಆ ಸಂಸ್ಥೆ ಆಧುನಿಕತೆಗೆ ಪ್ರತಿರೋಧ ಒಡ್ಡುತ್ತಲೇ ದೇಸಿ ತನ ಕಾಪಾಡಿಕೊಂಡು ಬರುತ್ತಿದೆ.

ಸಾಗರ ತಾಲ್ಲೂಕಿನ ಭೀಮನಕೋಣೆ-ಹೆಗ್ಗೋಡು ಗ್ರಾಮದಲ್ಲಿ 1994ರಲ್ಲಿ ಎರಡು ಕೈಮಗ್ಗಗಳು ಬೆರಳೆಣಿಕೆಯ ನೌಕರರೊಂದಿಗೆ ಆರಂಭಿಸಿದ ಚರಕ ಸಂಸ್ಥೆಯಲ್ಲಿ ಈಗ 800 ಕೆಲಸಗಾರರಿದ್ದಾರೆ. ವರ್ಷಕ್ಕೆ ರೂ 4.5 ಕೋಟಿ ವಹಿವಾಟು. ಶೇ 90ರಷ್ಟು ಮಹಿಳಾ ನೌಕರರಿದ್ದಾರೆ. ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಚರಕ ಸಂಸ್ಥೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ.

ಚರಕ ಹುಟ್ಟಿದ ಕತೆ
ಅಂದು ಭೀಮನಕೋಣೆ ಗ್ರಾಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಲವರು ಕವಿ-ಕಾವ್ಯ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತರಬೇತಿ ಕಾರ್ಯಾಗಾರ ಆಯೋಜಿಸಿತ್ತು. ‘ಮಲೆನಾಡಿನ ಗ್ರಾಮೀಣ ಬದುಕು ನಿಧಾನವಾಗಿ ತನ್ನತನವನ್ನು ಕಳೆದುಕೊಳ್ಳುತ್ತಿದೆ, ಕೃಷಿಯ ಮೇಲಿನ ಅತಿಯಾದ ಅವಲಂಬನೆ ಸಮಸ್ಯೆಯಾಗಿ ಕಾಡುತ್ತಿದ್ದು ಪರ್ಯಾಯ ಉದ್ಯೋಗ ಸೃಷ್ಟಿಸುವುದು ಅನಿವಾರ್ಯ’ ಎಂಬ ಸತ್ಯ ಈ ವೇಳೆಯಲ್ಲಿ ಕಾರ್ಯಕರ್ತರಿಗೆ ಗೋಚರವಾಯಿತು. ಇದರ ಫಲವಾಗಿ ಹುಟ್ಟಿದ್ದೇ ಚರಕ ಸಂಸ್ಥೆ. 1996ರಲ್ಲಿ 30 ಮಹಿಳೆಯರು ಸೇರಿ ಚರಕ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘವನ್ನು ಆರಂಭಿಸಿ ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿಕೊಂಡರು. ಹಾಗೆ ನೋಡಿದರೆ ಮಲೆನಾಡಿನ ಯಾವ ಮಹಿಳೆಯರೂ ಪಾರಂಪರಿಕ ನೇಕಾರಿಕೆಯ ಕುಟುಂಬಕ್ಕೆ ಸೇರಿದವರಲ್ಲ. ಆದರೂ ಹಂತ ಹಂತವಾಗಿ ಈ ಕ್ಷೇತ್ರದಲ್ಲಿ ತರಬೇತಿ ಪಡೆದು ಅದಕ್ಕೆ ಅಗತ್ಯವಾದ ನೈಪುಣ್ಯವನ್ನು ಗಳಿಸಿಕೊಂಡರು.

ನೈಸರ್ಗಿಕ ಬಣ್ಣದ ಉಡುಪು
ಗಿರಣಿಗಳಿಂದ ನೂಲು ತಂದು, ಅವುಗಳನ್ನು ಸ್ವಚ್ಛಗೊಳಿಸಿ ಬಣ್ಣ ಹಚ್ಚಲು ಅಣಿಗೊಳಿಸುತ್ತಾರೆ. ಇಲ್ಲಿ ಬಟ್ಟೆಗಳಿಗೆ ರಾಸಾಯನಿಕ ಬಣ್ಣ ಬಳಸುವುದಿಲ್ಲ. ನೈಸರ್ಗಿಕ ಬಣ್ಣಗಾರಿಕೆಯಿಂದಲೇ ಬಟ್ಟೆಗಳ ಸೌಂದರ್ಯ ವೃದ್ಧಿಸುತ್ತಾರೆ. ಅದಕ್ಕಾಗಿಯೇ ಐದು ನೈಸರ್ಗಿಕ ಬಣ್ಣಗಾರಿಕೆಯ ವಿಭಾಗಗಳಿವೆ. ಅಡಿಕೆ ಚೊಗರು, ಅಳಲೆಕಾಯಿ, ದಾಳಿಂಬೆ ಸಿಪ್ಪೆ, ಇಂಡಿಗೋ ನೀಲಿ, ರಂಗಮಾಲೆ ಬೀಜ, ಅಂಟುವಾಳ ಹೀಗೆ ಸ್ಥಳೀಯ ಕಾಡು ಉತ್ಪನ್ನಗಳನ್ನು ಬಣ್ಣಗಾರಿಕೆಗೆ ಬಳಸುತ್ತಾರೆ.

ನೂಲಿಗೆ ಬಣ್ಣ ಹಾಕಿದ ನಂತರ ಅವುಗಳ ಗುಣಮಟ್ಟ ಪರೀಕ್ಷಿಸಿ ನೇಕಾರರಿಗೆ ಪೂರೈಸುವ ವಿಭಾಗವೂ ಸಂಸ್ಥೆಯಲ್ಲಿದೆ. ಬಾಗಲಕೋಟೆ, ಯಾದಗಿರಿ, ವಿಜಯಪುರ, ಕೊಪ್ಪಳ, ಗದಗ, ರಾಣೆಬೆನ್ನೂರು ಮತ್ತಿತರ ಭಾಗಗಳ ನೇಕಾರರು ಈ ಚರಕ ಸಂಸ್ಥೆಯಿಂದಲೇ ನೈಸರ್ಗಿಕ ಬಣ್ಣ ಹಾಕಿದ ನೂಲುಗಳನ್ನು ಪಡೆದು ನೇಕಾರಿಕೆ ನಡೆಸುತ್ತಾರೆ.


ನೂಲಿಗೆ ನೈಸರ್ಗಿಕ ಬಣ್ಣ ಹಚ್ಚುತ್ತಿರುವುದು 

ಬಟ್ಟೆ ತಯಾರಿಕೆ ಪ್ರಕ್ರಿಯೆ
ನೂಲಿಗೆ ಬಣ್ಣ ಹಾಕಿದ ನಂತರ ಬಾಬಿನ್ ಸುತ್ತುತ್ತಾರೆ. ನಂತರ ವಿನ್ಯಾಸದ ಯೋಜನೆ. ನೂಲಿನ ಕೌಂಟ್ ಆಧರಿಸಿ ವಿನ್ಯಾಸ ಅಂತಿಮಗೊಳಿಸಿ ಮಗ್ಗಕ್ಕೆ ನೂಲು ಹಾಕುವ ಪೂರ್ವ ಸಿದ್ದತೆ ಕೆಲಸ ಆರಂಭ. ನೂಲನ್ನು ಮಗ್ಗದ ಬೆಜ ಮತ್ತು ರೀಡಿಗೆ ಅಳವಡಿಸಿ ಬಟ್ಟೆ ತಯಾರಿಕೆಯ ಸಿದ್ದತೆ ನಡೆಯುತ್ತದೆ. ಹೀಗೆ ಕೈಮಗ್ಗದ ಮೂಲಕ ತಯಾರಾದ ಬಟ್ಟೆ ಸಂಸ್ಥೆಯ ಸಂಗ್ರಹ ಕೇಂದ್ರದಲ್ಲಿ ಗಾತ್ರ ಮತ್ತು ಗುಣಮಟ್ಟ ಪರೀಕ್ಷಿಸುತ್ತಾರೆ. ಇಂಥ ಬಟ್ಟೆ ಬಣ್ಣ ಅಳಿಯುವುದಿದ್ದರೆ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗುವುದಿದ್ದರೆ ಈ ಹಂತದಲ್ಲೇ ಆಗಲಿ ಎನ್ನುವ ಕಾರಣಕ್ಕೆ ಬಟ್ಟೆಗಳನ್ನು ಸಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಒಂದು ವೇಳೆ ನೇಯ್ಗೆಯಲ್ಲಿ ಸಡಿಲ ಇದ್ದರೆ ಈ ಪ್ರಕ್ರಿಯೆಯಲ್ಲೇ ಅದು ಕೂಡ ಸರಿ ಹೋಗುತ್ತದೆ. ಸಿಂಕ್ ಪ್ರಕ್ರಿಯೆ ನಂತರ ಬಟ್ಟೆಯನ್ನು ಇಸ್ತ್ರಿ ಮಾಡಿ ಮತ್ತೊಮ್ಮೆ ಸಂಸ್ಥೆಯ ಗಾತ್ರ, ಗುಣಮಟ್ಟದ ಪರೀಕ್ಷೆ ಮಾಡಿಸಿ, ನಂತರವಷ್ಟೆ ಬಟ್ಟೆಗಳನ್ನು ಹೊಲಿಗೆ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಕೇಂದ್ರದಲ್ಲಿ ಪುರುಷರ, ಮಹಿಳೆಯರ ಸಿದ್ದ ಉಡುಪುಗಳು, ಕೌದಿ, ಹೊದಿಕೆ, ಆಕರ್ಷಕದ ಫೈಲ್, ಕೈಚೀಲ, ಕರವಸ್ತ್ರ ಸೇರಿದಂತೆ 159 ಉತ್ಪನ್ನಗಳನ್ನು ಚರಕ ಉತ್ಪಾದಿಸುತ್ತದೆ.

ಯಂತ್ರಚಾಲಿತ ಮುದ್ರಣ ವ್ಯವಸ್ಥೆ ಬರುವ ಮೊದಲು ಬಟ್ಟೆಗಳ ಮೇಲೆ ಪಡಿಯಚ್ಚು ಮೂಲಕ ಚಿತ್ರಗಳನ್ನು ಮುದ್ರಿಸಲಾಗುತ್ತಿತ್ತು. ಚರಕ ಈಗಲೂ ಪಡಿಯಚ್ಚು ಮುದ್ರಣ ತಂತ್ರಜ್ಞಾನವನ್ನೇ ಬಳಸುತ್ತಿದೆ. ಕರ್ನಾಟಕದ ಪ್ರಮುಖ ಜಾನಪದ ದೃಶ್ಯಕಲಾ ಪ್ರಕಾರವಾಗಿರುವ ಹಸೆ ಚಿತ್ತಾರ ಕಲೆಯನ್ನು ತನ್ನ ಉಡುಪುಗಳ ಮೇಲೆ ವಿನ್ಯಾಸದ ರೂಪದಲ್ಲಿ ಯಶಸ್ವಿಯಾಗಿ ಚರಕ ಅಳವಡಿಸುತ್ತಿದೆ. ಇದಕ್ಕಾಗಿ ಮಹಿಳೆಯರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.


ಸಿದ್ಧ ಉಡುಪುಗಳನ್ನು ತಯಾರಿಸುತ್ತಿರುವ ಮಹಿಳೆಯರು

ಪರಿಸರ ಸ್ನೇಹಿ ಗ್ರಾಮೀಣ ಉದ್ದಿಮೆ
ಚರಕ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ಯಂತ್ರಗಳ ಬಳಕೆಯಿಲ್ಲ. ಎಲ್ಲವೂ ಮಾನವ ಚಾಲಿತವೇ. ಕಟ್ಟಡಕ್ಕೆ ಮಣ್ಣಿನ ಗೋಡೆ ಸೂರಿಗೆ ಹಂಚು ಹೊದಿಸಲಾಗಿದೆ. ಇವು ಚರಕ ಸಂಸ್ಥೆಯ ಸೌಂದರ್ಯವನ್ನು ಹೆಚ್ಚಿಸಿವೆ. ಮಳೆ ನೀರು ಸಂಗ್ರಹಿಸುವ ಮೂಲಕ ನೀರಿನ ಮಿತವ್ಯಯಕ್ಕೂ ಆದ್ಯತೆ. ಕೊಳವೆ ಬಾವಿಗಳ ಬದಲು ತೆರೆದ ಬಾವಿಗಳನ್ನೇ ಆಶ್ರಯಿಸಲಾಗಿದೆ. ಬಳಸಿದ ನೀರನ್ನು ಸಂಗ್ರಹಿಸಿ ಮರು ಬಳಸುವ ಯೋಜನೆ ರೂಪಿಸಲಾಗಿದೆ. ಅಂತರ್ಜಲ ರಕ್ಷಣೆಗೆ ಇಂಗುಗುಂಡಿ ನಿರ್ಮಿಸಲಾಗಿದೆ.

ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ

ಆರಂಭದಲ್ಲಿ ಚರಕ ಉತ್ಪನ್ನಗಳನ್ನು ಸಾಂಸ್ಕೃತಿಕ ಉತ್ಸವಗಳ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ನಂತರ ‘ದೇಸಿ’ ಸಂಸ್ಥೆ ಸ್ಥಾಪಿಸಿ, ಆ ಮೂಲಕ ಉತ್ಪನ್ನಗಳಿಗೆ ಎಲ್ಲೆಡೆಯೂ ವ್ಯವಸ್ಥಿತ ಮಾರುಕಟ್ಟೆ ಒದಗಿಸಲಾಯಿತು. ‘ಪೇಟೆಯ ಹಣ ಹಳ್ಳಿಗೆ ಹರಿದು ಬರಬೇಕು’ ಎಂಬ ನಿಲುವು ಈ ಸಂಸ್ಥೆಯದ್ದು. ಅದೇ ನಿಟ್ಟಿನಲ್ಲಿ ನಗರದ ಗ್ರಾಹಕರಿಗೂ ತನ್ನ ಉತ್ಪನ್ನಗಳನ್ನು ತಲುಪಿಸುತ್ತಾ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದೆ.

ಚರಕ ಸಂಸ್ಥೆಯ ಮಹಿಳಾ ನೌಕರರ ಮಕ್ಕಳನ್ನು ನೋಡಿಕೊಳ್ಳಲು ಶಿಶುಪಾಲನಾ ಕೇಂದ್ರ ತೆರೆದಿದೆ. ಪ್ರತಿ ವರ್ಷ ನಡೆಯುವ ಚರಕ ಉತ್ಸವದಲ್ಲಿ ಇಲ್ಲಿನ ಮಹಿಳೆಯರೆ ತಮ್ಮ ಸಾಂಸ್ಕೃತಿಕ ಪ್ರತಿಭೆ ಪ್ರದರ್ಶಿಸುತ್ತಾರೆ. ಆಯಾ ವಿಭಾಗದಲ್ಲಿ ಉತ್ತಮ ಕೆಲಸ ಮಾಡಿ ಸಾಧನೆಗೈದವರಿಗೆ ‘ಕಾಯಕ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಇಲ್ಲಿನ ಮಹಿಳೆಯರ ಪಾಲಿಗೆ ‘ಚರಕ ಉತ್ಸವ’ ಹಬ್ಬವಿದ್ದಂತೆ. ಈ ವರ್ಷ ಫೆಬ್ರುವರಿ 8 ರಿಂದ 10ರವರೆಗೆ ಚರಕ ಉತ್ಸವವನ್ನು ಆಯೋಜಿಸಲಾಗಿತ್ತು.

ಚರಕ, ದೇಸಿ ಸಂಸ್ಥೆಯ ಕಾರ್ಯ ವಿಸ್ತರಣೆ ರೂಪದಲ್ಲಿ ಹೊನ್ನೆಸರ ಗ್ರಾಮದ ಶ್ರಮಜೀವಿ ಆಶ್ರಮವೂ ಈಗ ಸೇರಿಕೊಂಡಿದೆ. ಕೈಮಗ್ಗ ನೇಕಾರಿಕೆಯಲ್ಲಿ ಆಸಕ್ತಿ ಇದ್ದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವವರಿಗೆ ಈ ಆಶ್ರಮದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಆಸಕ್ತರು ಇಲ್ಲಿಗೆ ಬಂದು ತರಬೇತಿ ಪಡೆದು ತಮ್ಮ ಗ್ರಾಮಕ್ಕೆ ತೆರಳಿ ನೇಕಾರಿಕೆ ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ.

ಹೀಗೆ ಕೈಮಗ್ಗ ನೇಕಾರಿಕೆ ಕ್ಷೇತ್ರದಲ್ಲಿ ಚರಕ ‘ಮೌನ ಕ್ರಾಂತಿ’ ಯನ್ನು ಮಾಡುತ್ತಿದ್ದು ಗ್ರಾಮೀಣಾಭಿವೃದ್ಧಿಯ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ.

ಚರಕ ಸಂಸ್ಥೆ ಸಂಪರ್ಕ ವಿಳಾಸ: ಶ್ರಮಜೀವಿ ಆಶ್ರಮ ಹೊನ್ನೇಸರ ಗ್ರಾಮ, ಸಾಗರ ತಾಲ್ಲೂಕು.
08183 – 265713

**

‘ಗ್ರಾಮೀಣ ಉದ್ಯಮಕ್ಕೆ ಪ್ರೋತ್ಸಾಹ’
‘ಗ್ರಾಮೀಣ ಕೈಗಾರಿಕೆಗಳಲ್ಲಿರುವ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸಿದರೆ ಮಾತ್ರ ಈ ಉದ್ದಿಮೆ ಯಶಸ್ಸು ಕಾಣುತ್ತದೆ’ ಎನ್ನುತ್ತಾರೆ ಚರಕ ಸಂಸ್ಥೆಯ ರೂವಾರಿ ಪ್ರಸನ್ನ. ‘ನೇಕಾರಿಕೆ ಮಾಡುವ ಆಸಕ್ತರು ನಮ್ಮಲ್ಲಿಗೆ ಬರುತ್ತಾರೆ. ತಮ್ಮ ಗ್ರಾಮಗಳಲ್ಲೇ ತರಬೇತಿ ನೀಡುವಂತೆ ಕೇಳುತ್ತಾರೆ. ಅದು ಕಷ್ಟ. ಆಸಕ್ತೃರೇ ಇಲ್ಲಿಗೆ ಬಂದರೆ, ಕೇಂದ್ರದ ಕಾರ್ಯ ನೋಡಿ, ತರಬೇತಿ ಪಡೆದು, ಊರಿನಲ್ಲಿ ಉದ್ದಿಮೆ ಆರಂಭಿಸಬಹುದು. ಅಂಥವರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

**

ಈ ಬಾರಿಯ ‘ಕಾಯಕ’ ಪುರಸ್ಕೃತರು
ಈ ಸಾಲಿನ ಕಾಯಕ ಪ್ರಶಸ್ತಿಯನ್ನು ಕೈಮಗ್ಗ ನೇಯ್ಗೆ ವಿಭಾಗದಲ್ಲಿ ಶಾರದಾ ಮತ್ತು ಪಾರ್ವತಿ, ಪರ ಊರು ಕೈಮಗ್ಗ ನೇಯ್ಗೆ ವಿಭಾಗದಲ್ಲಿ ವ್ಯಾಸರಾಯ ಶೆಟ್ಟಿಗಾರ್‌ ಕಿನ್ನಿಗೊಳಿ ಮಂಗಳೂರು, ಈರಣ್ಣ ಹನುಮಂತಪ್ಪ ಕಾಟರಕಿ ಗಜೇಂದ್ರಗಡ, ಹೊಲಿಗೆ ವಿಭಾಗದಲ್ಲಿ ಅನಿತಾ, ನಾಗರತ್ನ, ಇತರೆ ವಿಭಾಗದಲ್ಲಿ ಶ್ರಮಜೀವಿ ಆಶ್ರಮದ ಮೇಲ್ವಿಚಾರಕ ಎ.ವಿ.ರಮೇಶ್‌, ಟೈಲರಿಂಗ್‌ ಮೇಲ್ವಿಚಾರಕಿ ಹೇಮಲತಾ ಹಾಗೂ ದೇಸಿ ಮಾರಾಟ ವಿಭಾಗದಲ್ಲಿ ಬೆಂಗಳೂರಿನ ಭಾಗ್ಯ ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.