ದೇಶಕ್ಕೆ ಸ್ವಾತಂತ್ರ್ಯ ದೊರೆತು 65 ವರ್ಷಗಳು ಗತಿಸಿ ಹೋದರೂ ಆಧುನಿಕ ವೈದ್ಯಕೀಯ ವ್ಯವಸ್ಥೆ ಜನರಿಗೆ ಸುಲಭವಾಗಿ ಕೈಗೆಟುಕದ ಪರಿಣಾಮ ಇಂದಿಗೂ ಮಾತೃ ಮರಣಗಳು ಹೆಚ್ಚುತ್ತಲೇ ಸಾಗಿವೆ. ಇದಕ್ಕೆ ವೈದ್ಯಕೀಯ ಕ್ಷೇತ್ರದ ಸಮಸ್ಯೆಯಷ್ಟೇ ಕಾರಣವಲ್ಲ. ಸಾಮಾಜಿಕ, ಧಾರ್ಮಿಕ, ಪರಂಪರಾಗತವಾಗಿ ನಡೆದು ಬಂದ ಪದ್ಧತಿಗಳೂ ಕಾರಣ.

ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಅಷ್ಟೇ ಏಕೆ ನಮ್ಮಂದಿಗೇ ಸ್ವಾತಂತ್ರ್ಯ ಪಡೆದ ಪಕ್ಕದ ಪುಟ್ಟ ರಾಷ್ಟ್ರ ಶ್ರೀಲಂಕಾದಲ್ಲಿಯೂ ಮಾತೃ ಮರಣ ಪ್ರಮಾಣ ಅತ್ಯಂತ ಕಡಿಮೆ ಇದೆ. ಈ ರಾಷ್ಟ್ರಗಳಲ್ಲಿ ಒಂದು ಲಕ್ಷ ಹೆರಿಗೆಗಳಿಗೆ 5-6 ಮಾತೃ ಮರಣಗಳು ಸಂಭವಿಸಿದರೆ, ನಮ್ಮ ದೇಶದಲ್ಲಿ ಲಕ್ಷದಲ್ಲಿ 600 ಗರ್ಭಿಣಿಯರು, ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ.

ಪ್ರಜನನದ ಸಮಸ್ಯೆಗಳನ್ನು ಎರಡು ಚೌಕಟ್ಟಿನ ಚಿತ್ರಗಳಲ್ಲಿ ವಿಶ್ಲೇಷಿಸಬಹುದು. ಒಂದು ಸಣ್ಣ ಚೌಕಟ್ಟಿನ ಚಿತ್ರ. ಈ ಚೌಕಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳು, ಅಂಕಿ ಸಂಖ್ಯೆಗಳು, ಸರ್ಕಾರದ ನೀತಿ ನಿಲುವುಗಳು. ದೊಡ್ಡ ಚೌಕಟ್ಟಿನಲ್ಲಿ ಭಾರತದ ಸಂಸ್ಕೃತಿ, ರೂಢಿಗತ ಮೌಲ್ಯಗಳು, ಪರಂಪರಾಗತವಾಗಿ ನಡೆದ ರೀತಿಗಳು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನೂ ನೋಡಬೇಕಾಗುತ್ತದೆ.

ಮಹಿಳೆ ಶಿಕ್ಷಣ ಪಡೆದು ಎಷ್ಟೇ ಮುಂದುವರೆದಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ವಾಸ್ತವ ಸ್ಥಿತಿ ಹಾಗಿಲ್ಲ. ಇಂದಿಗೂ ಮಹಿಳೆಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾಳಜಿ ವಹಿಸುವ ಸೂಕ್ಷ್ಮತೆಗಳು ಬಂದಿಲ್ಲ. ಕುಟುಂಬ ಯೋಜನೆಯಡಿ ಗಂಡಸರು ಹಾಗೂ ಹೆಂಗಸರು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಗಂಡಸರಿಗೆ ವ್ಯಾಸೆಕ್ಟೆಮಿ, ಹೆಂಗಸರಿಗೆ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ. ಶೇ 99 ಪ್ರಕರಣಗಳಲ್ಲಿ ಹೆಂಗಸರೇ ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಗಂಡಸರು ಮಾಡಿಸಿಕೊಳ್ಳುವ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಅತಿ ಕಡಿಮೆ ದೂರಗಾಮಿ ಪರಿಣಾಮ ಬೀರಲಿದೆ ಎಂಬುದು ನಮಗೆ 60 ವರ್ಷಗಳ ಹಿಂದೆಯೇ ಗೊತ್ತಾಗಿದೆ. ಆದರೆ ಪುರುಷ ಪ್ರಧಾನ ಮನೋಭಾವದಿಂದ ಮಹಿಳೆಯೇ ಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯಕ್ಕೆ ಒಳಗಾಗುತ್ತಾಳೆ.

ಪ್ರಸವವಾದ ಮೊದಲ 42 ದಿನಗಳು ಮಹಿಳೆಗೆ ಅತ್ಯಂತ ಹೆಚ್ಚಿನ ಜೋಪಾನ ಮಾಡಬೇಕಾದ ಸಮಯ. ಸರ್ಕಾರ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರ ಮೂಲಕ ಹಳ್ಳಿಗಾಡಿನಲ್ಲಿರುವ ಬಾಣಂತಿಯರ ಮನೆಗೇ ತೆರಳಿ ಔಷಧಿ, ಇಂಜೆಕ್ಷನ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಇದು ಇನ್ನಷ್ಟು ಸಮರ್ಪಕವಾಗಿ ನಡೆಯಬೇಕು.

ಭಾರತದಲ್ಲಿ ಅನಪೇಕ್ಷಿತ ಗರ್ಭಧಾರಣೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಸೂಕ್ತ ವೈದ್ಯಕೀಯ ಸಲಹೆ ತೆಗೆದುಕೊಳ್ಳದಿರುವುದು ಹಾಗೂ ಹೊಸತಾಗಿ ಮದುವೆಯಾದವರಿಗೆ ಸೂಕ್ತ ಲೈಂಗಿಕ ಸಲಹೆ ಸಿಗದೇ ಇರುವುದು ಮುಖ್ಯ ಕಾರಣ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 50 ಲಕ್ಷ ಗರ್ಭಪಾತಗಳು ಈ ಕಾರಣಗಳಿಂದಾಗಿ ಸಂಭವಿಸುತ್ತಿವೆ. ಅದಕ್ಕಾಗಿ ಹದಿಹರೆಯದ ಮಕ್ಕಳಿಗೆ ಲೈಂಗಿಕ ಅಥವಾ ಶಾರೀರಿಕ ಶಿಕ್ಷಣವನ್ನು ಒಂದು ಆರೋಗ್ಯಕರ ವಾತಾವರಣದಲ್ಲಿ ಬೋಧಿಸುವ ವ್ಯವಸ್ಥೆ ಜಾರಿಯಾಗಬೇಕು. ಇದು ಶಿಕ್ಷಕರಿಂದ ಸಾಧ್ಯವಿಲ್ಲದ ಮಾತು. ಅದಕ್ಕಾಗಿ ಆರೋಗ್ಯ ಇಲಾಖೆಯ ನರ್ಸ್ಗಳ ದೊಡ್ಡ ಪಡೆಯೇ ತಯಾರಾಗಬೇಕು ಎಂಬುದು ನನ್ನ ಆಶಯ. ಇದು ಹೈಸ್ಕೂಲ್ ಹಂತದಿಂದಲೇ ಆರಂಭವಾಗಬೇಕು.

ಗರ್ಭಿಣಿಯರ ತಪಾಸಣೆ: ವಿಫಲ ಯೋಜನೆ
ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಖಿಲ ಭಾರತ ಮಟ್ಟದ ಹೆರಿಗೆ ತಜ್ಞವೈದ್ಯರ ಸಂಘಟನೆ (ಫೆಡರೇಷನ್ ಆಫ್ ಅಬ್ಸ್ಟೆಟ್ರಿಕ್ ಅಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ-ಫಾಗ್ಸಿ), ಎಂಟು ವರ್ಷಗಳ ಹಿಂದೆ ಒಂದು ಯೋಜನೆಯನ್ನು ರೂಪಿಸಿತು. ಸೇವಾ ಮನೋಭಾವದಿಂದ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿತಿಂಗಳ 9ರಂದು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಉಚಿತವಾಗಿ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ತನ್ನ 20 ಸಾವಿರ ವೈದ್ಯರಿಗೂ ತಿಳಿಸಿತು. ಆದರೆ ಬರಿ ಎರಡು ವರ್ಷಗಳಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಯಿತು. ನಗರ ಪ್ರದೇಶದಲ್ಲಿ ವೈದ್ಯಕೀಯ ಸಲಕರಣೆಗಳ ಸಹಾಯದಿಂದ ವೈದ್ಯಕೀಯ ಶಾಸ್ತ್ರಗಳನ್ನು ಅಧ್ಯಯನ ಮಾಡಿದವರಿಗೆ ಸಲಕರಣೆ ಬಿಡಿ, ಕನಿಷ್ಠ ಮೂಲಸೌಕರ್ಯಗಳಿಲ್ಲದ ಕಾರಣ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಲು ಆಗಲಿಲ್ಲ. ಏಕೆಂದರೆ ಆ ಪರಿಸರಕ್ಕೆ ಇಂತಹ ವೈದ್ಯರು ಹೊಂದಿಕೊಂಡಿರುವುದಿಲ್ಲ. ಇನ್ನೊಂದು ಬಹುಸೂಕ್ಷ್ಮ ವಿಷಯವೆಂದರೆ, ಗ್ರಾಮೀಣ ಮಹಿಳೆಯರಿಗೆ ಅವರ ಮಟ್ಟಕ್ಕೆ ಇಳಿದು ಚಿಕಿತ್ಸೆ ನೀಡಲು ಆಗಲಿಲ್ಲ.

ಅಪೌಷ್ಟಿಕತೆಯ ಸಮಸ್ಯೆ
ಭಾರತದಂತಹ ದೊಡ್ಡ ದೇಶದಲ್ಲಿ ಅತಿ ಹೆಚ್ಚು ಅಪೌಷ್ಟಿಕ ಮಕ್ಕಳು ಇದ್ದಾರೆಂಬ ಸಂಗತಿಯೇ ನಾಚಿಕೆಗೇಡು. ಆದರೂ ಇದು ಸತ್ಯ. ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳಿಗೆ ಸರಿಯಾದ ಆಹಾರ ದೊರೆಯದ ಪರಿಣಾಮ ಮಕ್ಕಳು ಅಪೌಷ್ಟಿಕರಾಗುತ್ತಿದ್ದಾರೆ. ಅಲ್ಲದೇ, ಸರ್ಕಾರವೇ ಜನರ ಸಾಂಪ್ರದಾಯಿಕ ಆಹಾರ ಕ್ರಮವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಲು ಹೊರಟಿದೆ. ಇದು ಆತಂಕಕಾರಿ ಬೆಳವಣಿಗೆ. ಉದಾಹರಣೆಗೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಬಿಸಿಯೂಟ ನೀಡುವ ಸರ್ಕಾರ ಬರೀ ಅನ್ನವನ್ನು ಕೊಡುತ್ತದೆ. ಆದರೆ, ಉತ್ತರ ಕರ್ನಾಟಕದಲ್ಲಿ ಇಂದಿಗೂ ರೊಟ್ಟಿ ಸಾಂಪ್ರದಾಯಿಕ ಆಹಾರ. ರೊಟ್ಟಿ ಬದಲು ಅನ್ನ ತಿನ್ನುವ ರೂಢಿ ಬೆಳೆಯಿತು. ಬಿಸಿಯೂಟಕ್ಕೆ ಪಾಲಿಷ್ ಮಾಡಿದ ಅಕ್ಕಿಯನ್ನು ಬಳಸುತ್ತಾರೆ. ಈ ಅಕ್ಕಿಯನ್ನು ತಿಂದವರು ಕ್ರಮೇಣ ಮಧುಮೇಹ ರೋಗಕ್ಕೆ ತುತ್ತಾಗುತ್ತಾರೆ.

ಹೆಚ್ಚಿದ ಸಾವುಗಳು
ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಸುಶ್ರುತ ಸಂಹಿತೆ ಜಾರಿಗೆ ಬಂದಿತ್ತು. ಗರ್ಭಿಣಿಯರ ಆರೈಕೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಆಗಲೇ ತಿಳಿದಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಕ್ರಮೇಣ ಸಾಕಷ್ಟು ಆವಿಷ್ಕಾರಗಳು ನಡೆದವು. ಆದರೂ ಪ್ರತಿದಿನ ಹೆರಿಗೆ ಸಮಯದಲ್ಲಿ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಯಾವಾಗಲೋ ಸಂಭವಿಸುವ ವಿಮಾನ ಅಪಘಾತದಲ್ಲಿ ಕೆಲವು ಜನರು ಸತ್ತರೆ ದೊಡ್ಡ ಸುದ್ದಿಯಾಗುತ್ತದೆ. ಆದರೆ ನಿತ್ಯವೂ ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗುವ ಘಟನೆಗಳು ಸುದ್ದಿಯಾಗುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಿಗೆ ಕಷ್ಟಸಹಿಷ್ಣುತೆ ಕಡಿಮೆಯಾಗುತ್ತಿದೆ ಹಾಗೂ ದೈಹಿಕ ಶ್ರಮ ಹೆಚ್ಚಾಗಿ ಆಗುತ್ತಿಲ್ಲ. ಹೆರಿಗೆ ನೋವು ಅನುಭವಿಸುವುದು ಆಗುವುದಿಲ್ಲ ಎಂಬ ಕಾರಣ ನೀಡಿ ಸಿಜೇರಿಯನ್ಗಳ ಸಂಖ್ಯೆ ಹೆಚ್ಚುತ್ತಿದೆ. ಲಾಭಬಡುಕ ಖಾಸಗಿ ಆಸ್ಪತ್ರೆಗಳವರು ಅಗತ್ಯ ಇರಲಿ, ಬಿಡಲಿ ಸಿಜೇರಿಯನ್ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಸಿಜೇರಿಯನ್ ಬಹುದೊಡ್ಡ ಬಾಬತ್ತು, ಹೆಚ್ಚು ಲಾಭ ತರುತ್ತದೆ. ಒಂದು ಅಂದಾಜಿನಂತೆ ಮುಂಬೈ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಶೇ 80ರಷ್ಟು ಹೆರಿಗೆಗಳು ಸಿಜೇರಿಯನ್ ಆಗುತ್ತಿವೆ.

ಗರ್ಭಿಣಿಯರು, ಬಾಣಂತಿಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸರ್ಕಾರ, ಕಡಿಮೆ ದರದಲ್ಲಿ ಹೆರಿಗೆಗಳನ್ನು ಮಾಡಿಸುವ ಸೇವೆಯನ್ನು ರೂಪಿಸಬೇಕು. ಜತೆಗೆ ಜನರ ಮನಸ್ಥಿತಿಯೂ ಬದಲಾಗಬೇಕು.

(ಲೇಖಕರು: ಸ್ತ್ರೀ ರೋಗ ತಜ್ಞರು, ಧಾರವಾಡ)
ನಿರೂಪಣೆ: ಎಂ.ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.