ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥದಲ್ಲಿ ಕೃಷ್ಣಸುಂದರಿ

Last Updated 3 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ವರ್ಣಭೇದ ನೀತಿ ಬಾಲಿವುಡ್‌ನಲ್ಲಿ ಜೋರಾಗಿಯೇ ಇದೆ ಎಂಬ ಬಿಸಿ ತಟ್ಟಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ. ಇದು ಕಪ್ಪು-ಬಿಳುಪು ಎಂಬ ಸಹಜ ವರ್ಣಭೇದವಲ್ಲ; ಶ್ವೇತಕನ್ಯೆಯರಿಂದ ಆದ ಮೂದಲಿಕೆ.

`ಗಂಡಸಿನ ಹಾಗಿದೆ ನಿನ್ನ ಕಂಠ~ ಎಂದು ಒಡಹುಟ್ಟಿದ ತಮ್ಮನೇ ಹೇಳಿದ ಮೇಲೆ ಪ್ರಿಯಾಂಕಾ ತುಸು ಕುಗ್ಗಿಹೋಗಿದ್ದರು. ಆಮೇಲೆ ಅವರು ನಟಿಯಾಗಿ ಧಿಗ್ಗನೆದ್ದದ್ದು ಬರೀ ಒಂದು ಸಲ ಅಲ್ಲ. `ಫ್ಯಾಷನ್~, `ದೋಸ್ತಾನಾ~, `7 ಖೂನ್ ಮಾಫ್~ ಚಿತ್ರಗಳಲ್ಲಿ ಅವರ ಅಭಿನಯ ಕಂಡ ಶತ್ರುಗಳು ಕೂಡ ಬಾಯಿಮೇಲೆ ಬೆರಳಿಟ್ಟುಕೊಂಡರಂತೆ. ಈಗ `ಅಗ್ನಿಪಥ್~ ಎಂಬ ಚಿತ್ರದಲ್ಲಿ ಇನ್ನೊಂದು ನಟನಾವಕಾಶವನ್ನು ಪ್ರಿಯಾಂಕಾ ಅನುಭವಿಸುತ್ತಿದ್ದಾರೆ.

ನಟಿಯರಿಗೆ ಬಾಲಿವುಡ್‌ನಲ್ಲಿ ಅಂಥಾ ಬೆಲೆಯಿಲ್ಲ ಎಂಬ ಅಭಿಪ್ರಾಯ ಲಾಗಾಯ್ತಿನಿಂದಲೂ ಇದೆ. ಗ್ಲಾಮರ್‌ಗಷ್ಟೇ ಅವರ ಕೆಲಸ ಮೀಸಲು ಎಂಬುದನ್ನು ಸಾರುವಂಥ ಸಾಲುಸಾಲು ಉದಾಹರಣೆಗಳು ಸಿಗುತ್ತವೆ.
 
ಇದರ ಅರಿವು ಪ್ರಿಯಾಂಕಾ ಅವರಿಗೆ ಚೆನ್ನಾಗಿ ಇದೆ. “ಇದು ಪುರುಷಪ್ರಧಾನ ಚಿತ್ರೋದ್ಯಮ. ಅದನ್ನು ನಾವೆಲ್ಲಾ ಒಪ್ಪಿಕೊಂಡಾಗಿದೆ. ಜನ ಕೂಡ ಈ ಒಪ್ಪಿತ ಸತ್ಯವನ್ನು ಜೀರ್ಣಿಸಿಕೊಂಡೇ ಸಿನಿಮಾ ನೋಡಲು ಬರುತ್ತಾರೆ.

ಚಿತ್ರೋದ್ಯಮ ಸ್ಟಾರ್ ಕೇಂದ್ರಿತ. ತನ್ನಿಷ್ಟದ ನಾಯಕನಿಗಾಗಿ ಹಂಬಲಿಸುವ ಪ್ರೇಕ್ಷಕರು, ನಾಯಕಿಯ ಕಾರಣದಿಂದಲೇ ಚಿತ್ರಮಂದಿರಕ್ಕೆ ಬರುವುದು ಕಡಿಮೆ. ದಬಂಗ್ ಚಿತ್ರ ಓಡಿದರೆ ಅದಕ್ಕೆ ಸಲ್ಮಾನ್ ಕಾರಣ. ಅಲ್ಲಿ ನಾಯಕಿಗೆ ಅಷ್ಟೇನೂ ಕೆಲಸವಿಲ್ಲ. ಒಂದು ವೇಳೆ ನನ್ನನ್ನು ಲೇಡಿ ಪೊಲೀಸ್ ಮಾಡಿ, ದಬಂಗ್ ಕಥೆಯನ್ನೇ ಸಿನಿಮಾ ಮಾಡಿದರೆ ಅದನ್ನು ನೋಡಲು ಯಾರು ತಾನೇ ಬರುತ್ತಾರೆ? ಹಿಂದಿ ಚಿತ್ರರಂಗ ಸ್ಟಾರ್ ಲೆಕ್ಕಾಚಾರಗಳ ಮೇಲೆಯೇ ನೆಲೆಯೂರಿಕೊಂಡು ಬಂದಿದೆ.

ನಡುನಡುವೆ ಉತ್ತಮ ನಟಿಯರು, ಸುಂದರಿಯರು ಬಂದು ಹೋಗಿದ್ದಾರೆ. ನಾನೂ ಇರುವ ಅವಕಾಶವನ್ನೇ ಸದುಪಯೋಗಪಡಿಸಿಕೊಂಡು ನಟಿಸುವುದಕ್ಕೆ ಒಗ್ಗಿಕೊಂಡಿದ್ದೇನೆ. ಒಪ್ಪಿತ ಸತ್ಯದ ಪರಿಧಿಯಲ್ಲೇ ಎಲ್ಲರೂ ಕೆಲಸ ಮಾಡುತ್ತಿರುವುದರಿಂದ ಈ ಬಗ್ಗೆ ನನ್ನ ತಕರಾರೇನೂ ಇಲ್ಲ”. ಇದು ಪ್ರಿಯಾಂಕ ಮಾತಿನ ಲಹರಿ.

`ನನಗೆ ಬಂದ ಬಹುತೇಕ ಸ್ಕ್ರಿಪ್ಟ್‌ಗಳಲ್ಲಿ ನನ್ನ ಪಾತ್ರಕ್ಕೆ ಜೀವತುಂಬುವ ಅವಕಾಶಗಳಿದ್ದವು. ನಾನು ಮೊದಲಿನಿಂದಲೂ ನಿರೀಕ್ಷಿಸುತ್ತಾ ಬಂದದ್ದು ಅದನ್ನೇ. ನಮ್ಮ ಆಯ್ಕೆಯನ್ನು ಅರಿತುಕೊಂಡೇ ಉದ್ಯಮದವರು ಪ್ರತಿಕ್ರಿಯಿಸುತ್ತಾರೆ.

ಅಭಿನಯ ನನ್ನ ಆದ್ಯತೆಯಾದ ಕಾರಣ ಯಾರಿಗೆ ಗ್ಲಾಮರ್‌ಗಿಂತ ಹೆಚ್ಚಾಗಿ ಒಳ್ಳೆಯ ನಟಿ ಬೇಕೋ ಅವರು ನನ್ನಲ್ಲಿಗೆ ಬರುತ್ತಾರೆ. ಯಾರಿಗೆ ಅಭಿನಯ ಬರದಿದ್ದರೂ ಕೆಂಪಗಿದ್ದರೆ ಸಾಕು ಎಂಬ ಧೋರಣೆ ಇದೆಯೋ ಅವರು ಶ್ವೇತಕನ್ಯೆಯರತ್ತ ಧಾವಿಸುತ್ತಾರೆ. ಈ ಬಗ್ಗೆ ಕೂಡ ನನಗೆ ತಕರಾರೇನೂ ಇಲ್ಲ. ನನ್ನ ಅಪ್ಪ-ಅಮ್ಮನಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸಿದ್ಧಿಸಿದೆ.

ಹಾಗಾಗಿಯೇ ಚಿತ್ರೋದ್ಯಮದಲ್ಲಿ ಈಗಲೂ ನಾನು ಬಿಡುವಿಲ್ಲದೆ ತೊಡಗಿಕೊಳ್ಳಲು ಸಾಧ್ಯವಾಗಿದೆ~ ಎನ್ನುವ ಪ್ರಿಯಾಂಕಾ `ಬರ್ಫಿ~ ಎಂಬ ಚಿತ್ರದಲ್ಲಿ ಮಾನಸಿಕ ಸಮಸ್ಯೆ ಇರುವ ನಟಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ರಣಬೀರ್ ಸಿಂಗ್ ಕಿವುಡ-ಮೂಗನ ಪಾತ್ರದಲ್ಲಿ ನಟಿಸಿರುವ ಆ ಚಿತ್ರದಲ್ಲಿ ಪ್ರಿಯಾಂಕಾ ಕೂಡ ಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿ, ಮಾನಸಿಕ ಸಮಸ್ಯೆ ಇರುವವರು ಹೇಗೆ ವರ್ತಿಸುತ್ತಾರೆಂಬುದನ್ನು ಮನದಟ್ಟು ಮಾಡಿಕೊಂಡೇ ಬಣ್ಣಹಚ್ಚಿದ್ದು. `ಅವರ ಜಗತ್ತೇ ಬೇರೆ. ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಇರುವ ಚಿತ್ರಗಳು ಗಂಭೀರವಾಗಿರುತ್ತವೆ.

ಆದರೆ, ಬರ್ಫಿ ಚಿತ್ರದಲ್ಲಿ ನಾನು ಪ್ರೇಕ್ಷಕರಿಗೆ ಕಚಗುಳಿ ಇಡುತ್ತೇನೆ. ವೈಯಕ್ತಿಕವಾಗಿ ನನಗೆ ಸವಾಲೊಡ್ಡುವ ಇಂಥ ಪಾತ್ರಗಳು ಸಿಕ್ಕರೆ ಅದರ ಪರಕಾಯ ಪ್ರವೇಶ ಮಾಡಲು ನಾನು ಇನ್ನಿಲ್ಲದಂತೆ ಯತ್ನಿಸುತ್ತೇನೆ~ ಎನ್ನುವಾಗ ಪ್ರಿಯಾಂಕಾ ಗ್ಲಾಮರ್‌ಗಿಂತ ಹೆಚ್ಚು ನಟನೆಯನ್ನು ಬಯಸುವವರು ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟರ ನಡುವೆ ಪ್ರಿಯಾಂಕಾ ಇಂಗ್ಲಿಷ್ ಸಂಗೀತದ ಆಲ್ಬಂನಲ್ಲಿ ಕಾಣಿಸಿಕೊಳ್ಳುವ ಮಾತು ಕೇಳಿಬರುತ್ತಿದೆ. ಅದಕ್ಕೆಂದೇ ಲಾಸ್ ಏಂಜಲೀಸ್ ವಿಮಾನ ಹತ್ತುವ ಸುದ್ದಿ ಇದೆ. ಆ ಆಲ್ಬಂಗೆ ಸಾಹಿತ್ಯ ಬರೆಯುವ ಸಾಹಸಕ್ಕೂ ಪ್ರಿಯಾಂಕ ಕೈಹಾಕಲಿದ್ದಾರಂತೆ. ಇವೆಲ್ಲಾ ನಿಜವೇ ಎಂದು ಕೇಳಿದರೆ, `ಆಲ್ಬಂ ಬಂದಮೇಲೆ ನೀವೇ ನೋಡಿ~ ಎಂದು ನಗೆ ತುಳುಕಿಸಿ ಕುತೂಹಲ ಉಳಿಸುತ್ತಾರೆ ಕೃಷ್ಣವರ್ಣದ ನಟೀಮಣಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT