ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಸಾಕು ಎಂದ ದಿನವೇ ನನ್ನ ಸಾವು

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಧಾರಾವಾಹಿಯಲ್ಲಿ ನಟಿಸಿದ್ದ ಕೃಷ್ಣವರ್ಣದ ಶಾರುಖ್ ಖಾನ್ ಈಗ ತುಸು ಹೊತ್ತು ಒಂಟಿತನ ಬಯಸಿ ತಮ್ಮ ದೊಡ್ಡ ಬಂಗಲೆಯ ಟೆರೇಸಿನ ಮೇಲೆ ನಿಂತು ನಕ್ಷತ್ರಲೋಕ ನೋಡುತ್ತಿದ್ದಾರೆ. ಜನ ಎಷ್ಟೇ ಸ್ಟಾರ್ ಎಂದರೂ ಆಕಾಶಕ್ಕಂಟಿಕೊಂಡ ನಕ್ಷತ್ರಗಳು ಯಾಕೋ ನಿಲುಕುವುದಿಲ್ಲವಲ್ಲ ಎಂಬುದು ಅವರ ಚಿಂತೆ. `ರಾ.ಒನ್~ ಸಿನಿಮಾ ಕುರಿತು ಪ್ರೇಕ್ಷಕರು ಆಡುತ್ತಿರುವ ನಿರಾಸೆಯ ಮಾತುಗಳು ಅವರನ್ನು ಕಂಗೆಡಿಸಿದೆ. ದೊಡ್ಡ ಸಂಕಲ್ಪ, ದೊಡ್ಡ ಬಜೆಟ್, ಎರಡು ವರ್ಷದ ಶ್ರಮ- ಎಲ್ಲವನ್ನೂ ಜನ ಹೀಗೆ ಸಾರಾಸಗಟಾಗಿ ತಳ್ಳಿಹಾಕುತ್ತಾರಲ್ಲ ಎಂಬುದು ಅವರ ಚಿಂತೆಗೆ ಕಾರಣ.

ಅತಿ ನಿರೀಕ್ಷೆ ಇಟ್ಟುಕೊಂಡ ಚಿತ್ರ ಸೋತಾಗ ಹೀಗೆ ಆಗುವುದು ಸಹಜ. ಮಗ ಇಷ್ಟಪಟ್ಟನೆಂಬ ಕಾರಣಕ್ಕೆ ಇಂಥ ಸಿನಿಮಾ ಮಾಡುವ ಯೋಚನೆ ಹೊಳೆದಾಗ, ಪೋಸ್ಟರ್ ಬಿಡುಗಡೆ ಮಾಡಿದಾಗ, ಹಾಲಿವುಡ್‌ನ ಜಗಜ್ಜಾಣರಿಂದ ಅನಿಮೇಷನ್ ಮಾಡಿಸುವ ಸುದ್ದಿ ಹೊರಬಿದ್ದಾಗ, ಆಡಿಯೋ ಬಿಡುಗಡೆಯಾದಾಗ `ರಾ.ಒನ್~ ಸದ್ದು ಮಾಡಿತ್ತು. ಪ್ರೇಕ್ಷಕರು ಅಷ್ಟು ತಿಂಗಳಿನಿಂದ ಮೈಹುರಿ ಮಾಡಿಕೊಂಡು ಶಾರುಖ್ ಖಾನ್ ಆಡುತ್ತಿದ್ದ ಮಾತುಗಳನ್ನೆಲ್ಲಾ ಬೆರಗು ಕಿವಿಗಳಿಂದ ಕೇಳಿದ್ದರು. ಆದರೆ, ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕನ ಬಾಯಲ್ಲಿ `ಸಿನಿಮಾ ಏನೇನೂ ಸಾಲದು~ ಎಂಬ ಉದ್ಗಾರ ಹೊರಬೀಳುತ್ತಿದೆ.

ಸಿನಿಮಾ ಬಿಡುಗಡೆಗೆ ಮೊದಲು ಶಾರುಖ್ ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದರು. ಪ್ರಮುಖ ಸಿನಿಮಾ ನಿಯತಕಾಲಿಕೆಗಳಿಗೆ ದೊಡ್ಡ ದೊಡ್ಡ ಸಂದರ್ಶನಗಳನ್ನು ಕೊಟ್ಟಿದ್ದರು. ಆಗ ಅವರಾಡಿದ್ದ ಕೆಲವು ಮಾತುಗಳು ಶಾರುಖ್ ಭಾವಜೀವಿ ಎಂಬುದಕ್ಕೆ ಕನ್ನಡಿ ಹಿಡಿಯುವಂತಿವೆ. ಅವುಗಳಲ್ಲಿ ಕೆಲವು ಮಾತುಗಳು ಇದೋ ನಿಮ್ಮ ಕಿವಿಗಾಗಿ...
“ರಾ.ಒನ್ ಚಿತ್ರದ ಹಲವು ಹಂತಗಳಲ್ಲಿ ನಾನು ನನ್ನ ಆತ್ಮವನ್ನು ಮಾರಿಕೊಂಡಿದ್ದೇನೆ. ನಾನು ಆತ್ಮದ ಅದ್ಭುತವಾದ ಮಾರಾಟಗಾರ. ಎಲ್ಲರೂ ಈ ಚಿತ್ರವನ್ನು ಇಷ್ಟಪಡಬೇಕು ಅನ್ನೋದು ನನ್ನ ಬಯಕೆ. ಯುವಕರು, ಮಕ್ಕಳು, ಅಪ್ಪ-ಅಮ್ಮ ಯಾರು ನೋಡಿದರೂ ಕುರ್ಚಿಯಿಂದ ಅಲ್ಲಾಡಕೂಡದು. ಜಾಗತಿಕ ಪ್ರೇಕ್ಷಕರಿಗೆ ತಟ್ಟುವಂತೆ ನಾನು ಸಿನಿಮಾ ಮಾಡಿದ್ದೇನೆ.

ಇಪ್ಪತ್ತು ವರ್ಷವಾಯಿತು ಬಣ್ಣ ಹಚ್ಚಲು ಪ್ರಾರಂಭಿಸಿ. ಜನ ಮೆಚ್ಚುವಂಥದ್ದೇ ಮಾಡಬೇಕು ಎಂದು ಯೋಚಿಸಿದ್ದೇ ಹೆಚ್ಚು. ಈಗ ನಾನು ಜನರನ್ನು ಮೆಚ್ಚಿಸುತ್ತೇನೆ ಎಂಬ ಹುಕಿಯಿಂದ ಹೊರಟಿದ್ದೇನೆ. ಈ ಚಿತ್ರ ಹಣ ಮಾಡುತ್ತದೋ ಬಿಡುತ್ತದೋ; ಜನ `ಎಂಥ ಮರೆಯಲಾಗದ ಸಿನಿಮಾ ಇದು~ ಎನ್ನುತ್ತಾ ಥಿಯೇಟರ್‌ನಿಂದ ಹೊರಬಂದರೆ ನಾನು ಧನ್ಯ. ಚಿತ್ರ ಪರವಾಗಿಲ್ಲ ಎಂದರೂ ಅದನ್ನು ಸಹಿಸಿಕೊಳ್ಳುವುದು ನನಗೆ ಕಷ್ಟ.

ಮಕ್ಕಳು ಈಗ ನನ್ನ ತುಂಬಾ ಮುಖ್ಯವಾದ ವಿಮರ್ಶಕರು. ಮಗ ಆರ್ಯನ್, `ಈ ಚಿತ್ರ ಎಲ್ಲಾ ಮಕ್ಕಳಿಗೂ ಬರ್ತ್‌ಡೇ ಗಿಫ್ಟ್ ಆಗುತ್ತದೆ~ ಎಂದಾಗ ನನಗೆ ಆತ್ಮವಿಶ್ವಾಸ ಬಂತು. `ಮೈ ನೇಮ್ ಈಸ್ ಖಾನ್~ ಚಿತ್ರ ಬಿಡುಗಡೆಯಾದಾಗ ಮಗಳು ಸುಹಾನಾ, `ಅಪ್ಪ ನೀನು ಈ ಚಿತ್ರದಲ್ಲಿ ಅಷ್ಟೇನೂ ಹಿಡಿಸಲಿಲ್ಲ~ ಎಂದಿದ್ದಳು. ಅವಳಿಗೆ ಆ ಸಿನಿಮಾದಲ್ಲಿನ ನಾನು ಇಷ್ಟವಾಗಿರಲಿಲ್ಲ. ಹೀಗೆ ನಿಷ್ಠೂರವಾಗಿ ವಿಮರ್ಶೆ ಮಾಡುವ ಮಕ್ಕಳು ತುಂಬಾ ಮುಖ್ಯ. ಯಾಕೆಂದರೆ, ಅವರು ಮುಂದಿನ ಜನಾಂಗದ ಪ್ರತಿನಿಧಿಗಳು. ಅವರಿಗೆ ಇಷ್ಟವಾಗುವ ಸಿನಿಮಾ ಮಾಡಲಾಗದಿದ್ದರೆ ಏನೂ ಪ್ರಯೋಜನವಿಲ್ಲ. ನನ್ನ ಮಕ್ಕಳು ಯಾವತ್ತು, `ಅಪ್ಪ ನಿನ್ನ ಚಿತ್ರಗಳನ್ನು ನೋಡಲು ನಮಗಿಷ್ಟವಿಲ್ಲ~ ಎನ್ನುತ್ತಾರೋ ಅಂದೇ ನನ್ನ ಸಾವು.
ನಾನು ಪದೇಪದೇ ಧ್ಯಾನಸ್ಥನಾಗುತ್ತೇನೆ. ಇದ್ದಕ್ಕಿದ್ದಂತೆ ಒಂಟಿತನ ಬಯಸುತ್ತೇನೆ. ಒಬ್ಬನೇ ಮಾತನಾಡಿಕೊಳ್ಳುತ್ತೇನೆ. ಅಚ್ಚರಿಯ ರೀತಿಯಲ್ಲಿ ಇಡೀ ಜಗತ್ತಿನಿಂದ ತೊರೆದುಕೊಳ್ಳುತ್ತೇನೆ. ಆಗ ಮನಸ್ಸಿನಲ್ಲಿ ನನಗೆ ಖುಷಿ ಕೊಡುವ ಮಂಥನ ನಡೆಯುತ್ತದೆ. ಊಟದ ಟೇಬಲ್ ಮೇಲೆ ನಾನು ಇನ್ನಷ್ಟು ಪಲ್ಯ ಬೇಕು ಎಂದು ಹೇಳಿದಾಗಲೂ, `ನೀನು ಓವರ್‌ಆ್ಯಕ್ಟ್ ಮಾಡುತ್ತೀಯ ಅಪ್ಪ~ ಎಂದು ಮಗ ಮಾಡಿದ ಕಾಮೆಂಟು ತಲೆಯನ್ನು ಕೊರೆಯುತ್ತಾ ಇರುತ್ತದೆ”.

ಕೆಲವು ನಟರಿಗೆ ಬದುಕಿನ ಬಹುತೇಕ ಕ್ಷಣಗಳಲ್ಲಿ ಅಭಿನಯ ಕಾಡುತ್ತಾ ಇರುತ್ತದೆ. ಕನ್ನಡದ ವಿಷ್ಣುವರ್ಧನ್ ಕೂಡ ಮನೆಯಿಂದ ಹೊರಬಂದ ತಕ್ಷಣ ಹೆಚ್ಚಾಗಿ ನಟರಂತೆಯೇ ವರ್ತಿಸುತ್ತಿದ್ದರು. ಶಾರುಖ್ ಖಾನ್ ಮಾತುಗಳನ್ನು ಕೇಳಿದರೆ ಅವರ ಮನಸ್ಥಿತಿಯೂ ಹಾಗೆಯೇ ಆಗಿದೆ. ಲಿಯೊನಾರ್ಡೊ ಡಿಕಾರ್ಪಿಯೊ ಅಭಿನಯದ ಹಾಲಿವುಡ್ ಚಿತ್ರದಲ್ಲಿ ನಟಿಸಲು ಅವರಿಗೆ ಆಹ್ವಾನ ಬಂದಿದೆ. ತಕ್ಷಣವೇ ಡೇಟ್ಸ್ ಇಲ್ಲದ ಕಾರಣ ಆ ಪಾತ್ರವನ್ನು ಇನ್ನೂ ಒಪ್ಪಿಕೊಂಡಿಲ್ಲ. ಭಾರತದ ನಟನೊಬ್ಬ ಇಷ್ಟರ ಮಟ್ಟಿಗೆ ಅಭಿನಯವನ್ನು ಜೀವಿಸುವುದು ಅಪರೂಪವೂ ಹೌದು; ಆತಂಕಕಾರಿಯೂ ಹೌದು. ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT