ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕಲಿಯಲು ಸಂಕೋಚ ಏಕೆ?

Last Updated 7 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅಣ್ಣಾ ಹಜಾರೆ ನೇತೃತ್ವದಲ್ಲಿ ೨೦೧೧ರಲ್ಲಿ ಪ್ರಾರಂಭ­ವಾದ  ಭ್ರಷ್ಟಾಚಾರ ವಿರೋಧಿ ಆಂದೋ­ಲನ, ೭೦ರ ದಶಕದ ಜೆ.ಪಿ. ಚಳವಳಿಯ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತ್ತು.  ದೆಹಲಿ ಇರ­ಬಹುದು, ಬೆಂಗಳೂರು ಇರಬಹುದು... ಉಪವಾಸದ ಶಿಬಿರಗಳೆಲ್ಲೆಡೆ ಅದೆಷ್ಟು ಜನ, ವಿಶೇಷ­ವಾಗಿ ಯುವ ಸಮೂಹ ಧಾವಿಸಿ ಹೋಗುತ್ತಿದ್ದುದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆಗತಾನೆ ಈಜಿಪ್ಟ್‌ನಿಂದ ಹಿಡಿದು ಅನೇಕ ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆದ ಜನಕ್ರಾಂತಿ ಎಲ್ಲರ ಗಮನ ಸೆಳೆದಿತ್ತು. ಭಾರತ­ದಲ್ಲಿಯೂ ಅದೇ ಪರಿಣಾಮ-, ಆದರೆ ಶಾಂತಿಯುತ ಮಾರ್ಗ­ದಲ್ಲಿ ಆಗಬಹುದು, ಭ್ರಷ್ಟಾಚಾರವೇ ಶಿಷ್ಟಾ­ಚಾರ ಎಂದು ಆಳ್ವಿಕೆ ನಡೆಸುವವರ ವಿರುದ್ಧ ಶಾಂತಿ­ಯುತ ಆದರೆ ಪರಿಣಾಮಕಾರಿ ಚಳವಳಿ ಆಗಬಹುದು ಎಂಬ ಆಸೆ, ಅಭಿಲಾಷೆ ಅನೇಕರ ಮನದಲ್ಲಿ ಬಂದದ್ದು ಸುಳ್ಳಲ್ಲ.

ಆ ಭ್ರಷ್ಟಾಚಾರ ವಿರೋಧಿ ಚಳವಳಿಯ ಮುಂಚೂಣಿ­ಯಲ್ಲಿದ್ದ ಅರವಿಂದ ಕೇಜ್ರಿವಾಲ್ ಇಂದು ದೇಶದ ರಾಜಧಾನಿ ದೆಹಲಿಯ ಮುಖ್ಯಮಂತ್ರಿ­ಯಾಗಿರುವುದು, ಈ ದೇಶದ ರಾಜಕೀಯ ಅದ್ಭುತಗಳಲ್ಲಿ ಮಹತ್ವದ್ದು. ಆಮ್ ಆದ್ಮಿ ಪಕ್ಷ ಎಂಬ ಸಾಮಾನ್ಯ ಜನರ ಪಕ್ಷ-  ಅತ್ಯಲ್ಪ ಸಮಯದಲ್ಲಿ ಪಕ್ಷವನ್ನು ರಚಿಸಿ ಚುನಾವಣೆ ಸಿದ್ಧತೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಅನುಸರಿಸಿದ ಮಾನದಂಡ, ಪ್ರಚಾರದ ವೈಖರಿ, ಚುನಾವಣೆ ನಿಧಿ ಸಂಗ್ರಹ ಎಲ್ಲರ ಮೆಚ್ಚುಗೆ ಗಳಿ­ಸಿತ್ತು. ನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಗೂ ಎಚ್ಚ­ರಿಕೆಯ ಸಂದೇಶ ರವಾನೆಯಾ­ಗಿದ್ದು ನಿಜ. ಭಾರತೀಯಚುನಾವಣಾ ರಂಗದ ಮೂರು ಪ್ರಬಲ ಬಲ­ಗಳಾದ ಜಾತಿ, ಹಣ, ಭುಜ . . .  

ಮೂರನ್ನೂ ಧಿಕ್ಕರಿಸಿ ನಡೆದ ಈ ಪ್ರಯೋಗ ಪ್ರಾಯಶಃ ರಾಜಕೀಯ­ದಲ್ಲಿ ಹೀಗೂ ಸಾಧ್ಯ ಎಂಬ ಭರವಸೆ­ಯನ್ನು ನೀಡಿದ್ದು ಸುಳ್ಳಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ನೀಡಿರುವ ಆಮ್ಲ­ಜನಕದ ಆಧಾರದ ಮೇಲೆ ಆಡಳಿತ ನಡೆಸುತ್ತಿರುವ ಎಎಪಿ ಎಡವಬಹುದು, ಸೋಲಬಹುದು. ಆದರೆ ಭಾರತದ ರಾಜಕೀಯ, ಹಿಂದಿನ ಯಥಾ­ವತ್ ಸ್ಥಿತಿಯನ್ನು ಅನುಸರಿಸಲು ಆಗದ ವಾತಾವರಣ ಸೃಷ್ಟಿ­ಯಾಗಿರುವುದು ದಿಟ.

ಅಭ್ಯರ್ಥಿಗಳನ್ನು ಆಯ್ಕೆ ಮಾಡು­ವಾಗ ಗೆಲ್ಲಲು ಯಾರಾ­ದರೂ ಸರಿ ಎಂಬ ಭಂಡತನವನ್ನು ಸ್ಪಲ್ಪ ಪಕ್ಕಕ್ಕೆ ಸರಿಸಿ ಜನಸಾಮಾನ್ಯರ ಭಾವನೆ­ಗಳಿಗೆ ಸ್ಪಂದಿಸ­ಬೇಕಾದ ಅನಿವಾರ್ಯ ಇಂದು ಬಂದಿದೆ. ಜನಸಾ­ಮಾ­ನ್ಯರ ಅನಿಸಿಕೆಗಳನ್ನು ಅರ್ಥೈಸಿ­ಕೊಳ್ಳಲು ಅಭಿಪ್ರಾಯ ಸಂಗ್ರಹ ಹಿಂದೆಂದಿ­ಗಿಂತಲೂ ಇಂದು ಮಹತ್ವ ಪಡೆದಿದೆ. ರಾಜಕೀಯ ಪಕ್ಷದ ಕಾರ್ಯಕರ್ತ­ರ­ಲ್ಲಿಯೂ ಹೊಸ ಚಿಂತನೆಗಳಿಗೆ, ಯೋಚನೆಗಳಿಗೆ ಇಂಬು ದೊರೆತಿದೆ. -ಮತದಾರರನ್ನು ಸಂಪರ್ಕಿಸಲು, ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲು, ಬೇರೆ -ಬೇರೆ ವಿಧಾನ­ಗಳ ಮೂಲಕ ಜನತೆಗೆ ಸಮೀಪವಾಗಲು ಒಂದಷ್ಟು ಹೊಸ ಆಲೋಚನೆಗಳು ಹುಟ್ಟಿವೆ. ಜನ ಸಂಘದ ಕಾಲ­ದಿಂದಲೂ ನಮ್ಮ ಪಕ್ಷದಲ್ಲಿ (ಬಿಜೆಪಿ) ಚಾಲ್ತಿಯಲ್ಲಿದ್ದ, ಸಮಾಜದ ಪ್ರತಿಯೊಬ್ಬರಿಂದಲೂ ನಿಧಿ ಸಂಗ್ರಹ ಕಾರ್ಯ ಇಂದು ಪ್ರಾಮುಖ್ಯ ಪಡೆದಿದೆ.

ಕಣ್ಣು ಕುಕ್ಕುವ, ಆಡಂಬರದಿಂದ ಕೂಡಿದ ವ್ಯಕ್ತಿಗಳ ವರ್ತನೆ ಬಗ್ಗೆ ಇಂದು ಟೀಕೆ ವ್ಯಕ್ತವಾಗುತ್ತಿದೆ. ೬೦–-೭೦ರ ದಶಕಗಳ ರಾಜಕೀಯ ಸರಳತೆಗೆ ಇಂದು ತುಸು ಮರುಜೀವ ಸಿಕ್ಕಿದೆ.  ಇಷ್ಟೂ ದಿನ  ಅಷ್ಟಾಗಿ ನಾವ್ಯಾರೂ ಗಮನಹರಿಸದಿದ್ದ ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಅತ್ಯಂತ ಸರಳ ಬದುಕನ್ನು ನಡೆಸುತ್ತಿರುವ ನಾಯಕರು ಈಗ ಪರಿಚಯವಾಗುತ್ತಿದ್ದಾರೆ. ಗೋವಾ  ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಯಾವುದೇ ಆಡಂಬರವಿಲ್ಲದೆ ವಿಮಾನದಲ್ಲಿ ಸಾಮಾನ್ಯ ವರ್ಗದಲ್ಲಿ ಕುಳಿತು ಹೋಗುವ, ತನ್ನ ಬ್ಯಾಗನ್ನು ತಾನೇ ಹಿಡಿದುಕೊಂಡು ಹೋಗುವ, ಅತ್ಯಂತ ಸಾಮಾನ್ಯ ಕಾರಿನಲ್ಲಿ ಚಲಿಸುವ ಸಂಗತಿಗಳು ಈಗ ತಿಳಿಯುತ್ತಿವೆ. ಅದೇ ರೀತಿ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತನ್ನ ಅತ್ಯಂತ ಸರಳ ಬದುಕಿಂದ ಇಡೀ ದೇಶದ ಗಮನಕ್ಕೆ ಬಂದಿದ್ದಾರೆ.

ಇಂತಹ ನಾಯಕರ ಬಗ್ಗೆ ಗೌರವದಿಂದ ಮಾತನಾಡುವುದು ಮತ್ತೆ ಚಾಲನೆ ಆಗಿರುವುದು ಅತ್ಯಂತ ಭರವಸೆ ಮೂಡಿಸುವ ಸಂಗತಿ. ಸಾರ್ವಜನಿಕ ಬದುಕಿನಲ್ಲಿ ಸಂಕೋಚಕ್ಕೂ ಮತ್ತೆ ಸ್ಥಾನ ಕಾಣುತ್ತಿದೆ. ಭ್ರಷ್ಟಾಚಾರ ಕುರಿತು ಸಮರ್ಥನೆಗೆ ಸ್ವಲ್ಪ ಹಿಂಜರಿಕೆ ಉಂಟಾಗುತ್ತಿದೆ. ಇಂದು ಒಟ್ಟು ಸುಶಾಸನ ಕುರಿತು, ಸಾಮಾನ್ಯ ಜನರಿಗೆ ಸವಲತ್ತು ತಲುಪಿಸುವ ಆದ್ಯತೆ ಬಗ್ಗೆ ಹಾಗೂ ವೈಯಕ್ತಿಕ ನಡವಳಿಕೆಗಳ ಬಗ್ಗೆ ವಿಶೇಷ ಚರ್ಚೆ, ಬಹಿರಂಗ ಸಂವಾದ ನಡೆಯುತ್ತಿರುವುದು ಅತ್ಯಂತ ಆರೋಗ್ಯದಾಯಕ ಬೆಳವಣಿಗೆ.

ಆದರೆ ಬಹಳ ವರ್ಷಗಳ ಹಿಂದೆ ಓದಿದ, ಓದಿ -ಇಂದಿಗೂ ಮನಸ್ಸಿನಲ್ಲಿ ಉಳಿದಿರುವ ‘The God that failed’  ಕೃತಿ ತುಂಬಾ ನೆನಪಿಗೆ ಬರುತ್ತಿದೆ. ಕಾರಣ, ತುಂಬಾ ಭರವಸೆ ಕೊಟ್ಟ್ಟ ನಾಯಕ-– -ಪಕ್ಷ ದಾರಿತಪ್ಪಿದಲ್ಲಿ, ಮುಗ್ಗರಿಸಿ ಬಿದ್ದಲ್ಲಿ, ಅನಗತ್ಯ ಹೇಳಿಕೆಗಳಿಂದ ಕುಪ್ರಸಿದ್ಧ ಆದಲ್ಲಿ, ಜನತೆಗೆ ಒಳ್ಳೆಯ ರಾಜಕೀಯ ಕುರಿತು  ಸಿನಿಕತೆ ಇನ್ನಷ್ಟು ಹೆಚ್ಚಾಗುತ್ತದೆ.

ಎಚ್ಚರಿಕೆ ಗಂಟೆ
* ಯಾವುದೇ ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಯಶಸ್ಸಿನಿಂದ ಪಾಠ ಕಲಿಯಲು ಸಂಕೋಚಪಡಬಾರದು.

* ಆಮ್‌ ಆದ್ಮಿ ಪಕ್ಷ, ಜನರ ಗಮನ ಸೆಳೆದಾಗ ಮತ್ತು ಗೌರವ ಪಡೆದಾಗ ಅದನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆ ಮಾಡಬೇಕು. ಎಂಟು ತಿಂಗಳಿ­ನಲ್ಲಿಯೇ ಅದು ಯಶಸ್ವಿಯಾಗಲು ಕಾರಣ ಏನು ಎನ್ನುವುದನ್ನು ಪತ್ತೆ ಮಾಡಬೇಕು.

* ಜನರಿಗೆ ಏನು ಬೇಕು ಎನ್ನುವುದನ್ನು ಸಾಂಪ್ರದಾಯಿಕ ಪಕ್ಷಗಳು ಬಹಳಷ್ಟು ಸಂದರ್ಭಗಳಲ್ಲಿ ಗಮನಿಸುತ್ತಿಲ್ಲ. ಜನರಿಗೆ ದೈನಂದಿನ ಬದುಕು ಮುಖ್ಯ. ಅದನ್ನು ಗಮನಿಸಬೇಕು. ಆ ನಿಟ್ಟಿನಲ್ಲಿ ಎಎಪಿ ಯಶಸ್ವಿಯಾಗಿದೆ.

* ಜನರಿಗೆ ಅಪರಿಚಿತರಾದವರನ್ನು ಅಭ್ಯರ್ಥಿ ಮಾಡಬಾರದು. ಜನರ ಮಧ್ಯೆ ಇದ್ದವರನ್ನೇ ಕಣಕ್ಕೆ ಇಳಿಸ­ಬೇಕು. ನಮ್ಮ ಪಕ್ಷದಲ್ಲಿ ಮೊದಲು ಇಂತಹ ಪದ್ಧತಿ ಇತ್ತು.

* ರಾಜಕೀಯ ವಲಯದಲ್ಲಿ ಪ್ರಾಮಾ­ಣಿಕತೆ ಎಂಬುದಿಲ್ಲ. ಜನರೇ ಭ್ರಷ್ಟರಾಗಿ­ದ್ದಾರೆ ಎಂಬ ಭಾವನೆ ಇತ್ತು. ಇದನ್ನು ಎಎಪಿ ಸುಳ್ಳಾಗಿಸಿದೆ. ಇದು, ಎಲ್ಲ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಬೇಕು.

* ಜನರ ಕಣ್ಣು ಕಿಸುರಾಗುವಂಥ ಕೆಲಸ ಮಾಡಬಾರದು. ಚುನಾವಣೆ ಬಳಿಕ ರಾಜಕಾರಣಿಗಳು ಹೇಗೆ ನಡೆದು­ಕೊಳ್ಳುತ್ತಾರೆ ಎಂಬುದೂ ಗಣನೆಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT