ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ರಿ ತಂದ ಫಜೀತಿ

Last Updated 6 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮಳೆಗಾಲ ಅಂದ್ರೆ ನೆನಪಾಗೋದು ಕೊಡಗಿನ ಮಳೆ: ಆಗಿನ್ನು ನಾನು ಐದನೇ ತರಗತಿಯಲ್ಲಿದ್ದೆ. ಕೊಡಗಿನಲ್ಲಿ ನಮಗೆ ಶಾಲೆಗೆ ಬೇಸಿಗೆಯಲ್ಲಿ ರಜೆ ಇರಲಿಲ್ಲ. ಮಳೆಗಾಲಕ್ಕೇ ರಜಾ. ಮಳೆ ಅಂದ್ರೆ ಅಬ್ಬಾ! ಊರೆಲ್ಲಾ ಮುಳುಗಿ ದ್ವೀಪ ಆಗ್ತಿತ್ತು. ಎಲ್ಲೆಲ್ಲೂ ನೀರು... ಮಳೆ ಅಂದ್ರೆ ಛತ್ರಿ ಇರ್ಲೇಬೇಕಲ್ಲ, ನಾನಂತೂ ಮಳೆಗಾಲದಲ್ಲಿ ಅದೆಷ್ಟು ಛತ್ರಿಗಳನ್ನು ಕಳೆದುಕೊಂಡಿದ್ದೀನೋ?. ಸ್ಕೂಲಿಗೆ ಹೋಗ್ತಾ ಮಳೆ ಇದ್ರೆ ಛತ್ರಿ ಕೈಯಲ್ಲಿ ಇರೋದು. ಬರ್ತಾ ಮಳೆ ನಿಂತಿದ್ರೆ ಛತ್ರಿ ಇಟ್ಟಲ್ಲೆ ಮರೆತು ಬರಿಕೈಯಲ್ಲೇ ಬಂದ್ಬಿಡುತ್ತಿದ್ದೆ. ಮನೆಯಲ್ಲಿ ಬೈಸಿಕೊಳ್ಳುವುದರ ಜೊತೆ ಒದೆಗಳೂ ಬೀಳ್ತಿತ್ತು. ಆಗೆಲ್ಲಾ ಛತ್ರಿಗಳೆಂದರೆ ಛತ್ರಿಗಿಂತ ಅದರ ಹಿಡಿಗಳೇ ತುಂಬಾ ಆಕರ್ಷಕವಾಗಿರುತ್ತಿತ್ತು. ಅದಕ್ಕೆ ತಕ್ಕ ರೇಟುಗಳು.

ಹೀಗೆ ಒಂದ್ಸಲ ಛತ್ರಿ ಕಳೆದ್ಹೋಯ್ತು. ಮನೆಗೆ ಹೋದ್ರೆ ಬೈಗಳ, ಒದೆ ಅಂತ ಹೆದರಿ ನಮ್ಮ ಊರಿನ ಆಸ್ಪತ್ರೆಯ ಡಾಕ್ಟರ್ ಮನೆಗೆ ಹೋಗಿ ಕೂತ್ಬಿಟ್ಟೆ. ಅವರು ನನ್ನ ತಂದೆ ಸ್ನೇಹಿತರು ಕೂಡಾ. ಅವರ ಮನೆ ಊರಿಂದ ಸ್ವಲ್ಪ ಹೊರಗಡೆಗೆ ಅನ್ನುವ ಹಾಗಿತ್ತು. ಡಾಕ್ಟರ್ ಹೆಂಡತಿ ತುಂಬಾ ಒಳ್ಳೆಯವರು. ಅವರಿಗೂ ಒಬ್ಬರೆ ಇದ್ದು ಬೇಜಾರು. ನನ್ನ ಜೊತೆ ಚೌಕಾಬಾರ ಆಡ್ತಾ ಕೂತರು.

ಮನೆಯಲ್ಲಿ ನನ್ನನ್ನು ಹುಡುಕಿ ಹುಡುಕಿ ಎಲ್ಲರೂ ಕಂಗಾಲು. ಎಲ್ಲೋ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋದ್ಲೋ ಅಂತ ಊಟ ಸಹ ಮಾಡ್ದೆ ಹುಡುಕ್ತಾ ಇದ್ರಂತೆ. ಕಡೆಗೆ ನನ್ನ ತಂದೆ ಪೋಲಿಸ್ ಸ್ಟೇಷನ್‌ಗೂ ಹೋಗಿ ತಿಳಿಸಿದ್ದಾರೆ (ಚಿಕ್ಕ ಊರು ತಂದೆಗೆ ಎಲ್ಲರೂ ಸ್ನೇಹಿತರು) ಆ ಪೋಲಿಸ್ ಸ್ಟೇಷನ್ ಸಹ ಊರ ಹೊರಗಡೆ ಆಸ್ಪತ್ರೆಯ ಎದುರುಗಡೇನೆ ಇದ್ದದ್ದು.

ಆಸ್ಪತ್ರೆಗೆ ಬಂದಿದ್ದ ಒಬ್ಬ ಕಾನ್‌ಸ್ಟೇಬಲ್ ಡಾಕ್ಟರ್‌ನ್ನು ಹುಡುಕಿ ಅವರ ಮನೆಗೂ ಬಂದಿದ್ದರು. ಅವರು ಅಲ್ಲಿ ನನ್ನನ್ನು ನೋಡಿ ’ ಅಯ್ಯೋ ನೀ ಇಲ್ಲಿದ್ದೀಯೇನಮ್ಮಾ. ಅಪ್ಪಾ ಅವರು ಬಂದು ಕಂಪ್ಲೇಟ್ ಕೊಟ್ಟು ಹೋದ್ರಲ್ಲೇ ಮರಿ’ ಎಂದು ಪೇಚಾಡಿಕೊಂಡರು. ನನ್ನನ್ನು ನಮ್ಮ ಮನೆಗೆ ಕರ್‍ಕೊಂಡು ಹೋಗಲು ತಯಾರಾದರು. ಡಾಕ್ಟರ್‌ಗೆ ಅವರ ಹೆಂಡತಿಗೆ ವಿಷಯದ ಗಾಂಭೀರ್ಯ ಗೊತ್ತಾಗಿದ್ದು ಆಗಲೇ. ಛತ್ರಿ ಇಲ್ಲದೆ ಮನೆಗೆ ಹೋಗಲ್ಲ ಬೈತಾರೆ ಎಂದು ನನ್ನ ಭಾರೀ ಹಟ. ಕಡೆಗೆ ಎಲ್ಲಾ ಸೇರಿ ನನ್ನನ್ನ ಮನೆಗಂತೂ ಮುಟ್ಟಿಸಿದರು.

ಈಗಲೂ ಎಲ್ಲಾ ಮಳೆಗಾಲ ಆ ನೆನಪನ್ನೆ ತರುತ್ತದೆ. ಮಳೆ–ಛತ್ರಿ ಎರಡೂ ಆ ನನ್ನ ಬಾಲ್ಯದ ಮರೆಯದ ಘಟನೆಗೆ ಸಾಕ್ಷಿಗಳಾಗಿವೆ. ಮಳೆಗಾಲವೇ ಹಾಗೆ ಹಳೆಯ ನೆನಪುಗಳ ಭೋರ್ಗರೆವ ಮಹಾಪೂರ.ತುಟಿಗಳಲ್ಲಿ ನಗೆಯ ಹೂವನ್ನರಳಿಸುತ್ತದೆ.

[object Object]


-ಚಂದ್ರಿಕಾ . ವಿದ್ಯಾನಗರ , ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT