ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.86 ಲಕ್ಷ ವಚನಾಕ್ಷರ

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಇಲ್ಲಿ ಬಸವಣ್ಣನ 1,200ವಚನಗಳು ಒಂದೇ ಕಡೆ ಮೈದಳೆದಿವೆ. ಇದರ ಜೊತೆ ವಿವಿಧ ಶರಣರ 400ವಚನಗಳೂ ಇವೆ. ಎಲ್ಲ ವಚನಗಳನ್ನು ಸೇರಿಸಿ ಕೆತ್ತಿದ ಅಕ್ಷರಗಳ ಸಂಖ್ಯೆ ಬರೋಬರಿ 1 ಲಕ್ಷ 86ಸಾವಿರ! ವಿಶ್ವದಲ್ಲಿಯೇ ಅತಿ ಹೆಚ್ಚು ಅಕ್ಷರ ಗಳುಳ್ಳ ಲಿಪಿ ಕಟ್ಟಡ ಎಂಬ ಖ್ಯಾತಿಗೆ ಒಳಗಾಗಿರುವ ‘ವಚನ ಮಂಟಪ’ ಇರುವುದು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತಮಠ.

ಈ ಮಠವು ಚನ್ನಬಸವ ಸ್ವಾಮೀಜಿಗಳ ಕಾರ್ಯಕ್ಷೇತ್ರ.  ಇವರು ಪಾದಯಾತ್ರೆ ಮೂಲಕ ಉತ್ತರ ಭಾರತದ ಪ್ರವಾಸಕ್ಕೆ ಹೋದಾಗ ಬಿರ್ಲಾ ಭವನದಲ್ಲಿ ಭಗವದ್ಗೀತೆಯ ಪ್ರತಿ ಶ್ಲೋಕ ದಲ್ಲಿ 32ಅಕ್ಷರಗಳನ್ನು ಕೆತ್ತಿದ 700ಶ್ಲೋಕಗಳನ್ನು (22,400 ಅಕ್ಷರಗಳು) ಹೊಂದಿದ ಲಿಪಿಯ ‘ಗೀತಾಭವನ’ ಕಟ್ಟಡವನ್ನು ನೋಡಿದರು.  ಕನ್ನಡದ ಸಿರಿವಂತ ಸಾಹಿತ್ಯವಾದ ವಚನ ಸಾಹಿತ್ಯವನ್ನು ಹೀಗೆಯೇ ಶಿಲೆಯಲ್ಲಿ ಕೆತ್ತಿಸಿ ನಿಲ್ಲಿಸಲು ಅಂದೇ ತೀರ್ಮಾನಿಸಿದರು. ಅದರ ಫಲವೇ ಈ ‘ವಚನ ಶಿಲಾ ಮಂಟಪ’.

ನಾಲ್ಕು ದಶಕಗಳ ಹಿಂದೆ ಇಂಥ ಮಂಟಪ ಆರಂಭಿಸಿದಾಗ, ಅದರ ನಿರ್ಮಾಣ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಹಣ ಸಂಗ್ರಹಿಸುವುದು ಕಷ್ಟಕರವಾಗಿತ್ತು. ಹಣ ಸಂಗ್ರಹಿಸಲು ಸ್ವಾಮೀಜಿ ತಿರುಗದ ಊರುಗಳಿಲ್ಲ, ತಟ್ಟದ ಬಾಗಿಲುಗಳಿಲ್ಲ. ಸ್ವಾಮೀಜಿ ಮೇಲೆ ಭಕ್ತಿ ಇದ್ದವರು, ವಚನ ಸಾಹಿತ್ಯವನ್ನು ಪ್ರೀತಿಸುವವರು ಹಣ ಕೊಟ್ಟರು. ಆಗದವರು ಏನೇನೋ ಮಾತನಾಡಿದರು. ಅದರತ್ತ ಸ್ವಾಮೀಜಿ ತಲೆ ಕೆಡಿಸಿಕೊಳ್ಳಲಿಲ್ಲ. ಹಣಕಾಸಿನ ಮುಗ್ಗಟ್ಟು ಉಂಟಾದಾಗ ಕೆತ್ತಿ ನಿಲ್ಲಿಸಿದ  ಫಲಕಗಳ ಶಿಲಾಪದರುಗಳು ಬಿಸಿಲಿನ ಹೊಡೆತಕ್ಕೆ ಉದುರುತ್ತಿರು ವುದನ್ನು ಕಂಡು ಸೆಗಣಿ ಮೆತ್ತಿ ಬಚಾವು ಮಾಡಿಕೊಂಡರು.

ಹೀಗಿದೆ ಮಂಟಪ...
96 ಅಂಗುಲ, ಸುತ್ತಳತೆಯ 35ಅಡಿ ಇರುವ ಈ ಮಂಟಪದ ಮಧ್ಯೆ ನಾಲ್ಕು ಕಲ್ಲಿನ ಕಂಬಗಳಿವೆ. 30ಅಡಿ ಎತ್ತರದ ಎಂಟು ಕಂಬಗಳ ಮೇಲೆ ರಚಿಸಲಾಗಿರುವ ಈ ಶಿಲಾಮಂಟಪದ ಹೊರಮೈ ಶಿವಲಿಂಗದ ಆಕಾರದಲ್ಲಿದೆ.

ಮಂಟಪದ ಒಳಗೆ ಬಸವಾದಿ ಶರಣರ ವಚನಗಳ ಫಲಕಗಳು ನಮ್ಮನ್ನು ಎದುರುಗೊಳ್ಳುತ್ತವೆ. ಇದು ಗಿನ್ನೆಸ್‌ ದಾಖಲೆಗೆ ಸೇರಬಹುದಾದ ಕಟ್ಟಡ ಎಂದು ಬರೋಡಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಪತಿಗಳು ಈ ಮಂಟಪವನ್ನು ಸದ್ಯದಲ್ಲಿಯೇ ಲೋಕಾರ್ಪಣೆ ಗೊಳಿಸಲಿದ್ದಾರೆ. ಸುಮಾರು 5ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT