ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿ ಬಂದರೆ ಇವರಿಗೆ ಬಲು ಖುಷಿ

Last Updated 4 ಮೇ 2015, 19:30 IST
ಅಕ್ಷರ ಗಾತ್ರ

‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ...’ ಎಂಬ ನಾಣ್ಣುಡಿ ಇವರ ಬದುಕಿಗೆ ಅಕ್ಷರಶಃ ಅನ್ವಯ.

ಮನಸ್ಸು ಮಾಡಿದರೆ  ಹೊಟ್ಟೆ ಗಾಗಿ, ಗೇಣು ಬಟ್ಟೆಗಾಗಿ ಯಾವುದಾದರೊಂದು ಮಾರ್ಗ ಕಂಡೇ ಕಾಣುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಏಕೆಂದರೆ ರೈತರನ್ನು ಕಾಡುವ ಇಲಿ ಇವರಿಗೆ ಬದುಕಿನ ದಾರಿ ತೋರಿದೆ. ಇಲಿ ಹೆಚ್ಚಿದಷ್ಟು ಇವರ ಕುಟುಂಬ ಸುಖವಾಗಿ ಜೀವಿಸಬಲ್ಲದು. ಇಲಿಯೇ ಇಲ್ಲದಿದ್ದರೆ ಇವರಿಗೆ ಹೊಟ್ಟೆ ಹೊರೆಯುವುದು ಬಲು ಕಷ್ಟ.

ಕಾರಣ ಇಷ್ಟೇ. ಇಲಿ ಹಿಡಿಯುವುದು ಇವರ ಕಸುಬು. ಹೊಲ ಗದ್ದೆಗಳಿಗೆ ದಾಳಿ ಇಟ್ಟು ಬೆಳೆ ನಾಶ ಮಾಡುವ ಇಲಿಯನ್ನು ಹಿಡಿದು ಕೂಲಿ ಸಂಪಾದಿಸುತ್ತಾರೆ. ಇದನ್ನು ಬಿಟ್ಟು ಬೇರೆಯದ್ದನ್ನು ಇವರು ಅರಿಯರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಸಿಂಗನಾಳ, ಡಂಕನಕಲ್, ಸಿದ್ದಾಪೂರ,  ಗಂಗಾವತಿ. ಕೆಸರಹಟ್ಟಿ ನೀರಾವರಿ ಪ್ರದೇಶಗಳಲ್ಲಿ ಕಂಡು ಬರುವ ಈ ಕುಟುಂಬದ ಚಿತ್ರಣವಿದು.

ತಮಿಳುನಾಡಿನಿಂದ ವಲಸೆ ಬರುವ ಈ ಕುಟುಂಬಗಳು ಭತ್ತದ ಗದ್ದೆಗಳಲ್ಲಿ ಪ್ರತಿದಿನ ಇಲಿ ಹಿಡಿಯುವ ಕಾಯಕದಲ್ಲಿ ಇವರು ತೊಡಗಿಸಿಕೊಳ್ಳುತ್ತವೆ. ಒಂದು ಇಲಿ ಹಿಡಿದು ಕೊಟ್ಟರೆ ಇಪ್ಪತ್ತೈದು ರೂಪಾಯಿಗಳನ್ನು ರೈತರು ಕೊಡುತ್ತಾರೆ.

ನಾಟಿ ಮಾಡುವ ಭತ್ತದ ಸಸಿಗಳನ್ನು ಇಲಿಗಳ ಕಾಟದಿಂದ ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲು. ಇಲಿಗಳ ನಾಶಕ್ಕೆ ವಿವಿಧ ಬಗೆಯ ರಾಸಾಯನಿಕ  ಕೀಟನಾಶಕ ಬಳಕೆ ಮಾಡುವ ಸ್ಥಿತಿ. ಇವುಗಳಿಂದ ಇಲಿಗಳು ನಾಶವಾದರೂ ಅವುಗಳ ಜೊತೆ ಬೆಳೆಗಳೂ ವಿಷಮಯವಾಗುತ್ತವೆ. ಆದರೆ ಈ ಭಾಗದ ರೈತರು ರಾಸಾಯನಿಕದ ಮೊರೆ ಹೋಗಿಲ್ಲ. ಇಲಿಗಳ ನಾಶ ಮಾಡುವ ಬಗ್ಗೆ ಅಹೋರಾತ್ರಿ ಚಿಂತೆ ಮಾಡುವ ಅಗತ್ಯವೂ ಇವರಿಗಿಲ್ಲ. ಅದಕ್ಕೆ ಕಾರಣ ಈ ಕುಟುಂಬ.

ಪ್ರತಿ ದಿನ ಬೆಳಿಗ್ಗೆ ಮನೆಯಿಂದ ಕೈಯಲ್ಲಿ ಚಿಕ್ಕ ಪಾತ್ರೆ, ಕಬ್ಬಿಣದ ರಾಡ್‌, ಕಟ್ಟಿಗೆ ಕೋಲು,  ಒಂದು ಕೈಚೀಲ ಹಿಡಿದು ಭತ್ತದ ಗದ್ದೆಯೊಳಕ್ಕೆ ಇಳಿದರೆ, ಇವರಿಗೆ ಇಲ್ಲೇನು ಕೆಲಸವಪ್ಪಾ ಎಂದು ಅಂದು ಕೊಳ್ಳಬೇಕು. ಆದರೆ ಅಲ್ಲಿ ಅವರು  ಇಲಿ ಹಿಡಿಯುವಲ್ಲಿ ತೋರುವ ಕೈಚಳಕ ನೋಡುತ್ತಾ ಹೋದರೆ ನಿಬ್ಬೆರಗಾಗುವುದಂತೂ ಶತಃಸಿದ್ಧ.

ಇಲಿಗಳ ಪತ್ತೆ ಹೀಗೆ
ಬೇಸಿಗೆ ಮತ್ತು ಸುಗ್ಗಿ ಸಮಯದಲ್ಲಿ ಹೆಚ್ಚಾಗಿ ಇವರಿಗೆ ಬೇಡಿಕೆ ಇರುತ್ತದೆ. ಏಕೆಂದರೆ ಈ ವೇಳೆ ಇಲಿಯ ಕಾಟ ಹೆಚ್ಚು. 12 ಜನರ ಒಂದು ತಂಡ ಒಬ್ಬ ರೈತನ ಜಮೀನಿಗೆ ಹೋಗುತ್ತದೆ. ಅದರಲ್ಲಿ  ಇಬ್ಬರು ಜೊತೆಯಾಗಿ ಒಂದು ಬದುವಿನ ಕಡೆ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಬದುಗಳಲ್ಲಿ ಇಲಿಗಳು ಹೆಚ್ಚಾಗಿ ಅಡಗಿ ಕುಳಿತಿರುತ್ತವೆ. ಈ ಗುಂಪಿನವರು ಮೊದಲು ಬದುಗಳಲ್ಲಿ ಎಲ್ಲಿ ಇಲಿಗಳು ಅಡಗಿವೆ ಎಂಬುದನ್ನು ಪತ್ತೆ ಮಾಡುತ್ತಾರೆ. ಇಲಿಗಳ ಗೂಡಿನ ರಂಧ್ರ ಗುರುತಿಸುತ್ತಾರೆ. ಒಂದು ಭಾಗದ ರಂಧ್ರದಲ್ಲಿ ಪಾತ್ರೆ ಮೂಲಕ ನೀರು ಹಾಕುತ್ತಾರೆ. ಆಗ ಇಲಿಗಳು ಸಮೀಪ ಇರುವ ಇನ್ನೊಂದು ರಂಧ್ರದ ಮೂಲಕ ಹೊರ ಬರುತ್ತವೆ. ಆ ರಂಧ್ರದ ಹೊರಭಾರದಲ್ಲಿ ಮೊದಲೇ ಅಡ್ಡಲಾಗಿ ಒಂದು ಹಗ್ಗದ ಬೇಲಿ ಹಾಕಿ ಇಡಲಾಗುತ್ತದೆ. ಇಲಿಗಳು ಜೋರಾಗಿ ಓಡಿ ಬಂದು ಈ ಬೇಲಿಯಲ್ಲಿ ಬಿದ್ದು ಒದ್ದಾಡುತ್ತವೆ. ನಂತರ ಜಮೀನಿನ ರೈತರ ಸಮ್ಮುಖದಲ್ಲಿ ಅವುಗಳ ಲೆಕ್ಕ ಮಾಡಿಕೊಂಡು ಹಿಡಿದ ಇಲಿಗಳನ್ನು ಒಂದು ಚೀಲದಲ್ಲಿ ಹಾಕುತ್ತಾರೆ. ಇಬ್ಬರು ಜೊತೆಯಾಗಿ ಕೆಲಸ ಮಾಡಿದರೆ  ಒಂದು ದಿನಕ್ಕೆ 20-25 ಇಲಿಗಳನ್ನು ಹಿಡಿಯುತ್ತಾರೆ.

ಹೀಗೆ ಪ್ರತಿದಿನ ಪ್ರತಿಯೊಬ್ಬರು 250-300 ರೂಪಾಯಿವರೆಗೂ ದುಡಿಯುತ್ತಾರೆ. ರೈತರಿಗೆ ಇಲಿಯ ಕಾಟ ತಪ್ಪಿದ ಖುಷಿಯಾದರೆ, ಇವರಿಗೆ ಇಲಿಯಿಂದಾಗಿ ಹಣ ಬಂದ ಖುಷಿ. ಹೀಗೆ ಹಿಡಿದ ಇಲಿಗಳು ಕೆಲವು ಪಕ್ಷಿಗಳಿಗೆ ಆಹಾರವಾದರೆ ಕೆಲವನ್ನು ಇವರೇ ದೂರದ ಕೆರೆ ಅಥವಾ ದಟ್ಟ ಆರಣ್ಯಗಳಿಗೆ ಬಿಟ್ಟು ಬರುತ್ತಾರೆ.

ಈ ಕೂಲಿಯಾಳುಗಳಿಗೆ ಸರ್ಕಾರದಿಂದ ವಸತಿ ಸೌಕರ್ಯ ಸೇರಿದಂತೆ ಇದುವರೆಗೆ ಯಾವುದೇ ಸೌಲಭ್ಯ ದೊರಕಿಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಭತ್ತದ ಬೆಳೆಗಾರರು ಇಲಿ ಹಿಡಿಯಲು ಕರೆದರಷ್ಟೇ ತಮಗೆ ತುತ್ತು ಅನ್ನ ಸಿಗುತ್ತದೆ ಎನ್ನುತ್ತಾರೆ ಮೇಸ್ತ್ರಿ ನಾಗರಾಜ. ಇವರ ಸಂಪರ್ಕ 7026229279.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT