ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಯಲ್ಲಿ ಜೀವ ಹಿಡಿದು ಹಳ್ಳ ದಾಟಿದ್ದೆವು!

ಮಳೆ ಹಾಡು
Last Updated 1 ಜುಲೈ 2018, 11:22 IST
ಅಕ್ಷರ ಗಾತ್ರ

ಅವತ್ತು ನಮ್ಮ ಶಾಲೆಯಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ. ಏಳನೆಯ ತರಗತಿಯಲ್ಲಿ ಓದುತ್ತಿದ್ದ ನಾವುಗಳೇ ನೇತೃತ್ವ ವಹಿಸಿಕೊಂಡಿದ್ದೆವು. ಹೀಗಾಗಿ ನಮ್ಮ ಓಡಾಟ ಜೋರಾಗಿತ್ತು. ಇದ್ದಕ್ಕಿದ್ದಂತೆ ಮಳೆ ಬರುವಂತೆ ತೋರಿತು.

ಮುಖ್ಯಗುರುಗಳು ಅವಸರದಲ್ಲಿ ಬಂದು, ‘ಬೇಗ ಗಣಪತಿ ಮೆರವಣಿಗೆ ಹೊರಡಲಿ, ಮಳೆ ಬರುವಂತಿದೆ’ ಎಂದರು. ನಾವೆಲ್ಲ ಗಣಪತಿಗೆ ಪೂಜೆ, ಮಂಗಳಾರತಿ, ನೈವೇದ್ಯ ಮಾಡಿದೆವು. ಪಟಾಕಿ-ಬಣ್ಣದೋಕುಳಿಯೊಂದಿಗೆ ಮೆರವಣಿಗೆ ಹೊರಟಿತು. ಊರ ಹೊರಗಿನ ಬಾವಿಯ ಹತ್ತಿರ ಬರುತ್ತಿದ್ದಂತೆ ಮಳೆ ಬರತೊಡಗಿತು. ನಾವು ಸಂಪೂರ್ಣ ನೆನೆದುಹೋದೆವು. ಮಳೆಯನ್ನು ಲೆಕ್ಕಿಸದೇ ಗಣೇಶನ ವಿಸರ್ಜನೆ ಮಾಡಿ, ಮರದ ಆಶ್ರಯಕ್ಕೆ ಓಡಿದೆವು.

ಮಳೆ ಬರೋಬ್ಬರಿ ಎರಡು ತಾಸು ಸುರಿಯಿತು. ಆಗಲೇ ಕತ್ತಲಾಗುತ್ತಿತ್ತು. ಮಳೆ ಸ್ವಲ್ಪ ನಿಲ್ಲುತ್ತಿದ್ದಂತೆ ನನ್ನ ಸಂಬಂಧಿಗಳಾದ ಹನುಮ, ಚಂದು ನನ್ನನ್ನು ಹುಡುಕಿಕೊಂಡು ಬಂದು, ‘ಏಯ್, ತ್ವಾಟಕ್ ಹೋಗೋಣ ಕತ್ತಲಾಗಕತ್ತೈತಿ’ ಅಂದಾಗಲೇ ನನಗೆ ಮನೆಯ ನೆನಪಾದದ್ದು. ನಮ್ಮ ಮನೆ ತೋಟದಲ್ಲಿತ್ತು. ನಾವು ದಿನಾಲು ಮೂರು ಕಿಲೋ ಮೀಟರ್ ನಡೆದು ಶಾಲೆಗೆ ಬರುತ್ತಿದ್ದವು. ನಡುವೆ ಮೂರು ಊರುಗಳ ನೀರು ಸೇರುವ ಒಂದು ದೊಡ್ಡ ಹಳ್ಳವಿತ್ತು. ಅದನ್ನು ದಾಟುವುದೆಂದರೆ ಆಲಮಟ್ಟಿಯ ಕೃಷ್ಣಾ ನದಿಯನ್ನು ದಾಟಿದಂತೆಯೇ!

ನಾವೆಲ್ಲ ಶಾಲೆಗೆ ಓಡಿ ಪಾಟಿ ಚೀಲ ತಗೊಂಡು ತೋಟದ ದಾರಿ ಹಿಡಿದೆವು. ಹಳ್ಳ ಇನ್ನೂ ದೂರವಿತ್ತು. ಏನೋ ಒಂದು ರೀತಿಯ ಸದ್ದು ಕಿವಿಗೆ ಬೀಳತೊಡಗಿತು. ‘ಏಯ್ ಅದು ಹಳ್ಳ ಬಂದಿರಬೇಕು’ ಎಂದ. ಅವಸರವಾಗಿ ಹೆಜ್ಜೆ ಹಾಕಿದೆವು. ಆತನ ಮಾತು ನಿಜವಾಗಿತ್ತು! ಇಕ್ಕೆಲಗಳಲ್ಲಿ ಹಳ್ಳ ತುಂಬಿ ಹರಿಯುತ್ತಿತ್ತು. ಹರಿಯುವ ನೀರನ್ನು ನೋಡುತ್ತಿದ್ದಂತೆಯೇ ಕಣ್ಣು ಗರಗರ ತಿರುಗತೊಡಗಿದವು. ಅಷ್ಟರಲ್ಲಿಯೇ ಹಳ್ಳದ ಪಕ್ಕದ ಹೊಲದ ಭರಮಗೌಡರು ಬಂದರು. ಅವರು ದಾಟುವುದರಲ್ಲಿ ಎತ್ತಿದ ಕೈ. ಅವರು ನಮ್ಮನ್ನು ನೋಡಿ, ‘ನೀವು ಎಲ್ಲಿಗೆ ಹೋಗಬೇಕ್ರೊ’ ಎಂದರು. ‘ನಾವು ತ್ವಾಟಕ ಹೋಗಬೇಕ್ರಿ’ ಎಂದೆ. ಅವರು ‘ಇಂತಹ ತುಂಬಿದ ಹಳ್ಳದಾಗ ನೀವ್‌ ಹ್ಯಾಂಗ್ ಹೋಗ್ತಿರೋ, ಇಲ್ಲೇ ಯಾರದಾರ ಮನಿ-ಗಿನಿ ಇದ್ದರ ಹೋಗ್ರಿ’ ಎಂದರು. ಆದರೆ ನಾವು ಅದಕ್ಕೆ ಒಪ್ಪಲಿಲ್ಲ. ನಾಲ್ಕೂ ಜನಕ್ಕೂ, ‘ಕತ್ತರ್‌ಗೈ ಹಾಕ್ರಿ, ಕಾಲ ಎತ್ತಿಡಬ್ಯಾಡ್ರಿ, ಕಾಲು ನೀರಾಗ ಹಂಗ ಸವರ್ತಾನ ಇರಬೇಕು. ಯಾರೂ ಕೆಳಗ ನೋಡಬ್ಯಾಡರಿ’ ಅಂದ್ರು.

ಮಳೆಗೆ ನಾವು ಗಡಗಡ ನಡುಗುತ್ತಿದ್ದೆವು. ಆದರೂ ಇದಾವುದನ್ನೂ ಲೆಕ್ಕಿಸದೇ ಒಬ್ಬರಿಗೊಬ್ಬರು ಗಟ್ಟಿಯಾಗಿ ಕೈ ಹಿಡಿದು, ಭರಮಗೌಡನ ಕೈ ಗಟ್ಟಿಯಾಗಿ ಹಿಡಿದುಕೊಂಡು ನೀರಲ್ಲಿ ಸಾಗತೊಡಗಿದೆವು. ನೀರು ಓಡುತ್ತಲೇ ಇತ್ತು. ಕಾಲಡಿಯ ಮರಳು ಕತ್ತರಿಸಿ ಹೋದ ಹಾಗೆ, ಕಾಲು ಜಾರಿದ ಹಾಗೆ ಅನುಭವವಾಗುತ್ತಿತ್ತು. ನಾನು ಒಮ್ಮೆ ಕೆಳಗೆ ನೋಡಿದೆ, ಕಣ್ಣು ತಿರುಗತೊಡಗಿದೆವು. ತಕ್ಷಣ ಎಚ್ಚೆತ್ತುಕೊಂಡು ಕತ್ತು ಮೇಲೆತ್ತಿ ಸಾಗತೊಡಗಿದೆ. ಭರಮಗೌಡರು ನಮಗೆ ‘ಕೆಳಗ ನೋಡಬ್ಯಾಡರಿ, ಕಾಲ ಕಿತ್ತಿ ಇಡಬ್ಯಾಡರಿ’ ಎಂದು ಎಚ್ಚರಿಸುತ್ತ ದಡದೆಡೆಗೆ ನಮ್ಮನ್ನು ಕರೆದೊಯ್ಯುತ್ತಿದ್ದರು. ‘ಸುರಿಯುವ ಮಳೆಯಲ್ಲಿ ನೆನೆದೂ ಕೈಯಲ್ಲಿ ಜೀವ ಹಿಡಿದು ಹಳ್ಳ ದಾಟಿದೆವು.

ಆದರೆ, ಆ ಹಳ್ಳಕ್ಕೆ ಇಂದು ಎತ್ತರವಾದ ಸೇತುವೆ ಕಟ್ಟಿದ್ದಾರೆ. ನೀರು ಶಿರಬಾಗಿ ವಿಧೇಯತೆಯಿಂದ ಸೇತುವೆ ಕೆಳಗೆ ವಿನಯ ಪರ‍್ವಕವಾಗಿ ಹರಿದು ಹೋಗುತ್ತಿದೆ. ಈಗಲೂ ಊರಿಗೆ ಹೋಗುವ ದಾರಿಯಲ್ಲಿ ಆ ಹಳ್ಳ ಕಂಡಾಗ ಅಂದು ಮಳೆಯಲ್ಲಿ ನೆನೆದು, ಹಳ್ಳ ದಾಟಿದ ನೆನಪು ಕಾಡುತ್ತಲೇ ಇರುತ್ತದೆ.
– ಡಾ ಸದಾಶಿವ ದೊಡಮನಿ, ಹುಲಕೋಟಿ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT