ಮಂಗಳೂರು ಜೈಲಿನಲ್ಲಿ ಇತ್ತೀಚೆಗೆ ನಡೆದ ಇಬ್ಬರು ಕೈದಿಗಳ ಕೊಲೆ, ಈ ಸಂದರ್ಭದಲ್ಲಿ ಪೊಲೀಸರು ಗಾಯಗೊಂಡಂತಹ ಬೆಳವಣಿಗೆ ತೀವ್ರ ಅಚ್ಚರಿ ಮೂಡಿಸುತ್ತದೆ. ಜಿಲ್ಲಾ ಕಾರಾಗೃಹಗಳಲ್ಲಿ ಹಿಂದೆಯೂ ಘರ್ಷಣೆಗಳು ನಡೆದಿದ್ದವು. ಆಗಲೂ ಪೊಲೀಸರು ಗಾಯಗೊಂಡಿದ್ದರು. ಆದರೆ, ಮಾರಕಾಸ್ತ್ರ ಬಳಸಿ ಕೊಲೆ ಮಾಡುವಂಥ ಘಟನೆ ರಾಜ್ಯದಲ್ಲಿ ಇದೇ ಮೊದಲೆನಿಸುತ್ತದೆ. ಇಂಥ ಸಂದರ್ಭಗಳಲ್ಲೆಲ್ಲ ಬಹುತೇಕರು ‘ಸಿಬ್ಬಂದಿ ಕೈವಾಡವಿಲ್ಲದೇ ಜೈಲಿನೊಳಗೆ ಮಾರಕಾಸ್ತ್ರ ನುಸುಳಲು ಸಾಧ್ಯವಿಲ್ಲ’ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಆದರೆ ನನ್ನ ಅನುಭವದ ಪ್ರಕಾರ, ಬಂದೀಖಾನೆಯೊಳಗೆ ಮಾರಕಾಸ್ತ್ರಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಇಂಥ ಕೃತ್ಯಗಳನ್ನು ಸಿಬ್ಬಂದಿಯೂ ಪ್ರೋತ್ಸಾಹಿಸುವುದಿಲ್ಲ. ಮಾರಕಾಸ್ತ್ರಗಳು ಒಳ ಹೊಕ್ಕರೆ ಕೈದಿಗಳಿಗಷ್ಟೇ ಅಲ್ಲ, ಅವರನ್ನು ಕಾಯುವ ಸಿಬ್ಬಂದಿಗೂ ಅಪಾಯವಿರುತ್ತದೆ.

ಹಾಗಾಗಿ, ಅಪಾಯ ಆಹ್ವಾನಿಸಿಕೊಳ್ಳಲು ಯಾವ ಪೊಲೀಸರು ತಾನೆ ಇಷ್ಟಪಡುತ್ತಾರೆ? ಆದರೂ ಕೈದಿಗಳನ್ನು ಸಂದರ್ಶಿಸಲು ಬರುವಂಥವರು (ಸಾಮಾನ್ಯರಲ್ಲ, ಭೂಗತಪಾತಕಿಗಳ ಸಹಚರರು), ಸಣ್ಣಪುಟ್ಟ ವಸ್ತುಗಳನ್ನು ಪೊಲೀಸರ ಕಣ್ತಪ್ಪಿಸಿ ಒಳ ತೂರಿಸಿಬಿಡಬಹುದು. ಇತ್ತೀಚೆಗೆ ಮೊಬೈಲ್ ಫೋನ್ಗಳು, ಮೈಕ್ರೋ ಸಿಮ್ಗಳ ಹಾವಳಿಯಿಂದಾಗಿ ಈ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಇಂಥ ಸಣ್ಣಪುಟ್ಟ ವಸ್ತುಗಳನ್ನು ದೇಹದೊಳಗೇ ಅಡಗಿಸಿಕೊಂಡು ಒಳಗೆ ಸಾಗಿಸಿದರೂ ಸಿಬ್ಬಂದಿಗೆ ಗೊತ್ತಾಗುವುದಿಲ್ಲ. ಒಂದು ಬಾರಿ ಯಾರೋ ಒಬ್ಬ ಚಪ್ಪಲಿ ಒಳಗೆ ಮೊಬೈಲ್ ಇಟ್ಟುಕೊಂಡಿದ್ದ ಎಂದು ಕೇಳಿದ್ದೇನೆ. ನಮ್ಮ ಜೈಲುಗಳಲ್ಲಿ ಇಂಥವನ್ನು ಪತ್ತೆ ಮಾಡುವಂಥ ಸಾಧನಗಳ ಕೊರತೆ ಇದೆ.

ಜಿಲ್ಲಾ ಕೇಂದ್ರದ ಜೈಲುಗಳಲ್ಲಿ ಆಯುಧಗಳಲ್ಲದಿದ್ದರೂ ಮಾದಕ ವಸ್ತುಗಳಂತಹವು ನುಸುಳಲು ಅವಕಾಶವಿರುತ್ತದೆ. ಈ ಕೇಂದ್ರದ ಸುತ್ತಲಿನ ಗೋಡೆಗಳು ಎತ್ತರವಿಲ್ಲದ ಕಾರಣ, ಗೋಡೆಯಾಚೆ ನಿಂತು ವಸ್ತುಗಳನ್ನು ಒಳಗೆ ಎಸೆಯುತ್ತಾರೆ. ಜೈಲಿನ ಪೊಲೀಸರು ಹಾಗೂ ಠಾಣೆಗಳಲ್ಲಿರುವ ಪೊಲೀಸರು ಒಂದೇ ಎಂಬುದು ಅನೇಕರ ನಂಬಿಕೆ. ವಾಸ್ತವದಲ್ಲಿ ಹಾಗಿಲ್ಲ. ಜೈಲಿನ ಸಿಬ್ಬಂದಿಗೆ ಕೈದಿಗಳ ರಕ್ಷಣೆ, ನಿರ್ವಹಣೆಯ ಜವಾಬ್ದಾರಿ ಇರುತ್ತದೆ. ಒಬ್ಬ ಕೈದಿಯನ್ನು ಪೊಲೀಸರು ಎಫ್ಐಆರ್ ಹಾಕಿ ಜೈಲಿಗೆ ಸೇರಿಸಿದರೆ ಮುಗಿಯಿತು. ಮುಂದೇನಿದ್ದರೂ ಅವರ ಜವಾಬ್ದಾರಿ ಜೈಲು ಸಿಬ್ಬಂದಿಯದು. ಅವನು ಎಂಥ ಕುಖ್ಯಾತನೇ ಆಗಿರಲಿ ಇರುವ ವ್ಯವಸ್ಥೆಯಲ್ಲೇ ಆತನನ್ನು ಭದ್ರವಾಗಿಡಬೇಕು. ಠಾಣಾ ಪೊಲೀಸರಿಗೆ ಇಂಥ ಕೈದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ.

ಆದರೆ ಜೈಲರ್ಗಳಿಗಾಗಲಿ, ಸಿಬ್ಬಂದಿಗಾಗಲಿ ಯಾವ ಆಂತರಿಕ ಮಾಹಿತಿಯನ್ನೂ ಪೊಲೀಸರು ನೀಡಿರುವುದಿಲ್ಲ. ಒಬ್ಬಿಬ್ಬ ಜೈಲು ಅಧಿಕಾರಿಗಳು ಹೆಚ್ಚುವರಿ ಮಾಹಿತಿ ಅರಿಯುವ ಪ್ರಯತ್ನ ಮಾಡುತ್ತಾರೆ. ಕೈದಿಗಳು ಇಂಥ ಮಾಹಿತಿ ಕೊರತೆಯ ಲಾಭವನ್ನು ಪಡೆದುಕೊಂಡು ಸಂಘರ್ಷಕ್ಕೆ ಇಳಿಯುತ್ತಾರೆ. ವಿಚಾರಣಾಧೀನ ಕೈದಿಗಳಿರುವ ಜಿಲ್ಲಾ ಕಾರಾಗೃಹಗಳಲ್ಲಿ ಗುಂಪು ಘರ್ಷಣೆ ಹೆಚ್ಚು. ಏಕೆಂದರೆ ಅಲ್ಲಿನ ಕೈದಿಗಳ ಪ್ರಕರಣಗಳು ನ್ಯಾಯಾಲಯದಲ್ಲಿರುತ್ತವೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದಾರಿಗಳನ್ನೇ ಅವರು ಹುಡುಕುತ್ತಿರುತ್ತಾರೆ. ಹಾಗಾಗಿ, ವಿರೋಧಿ ಗುಂಪುಗಳೊಟ್ಟಿಗೆ ಆಗಾಗ್ಗೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾರೆ. ಸಿಬ್ಬಂದಿ ಕೊರತೆ ಇರುವೆಡೆ ಇಂಥ ವೇಳೆ ಗುಂಪುಗಳನ್ನು ನಿರ್ವಹಿಸುವುದೇ ದುಸ್ತರವಾಗುತ್ತದೆ.

ಕೇಂದ್ರ ಕಾರಾಗೃಹಗಳಲ್ಲಿ ವಿಧವಿಧದ ಕೈದಿಗಳಿಗೆ ಪ್ರತ್ಯೇಕ ಕೊಠಡಿಗಳಿರುತ್ತವೆ. ಪಾತಕಿಗಳು, ಸಹಚರರನ್ನು ಬೇರ್ಪಡಿಸಿ ಬೇರೆ ಬೇರೆ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಆದರೆ ಜಿಲ್ಲಾ ಕಾರಾಗೃಹಗಳಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ. ಕೇವಲ ಬ್ಯಾರಕ್ಗಳಿರುತ್ತವೆ. ಹೀಗಾಗಿ ಎಲ್ಲ ಕೈದಿಗಳೂ ಒಂದೇ ಕಡೆ ಉಳಿಯುತ್ತಾರೆ. ಕಳ್ಳತನ, ದರೋಡೆ, ಅತ್ಯಾಚಾರ ಪ್ರಕರಣಗಳಂಥ ಕೈದಿಗಳಿಂದ ಹೆಚ್ಚು ಸಮಸ್ಯೆಯಾಗದು. ಆದರೆ ರೌಡಿ ಗುಂಪುಗಳು, ಭೂಗತ ಪಾತಕಿಗಳ ಸಹಚರರು ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದರೂ ಸಾಕು ಜಗಳ ಶುರುವಾಯಿತೆಂದೇ ಅರ್ಥ. ಅವರಿಗೆ ‘ರೌಡಿಸಂ ಪ್ರತಿಷ್ಠೆ’ಯ ಪ್ರಶ್ನೆ. ತಮ್ಮ ತಮ್ಮ ನಾಯಕರ ಮೇಲೆ ತಮಗಿರುವ ನಿಷ್ಠೆಯ ಪ್ರಶ್ನೆ. ಇವರ ಜಗಳ ಬಿಡಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಹಲ್ಲೆಗೆ ಗುರಿಯಾಗುತ್ತಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೈಲೆಂಟ್ ಸುನೀಲ್, ಕೊರಂಗು ಗ್ಯಾಂಗ್, ಕವಳನಂತಹ ರೌಡಿಗಳನ್ನೆಲ್ಲ ಪ್ರತ್ಯೇಕ ಕೊಠಡಿಗಳಲ್ಲಿಡುತ್ತಿದ್ದೆವು. ಆದರೆ ಜಿಲ್ಲಾ ಕೇಂದ್ರಗಳಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಎಲ್ಲರನ್ನೂ ಒಟ್ಟಿಗೆ ಸೇರಿಸುತ್ತೇವೆ. ಆಗ ಒಬ್ಬರನ್ನೊಬ್ಬರು ನೋಡಿ, ಕಿಚಾಯಿಸಿ, ರೇಗಿಸಿ ಜಗಳಕ್ಕೆ ನಿಲ್ಲುತ್ತಾರೆ. ಕಾರಾಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚು. ಜಿಲ್ಲಾ ಜೈಲುಗಳಲ್ಲಿ 200 ಕೈದಿಗಳಿಗೆ ಒಬ್ಬರೋ, ಇಬ್ಬರೋ ಕಾವಲುಗಾರರಿರುತ್ತಾರೆ. ಇಡೀ ಜಿಲ್ಲಾ ಬಂದೀಖಾನೆಯನ್ನು ಹತ್ತು ಮಂದಿ ಇಪ್ಪತ್ನಾಲ್ಕು ಗಂಟೆ ನಿರ್ವಹಿಸಬೇಕು. ಮಂಗಳೂರಿನಂತಹ ಜೈಲುಗಳಲ್ಲಿ ಭೂಗತ ಪಾತಕಿಗಳ ಸಹಚರರು ಸಂಘರ್ಷಕ್ಕಿಳಿದಾಗ ಇಷ್ಟು ಕಡಿಮೆ ಸಿಬ್ಬಂದಿ ಅವರನ್ನು ಹೇಗೆ ನಿರ್ವಹಿಸಬಲ್ಲರು?

ಸದ್ಯ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆಯನ್ನು ಅಲ್ಲಿನ ಜೀವಾವಧಿ ಕೈದಿಗಳ ಮೂಲಕ ನೀಗಿಸಲಾಗುತ್ತಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ, ಅದಾಗಲೇ ಐದಾರು ವರ್ಷ ಶಿಕ್ಷೆಯ ಅವಧಿ ಪೂರೈಸಿದ ಕೈದಿಗಳನ್ನು ಸಹಕಾವಲುಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಹೀಗೆ ನಿಯೋಜನೆಗೊಂಡವರು ತಮ್ಮ ಕರ್ತವ್ಯ ಪೂರೈಸಿ, ರಾತ್ರಿ ಕಾವಲು ಕಾಯಬೇಕು. ಇತರ ಕೈದಿಗಳ ಚಲನವಲನಗಳ ಬಗ್ಗೆ ಮುಖ್ಯ ಕಾವಲುಗಾರರಿಗೆ ಮಾಹಿತಿ ನೀಡಬೇಕು. ಅಂಥವರಿಗೆ ಗೌರವಧನ ನೀಡಲಾಗುತ್ತದೆ. ಆದರೆ ಮಂಗಳೂರಿನಂತಹ ಜಿಲ್ಲಾ ಬಂದೀಖಾನೆಯಲ್ಲಿರುವರು ವಿಚಾರಣಾಧೀನ ಕೈದಿಗಳಾಗಿರುವುದರಿಂದ ಇಂಥ ಸೇವೆಗೆ ಅವರನ್ನು ಬಳಸಲಾಗದು. ಹಾಗಾಗಿ, ಆ ಜೈಲುಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ.

ಜೈಲಿನಲ್ಲಿರುವವರೆಗೆ ಮಾತ್ರ ಕೈದಿಗಳ ಹೊಣೆ ಅಲ್ಲಿನ ಸಿಬ್ಬಂದಿಯದು. ಅವರನ್ನು ಅಲ್ಲಿಂದ ನ್ಯಾಯಾಲಯಕ್ಕೋ, ವೈದ್ಯಕೀಯ ಚಿಕಿತ್ಸೆಗೋ ಹೊರಗೆ ಕರೆದೊಯ್ಯಬೇಕೆಂದರೆ ಠಾಣಾ ಪೊಲೀಸರ ರಕ್ಷಣೆ (ಎಸ್ಕಾರ್ಟ್) ಬೇಕು. ಪ್ರತಿ ಜೈಲಿಗೂ ಒಂದೊಂದು ಪೊಲೀಸ್ ಮೀಸಲು ಪಡೆ ನಿಯೋಜಿಸಲಾಗಿರುತ್ತದೆ. ಈ ಪಡೆ ಜೈಲುಗಳ ಮನವಿಗೆ ಸ್ಪಂದಿಸದಿದ್ದರೆ, ಜೈಲು ಸಿಬ್ಬಂದಿಯನ್ನೇ ಹೊರಗಿನ ರಕ್ಷಣೆಗಾಗಿ ನಿಯೋಜಿಸಲಾಗುತ್ತದೆ. ಆಗ ಜೈಲಿನಲ್ಲಿ ಸಿಬ್ಬಂದಿ ಕೊರತೆ ಬೀಳುತ್ತದೆ. ಆಗ ಅಳಿದುಳಿದ ಸಿಬ್ಬಂದಿಯದು ಅದೃಷ್ಟದ ಆಟ. ಏನೂ ಮಾಡಲಾಗದು. ಯಾವುದೇ ಸಂದರ್ಭ ಬಂದರೂ ಎದುರಿಸಲೇ ಬೇಕಾಗುತ್ತದೆ.
ಜೈಲು ಸುಧಾರಣಾ ಸಮಿತಿ ವರದಿಯ ಪ್ರಕಾರ, 10 ಕೈದಿಗಳಿಗೆ ಒಬ್ಬ ವಾರ್ಡರ್ ಇರಬೇಕು. ಆದರೆ, ಈಗ ಸಾಮಾನ್ಯವಾಗಿ ಜಿಲ್ಲಾ ಕಾರಾಗೃಹದಲ್ಲಿ 10–12 ಸಿಬ್ಬಂದಿಯಷ್ಟೇ ಇರುತ್ತಾರೆ. ಪಾಳಿಗಳಲ್ಲಿ ಅವರನ್ನು ನಿಯೋಜಿಸಲಾಗುತ್ತದೆ. ಪರಪ್ಪನ ಅಗ್ರಹಾರದಂಥ ಜೈಲಿನಲ್ಲಿ ಕೆಲವೊಮ್ಮೆ ಸಾವಿರಾರು ಕೈದಿಗಳಿಗೆ ನಾಲ್ಕೈದು ಕಾವಲುಗಾರರಿರುತ್ತಾರೆ. ಸನ್ನಿವೇಶ ಕೊಂಚ ಗಂಭೀರವಾದರೂ ಸಿಬ್ಬಂದಿ ಕಂಗಾಲಾಗುತ್ತಾರೆ.

ಯಾವುದೇ ಜೈಲಿರಲಿ ಕೊಠಡಿಗಳ ಸಂಖ್ಯೆ ಹೆಚ್ಚಾಗಿರಬೇಕು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಬ್ಯಾರಕ್ಗಳಿವೆ. ಪ್ರತಿಷ್ಠಿತರಿಗೆ, ಅಪಾಯಕಾರಿ ವ್ಯಕ್ತಿಗಳಿಗೆ ಕ್ವಾರಂಟೈನ್, ಸಾಮಾನ್ಯ ಜೈಲು.... ಹೀಗೆ ಪ್ರತ್ಯೇಕ ಕೊಠಡಿಗಳಿವೆ. ಅಂಥವುಗಳ ಸಂಖ್ಯೆ ಹೆಚ್ಚಾಗಬೇಕು. ಜಿಲ್ಲಾ ಕಾರಾಗೃಹಗಳಲ್ಲಿ ಭೂಗತ ಪಾತಕಿಗಳನ್ನು ಇರಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಅವರ ಸಹಚರರನ್ನು ಪ್ರತ್ಯೇಕವಾಗಿಡಬೇಕು. ಇತ್ತೀಚೆಗೆ ಜೈಲುಗಳಲ್ಲಿ ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅವರಿಗಾಗಿ ಸಿಬ್ಬಂದಿ ಬಳಕೆಯೂ ಹೆಚ್ಚಾಗುತ್ತಿದೆ. ಜೈಲಿನಲ್ಲಿ ಉತ್ತಮ ಸೌಲಭ್ಯಗಳಿಲ್ಲದಿರುವುದು ಅನಾರೋಗ್ಯಕ್ಕೆ ಕಾರಣ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಉತ್ತಮವಾಗಿದ್ದು, ಆರೋಗ್ಯ ಸೇವಾ ಸೌಲಭ್ಯವಿದ್ದರೆ ಕೈದಿಗಳು ಆರೋಗ್ಯವಾಗಿರುತ್ತಾರೆ. ಸಿಬ್ಬಂದಿ ನಿಯೋಜನೆಯ ಅಗತ್ಯವೂ ಕಡಿಮೆಯಾಗುತ್ತದೆ.

ಜೈಲು ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬಂದಿರುವ ಯಾವ ವರದಿಯೂ ಅನುಷ್ಠಾನವಾದಂತೆ ಕಾಣುತ್ತಿಲ್ಲ. ಈ ಮಧ್ಯೆ ಜೈಲಿಗೆ ಅನೇಕ ಅಧಿಕಾರಿಗಳು, ರಾಜಕಾರಣಿಗಳು, ಆಯೋಗದವರು ಭೇಟಿ ಇತ್ತು ನೀಡಿ ಹೋಗಿರುವ ಭರವಸೆಗಳೂ ಈಡೇರಿಲ್ಲ. ಕನಿಷ್ಠ ಪಕ್ಷ ಕಾನೂನನ್ನು ಒಂದಷ್ಟು ಬಲಪಡಿಸಿ, ಕೈದಿಗಳ ಮನ ಪರಿವರ್ತನೆಗೆ ಬೇಕಾದ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಜೈಲಿನ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಅನುಭವಿಸುವ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ನಡೆಯಬೇಕು.

ರಾಜ್ಯದ ಜೈಲುಗಳು ತುಂಬಿ ತುಳುಕುತ್ತಿವೆ. ಮೊದಲು ಸನ್ನಡತೆ ಆಧಾರದ ಮೇಲೆ ವರ್ಷ ವರ್ಷವೂ ಒಂದಷ್ಟು ಮಂದಿ ಬಿಡುಗಡೆಯಾಗುತ್ತಿದ್ದರು. ಈಗ ಅದೂ ಸ್ಥಗಿತಗೊಂಡಿದೆ. ಈ ವರ್ಷ ಮಾತ್ರ ಇನ್ನೂರು ಕೈದಿಗಳು ಬಿಡುಗಡೆಆಗಿದ್ದಾರೆ. 65 ವರ್ಷ ದಾಟಿದವರು, ಕಾಯಿಲೆಯಿಂದ ಬಳಲುತ್ತಿರುವವರನ್ನು ಬಿಡುಗಡೆ ಮಾಡಿದರೆ ಅವರನ್ನು ಕಾಯುವುದು, ವೈದ್ಯಕೀಯ ಸೌಲಭ್ಯ ಒದಗಿಸುವುದು ತಪ್ಪುತ್ತದೆ. ಜೈಲು ಖಾಲಿಆಗುತ್ತದೆ. ಸನ್ನಡತೆ ಮೇಲೆ ಬಿಡುಗಡೆ ಮಾಡುತ್ತಾರೆ ಎಂದಾಗ, ಉಳಿದ ಕೈದಿಗಳು ಸರಿಯಾಗಿ ವರ್ತಿಸುತ್ತಾರೆ. ಸಂಘರ್ಷಗಳು ತಪ್ಪುತ್ತವೆ.

ಯಾವ ಜೈಲಿನ ಸುತ್ತಲೂ ಕಾವಲುಗಾರರಿಲ್ಲ. ಪ್ರಸ್ತುತ ಜೈಲುಗಳಲ್ಲಿನ ಸಂಘರ್ಷಕ್ಕೆ ಈ ಬಗೆಯ ದೋಷವೂ ಕಾರಣ. ಜಿಲ್ಲಾ ಜೈಲುಗಳ ಸುತ್ತ ಎರಡು ಸುತ್ತಿನ ಗೋಡೆ ನಿರ್ಮಾಣವಾಗಬೇಕು. ಜೈಲಿನ ಸುತ್ತ ಕಡ್ಡಾಯವಾಗಿ ಕಾವಲು ಹಾಕಬೇಕು. ಕೈದಿಗಳ ಸಂದರ್ಶನಕ್ಕೆ ಬರುವವರಿಗಾಗಿ ಪ್ರವೇಶದ್ವಾರಕ್ಕೆ ದೂರದಲ್ಲೇ ತಪಾಸಣಾ ಕೇಂದ್ರ ತೆರೆಯಬೇಕು. ಆಧುನಿಕ ತಪಾಸಣಾ ಸ್ಕ್ಯಾನರ್ಗಳನ್ನು ಬಳಸುವಂತಾಗಬೇಕು.

ಜೈಲು ಸಿಬ್ಬಂದಿಗೆ ಕೇವಲ ಪಠ್ಯಾಧಾರಿತ ತರಬೇತಿ, ವ್ಯಾಯಾಮ, ಬಂದೂಕು ಬಳಕೆಯ ತರಬೇತಿ ನೀಡಲಾಗುತ್ತದೆ ವಿನಾ, ಪ್ರಾಯೋಗಿಕ ತರಬೇತಿಯಾಗಲಿ, ವ್ಯಕ್ತಿಗಳ ಸ್ವಭಾವ ಹಾಗೂ ಮಾನಸಿಕ ಸ್ಥಿತಿಗತಿಯನ್ನು ಅರಿಯುವ ತರಬೇತಿಯನ್ನಾಗಲಿ ನೀಡುವುದಿಲ್ಲ. ಹೀಗಾಗಿ, ಒಬ್ಬ ಭೂಗತ ಪಾತಕಿಯ ಸಹಚರರನ್ನು ಹೇಗೆ ನಿರ್ವಹಿಸಬೇಕು, ಅವರ ಚಲನವಲನಗಳನ್ನು ಹೇಗೆ ಗುರುತಿಸಬೇಕು ಎಂಬುದೇ ಅನೇಕ ಜೈಲು ಸಿಬ್ಬಂದಿಗೆ ಗೊತ್ತಾಗುವುದಿಲ್ಲ. ಇಷ್ಟಕ್ಕೂ ಜೈಲಿನಲ್ಲಿರುವವರು ಲಾಠಿ ಬಿಟ್ಟರೆ ಬೇರೆ ಯಾವ ಆಯುಧವನ್ನೂ ಬಳಸುವುದಿಲ್ಲ. ಹೀಗಿದ್ದಾಗ, ಜೈಲಿನಲ್ಲಿ ಸಕಾಲಕ್ಕೆ ಸಂಘರ್ಷಗಳನ್ನು ತಪ್ಪಿಸುವುದಾಗಲಿ ಅಥವಾ ಸಿಬ್ಬಂದಿಯ ಆತ್ಮರಕ್ಷಣೆಯಾಗಲಿ ಹೇಗೆ ಸಾಧ್ಯ? ಸರ್ಕಾರ ಎಲ್ಲಕ್ಕೂ ಹಣ ಖರ್ಚಾಗುತ್ತದೆ ಎಂದು ಯೋಚಿಸುವುದನ್ನು ಬಿಟ್ಟು, ಜೈಲುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಆಂತರಿಕ ಸಂಘರ್ಷಗಳು ನಿಯಂತ್ರಣಕ್ಕೆ ಬರಬಹುದು.

ಹೀಗಿದೆ ನಮ್ಮ ವ್ಯವಸ್ಥೆ!
ಉಗ್ರರೊಡನೆ ನಂಟು ಹೊಂದಿದ್ದ ಆರೋಪದ ಮೇಲೆ 2014ರಲ್ಲಿ ಯಾಸಿನ್ ಭಟ್ಕಳ್ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಯಿತು. ಆತ, ವ್ಯಾನ್ನಿಂದ ಇಳಿಯುತ್ತಿದ್ದಂತೆಯೇ ‘ಬ್ಲ್ಯಾಕ್ ಕ್ಯಾಟ್’ ತಂಡದ ನೂರಾರು ಮಂದಿ ಗನ್ ಪಾಯಿಂಟ್ನಲ್ಲಿ ಸುತ್ತುವರಿದರು. ಆ ನಂತರ ಆತನನ್ನು ಜೈಲಿನ ಒಳಗೆ ಬಿಟ್ಟರು. ಅಷ್ಟು ಜನರ ಕಣ್ಗಾವಲಿನಲ್ಲಿ ಒಳಗೆ ಬಂದ ಆತನ ಭದ್ರತೆಗಾಗಿ ಇಡೀ ಜೈಲಿನ ಅರ್ಧ ಭಾಗವನ್ನೇ ಬಿಟ್ಟುಕೊಡಲಾಗಿತ್ತು. ಆದರೆ ಕಾವಲಿಗಿದ್ದದ್ದು ಮಾತ್ರ ಕೆಲವೇ ಸಿಬ್ಬಂದಿ. ಇದು ನಮ್ಮ ಜೈಲಿನ ವ್ಯವಸ್ಥೆ!

ನಿರೂಪಣೆ : ಗಾಣಧಾಳು ಶ್ರೀಕಂಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.