ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸಮಸ್ಯೆ ಕೇಳುವವರಿಲ್ಲ

ಅಗತ್ಯ ಪೂರ್ವ ಸಿದ್ಧತೆ ಇಲ್ಲ; ಅನುಮಾನ, ಗೊಂದಲಕ್ಕೆ ಉತ್ತರವಿಲ್ಲ
Last Updated 18 ನವೆಂಬರ್ 2016, 19:25 IST
ಅಕ್ಷರ ಗಾತ್ರ

ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಅನರ್ಹಗೊಳಿಸಿದ ಕೇಂದ್ರದ ತೀರ್ಮಾನವನ್ನು ರಾಷ್ಟ್ರದ ಒಟ್ಟಾರೆ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ನಾವು ಸ್ವಾಗತಿಸುತ್ತೇವೆ. ಆದರೆ ಇದರ ಜೊತೆಯಲ್ಲೇ ಕೆಲವು ಪ್ರಶ್ನೆಗಳನ್ನು ಮುಂದಿಡಬೇಕಾಗುತ್ತದೆ.

ಇಂಥ ಮಹತ್ವದ ತೀರ್ಮಾನ ಕೈಗೊಂಡು, ಅದನ್ನು ಅನುಷ್ಠಾನಕ್ಕೆ ತರುವ ಮುನ್ನ ಕೇಂದ್ರ ಸರ್ಕಾರ ಅಗತ್ಯ ಮೂಲ ಸೌಕರ್ಯಗಳನ್ನು ಸಿದ್ಧ ಮಾಡಿಕೊಳ್ಳಬೇಕಾಗಿತ್ತು, ಅಲ್ಲವೇ? ಆದರೆ, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆಯೇ, ನೋಟು ಚಲಾವಣೆ ನಿಷೇಧ ತೀರ್ಮಾನವನ್ನು ಜಾರಿಗೆ ತಂದಿದ್ದು ತಪ್ಪು ಎನ್ನಬೇಕಾಗುತ್ತದೆ. ಅನುಮಾನ, ಗೊಂದಲಗಳು ಜನರಲ್ಲಿ ಮೂಡದಂತೆ ಮೊದಲೇ ಕ್ರಮ ಕೈಗೊಳ್ಳಬೇಕಿತ್ತು.

ತೀರ್ಮಾನದ ಅನುಷ್ಠಾನಕ್ಕೆ ಬೇಕಿರುವ ಸಿಬ್ಬಂದಿ ವ್ಯವಸ್ಥೆ ಆಗಬೇಕಿತ್ತು, ಹೊಸ ನೋಟುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಕ್ಷಿಪ್ರಗತಿಯಲ್ಲಿ ಸಾಗಿಸುವುದಕ್ಕೆ ಅಗತ್ಯವಿರುವ ಸಂಖ್ಯೆಯಲ್ಲಿ ವಾಹನಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಿತ್ತು. ಹಾಗೆಯೇ, ಹೊಸ ನೋಟುಗಳನ್ನು ವಿತರಿಸಲು ಸಾಧ್ಯವಾಗುವಂತೆ ಎಟಿಎಂ ಯಂತ್ರಗಳನ್ನು ಬದಲಾಯಿಸಬೇಕಿತ್ತು.

ಒಂದು ಸಂದರ್ಭವನ್ನು ಉದಾಹರಣೆಯಾಗಿ ಪರಿಗಣಿಸೋಣ: ಅತಿ ಸಣ್ಣ ಪ್ರಮಾಣದ ಕೈಗಾರಿಕೆಯೊಂದಕ್ಕೆ ವಸ್ತು/ಉತ್ಪನ್ನ ಸಿದ್ಧ ಮಾಡಿಕೊಡುವಂತೆ ಬೇಡಿಕೆ ಬರುತ್ತದೆ. ಅತಿ ಸಣ್ಣ ಕೈಗಾರಿಕೆಯನ್ನು ನಡೆಸುವ ವ್ಯಕ್ತಿ, ಬೇಡಿಕೆ ಪೂರೈಸಲು ಅಗತ್ಯವಿರುವ ಸಾಮಾನುಗಳನ್ನು ಬೆಳಿಗ್ಗೆ ಮಾರುಕಟ್ಟೆಯಿಂದ ಖರೀದಿಸಬೇಕು, ಸಂಜೆಯ ವೇಳೆಗೆ ಬೇಡಿಕೆ ಪೂರೈಸಬೇಕು. ವ್ಯವಸ್ಥೆ ಈ ಮಾದರಿಯಲ್ಲಿ ನಡೆಯುತ್ತಿರುತ್ತದೆ.

ಬೆಳಿಗ್ಗೆ ಬೇಡಿಕೆ ಸ್ವೀಕರಿಸಿ, ಸಂಜೆಯ ವೇಳೆಗೆ ಅದನ್ನು ಪೂರೈಸಬೇಕಿರುವ ಉದ್ಯಮಿಗೆ ದಿನನಿತ್ಯ ಅಂದಾಜು ₹ 20 ಸಾವಿರ, ₹ 50 ಸಾವಿರ ಅಥವಾ ₹ 1 ಲಕ್ಷ ನಗದು ರೂಪದಲ್ಲೇ ಬೇಕಿರುತ್ತದೆ. ಆತ ಹಣಕ್ಕೆ ಎಲ್ಲಿ ಹೋಗಬೇಕು? ಬೇಕೆಂದಷ್ಟು ಹಣ, ಬೇಕೆಂದಾಗ ಬ್ಯಾಂಕ್‌ಗಳಿಂದ ಸಿಗುವುದಿಲ್ಲ. ಗರಿಷ್ಠ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಾಗ, ಈ ಉದ್ಯಮ ವಲಯದಲ್ಲಿರುವ ಪ್ರತಿ ವ್ಯಕ್ತಿಯೂ ತೊಂದರೆಗೆ ಒಳಗಾಗುತ್ತಾನೆ. ಅವರ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳು ತೊಂದರೆಗೆ ಸಿಲುಕುತ್ತವೆ.

ಸಣ್ಣ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಕೊಡಲು ಆಗುತ್ತಿಲ್ಲ. ದಿನಕ್ಕೆ ₹ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಹಿಂಪಡೆಯುವಂತಿಲ್ಲ ಎಂಬ ಮಿತಿ ಹೇರಿದಾಗ, ವೇತನ ಪಾವತಿಸುವುದು ಹೇಗೆ ತಾನೇ ಸಾಧ್ಯ? ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವವರು ತೊಂದರೆಗೆ ಸಿಲುಕಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೈಗಾರಿಕೆಗಳು, ಉದ್ದಿಮೆಗಳು ದಿನಕ್ಕೆ ₹ 50 ಸಾವಿರದವರೆಗೆ ಹಿಂಪಡೆಯಬಹುದು ಎಂಬ ನಿಯಮ ಪರಿಸ್ಥಿತಿಯನ್ನು ತುಸು ಸುಧಾರಿಸಬಹುದು.

ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಬಹುಪಾಲು ವೇತನ ಪಾವತಿ ಬ್ಯಾಂಕ್‌ ಖಾತೆಗಳ ಮೂಲಕ ಆಗುವುದರಿಂದ, ಅವುಗಳಿಗೆ ಹೆಚ್ಚಿನ ತೊಂದರೆ ಆಗಲಾರದು. ಆದರೆ ಆ ವಲಯದಲ್ಲಿ ಕೆಲಸ ಮಾಡುವ ದಿನಗೂಲಿಗಳಿಗೆ ತೊಂದರೆ ಆಗುತ್ತದೆ. ಇಲ್ಲಿ ಇನ್ನೂ ಒಂದು ಸಂಗತಿ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಉದ್ದಿಮೆಗಳಿಗೆ ಇನ್ನಷ್ಟು ತೊಂದರೆ ಆಗಿದೆ. ತರಕಾರಿ ಮಾರುವ ವ್ಯಕ್ತಿ ಬೆಳಿಗ್ಗೆ ಬೇಗ ಎದ್ದು ತರಕಾರಿ ಖರೀದಿಸಿ ಅದನ್ನು ಜನರಿಗೆ ಮಾರಾಟ ಮಾಡಬೇಕು. ಈತನೂ ಈಗ ತೊಂದರೆಗೆ ಸಿಲುಕಿದ್ದಾನೆ.

ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೇಂದ್ರದ ತೀರ್ಮಾನದಿಂದ ಆಗಿರುವ ನಷ್ಟದ ಅಂದಾಜು ಶೇಕಡ 40ರಿಂದ 66ರಷ್ಟು. ಈ ಪೈಕಿ, ಆಟೊಮೊಬೈಲ್‌ ಕ್ಷೇತ್ರದಲ್ಲಿನ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳು ಅತಿಹೆಚ್ಚಿನ ಹಾನಿ (ಶೇಕಡ 60ರಿಂದ 66ರಷ್ಟು) ಅನುಭವಿಸಿವೆ. ಅತಿಸಣ್ಣ ಹಾಗೂ ಸಣ್ಣ ಉದ್ದಿಮೆಗಳ ಉತ್ಪನ್ನದ ಗ್ರಾಹಕ ಖರೀದಿ ಮಾಡುತ್ತಿಲ್ಲ. ಇನ್ನು, ಉತ್ಪನ್ನಗಳನ್ನು ಮಾರಿ ಹಣ ಸಂಪಾದಿಸುವುದು ಹೇಗೆ ಸಾಧ್ಯ?

ಉತ್ಪನ್ನಗಳ ಖರೀದಿ 10 ದಿನ ನಿಂತುಹೋದರೆ, ಉದ್ದಿಮೆಯ ಸಮತೋಲನವೇ ತಪ್ಪಿಹೋಗುತ್ತದೆ. ವಹಿವಾಟು ಕುಂಠಿತ ಆದರೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಪಾವತಿಸುವುದು ಕಷ್ಟವಾಗುತ್ತದೆ. ಈ ಬಾರಿ ಹೆಚ್ಚಿನ ಕಾಲಾವಕಾಶ ನೀಡುವಂತೆ ನಾವು ರಾಜ್ಯ ಸರ್ಕಾರವನ್ನು ಕೋರಲಿದ್ದೇವೆ. ನಮ್ಮ ವಹಿವಾಟೇ ಸರಿಯಾಗಿ ನಡೆಯದಿದ್ದರೆ, ವ್ಯಾಟ್‌ ಪಾವತಿಸಲು ಬೇಕಾದ ಹಣ ಸಂಗ್ರಹ ಆಗುವುದಿಲ್ಲ. ನಾವು ವ್ಯಾಟ್‌ ಪಾವತಿಸದೆ ಇದ್ದರೆ, ರಾಜ್ಯ ಸರ್ಕಾರದ ಆದಾಯ ಕೂಡ ಕಡಿಮೆ ಆಗುತ್ತದೆ.

ಕೇಂದ್ರದ ತೀರ್ಮಾನದಿಂದ ದೇಶದ ಬೊಕ್ಕಸಕ್ಕೆ ಹೆಚ್ಚಿನ ಹಣ ಬರುತ್ತದೆ ಎಂಬುದನ್ನು ಒಪ್ಪುತ್ತೇನೆ. ನೋಟು ರದ್ದತಿಗೆ ಉದ್ದಿಮೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು?

ಲೇಖಕರು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ರಾಜ್ಯ ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT