ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಇಂದು ಶಂಕರ ಜಯಂತಿ
Published 12 ಮೇ 2024, 0:08 IST
Last Updated 12 ಮೇ 2024, 0:08 IST
ಅಕ್ಷರ ಗಾತ್ರ

ಇಂದು ಸನ್ಯಾಸಿಗಳ ಸಂಖ್ಯೆ ಹೆಚ್ಚುತ್ತಿದೆ; ಸನ್ಯಾಸಿಗಳ ವೈಭವವೂ ಹೆಚ್ಚುತ್ತಿದೆ. ಆದರೆ ಸನ್ಯಾಸಿಗಳಲ್ಲಿ ಸಂನ್ಯಾಸಧರ್ಮ ದಿಟವಾಗಿ ನೆಲೆಗೊಳ್ಳುತ್ತಿದೆಯೆ? ನೆಲೆಗೊಂಡಿದೆಯೆ? ಇದು ನಾವೆಲ್ಲರೂ ಚಿಂತಿಸಬೇಕಾದ ಸಂಗತಿ.

ಆಚಾರ್ಯ ಶಂಕರರು ಸನ್ಯಾಸಧರ್ಮದ ಲಕ್ಷಣವನ್ನು ಸ್ಪಷ್ಟಗೊಳಿಸಿದವರು. ಅಷ್ಟೇಕೆ, ತತ್ತ್ವಜ್ಞಾನದ ದಾರಿಯನ್ನೇ ಬೆಳಗಿದವರು ಅವರು. ಉಪನಿಷತ್ತುಗಳ ಆದರ್ಶವನ್ನು ಎತ್ತಿ ನಿಲ್ಲಿಸಿ, ಆಧ್ಯಾತ್ಮಿಕತೆಯ ಅನಿವಾರ್ಯತೆಯನ್ನೂ ಸೊಗಸನ್ನೂ ಸತ್ತ್ವವನ್ನೂ ಸ್ಥಾಪಿಸಿದರು.

ಸನ್ಯಾಸ ಎಂದರೆ ಲೋಕವನ್ನು ಉದ್ಧರಿಸಲು ಧರಿಸಿದ ದಿರಸು – ಎಂಬ ಧೋರಣೆಯೇ ಇಂದು ನಮ್ಮ ಸಮಾಜದಲ್ಲಿ ಗಟ್ಟಿಯಾಗುತ್ತಿದೆ. ಆದರೆ ಸನ್ಯಾಸದ ನಡಿಗೆ ಎಂದರೆ ಅದು ಅಧ್ಯಾತ್ಮದ ನಡಿಗೆ. ನಮ್ಮನ್ನು ನಾವು ಚೆನ್ನಾಗಿ ತಿಳಿದುಕೊಳ್ಳುವುದೇ ಅಧ್ಯಾತ್ಮ. ನಮ್ಮನ್ನು ನಾವು ಅರಿತುಕೊಳ್ಳಲು ಮೊದಲು ನಾವು ಸಾಧನೆಯನ್ನು ಮಾಡಬೇಕು. ನಮ್ಮ ಅಂತರಂಗ–ಬಹಿರಂಗಗಳಲ್ಲಿರುವ ಕೊಳೆಗಳನ್ನು ಸಾಧನೆಯ ಮೂಲಕ ಶುದ್ಧವಾಗಿ ತೊಳೆದುಕೊಳ್ಳಬೇಕು. ಹೀಗೆ ಶುದ್ಧವಾದಮೇಲಷ್ಟೆ ಅಧ್ಯಾತ್ಮಚಿಂತನೆಗೆ ಅರ್ಹತೆ ಒದಗುವುದು. ರಾಗ–ದ್ವೇಷಗಳ ಬಲೆಯಿಂದ ಬಿಡಿಸಿಕೊಂಡವರಿಗಷ್ಟೆ ಆತ್ಮಚಿಂತನೆಯ ಅರ್ಹತೆ ದಕ್ಕುವುದು. ಹೀಗೆ ಅಧ್ಯಾತ್ಮಮಾರ್ಗ ಗೊತ್ತು–ಗುರಿಗಳನ್ನು ಗಟ್ಟಿಯಾಗಿ ನೆಲೆಗೊಳಿಸಿದವರು ಶಂಕರಾಚಾರ್ಯರು.

ರೋಗಿಯಾದವನು ಆರೋಗ್ಯವಂತನಾಗುವುದು ಯಾವಾಗ? ಅವನ ರೋಗವು ನಿವೃತ್ತಿಯಾದ ಕೂಡಲೇ ಅವನಲ್ಲಿ ಆರೋಗ್ಯ ಮರಳುತ್ತದೆ, ಅಲ್ಲವೆ? ಹೀಗೆಯೇ ನಾವೆಲ್ಲರೂ ದುಃಖ ಎಂಬ ರೋಗದಿಂದ ನರಳುತ್ತಿದ್ದೇವೆ. ಈ ರೋಗಕ್ಕೆ ಕಾರಣ ನಾವು ಜಗತ್ತನ್ನು ನೋಡುತ್ತಿರುವ ರೀತಿ. ಪ್ರಪಂಚವನ್ನು ನಾವು ದ್ವೈತವಾಗಿ ನೋಡುತ್ತಿದ್ದೇವೆ; ಎಂದರೆ ಭೇದರೂಪಗಳ ಕಟ್ಟಿನಂತೆ ನೋಡುತ್ತಿದ್ದೇವೆ. ಈ ಕಾರಣದಿಂದಲೇ ದುಃಖ ಎಂಬ ದೊಡ್ಡರೋಗ ನಮ್ಮನ್ನು ಕಾಡುತ್ತಿದೆ. ದ್ವೈತಪ್ರಪಂಚದಿಂದ ನಮಗೆ ಬಿಡುಗಡೆ ದೊರಕಿದರೆ ಆಗ ನಮ್ಮ ದಿಟವಾದ ಸ್ವರೂಪ ನಮಗೆ ದಕ್ಕುತ್ತದೆ. ಇಂಥ ಬಿಡುಗಡೆಗೆ ಅಡ್ಡಿಯಾಗಿರುವುದೇ ಅವಿದ್ಯೆ. ಅವಿದ್ಯೆಯು ನಾಶವಾದರೆ ದುಃಖಾತ್ಮಕವಾದ ಪ್ರಪಂಚವೂ ನಮ್ಮ ಪಾಲಿಗೆ ಉಪಶಮಗೊಳ್ಳುತ್ತದೆ. ಇದೇ ಆನಂದದ ಪ್ರಾಪ್ತಿಗೆ ದಾರಿ; ಇದೇ ನಮ್ಮತನದ ಅರಿವು; ಇದೇ ಉಪನಿಷತ್ತುಗಳ ಸಂದೇಶ – ಎಂದು ಪ್ರತಿಪಾದಿಸಿದ ಆಚಾರ್ಯರು, ಅವಿದ್ಯಾನಾಶದ ಉಪಾಯಗಳನ್ನೂ ನಮಗಾಗಿ ನಿರೂಪಿಸಿದ್ದಾರೆ.

ಅವಿದ್ಯೆಯನ್ನೂ ಅದರ ಕಾರಣಗಳನ್ನೂ ಆಚಾರ್ಯರು ಸೊಗಸಾಗಿ ವಿವರಿಸಿದ್ದಾರೆ. ‘ಅವಿದ್ಯೆಯು ಕತ್ತಲೆಯ ಸ್ವಭಾವದ್ದು. ಅವಿದ್ಯೆಯು ಕತ್ತಲೆಯಂತೆ ವಸ್ತುಗಳನ್ನು ಮರೆಮಾಚುತ್ತದೆ. ಹೀಗಾಗಿ ಅದು ಇರುವ ವಸ್ತುವನ್ನು ತಪ್ಪಾಗಿ ತೋರಿಸುತ್ತದೆ. ಅಥವಾ, ಅದು ವಸ್ತುವಿನ ಸ್ವರೂಪದ ಬಗ್ಗೆ ಸಂಶಯಗಳನ್ನು ಹುಟ್ಟಿಸುತ್ತದೆ; ಅಥವಾ ವಸ್ತುವಿನ ಅರಿವನ್ನೇ ಉಂಟುಮಾಡುವುದಿಲ್ಲ. ಆದರೆ ವಿವೇಕದ ಬೆಳಕು ಒಮ್ಮೆ ಬಿದ್ದಿತೆಂದರೆ ಆ ಕೂಡಲೇ ಅವಿದ್ಯೆ ಮರೆಯಾಗಿಬಿಡುತ್ತದೆ’ ಎಂದಿರುವ ಅವರು, ನಮ್ಮಲ್ಲಿ ಕತ್ತಲೆ ಎಂಬ ದೋಷವಿದ್ದರೆ ಆಗ ಅನ್ಯಥಾಗ್ರಹಣ, ಸಂಶಯ ಅಥವಾ ಅಗ್ರಹಣ ಎಂಬ ಮೂರು ವಿಧದ ಅವಿದ್ಯೆಗಳು ಉಂಟಾಗುತ್ತವೆ ಎಂದು ಎಚ್ಚರಿಸಿದ್ದಾರೆ; ಅವಿದ್ಯೆಯ ನಿವೃತ್ತಿಯೇ ಆತ್ಮಜ್ಞಾನದ ದಾರಿ, ತನ್ನತನದ ತಿಳಿವಳಿಕೆ ಎಂದು ಪ್ರತಿಪಾದಿಸಿದ್ದಾರೆ.

ಅವಿದ್ಯೆಯ ನಾಶ ಎಂದರೆ ಜ್ಞಾನದ ಪ್ರಾಪ್ತಿ; ಸರಿಯಾದ ತಿಳಿವಳಿಕೆ. ಇಂಥ ಅರಿವನ್ನು ಪಡೆಯಬೇಕು ಎಂದು ಬಯಸುವವನು ಶಮ, ದಮ ಮೊದಲಾದ ಸಾಧನಗಳನ್ನು ಮೈಗೂಡಿಸಿಕೊಂಡಿರಬೇಕು. ವೇದಗಳು ಹೇಳುವುದೂ ಇದನ್ನೇ. ವಿದ್ಯೆಯನ್ನು ಪಡೆದವನು ಶಾಂತನಾಗಿರುತ್ತಾನೆ, ಸಂಯಮಿಯಾಗಿರುತ್ತಾನೆ, ನೆಮ್ಮದಿಯಿಂದಿರುತ್ತಾನೆ, ಸಹನೆಯಿಂದಿರುತ್ತಾನೆ, ಏಕಾಗ್ರಚಿತ್ತದಿಂದ ಕೂಡಿದವನಾಗಿರುತ್ತಾನೆ – ಎಂದು ಆಚಾರ್ಯರು ಸಾಧನೆಗಳ ಆವಶ್ಯಕತೆಯನ್ನು ಸಾರಿ ಸಾರಿ ಹೇಳಿದ್ದಾರೆ.

ಕೇವಲ ಕಾಷಾಯ ವಸ್ತ್ರವನ್ನು ತೊಟ್ಟವರೆಲ್ಲರೂ ಇಂದು ತಮ್ಮನ್ನು ತಾವು ಜ್ಞಾನಿಗಳಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ನಿಜವಾದ ಜ್ಞಾನಿಯಾರು? ವೇಷಧಾರಿಗಳಾರು? ಆಚಾರ್ಯ ಶಂಕರರ ಕೃತಿಗಳನ್ನು ಅನುಸಂಧಾನಿಸಿದರೆ ದಿಟನಾದ ಜ್ಞಾನಿಯ ಲಕ್ಷಣ ಸ್ಪಷ್ಟವಾಗುತ್ತದೆ. ಅಧ್ಯಾತ್ಮಮಾರ್ಗದ ಶುದ್ಧೀಕರಣಪ್ರಕ್ರಿಯೆಯಲ್ಲಿ ಸನ್ಯಾಸಿಗೂ ಸಂಸಾರಿಗೂ ದಾರಿದೀಪವಾಗಬಲ್ಲದ್ದು ಶಾಂಕರದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT