ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಾಸೆಯ ಜಾತಿ ಯಾವುದು?

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ವೀರಗಾಸೆ  ಕಲಾಪ್ರಕಾರ ಕುರಿತಂತೆ ಸುದೇಶ ದೊಡ್ಡಪಾಳ್ಯ (ಜ. 21) ಮತ್ತು ಯೋಗೀಶ್ ಬೆಂಗಳೂರು(ಜ. 28) ಇವರ ಲೇಖನಗಳಿಗೆ ಒಂದು ಪ್ರತಿಕ್ರಿಯೆ.

ವೀರಗಾಸೆ ಬೀರೇದೇವರ ಭಂಟರಾದ ಈ(ವೀ)ರಗಾರರ ಕುಣಿತವಾಗಿದ್ದು, ಇದು ಹಾಲುಮತಸ್ಥರ ಪ್ರಾಚೀನ ಧಾರ್ಮಿಕ ಮತ್ತು ಅರ್ಪಣಾತ್ಮಕ ಕಲೆ. ಇದನ್ನು ಪ್ರದರ್ಶನಾತ್ಮಕಗೊಳಿಸಿ ಬೀದಿಗೆ ತಂದಿದ್ದು ಪ್ರಸಾರ ಧರ್ಮ(?)ಗಳ ಮತಾರಾಧಕರು. ಮಧ್ಯ ಕರ್ನಾಟಕದ ಹಾವೇರಿ ಜಿಲ್ಲೆಯ ಭರಡಿ, ಚನ್ನಗಿರಿ ತಾಲೂಕಿನ ಬೆಳಲಗೆರೆ, ಹರಿಹರ ತಾಲೂಕಿನ ಹದಡಿ, ಕುಣೆಬೆಳಕೆರೆ ಮೊದಲಾದ ಪ್ರದೇಶಗಳಲ್ಲಿ ನಡೆಯುವ ಬೀರೇದೇವರ ಅಗ್ನಿಸೇವೆಯ(ಕೊಂಡ ಹಾಯುವುದು) ಮೆರವಣಿಗೆಯಲ್ಲಿ ಬೀರಪ್ಪನ ಭಂಟರಾದ ಈರಗಾರರು ಅವನ ಮುಂದೆ ಡೊಳ್ಳಿನ ವೀರನಾದಕ್ಕೆ ಅನುಗುಣವಾಗಿ ಮೈದುಂಬಿ ಕುಣಿಯುತ್ತಾರೆ.

ಇಂತಹ ಅರ್ಪಣಾಭಾವದ ಧಾರ್ಮಿಕ (ಪ್ರದರ್ಶನಾತ್ಮಕ ಅಲ್ಲ) ಕಲೆಯನ್ನು ಅಲ್ಪ ಬದಲಾವಣೆಯೊಂದಿಗೆ ವೀರಭದ್ರನ ಮುಂದೆ ಪ್ರದರ್ಶಿಸುವುದು ವೀರಗಾಸೆಯ ರೂಪಾಂತರ.

ಹಾಲುಮತ ಧಾರ್ಮಿಕ ಲೋಕದ ಸಾಮ್ರೋಟನೆನ್ನಿಸಿದ ಕುಲದೈವ ಬೀರಪ್ಪ ಹಾಲುಮತದಷ್ಟೇ ಪ್ರಾಚೀನ ದೈವವಾಗಿದ್ದಾನೆ. ವಿದ್ವಾಂಸರು ಇವನ ಕಾಲವನ್ನು ಕ್ರಿ.ಶ. ಎರಡನೆಯ ಶತಮಾನವೆಂದು ಗುರುತಿಸಿದ್ದಾರೆ. ಕ್ರಿ.ಶ. 1149-50 ರ ಕೋಣೆಗನೂರು ಶಾಸನ ಮತ್ತು ಕ್ರಿ.ಶ. 1061 ರ ಶಾಸನವೊಂದರಲ್ಲಿ (ಇ.ಸಿ. ಸಂಪುಟ 7, ಎಸ್.ಕೆ. 69, 1061 ಎ.ಡಿ.) ಬೀರದೇವರ ಪ್ರಸ್ತಾಪವಿದೆ. ಶರಣರು ತಮ್ಮ ವಚನಗಳಲ್ಲಿ ಇವನನ್ನು ಕ್ಷುದ್ರದೇವತೆಯೆಂದು ಜರೆದಿದ್ದುದೂ ಕಂಡುಬರುತ್ತದೆ. ಆದರೆ ವೀರಭದ್ರನ ಸ್ವತಂತ್ರ ಆರಾಧನೆ ಆರಂಭವಾದದ್ದು ಕ್ರಿ.ಶ. ಹದಿನಾಲ್ಕನೆಯ ಶತಮಾನದ ನಂತರವೆನ್ನಬಹುದು. ಅರಸೀಕೆರೆಯ 149ನೆಯ ಕ್ರಿ.ಶ. 1278ರ ಶಾಸನ, ಕ್ರಿ.ಶ. 1250 ಮರಡೀಪುರ ಶಾಸನ ಮತ್ತು 13ನೇ ಶತಮಾನದ ಹೊಸಹೊಳಲಿನ ಶಾಸನಗಳಿಂದ ತಿಳಿದು ಬರುವಂತೆ ಅವನು ಶಿವಗಣಗಳಲ್ಲಿ ಒಬ್ಬನಾಗಿದ್ದ ಮತ್ತು ಈಗಿನಂತೆ ಸ್ವತಂತ್ರ ಆರಾಧನೆ ಕಂಡುಬರುವುದಿಲ್ಲ. ಕಲ್ಯಾಣದ ಚಾಲುಕ್ಯರು, ವಿಜಯನಗರ ಅದರಲ್ಲೂ ವಿಶೇಷವಾಗಿ ಸಂಗಮ ವಂಶದ ದೊರೆಗಳು, ಕೆಳದಿ ನಾಯಕರು, ಉಮ್ಮತ್ತೂರು (14ನೆಯ ಶತಮಾನ) ಕದಂಬ ಶಾಖೆಯವರು ಮೊದಲಾದ ಮನೆತನದವರು ಬೀರಪ್ಪನ ಪರಿಷ್ಕೃತ ರೂಪವಾದ ವೀರಭದ್ರ ದೇವರನ್ನು ಪೂಜಿಸಿದ ಸ್ಪಷ್ಟ ಉಲ್ಲೇಖಗಳು ಶಾಸನಗಳಲ್ಲಿ ಕಂಡು ಬರುತ್ತವೆ.

ಮೇಲೆ ಸೂಚಿಸಿದ ಎಲ್ಲ ರಾಜಮನೆತನಗಳೂ ಹಟ್ಟಿಕಾರ ಯಾದವರು ಅಥವಾ ಹಾಲುಮತ ಕುರುಬರ ಮೂಲ ನೆಲೆಯಿಂದ ಹುಟ್ಟಿ ಬಂದವುಗಳು. ಹಾಲುಮತದ ಬೀರದೇವನೇ ಲಿಂಗಾಯತದ ವೀರಭದ್ರನಾಗಿದ್ದಾನೆ ಎಂಬುದು ವಿದ್ವಾಂಸರೆಲ್ಲರೂ ಒಪ್ಪಿಕೊಂಡಿರುವ ಸತ್ಯ!

ಹಾಲುಮತ ಧಾರ್ಮಿಕ ಕಲಾ ಪ್ರಕಾರಗಳಾದ ದಳವಾಯಿ ಕುಣಿತ, ಈರಗಾರರ ಕುಣಿತ, ಭಿಂಗಯ್ಯನ ಕುಣಿತ, ಡೊಳ್ಳಿನ ಕುಣಿತ, ಡೊಳ್ಳಿನ ಹಾಡುಗಾರಿಕೆ, ದಟ್ಟಿ ಕುಣಿತ, ಕುಣಾ ಕುರುಬರ ಕುಣಿತ, ಗೊರವರ ಕುಣಿತ, ಗುರುವಯ್ಯನ ಹಾಡಿಕೆಗಳು, ಕದಳಿ ಕುಣಿತಗಳಂತೆ (ಕಾಸೆ ಕಟ್ಟುವುದು) ವೀರಗಾಸೆಯೂ ಹಾಲುಮತ ಮೂಲದ ಕಲೆಯಾಗಿದೆ. ಇದರ ಪಳೆಯುಳಿಕೆಯೆಂಬಂತೆ ಉತ್ತರ ಕರ್ನಾಟಕದ ಬೆಳಗಾವಿ ಪ್ರದೇಶದಲ್ಲಿ ಕುರುಬರು ಗುಗ್ಗುಳ ಹೊರಡಿಸಿ ಪುರವಂತಿಕೆಯನ್ನೂ ಮಾಡುವುದನ್ನು ನಾವು ಕಾಣಬಹುದು. ಒಂದು ಕಲಾಪ್ರಕಾರದ ಮೂಲ, ಉನ್ನತಿ, ಸಾಂಸ್ಕೃತಿಕ ಅನನ್ಯತೆ ಹಾಗೂ ಜನಪ್ರಿಯತೆಯನ್ನು ಅಧ್ಯಯನ ಮಾಡುವಾಗ ಅದರ ವೈಭವೀಕರಣ ಮತ್ತು ಜಾತಿ ಅಹಂಕಾರವನ್ನು ಹೊರಗಿಟ್ಟು ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕಾದ ಜರೂರತ್ತು ಸಾಂಸ್ಕೃತಿಕ ವಲಯಕ್ಕಿರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT