ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯಿಂದ ಪ್ರೀತಿಯ ಹೃದಯಸಾಕ್ಷಿಗೆ...

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆಹಾ! ಹೃದಯ ಸಾಕ್ಷಿ,ನನ್ನ ಪ್ರೀತಿಯ ಶ್ರೀಮತಿ ಹೃದಯ ಸಾಕ್ಷಿಗೆ ಈ ಪತ್ರ.

ನಿನ್ನ ಅಪ್ಪ– ಅಮ್ಮನಿಗೆ ನನ್ನದೊಂದು ಪ್ರೀತಿಯ ಸಲಾಂ. ಎಷ್ಟು ಚೆಂದದ ಹೆಸರಿಟ್ಟಿದ್ದಾರೆ ನಿನಗೆ. ಮಲೆನಾಡಿನ ಕಾಫಿತೋಟದೊಳಗಿನ ಒಂಟಿಮನೆ ಖ್ಯಾತಿಯ ಸಂಪತ್ತು ಹೆಸರಿನ ನನಗೆ, ನೀನು ಜತೆಯಾಗಿರುವುದು ಅದೆಷ್ಟು ಚೆನ್ನ.

ಓಣಿದಾರಿಗುಂಟ ನಾನು- ನೀನು ಕೊಣನಹುಲ್ಲಿನ ಮೆತ್ತನೆಯ ಹಾಸಿನ ಮೇಲೆ ಬರಿಗಾಲಲ್ಲಿ ನಡೆಯುವಾಗ ಮನಸಿನ ತುಂಬಾ ಮುಂಗಾರು ಮಳೆ. ಜತೆಗೆ ಕನಸಿಗೆ ರೆಕ್ಕೆಪುಕ್ಕ ಮೂಡಿಸಿಕೊಂಡ ಅನುಭವ ಕೂಡ ನಮ್ಮದಾಗುವುದು ದಿಟ.

ಮುಂಜಾನೆಯ ದಟ್ಟವಾದ ಮಂಜು ಮುಸುಕಿದ ಮೋಡದ ನಡುವೆ ಇಣುಕಿ ಹಾರೈಸುವ ರವಿಕಿರಣ. ಹುಲ್ಲು ಮೇದು ಹಿಕ್ಕೆಹಾಕಿ ‘ಅಯ್ಯೋ ನಾನಿಲ್ಲಿ ಅಡ್ಡಾಡಿರುವುದಕ್ಕೆ ಸಾಕ್ಷಿ ಉಳಿಯಿತಲ್ಲ! ಈಗೇನು ಮಾಡಲಿ?’ ಎಂದು ಮುಗ್ಧತೆಯನ್ನು ತೋರುತ್ತ, ಪುಟಪುಟನೆ ಓಡಿ ಬೇಲಿ ಮರೆಯಾಗಿ ಬಿಡುವ ಕಾಡು ಜಾತಿಯ ಕತ್ತೆಮೊಲ. ಗರಿಗೆದರಿ ಹೇನು ಹೆಕ್ಕುತ್ತ ಕಟಕಟನೆ ಕೊಕ್ಕಿನಿಂದ ಕಟುಕುಕರೆಯುವ ನವಿಲಮ್ಮ. ಹೀಗೆ ಮಲೆನಾಡಿನ ಚಿತ್ರ ವಿಚಿತ್ರಗಳ ಜೊತೆಗೆ ಸೇರಿ ನಲಿಯುವ ನಮ್ಮಿಬ್ಬರ ಸುಖ ಸಂಸಾರ. ಅದು ಆನಂದದ ಸಾಗರ.

ನಾನು–ನೀನು ಜೋಡಿ, ಜೋಡಿ ಎತ್ತಿನಗಾಡಿ. ನಿನ್ನ ಕಿರುನಗೆಯೊಂದೇ ಸಾಕು; ಈ ಜನುಮದಿ ನೂರುವರ್ಷ ಹರುಷದಿಂದ ಬದುಕಲು. ಬತ್ತಿದ ಎದೆಯಲ್ಲಿ ಒರತೆಯಂತೆ ಪುಟಿದೆದ್ದಿರುವ ಪ್ರೀತಿಯು ಸದಾ ಹೀಗೆ ಇರಲಿ ಗೆಳತಿ.

ಕಲ್ಲು ಮುಳ್ಳುಗಳ ಮಣ್ಣಿನ ಹಾದಿಯಲ್ಲಿ, ನೀ ಮುಂದೆ ಸಾಗುತ್ತಿರಲು; ನಾನು ನಿನ್ನೊಂದಿಗೆ ಅಡಿಯಿಡುತ್ತಿರಲು ಕೆಲವು ಕಣ್ಣುಗಳು ಅದೇನೋ ಲೆಕ್ಕಾಚಾರದಲ್ಲಿ ತೊಡಗಿರುತ್ತವೆ. ಅದೇನೇ ಇರಲಿ, ನಾಳೆಯ ಭರವಸೆಯ ಕನಸು ನಿನ್ನದಲ್ಲವೇ? ನನ್ನದು, ಅದೇ ಮತ್ತೆ!

ಅಪ್ಪ, ಅಮ್ಮ, ಅಣ್ಣ, ತಂಗಿ, ಬಾವ... ಹೀಗೆ ಬಾಂಧವ್ಯದ ಭಾವಗೀತೆ ನಮ್ಮದು. ಮುಂದಿನ ದಿನಗಳಲ್ಲಿ ಮನೆಗೊಂದು ಪುಟಾಣಿ ಬರುವುದು, ನಮ್ಮಿಬ್ಬರ ತೋಳಲಿ ಭಾವಗೀತೆ ಹಾಡಲು!

ಎಣ್ಣೆಗೆಂಪು ತೆಳ್ಳಗಿನ ದೇಹದ ನನಗೆ, ನೀನು ಒಳ್ಳೇ ಜೋಡಿ. ನೀನೂ ನನ್ನ ಹಾಗೆ ತೆಳ್ಳಗೇ ಇರುವೆ. ನನಗೆ ಬೈಕು, ಕಾರು, ಸೇರಿದಂತೆ ಯಾವುದೇ ವಾಹನ ಓಡಿಸುವ ತರಬೇತಿ ಇಲ್ಲ. ಕಾಲೇ ನನಗೆ ಕಾರುಗೀರು ಎಲ್ಲ. ನಿನಗೂ ಕೆ ಎಸ್‍ ಆರ್‌ ಟಿ ಸಿ ಕೆಂಪುಬಿಳಿ ಬಸ್ಸು ಇಷ್ಟವೆಂಬುವುದು ನಂಗೊತ್ತು. ಹೇಗೆ ಅಂತಿಯಾ? ನಿನ್ನ ಗೆಳತಿಯರೆಲ್ಲ ವಾಹನಗಳಲ್ಲಿ ಓಡಾಡಿದರೆ, ಅವರಿಗಿಂತಲೂ ಸ್ವಲ್ಪ ಸ್ಥಿತಿವಂತಳಾದ ನೀನು ಸುರಕ್ಷತೆಯ ನೆಪಹೇಳಿ ಬಸ್ಸಿನ ಮೊರೆಹೋಗುತ್ತೀ.

ಹಣದಲ್ಲಿ ಶ್ರೀಮಂತ ನಾನಲ್ಲ ಎಂಬುದು ನಿನಗೆ ಈಗಾಗಲೇ ತಿಳಿದಿದೆ. ‘ನಿಮ್ಮಂತಹ ಹೃದಯ ಶ್ರೀಮಂತ ಸಿಕ್ಕಿರುವುದು ನನ್ನ ಪುಣ್ಯ’ ಎಂಬ ನಿನ್ನ ಮಾತು ಕೇಳಿ ನಾನು ಆಕಾಶದಲ್ಲಿ ತೇಲಾಡಿದ್ದೆ. ನನ್ನ ಬಾಳಿಗೆ ಇದಕ್ಕಿಂತಲೂ ಮಿಗಿಲು ಇನ್ನೇನು ಬೇಕು ಹೇಳು. ಅದಕ್ಕಾಗಿ ಯಾಕೋ ಏನೋ ಒಂದೆರಡು ಸಾಲು ಬರೆಯಲೇ ಬೇಕೆನಿಸಿತು, ಬರೆದೆ.

ಹೀಗೆ ಋಣಸಂದಾಯಕ್ಕೆಂದು ಲೇಖನಿ ಹಿಡಿದು ಬಿಡಿಬಿಡಿಯಾಗಿ ಬಿಡಿಸಿರುವ ಅಕ್ಷರದ ಸಾಲುಗಳೆಲ್ಲವು ಪ್ರೇಮಪತ್ರದಂತೆ ಅರಳಿಕೊಂಡಿವೆ. ನಿನ್ನಿಂದಾಗಿ ನಾನೂ ಕವಿಯಾಗುತ್ತಿದ್ದೇನೆ ಎನಿಸುತ್ತಿದೆ. ಸಂತೋಷ ತಾನೇ, ನೀನಿನ್ನು ಕವಿಯ ಶ್ರೀಮತಿ.

ಗೆಳತಿ ಒಪ್ಪಿಸಿಕೋ ಈ ಪ್ರೇಮಪತ್ರವ. ತಬ್ಬಿಕೋ ಬಾ ನನ್ನ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT